ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)

ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)

ಬರಹ

ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)
ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ. ಹೊಸಹಳ್ಳಿಯ ಜಂಗಮ ಕರಡಪ್ಪಜ್ಜ ಭಿಕ್ಷೆ ಬೇಡಿ, ತಂದ ಕಾಳು ಕಡ್ಡಿಯನ್ನು ಇವನಮ್ಮ ಭಾಗೀರಥಿಗೆ ಕೊಟ್ಟು - ನೋಡಮ್ಮಾ ನೀನು ಅನುಕೂಲಸ್ಥರ ಮನೆಯಿಂದ ಬಂದವಳು. ಬೇರೆಯವರಿಂದ ಪಡೆದು ಅಭ್ಯಾಸವಿಲ್ಲ. ನಾನು ತಂದು ಕೊಡುವೆ - ನೀನು ಮಗುವನ್ನು ದೊಡ್ಡದು ಮಾಡು ಎಂದಳು. ತಂದೆ ವಿಶ್ವನಾಥರಾಯ ಕೆಲಸ ಬದುಕಿಲ್ಲದೇ ತನಗಾಗಿ ಇದ್ದ ಪಾಳು ಬಿದ್ದ ಜಮೀನನ್ನು ಸಾಗುವಳಿ ಮಾಡಲು ಪ್ರಯತ್ನಿಸಿದ. ಅಂದಿನವರೆಗೂ ಕೆಲಸ ಮಾಡದಿದ್ದ ಮೈ ಕಟು ಕೆಲಸಕ್ಕೆ ಬಗ್ಗೀತೇ? ಅದು ಆಗಿ ಬರಲಿಲ್ಲ. ಕೊನೆಗೆ ಅವನಣ್ಣ ಅಲ್ಲೆಲ್ಲೋ ದೂರದ ಲಕ್ಕವಳ್ಳಿಯಲ್ಲಿ ಇವನಿಗಾಗಿ ಗುಮಾಸ್ತೆಯ ಕೆಲಸ ಕೊಡಿಸಿದರು. ಸರಿ ಅಲ್ಲಿ ಸಂಸಾರ ಪ್ರಾರಂಭಿಸಿದ ಸ್ವಲ್ಪವೇ ದಿನಗಳಲ್ಲಿ ಯಾರೋ ತರ್ಲೆ ಮಾಡಿ ವಿಶ್ವನಾಥರಾ‍ಯರ ಕೆಲಸ ಹೋಯಿತು. ಮತ್ತೆ ಅವರಣ್ಣ ಆಗ ತಾನೆ ಶರಾವತಿಯ ಅಣೆಕಟ್ಟಿನ ಕೆಲಸ ಪ್ರಾರಂಭವಾಗಿದ್ದು ಅಲ್ಲಿ ಮೇಸ್ತ್ರಿ ಬೇಕಾಗಿ ಇವರನ್ನು ಅಲ್ಲಿಗೆ ಸೇರಿಸಿದರು. ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಂತೆ ಹಿಂದೆಯೇ ಮನೆಯಲ್ಲಿ ಇನ್ನೂ ಮೂರು ಮಕ್ಕಳು ಹುಟ್ಟಿದವು. ಮನೆಯೋ ಕೌರವರ ಸೈನ್ಯವೋ ಅನ್ನುವ ಹಾಗಿತ್ತು. ಪಾಪ ಭಾಗೀರಥಿ ಹಸುವಿನಂತಹ ಮನಸ್ಸಿನವಳು. ಹೇಗೋ ಜೀವನದ ಗಾಡಿಯನ್ನು ಎಳೆಯುತ್ತಿದ್ದಳು. ಮಾರುತಿ ಹೈಸ್ಕೂಲಿಗೆ ಹೋಗುವ ವೇಳೆಗೆ ಶರಾವತಿ ಕೆಲಸ ಮುಗಿದು ಅವನಪ್ಪ ವಿಶ್ವನಾಥರಾಯರಿಗೆ ಮತ್ತೆ ಕೆಲಸ ಹೋಯಿತು. ಮುಂದೇನು ಮಾಡಬೇಕೆಂದು ದಿಕ್ಕೇ ತೋಚದಂತಾಗಿದ್ದರು. ದೇವರಂತೆ ಬಂದವರೊಬ್ಬರು ವಿಶ್ವನಾಥರಾಯರಿಗೆ ದೂರದ ಸಾಗರದ ಮಂಡಿಯಲ್ಲಿ ಕೆಲಸ ಕೊಡಿಸಿದರು. ಸಂಸಾರವನ್ನು ಲಿಂಗನಮಕ್ಕಿಯಲ್ಲೇ ಬಿಟ್ಟು ಸಾಗರಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದವರು, ವಾರಕ್ಕೊಮ್ಮೆ ಮನೆ ಸೇರುತ್ತಿದ್ದರು. ಹುಡುಗರು ಬುದ್ಧಿವಂತರು. ಶಾಲೆಯಲ್ಲಿ ಮಾಸ್ತರುಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಶಾಲೆಯ ಮಾಸ್ತರರಲ್ಲೊಬ್ಬರಾದ ಜೋಯಿಸರು ಮಾರುತಿ ಮತ್ತು ಅವನಣ್ಣ ಶ್ರೀನಾಥನನ್ನು ಮನೆಗೆ ಕರೆದು ಅವರ ಮನೆಗೆ ಪಾಠಕ್ಕಾಗಿ ಬರುತ್ತಿದ್ದ ಚಿಕ್ಕ ಚಿಕ್ಕ ಮಕ್ಕಳಿಗೆ ಪಾಠ ಹೇಳಿಕೊಡಲು ಇವರಿಗೆ ಹೇಳಿ ಮನೆಗೆ ಸ್ವಲ್ಪ ಆಧಾರವಾಗಲು ಕಾರಣರಾದರು. ನೋಡಿ ದೇವರು ಹೇಗೆ ಯಾವ ಯಾವ ರೂಪದಲ್ಲಿ ಬಂದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯನ್ನಿತ್ತು ಮುಳುಗದಂತೆ ನೋಡಿಕೊಳ್ಳುವನು. ಇವರನ್ನು ಪರೀಕ್ಷೆ ಮಾಡಲೆಂದೇ ಅನ್ನುವಂತೆ ಅವರೆಲ್ಲರ ಹಿರ್‍ಇಯ ಹುಡುಗ ಮನೆ ಬಿಟ್ಟು ಎಲ್ಲಿಗೋ ಹೋಗಿದ್ದ. ಮಂಡಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದ ವಿಶ್ವನಾಥರಾಯರು ಅಲ್ಲಿ ಇಲ್ಲಿ ಪೌರೋಹಿತ್ಯವನ್ನೂ ಮಾಡಿಕೊಂಡು ಜೀವನರಥವನ್ನು ಎಳೆಯುತ್ತಿದ್ದರು. ಕೊನೆಯವರುಗಳು ಇನ್ನೂ ಚಿಕ್ಕ ಚಿಕ್ಕ ಮಕ್ಕಳು. ಮನೆಯಲ್ಲಿ ಶ್ರೀನಾಥ ಮತ್ತು ಮಾರುತಿಯಷ್ಟೇ ಸ್ವಲ್ಪ ತಿಳುವಳಿಕೆ ಬಂದ ಮಕ್ಕಳು. ಶ್ರೀನಾಥ ಸ್ವಲ್ಪ ಸೂಕ್ಷ್ಮ ಶರೀರದವ. ತೀರ್ಥ ತೆಗೆದುಕೊಂಡರೆ ಶೀತ ಮತ್ತು ಮಂಗಳಾರತಿ ತೆಗೆದುಕೊಂಡರೆ ಉಷ್ಣ ಆಗುತ್ತಿತ್ತು. ಇದ್ದುದರಲ್ಲಿ ಸ್ವಲ್ಪ ಗಟ್ಟಿಗ ಅಂದ್ರೆ ನಮ್ಮ ಮಾರುತಿಯೇ. ಎಂಥ ಕಾಲದಲ್ಲಿಯೂ ಅಪ್ಪನಿಗೂ ಅಮ್ಮನಿಗೂ ಮನೆಯ ಬೆನ್ನೆಲುಬಾಗಿ ನಿಲ್ಲುತ್ತಿದ್ದ. ಪರೀಕ್ಷಿಸಲು ಗಟ್ಟಿಗರಿಗೇ ಕಷ್ಟಗಳು ಜಾಸ್ತಿ ಬರುವುದಂತೆ. ಮಾರುತಿ ಹತ್ತನೇ ತರಗತಿಗೆ ಬಂದಾಗ ತುಂಬಾ ಕಷ್ಟದ ಸಮಯ ಬಂದಿತು. ಚಿಕ್ಕ ಮಕ್ಕಳಿಗೆ ದಿನಂಪ್ರತಿ ಒಂದಲ್ಲ ಒಂದು ಕಾಯಿಲೆಗಳು. ಮಾರುತಿಯದೇ ಮನೆಯಲ್ಲಿ ಹೆಚ್ಚಿನ ಕೆಲಸಗಳೆಲ್ಲಾ. ಅವನಮ್ಮನಿಗೆ ಅವನಿಲ್ಲದಿದ್ದರೆ ಒಂದು ಕೈಯೇ ಕಳೆದು ಹೋದ ಅನುಭವವಾಗುತ್ತಿತ್ತು. ಆ ಕಡೆ ಪಬ್ಲಿಕ್ ಪರೀಕ್ಷೆಗೆ ಓದಿಕೊಳ್ಳಬೇಕು, ಈ ಕಡೆ ಮನೆ ಕಡೆಯೂ ನೋಡಿಕೊಳ್ಳಬೇಕು. ಹೀಗಿರುವಾಗ ಡಿಸೆಂಬರ್ ಮಾಹೆಯಲ್ಲಿ ಪರೀಕ್ಷೆಗೆ ಹಣ ಕಟ್ಟಬೇಕಾದ ಸಂದರ್ಭ ಬಂದಿತು. ಅದು ರಾಜ್ಯದ ಮಟ್ಟದಲ್ಲಿ ನಡೆಯುವ ಪರೀಕ್ಷೆ - ಅದಕ್ಕೆ ೧೦ ರೂಪಾಯಿಗಳನ್ನು ಕಟ್ಟಬೇಕಿತ್ತು. ಮನೆಯಲ್ಲಿ ಹಣವಿಲ್ಲ. ಪಾಠಕ್ಕೆ ಬರುತ್ತಿದ್ದ ಚಿಕ್ಕ ಮಕ್ಕಳು ಸರಿಯಾಗಿ ಹಣ ಕೊಟ್ಟಿಲ್ಲವೆಂದು ಜೋಯಿಸರು ಹೇಳಿದ್ದರು. ಆ ವಾರ ಅವರಪ್ಪ ಕೂಡಾ ಅದೇಕೋ ಬಂದೇ ಇರ್ಲಿಲ್ಲ. ಯಾರ ಮುಂದೆಯೂ ಕೈ ಚಾಚಬಾರದೆಂಬ ಅಣತಿ ಅಪ್ಪನದು. ಮನೆಯವರಲ್ಲೂ ಒಣ ಪ್ರತಿಷ್ಠೆ ತುಂಬಿತ್ತು. ಅಮ್ಮನಿಗಂತೂ ದಿಕ್ಕೇ ತೋಚದೆ, "ಮಾರುತಿ ನೋಡಪ್ಪಾ, ನೀನೇ ಏನಾದರೂ ಮಾಡಿ ಹಣ ಹೊಂದಿಸಿಕೊಂಡು ಪರೀಕ್ಷೆಗೆ ಕಟ್ಟು" ಅಂದಳು. ಪಾಪದ ಹುಡುಗ ಏನು ಮಾಡಿಯಾನು. ವಯಸ್ಸಿಕೆ ಮೀರಿದ ತಿಳುವಳಿಕೆ ಬುದ್ಧಿವಂತಿಕೆ ಇದ್ದರೂ ಹಣ ಎಲ್ಲಿಂದ ತಂದಾನು. ಹತ್ತಿರದವರು ಅನ್ನುವ ಎಲ್ಲರನ್ನೂ ಕೇಳಿದ್ದಾಯಿತು. ಸಾಲ ಕೊಡಲು ಎಲ್ಲರಿಗೂ ಭಯ, ಮತ್ತೆ ಹಣ ವಾಪಸ್ಸು ಬರುತ್ತದೋ ಇಲ್ಲವೋ ಅಂತ. ಜೋಯಿಸರು ಕಣ್ತಪ್ಪಿಸಿ ಓಡಾಡಲು ಆರಂಭಿಸಿದರು. ಅಪ್ಪನಿಗೆ ಪತ್ರ ಬರೆದರೂ ಉತ್ತರವಿಲ್ಲ. ನಂತರ ತಿಳಿದು ಬಂದದ್ದು, ಯಾವುದೋ ಕೆಲಸದ ಮೇಲೆ ಮಂಡಿಯವರು ಅವರನ್ನು ಶಿರಸಿ ಕಡೆಗೆ ಕಳುಹಿಸಿದ್ದರು. ಡಿಸೆಂಬರ್ ೩೦ರೊಳಗೆ ಹಣ ಕಟ್ಟಲು ಗಡುವು ಇದ್ದಿತ್ತು. ೨೯ ಆದರೂ ಎಲ್ಲೂ ಹಣ ಸಿಕ್ಕಲಿಲ್ಲ. ಅದೇ ವೇಳೆಯಲ್ಲಿ ಶ್ರೀನಾಥನಿಗೆ ಉಬ್ಬಸ ಜಾಸ್ತಿ ಆಗಿತ್ತು. ವೈದ್ಯರ ಬಳಿ ಹೋಗಲು ಹಣವಿಲ್ಲ. ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಜ್ವರ, ನೆಗಡಿ. ತಾಯಿಗಂತೂ ಇವರನ್ನೆಲ್ಲಾ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮಾರುತಿ ಅವಳ ಮುಂದೆ ತನ್ನ ಸಮಸ್ಯೆ ಹೇಳಿಕೊಳ್ಳಲು ಇಚ್ಛಿಸಲಿಲ್ಲ. ೨೯ನೇ ತಾರೀಖು ರಾತ್ರಿಯೆಲ್ಲ ನಿದ್ದೆಯಿಲ್ಲದೇ ಹೊರಳಾಡುತ್ತಿದ್ದ. ಏನೇನೋ ಯೋಚನೆಗಳು. ಪುಸ್ತಕ ಹಿಡಿದು ಕೂತರೆ ಏನೂ ಕಾಣುತ್ತಿಲ್ಲ. ನಾಳೆಯನ್ನು ಹೇಗೆ ಎದುರಿಸುವುದೆಂಬ ಭಯದಲ್ಲಿ ಕಣ್ಣು ತುಂಬಿ ಬರುತ್ತಿದೆ. ಹೇಗೋ ಬೆಳಗಾಯಿತು. ಶಾಲೆಯ ಕಡೆ ಹೋದ. ಅಲ್ಲಿ ಹೆಡ್ ಮಾಸ್ತರರನ್ನು ಕಂಡು ತನ್ನ ಕಷ್ಟ ಹೇಳಿಕೊಂಡ. ಅವರು ಏನೂ ಆಗದೆಂದು ಕೈ ಆಡಿಸಿದರು. ಎಲ್ಲೇ ಹೋದರೂ ಏನೇ ಪ್ರಯತ್ನಕ್ಕೆ ಕೈ ಹಾಕಿದರೂ ಅವಮಾನ ಆಗುತ್ತಿತ್ತು. ಮಧ್ಯಾಹ್ನ ೩ ಘಂಟೆಗೆ ಪರೀಕ್ಷೆಗೆ ಹಣ ಕಟ್ಟಲು ಗಡುವು ಮುಗಿಯುತ್ತದೆ. ಆಗ ಸಮಯ ೧ ಆಗಿದೆ. ಹೊಟ್ಟೆ ಹಸಿಯುತ್ತಿರುವುದರ ಕಡೆಗೆ ಪರಿವೆಯೂ ಇಲ್ಲದೇ ಎಲ್ಲೆಂದರಲ್ಲಿ ಓಡಾಡುತ್ತಿರುವ, ಮಾರುತಿ. ೨ ಘಂಟೆಗೆ ಸಾಗರದಿಂದ ಬರುವ ಬಸ್ಸನ್ನು ಎದುರುಗೊಳ್ಳಲು ಬಸ್ ನಿಲ್ದಾಣಕ್ಕೆ ಹೋದ. ಬಸ್ಸು ಬಂದಿತು. ಇವರಪ್ಪ ಇಳಿಯಲೇ ಇಲ್ಲ. ಚಾಲಕನ್ನನ್ನು ಕೆಳಿದ, ನಮ್ಮಪ್ಪನನ್ನು ನೋಡಿದಿರಾ? ಅದಕ್ಕವನು ಯಾರೋ ನಿಮ್ಮಪ್ಪ, ಮುಖ್ಯ ಮಂತ್ರ್‍ಇಯೋ ಅಥವಾ ಪ್ರಧಾನ ಮಂತ್ರಿಯೋ ಅಂತ ವ್ಯಂಗ್ಯ ಮಾಡಿದ. ಎಳೆಯ ಮನಸ್ಸಿನ ಮೇಲೆ ಬರೆ ಎಳೆದಂತಾಯ್ತು. ಇನ್ನು ಮನೆ ಕಡೆಗೆ ಹೋಗಿ ಪ್ರಯೋಜನವಿಲ್ಲ. ಬದುಕನ್ನು ಎದುರಿಸಲೇಬೇಕೆಂಬ ಛಲ ಉಕ್ಕುತ್ತಿದೆ. ಸರಿ ಹಾಗೇ ರಸ್ತೆಗುಂಟ ಹೊರಟ. ಮನೆಕಡೆ ಗಮನವೂ ಬರಲಿಲ್ಲ. ಲಿಂಗನಮಕ್ಕಿಯಿಂದ ಕಾಡಿನ ಮುಖಾಂತರ ಕಾರ್ಗಲ್, ಜೋಗ ದಾಟಿ ಭಟ್ಕಳದ ರಸ್ತೆ ಹಿಡಿದ. ಸಂಜೆಯಾಯಿತು. ಅದ್ಯಾವ ಊರು ಅಂತ ಕೂಡ ತಿಳಿಯಲಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಮನೆಯ ಜಗುಲಿಯ ಮೇಲೆ ಮಲಗಿದ. ಸ್ವಲ್ಪ ಕಣ್ಣಿಗೆ ಜೊಂಪು ಹತ್ತಿತ್ತು, ಯಾರೋ ಬಂದು "ಲೇ ಮಾಣಿ ಎಂತದ್ದು ಮಾಡ್ತಿ ಇಲ್ಲಿ. ನಡೆ ಆಚೆಗೆ" ಅಂದರು. ಮಾತನಾಡಲು ತ್ರಾಣವೂ ಇಲ್ಲ. ಸ್ವಲ್ಪ ಸಮಯವಾದರೂ ಹುಡುಗನಿಂದ ಉತ್ತರ ಬರದಿರಲು ಮನೆಯಾತನಿಗೆ ಕರುಣೆ ಉಕ್ಕಿ ಬಂದಿತು. ಎಂಥದು! ಉಂಡಿಲ್ಲವೋ ಎಂದ. ಇವನು ತಲೆ ಅಲ್ಲಾಡಿಸಿದ. ಮನೆಯೊಳಗೆ ಹೋಗಿ ಅದೇನನ್ನೋ ತಂದು ಕೊಟ್ಟ. ಸ್ವಲ್ಪ ಅನ್ನ ಇತ್ತು. ಅದೂ ಹಳಸಿದ ವಾಸನೆ ಸಾರುತ್ತಿತ್ತು. ಜೊತೆಗಿದ್ದ ಸಾರಿನಂಥ ಪದಾರ್ಥ ಬಂಗಡಿ ಮೀನಿನ ವಾಸನೆಯ ಗಬ್ಬು ವಾಸನೆ. ಬರಿಯ ಅನ್ನವನ್ನೇ ಹೇಗೋ ಮಾಡಿ ಹೊಟ್ಟೆಯ ಒಳಕ್ಕೆ ತಳ್ಳಿದ. ಸ್ವಲ್ಪ ಹೊತ್ತು ನಿದ್ರಿಸಿ, ಬೆಳಗಾಗುತ್ತಲೇ ಅಲ್ಲಿಂದ ಹೊರಟ. ಹಾಗೇ ಅಲ್ಲಿ ಇಲ್ಲಿ ಸಿಕ್ಕಿದ್ದನ್ನು ತಿಂದು ಕುಡಿದು ೫-೬ ದಿನಗಳ ನಂತರ ಭಟ್ಕಳ ಪೇಟೆಯನ್ನು ತಲುಪಿದ. ಮುಂದೆ ಅಲ್ಲಿ ಏನು ಮಾಡಬೇಕು ಎನ್ನುವ ಪ್ರಶ್ನೆ ಭೂತದಂತೆ ಕಾಡಹತ್ತಿತು. ಪರೀಕ್ಷೆಗೆ ಹಣ ಕಟ್ಟುವ ಅವಧಿಯೂ ಮುಗಿದಿದೆ. ಯಾಕಾದರೂ ಏನು ಮಾಡಬೇಕು, ಎಲ್ಲಿ ಹೋಗಬೇಕು, ಜೀವನ ಅಂದ್ರೆ ಇಷ್ಟೇನಾ ಅನ್ನುವ ಯೋಚನೆ ಹುಟ್ಟಿತು. ಹೊಟ್ಟೆ ಚುರ್ ಅಂದಾಗ ಕಂಡದ್ದು ಹತ್ತಿರದ ಭಟ್ಟರ ಹೋಟೆಲ್. ಅಲ್ಲಿ ಹೋಗಿ ಕೆಲಸ ಕೇಳಿದ. ಅವರು ಇವನ ಪೂರ್ವಾಪರ ವಿಚಾರಿಸಿದರು. ಇವನು ಏನೋ ಒಂದು ಸುಳ್ಳು ಹೇಳಿದ. ಅಂತಹ ಸ್ಥಿತಿಯಲ್ಲೂ ತನ್ನ ಬಗ್ಗೆ ನಿಜ ಹೇಳಲು ಪ್ರತಿಷ್ಠೆ ಅಡ್ಡ ಬಂದಿತ್ತು. ಹೇಗೊ ಒಂದು ತಿಂಗಳು ಭಟ್ಟರು ಹೇಳಿದ ಕೆಲಸವನ್ನೆಲ್ಲಾ ಚೊಕ್ಕವಾಗಿ ಮಾಡಿ ಅವರ ಮೆಚ್ಚುಗೆ ಸಂಪಾದಿಸಿದ. ಭಟ್ಟರಿಗೆ ಇವನು ತನ್ನ ಬಗ್ಗೆ ಸುಳ್ಳು ಹೇಳಿದ್ದಾನೆಂಬ ಸುಳಿವು ಅದು ಹೇಗೋ ಸಿಕ್ಕಿತ್ತು. ಹತ್ತಿರ ಕರೆದು ಅವನ ತಲೆ ನೇವರಿಸಿ "ಲೇ ಮಾಣಿ ಇಂಥ ಸುಳ್ಳು ಹೇಳೂದ, ನೀನು ಬುದ್ಧಿವಂತ. ಓದಿ ಮುಂದೆ ಬರ್ಬೇಕಾದವ. ಹೇಳು ನಿನಗೇನು ತೊಂದರೆ" ಎಂದರು.
ಮಾರುತಿಗೆ ಭಟ್ಟರ ಪ್ರೀತಿಯ ಮಾತುಗಳು ಕೇಳಿ ಅಳುವೇ ಬಂದಿತು. ವಿಷಯವನ್ನೆಲ್ಲಾ ಅರುಹಿದ. ಭಟ್ಟರು ಕೈಗೆ ಸ್ವಲ್ಪ ಹಣವನ್ನಿತ್ತು, ನೋಡು ಈಗ ನೀನು ಮನೆಗೆ ನಡೆ. ಆಗಾಗ್ಯೆ ನನಗೆ ಪತ್ರ ಬರೆ. ನಿನ್ನನ್ನು ನೋಡಿದರೆ, ಸತ್ತು ಹೋದ ನನ್ನ ಮಗನ ಜ್ಞಾಪಕವಾಗುತ್ತಿದೆ. ನೀನು ಇಂದಿನಿಂದ ನನ್ನ ಮಗನೇ. ಚೆನ್ನಾಗಿ ಓದು. ನಿನಗೆಷ್ಟು ಬೇಕೋ ಅಷ್ಟು ಹಣವನ್ನು ನಾನು ಕೊಡುವೆ. ಮನೆಯಲ್ಲಿ ನನ್ನ ವಿಷಯ ತಿಳಿಸು. ಅಂದೇ ಬಸ್ಸಿನಲ್ಲಿ ಕುಳ್ಳಿರಿಸಿ ಲಿಂಗನಮಕ್ಕಿಗೆ ಕಳುಹಿಸಿದರು. ಮನೆಗೆ ಬಂದ ಮಾರುತಿ. ನೊಡ್ತಾನೆ, ಅವರಪ್ಪನಿಗೆ ಲಕ್ವ ಹೊಡಿದು ಮಲಗಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕಾಯಿಲೆಯಿಂದ ಒಬ್ಬ ತೀರಿ ಹೋಗಿದ್ದಾನೆ. ಇವನನ್ನು ನೋಡಿದ ಕೂಡಲೇ ಅವರಮ್ಮ ಮತ್ತು ಶ್ರೀನಾಥ ತಬ್ಬಿ ಕೊಂಡು ಗೊಳೋ ಅಂದು ಅತ್ತು ಬಿಟ್ಟರು. ಮಾರ್ಚ್ ಪರೀಕ್ಷೆಗೆ ಕಟ್ಟಲು ಸಮಯವಾಗಿ ಹೋಗಿತ್ತು. ಆದರೂ ಮರುದಿನ ಹೆಡ್ ಮಾಸ್ತರರನ್ನು ಭೇಟಿಯಾಗಿ ವಿಷಯವನ್ನೆಲ್ಲಾ ಅರುಹಿದ. ಅಷ್ಟು ಹೊತ್ತಿಗಾಗಲೇ ಊರಿನ ಮಂದಿಗೆಲ್ಲಾ ಮಾರುತಿಯ ವಿಷಯ ಗೊತ್ತಾತಿಗ್ಗು. ಇನ್ನು ಸುಮ್ಮನೆ ಕೂತರೆ ಕೆಟ್ಟ ಹೆಸರು ಬರುವುದೆಂದೂ, ತಾನೂ ಏನಾದರೂ ಸಹಾಯ ಮಾಡಬೇಕೆಂದು ಹೆಡ್ ಮಾಸ್ತರರು ಬೆಂಗಳೂರಿನ ವಿದ್ಯಾ ಇಲಾಖೆಗೆ ದೂರವಾಣಿಯ ಮೂಲಕ ಮಾತನಾಡಿ ಹುಡುಗನಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ದೇವರು ದೊಡ್ಡವನು. ಹಾಗೇ ಆಗಿ, ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ದೊರಕಿತು. ಪ್ರತಿ ತಿಂಗಳೂ ಭಟ್ಟರಿಂದ ಹಣ ಬರುತ್ತಿತ್ತು. ಈ ಮಧ್ಯೆ ಒಮ್ಮೆ ಭಟ್ಟರು ಇವರ ಮನೆಗೆ ಬಂದು, ವಿಶ್ವನಾಥರಾಯರ ಚಿಕಿತ್ಸೆಗೆಂದು ಅಂಕೋಲಾಗೆ ಕೂಡ ಕರೆದುಕೊಂಡು ಹೋಗಿದ್ದರು. ಮಾರುತಿಗೆ ಪರೀಕ್ಷೆಗಾಗಿ ಓದುವುದು ಬಿಟ್ಟು ಬೇರೆ ಯಾವುದೂ ಯೋಚನೆಗಳು ಬರದಂತೆ ಎಲ್ಲರೂ ನೋಡಿಕೊಂಡರು. ಮಾರ್ಚ್ ತಿಂಗಳಲ್ಲಿ ಪರೀಕ್ಷೆ ಮುಗಿಯಿತು. ಅಂಕೋಲಾದ ಪೊಕ್ಕ ಮಾನು ಗೌಡ ಔಷಧಿಯ ಸಹಾಯದಿಂದ ಮಾರುತಿ ತಂದೆಯ ಆರೈಕೆ ಮಾಡಿದ. ಬಹಳ ಬೇಗ ತಂದೆ ಆರೋಗ್ಯರಾದರು. ಮೇ ತಿಂಗಳ ಕೊನೆಯ ವಾರದಲ್ಲಿ ಭಟ್ಟರು ಕೈಯಲ್ಲಿ ದಿನಪತ್ರಿಕೆ ಹಿಡಿದು ಓಡೋಡಿ ಬಂದರು. ಜೊತೆಗೇ ಶಾಲೆಯ ಹೆಡ್ ಮಾಸ್ತರರು, ಜೋಯಿಸರು ಮತ್ತಿತರೇ ಮಾಸ್ತರರುಗಳೂ ಇದ್ದರು. ಮನೆಯಲ್ಲಿ ಎಲ್ಲರಿಗೂ ಏನಾಯಿತೆಂದು ಆತಂಕ. ಏದುಸಿರು ಬಿಡುತ್ತಾ ಭಟ್ಟರೇ ಹೇಳಿದರು - ವಿಶ್ವನಾಥರಾಯರೇ ನಿಮ್ಮ ಹುಡುಗ ಅಲ್ಲಲ್ಲ ನನ್ನ ಹುಡುಗ ಮಾರುತಿ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಮೊದಲ rank ಗಳಿಸಿದ್ದಾನೆ. ರಾಜ್ಯ ಸರ್ಕಾರದವರು ಅವನ ಮುಂದಿನ ಓದನ್ನೆಲ್ಲಾ ನೋಡಿಕೊಳ್ಳುತ್ತಾರೆ.
ಎಲ್ಲರೂ ಮಾರುತಿಯನ್ನು ಕೇಳಿದರು, ಏನನಿಸತ್ತೋ ಪುಟ್ಟಾ, ಮುಂದೆ ಓದಲು ನೀನೆಲ್ಲಿಗೆ ಹೋಗ್ತೀ? ಮಾರುತಿ ಎಂದ, ನನಗೆ ಓದು ಬೇಡ! ನನಗೆ ಕೆಲಸ ಬೇಕು. ಯಾರಾದರೂ ಕೆಲಸ ಕೊಡಿಸಿ - ಇಲ್ಲದಿದ್ದಲ್ಲಿ ಭಟ್ಟರ ಹೊಟೆಲ್ ಗೆ ಕೆಲಸಕ್ಕೆ ಸೇರುವೆ.
==================================== ನಂತರ ??? ==================================

ಯಾರೆಷ್ಟೇ ಹೇಳಿದರೂ ಮಾರುತಿ ತನ್ನ ಪಟ್ಟು ಬಿಡಲಿಲ್ಲ. ತಾನು ಇಷ್ಟು ಓದಿದ್ದೇ ಸಾಕು...ತನ್ನ ಮೇಲೆ ಈಗ ಸಾಕಷ್ಟು ಜವಾಬ್ದಾರಿಗಳಿವೆ. ಅವುಗಳನ್ನು ನಿಭಾಯಿಸುವ ಕಡೆ ಗಮನಿಸಬೇಕು. ತಂದೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ತಮ್ಮಂದಿರ ಖಾಯಿಲೆಗಳೆಲ್ಲವೂ ವಾಸಿಯಾಗಬೇಕು, ಬಹು ತ್ರಾಸದಿಂದ ಸಂಸಾರದ ರಥವನೆಳೆದೂ ಎಳೆದೂ ಬಳಲಿ ಬೆಂಡಾಗಿರುವ ಮಮತೆಯ ಮೂರ್ತಿಯಾದ ತಾಯಿಯು ಇನ್ನು ಮುಂದೆಯಾದರೂ ನೆಮ್ಮದಿಯ ಬಾಳು ಬಾಳಬೇಕು, ತಮ್ಮಂದಿರು ಯಾವುದೇ ಚಿಂತೆಯಿಲ್ಲದೇ  ಓದಿನ ಕಡೆ ಗಮನ ಹರಿಸುವಂತಾಗಬೇಕು...ಇನ್ನೂ ಎಷ್ಟೆಷ್ಟೊ ಕನಸುಗಳು ಬಂದುಹೊಗಹತ್ತಿದವು...ಮಾರುತಿಯ ನಿರ್ಮಲ ಮನದೊಳಗೆ. ಸರ್ಕಾರವೇನೋ ನನ್ನ ಮುಂದಿನ ಓದಿನ ಸಂಪೂರ್ಣ ವೆಚ್ಚ ಭರಿಸುತ್ತದೆ..ಸರಿ..ಸಂತೋಷ..ಆದರೆ ಮನೆಮಂದಿಯನ್ನೆಲ್ಲಾ ನೋಡಿಕೊಳ್ಳುತ್ತದೆಯೆ? ನಮ್ಮ ಸಂಸಾರದ ಕಷ್ಟಗಳನ್ನೆಲ್ಲಾ ಸರ್ಕಾರದ ಬಳಿ ತೋಡಿಕೊಳ್ಳಾಲಾಗುತ್ತದೆಯೇ? ಖಂಡಿತಾ ಇಲ್ಲಾ. ದುಡಿಯಬೇಕು...ಸಂಸಾರವನ್ನು ಸಾಕಿ ಸಲಹಬೇಕು...ಇದೊಂದೇ ಮಾರುತಿಯ ಮನದಲ್ಲಿ ಇದ್ದ ಆಕಾಂಕ್ಷೆ.
ಮನೆಯವರೆಲ್ಲರಿಗೂ ಇದನ್ನು ಸರಿಯಾಗಿಯೇ ವಿವರಿಸಿದ...ಆದರೆ ಇವನ ಮಾತು ಕೇಳುವವರಾರು? ಇವನಷ್ಟೇ ಪ್ರೀತಿ ಅವರೆಲ್ಲರಿಗೂ ಇವನ ಮೇಲಿದೆ. "ನಮ್ಮ ಕಷ್ಟಗಳು ಇದ್ದದ್ದೇ. ಇವುಗಳು ನಿನ್ನ ಓದಿಗೆ ಮುಳ್ಳಾಗಬಾರದು. ಭಕ್ತ ಕುಂಬಾರನ ಬಳಿಗೆ ಸಾಕ್ಷಾತ್ ವಿಠಲನೇ ಬಂದು ಉಪಚರಿಸಿದ ಹಾಗೆ ನಮ್ಮ ಭಟರು ಉಪಚರಿಸುತ್ತಿದ್ದಾರೆ. ಶ್ರೀನಾಥ ಸಂಸಾರದ ಭಾರವನ್ನು ಹೊರಲು ಸಿದ್ಧನಿದ್ದಾನೆ...ನೀನು ಸಂಸಾರದ ಬಗ್ಗೆ, ತಂದೆಯ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವಿದ್ಯೆ ಎಂಬುದು ಎಲ್ಲರಿಗೂ ಒಲಿದು ಬರುವುದಿಲ್ಲ. ಸರಸ್ವತಿ ತಾಯಿಯು ನಿನಗೆ ಒಲಿದಿದ್ದಾಳೆ, ಆ ಮಹಾತಾಯಿಯನ್ನು ದೂರ ತಳ್ಳಬೇಡ. ಕಷ್ಟ ಪಟ್ಟು ಓದಿ ಮೊದಲನೇ ರ್‍ಯಾಂಕ್ ಬಂದಿದ್ದೀಯ. ನಿನ್ನ ಜ್ಞಾನಾರ್ಜನೆ ಇಲ್ಲಿಗೆ ನಿಲ್ಲುವುದು ಬೇಡ. ನೀನು ಜ್ಞಾನದ ಹಸಿವಿನಲ್ಲಿ, ಎಷ್ಟೋ ಸಲ ಹೊಟ್ಟೆಯ ಹಸಿವನ್ನು ಮರೆತಿದ್ದೀಯೆ ಎಂಬುದನ್ನ ನಿನ್ನ ತಾಯಿಯಾಗಿ ನಾನು ತುಂಬಾ ಚೆನ್ನಾಗಿ ಅರಿತಿದ್ದೇನೆ. ನೀನು ಓದನ್ನು ಮುಂದುವರೆಸಲೇ ಬೇಕು. ಇದು ನಿನ್ನ ತಾಯಿಯ ಆಶೀರ್ವಾದ ಮಾತ್ರವಲ್ಲ, ಅಜ್ಞೆಯೆಂದು ತಿಳಿ" ಎಂದು ಭಾಗಿರಥಮ್ಮ ತನ್ನ ಮನದಿಂಗಿತವನ್ನ ಮಾರುತಿ ಬಳಿ ಅಂಗಲಾಚಿಕೊಂಡಳು.
ನಮ್ಮ ಮಾರುತಿ ಅಡ್ಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾದ. "ಅಯ್ಯೋ ವಿಧಿಯೇ ಇದೆಂಥ ಧರ್ಮಸಂಕಟ? ನಾನೀಗ ದುಡಿಯಬೇಕೆ? ಅಥವಾ ಓದು ಮುಂದುವರೆಸಬೇಕೆ? ನಾನ್ಯಾಕಾದರೂ ರ್‍ಯಾಂಕ್ ಬಂದೆನೋ?" ಎಂದು ಅವನ ಮನಸ್ಸಿನಲ್ಲಿ ತುಮುಲ ತಳಮಳಗಳು ಸಾಗರದಲೆಗಳಂತೆ ಒಂದಾದ ಮೇಲೊಂದರಂತೆ ಉಕ್ಕತೊಡಗಿದವು. ದಿಕ್ಕೇತೋಚದವನಾಗಿ ಸೂರನ್ನು ದಿಟ್ಟಿಸತೊಡಗಿದ್ದಾಗ ಯಾರೋ ತನ್ನ ಕೈ ಬೆರಳನ್ನೆಳದಂತಾಯ್ತು. ಎಳೆದದ್ದು ಎಲ್ಲರಿಗಿಂತ ಚಿಕ್ಕ ತಮ್ಮನಾದ ಕಿಶೋರನು. ಆತ್ಮೀಯತೆಯಿಂದ ಅವನ ತಲೆ ನೇವರಿಸಿದ ಮಾರುತಿ. ಕಿಶೋರ ತನ್ನ ಪುಟ್ಟ ದನಿಯಲ್ಲಿ ಅಣ್ಣನ ಬಳಿ ಉಸುರಿದ..."ಅಣ್ಣಾ...ಅಣ್ಣಾ...ನೀನು ಓದ್ಬೇಕಣ್ಣಾ...ನಂಬಗ್ಗೆ ಚಿಂತಿಸ್ಬೇಡಣ್ಣಾ...ಅಲ್ನೋಡಣ್ಣಾ ಅಮ್ಮನ್ನಾ...ಅವಳನ್ನ ನೋಯಿಸ್ಬೇಡಣ್ಣಾ". ಮಾರುತಿಗೆ ಪ್ರೀತಿ ಉಕ್ಕಿ ಬಂತು. ಕಿಶೊರನನ್ನ ಬಾಚಿ ತಬ್ಬಿಕೊಂಡ. ಆನಂದಭಾಷ್ಪವೋ? ಅಥವಾ ದುಃಖದ ಕಡಲಿನ ಕಟ್ಟೆ ಒಡೆಯಿತೋ? ಒಟ್ಟಿನಲ್ಲಿ ಕಣ್ಣೀರು ಸುರಿಯತೊಡಗಿತು. ಪ್ರೀತಿಯ ತಮ್ಮನ ಅಪ್ಪುಗೆ ಬಲಪಡಿಸುತ್ತ, ತನ್ನ ರೋದನೆ ಮುಂದುವರೆಸಿದ.
ಸ್ವಲ್ಪ ಹೊತ್ತಿನ ನಂತರ ಎಲ್ಲವೂ ನಿಶ್ಯಬ್ಧ. ಆದರೆ ಎಲ್ಲರ ಮನಸ್ಸಿನಲ್ಲಿ ನೂರೆಂಟು ಯೋಚನಾಲಹರಿಗಳು. ಈ ಯೋಚನೆಗಳಿಗೆ ಅಡ್ಡಿಬಂತಂದೆ ಹೊರಗಡೆ ಹೆಜ್ಜೆಗಳ ಸಪ್ಪಳವಾಯಿತು.
ಬಾಗಿಲಲ್ಲೇ ಕುಳಿತಿದ್ದ ಲೋಹಿತ (ಆರನೆ ಮಗ, ಅಂದರೆ ಕಿಶೋರನಿಗೆ ಮಾತ್ರ ಅಣ್ಣ ) , ಹೊರಗಡೆ ಇಣುಕಿದ. ಕಣ್ಣಗಲಿಸಿ ನೋಡಿದ..ಕಣ್ಣು ಮತ್ತೂ ಅಗಲಿಸಿ ಕೂಗಿಕೊಂಡ "ದೊಡ್ಡಣ್ಣಾ ಬಂದಾ....ದೊಡ್ಡಣ್ಣಾ ಬಂದಾ....". ಓಡಿ ಹೊಗಿ ಹಿರಿಯಣ್ಣನ ಕೈ ಹಿಡಿದು ಕೊಂಡ. ಮನೆಬಿಟ್ಟು ಹೋಗಿದ್ದ ಹಿರಿಯ ಮಗ ಶಂಕರ, ಮಾರುತಿಯ ಬಗ್ಗೆ ದಿನಪತ್ರಿಕೆಯಲ್ಲಿ ರ್‍ಯಾಂಕ್ ಸುದ್ದಿಯನ್ನು ಓದಿ ಮರಳಿ ಗೂಡಿಗೆ ಬಂದಿದ್ದ. ಬಂದವನೇ ಮಾರುತಿಯನ್ನು ಬಾಚಿ ತಬ್ಬಿದ. ಮಾರುತಿಯ ಹಣೆಗೆ ಮುತ್ತಿಟ್ಟ. ಕಣ್ಣೀರಿಟ್ಟ. ತಾಯ್ತಂದೆಯರಿಗೆ ನಮಸ್ಕರಿಸಿದ. ಅವನ ಹಿಂದೆಯೆ ಅವನ ಹೆಂಡತಿ ಕಮಲಳೂ ನಮಸ್ಕರಿಸಿದಳು. ವಿಶ್ವನಾಥರಾಯರಿಗೂ, ಭಾಗಿರಥಮ್ಮನವರಿಗೂ ಕ್ಷಣಕಾಲ ನೂರೆಂಟು ಪ್ರಶ್ನೆಗಳು ಮನದಲ್ಲಿ ಹಾದುಹೋದರೂ, ನಮಸ್ಕರಿಸಿದ ಸೊಸೆಯನ್ನು ಮನೆಗೆ ಬಂದ ಮಹಾಲಕ್ಷ್ಮಿಯೆಂದು ಭಾವಿಸಿ ಮನಸಾರೆ ಆಶೀರ್ವದಿಸಿದರು.
ಶಂಕರನು ತಾನು ತಂದಿದ್ದ ದ್ರಾಕ್ಷಿ, ಸೇಬುಗಳನ್ನು ಪ್ರೀತಿಯ ತಮ್ಮಂದಿರಿಗೆ ಕೊಟ್ಟು, ಅಪ್ಪನ ಪಕ್ಕದಲ್ಲಿ ಬಂದು ಕುಳಿತನು. ಮೂಸಂಬಿಯ ಸಿಪ್ಪೆ ಸುಲಿಯುತ್ತಾ ತನ್ನ ಕತೆಯನ್ನು ವಿವರವಾಗಿ ಹೇಳಿದ. ಹೇಳದೆ ಕೇಳದೆ ಮನೆ ಬಿಟ್ಟು ಹೋದದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳಿದ. ದೊಡ್ಡಮಗನಾಗಿ ಬೇರೆಯವರಿಗಿಂತ ತನ್ನ ಮೇಲೆ ಜವಬ್ದಾರಿ ಹೆಚ್ಚೆಂದು ತಿಳಿದೇ, ಯಾವುದಾದರು ಕೆಲಸ ಮಾಡಿ ಮತ್ತೆ ಮನೆಗೆ ಮರಳಬೇಕೆಂದೇ ಮನೆ ಬಿಟ್ಟೆನೆ ಹೊರತು, ನಿಮ್ಮಿಂದ ಶಾಶ್ವತವಾಗಿ ದೂರಹೋಗಬೇಕೆಂದಲ್ಲಾ ಎಂದು ಸೂಕ್ಷ್ಮವಾಗಿ ತಿಳಿಹೇಳಿದನು. ತಾನು ಬೆಂಗಳೂರಿನ ಬಸ್ ಹತ್ತಿದ್ದೂ, ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಪಟ್ಟ ಪಾಡು, ಕೊನೆಗೆ ಅಪ್ಪನ ಮೇಸ್ತ್ರಿ ಕೆಲಸ ಸ್ವಲ್ಪ ಗೊತ್ತಿದ್ದರಿಂದ ಹೇಗೊ ಕಾಲ ತಳ್ಳುತ್ತಿದುದ್ದು, ತನ್ನನ್ನು ನೋಡಿಕೊಳ್ಳುತ್ತಿದ್ದ ಮೇಸ್ತ್ರಿ ರಾಮಪ್ಪ ಇದ್ದಕ್ಕಿದ್ದಂತೆ ಕಣ್ಮುಚ್ಚಿದ್ದು, ಆತನ ಮಗಳಾದ ಕಮಲಳಿಗೆ ಅಪ್ಪನ ನಂತರ ಯಾರೂ ನೆರವಾಗದಿದ್ದದ್ದೂ, ಕೊನೆಗೆ ಯಾರಿಗೂ ತಿಳಿಸದಂತೆ ಮದುವೆಯಾಗಬೇಕಾದಂತ ಪರಿಸ್ಥಿತಿ ಎದುರಾದದ್ದೂ ಇವೆಲ್ಲವನ್ನೂ ಇದ್ದದ್ದು ಇದ್ದಂತೆಯೆ ವಿವರಿಸಿದ. ಮೊದಲು ಕೊಂಚ ಕೋಪಗೊಂಡಿದ್ದ, ಶ್ರೀನಾಥ ಅಣ್ಣನ ಈ ವಿವರಗಳಿಂದ ಈಗ ಮೆದುವಾಗಿದ್ದ. ಇಷ್ಟು ಹೇಳಿ ಮುಗಿಸುವಷ್ಟರಲ್ಲಿಯೇ ಕಮಲಳು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಳು. ಕಸವನ್ನೆಲ್ಲಾ ಮೂಲೆಯಲ್ಲಿ ಗುಡ್ಡೆ ಮಾಡಿ ಬಾಚುವಾಗ, ಪುಟಾಣಿ ಕಿಶೋರ ಓಡಿಹೋಗಿ ಕಮಲಳ ಕುತ್ತಿಗೆಗೆ ಹಿಂದಿನಿಂದ ಹೋಗಿ ಎರಡು ಕೈಗಳನ್ನು ಸುತ್ತಿಹಾಕಿಕೊಂಡು, "ನಿಮ್ಮನ್ನ ಏನಂತ ಕರೀಲಿ?" ಎಂದು ಮುಗ್ಧತೆಯ ಭಾವದಿಂದ ಕೇಳಿದ. ಕಮಲಳ ಮುಖವು ಕಮಲದಂತೆ ಅರಳಿ, ಹಾಗೆಯೇ ಅವನ ಕಡೆ ತಿರುಗಿ, "ಅತ್ತಿಗೆ ಅಂತಾ ಕರಿ ಕಂದಾ" ಎಂದು ನೋಡಿ ಮುಗುಳ್ನಕ್ಕಳು.
ಕೇವಲ ಕೆಲವು ನಿಮಿಷಗಳಲ್ಲೆ ಮನೆಮಂದಿಯ ಮನ ಗೆದ್ದಿದ್ದಳು ಕಮಲ, ಅಡುಗೆ ಮನೆಯ ಸ್ವಚ್ಛಮಾಡಿ, ಎಲ್ಲರಿಗೂ ಅಡುಗೆ ಮಾಡತೊಡಗಿದ್ದಳು.
ಇತ್ತ, ಭಾಗಿರಥಮ್ಮ, ಹಿರಿಯಮಗ ಶಂಕರನ ಬಳಿ, ಅವಳ ಮುಂದಿದ್ದ ಆಸೆಯನ್ನು ಬಿಚ್ಚಿಟ್ಟಳು. "ನಾವೆಲ್ಲಾ ಹೇಳಿದ್ದಾಯ್ತು...ಈಗ ನೀನಾದ್ರು ಮಾರುತಿಗೆ ಹೇಳು ಮುಂದಕ್ಕೆ ಓದಪ್ಪ ಅಂತಾ...ಓದದೇ ಇಲ್ಲಾ ಅಂತ ಕುಂತವ್ನೆ" ಎಂದಳು. ಆ ಭಗವಂತ ಶಂಕರನನ್ನು ಮನೆಗೆ ವಾಪಸಾಗುವಂತೆ ಮಾಡಿರುವುದೇ ಅದಕ್ಕಲ್ಲವೇ?
ಶಂಕರ ಮಾರುತಿಯ ಕೈ ಹಿಡಿದು ಮನೆಯಿಂದ ಹೊರಬಂದ. ಅವರಿಬ್ಬರನ್ನು ಶ್ರೀನಾಥನೂ ಹಿಂಬಾಲಿಸಿದ. ಸ್ವಲ್ಪ ದೂರ ಹೋದಮೇಲೆ, ಶ್ರೀನಾಥನು ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಚಾಚೂ ತಪ್ಪದೆ ಶಂಕರನಿಗೆ ವಿವರಿಸಿದ. ಶಂಕರ ಒಂದು ದೀರ್ಘ ನಿಟ್ಟುಸಿರು ಬಿಟ್ಟು ಹೇಳಿದ. "ಆ ದೇವರು ದೊಡ್ಡವನು. ನಾನಿಲ್ಲಿಗೆ ಸರಿಯಾದ ಸಮಯಕ್ಕೇ ಬರುವಂತೆ ಮಾಡಿದ್ದಾನೆ. ನೋಡು ಮಾರುತಿ, ನಿನ್ನ ಮನಸ್ಸಿನಲ್ಲಿರುವ ಪ್ರತಿಯೊಂದು ಆಸೆ, ಕನಸು, ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇವೆಲ್ಲವೂ ನನ್ನಲ್ಲಿಯೂ ಇತ್ತು...ಈಗಲೂ ಇವೆ. ನಮ್ಮಿಬ್ಬರಲ್ಲಿ ಮಾತ್ರವಲ್ಲ, ಶ್ರೀನಾಥನ ಬಳಿಯೂ ಇವೆ. ನಮ್ಮೆಲ್ಲರ ಆಸೆ ಒಂದೆ, ನಮ್ಮ ಮನೆ ಜೇನುಗೂಡಿನಂತಿರಬೇಕು. ನಾವೆಲ್ಲಾ ಜೇನುಗಳಾಗಿ ಜೊತೆಯಾಗಿರಬೇಕು. ಆಗಾಗುವದಕ್ಕೆ, ಒಂದೇ ಪರಿಹಾರ. ಅದುವೇ ಒಬ್ಬರಿಗೊಬ್ಬರು ನೆರವಾಗುವುದು". ಮಾರುತಿ ಶಂಕರನ ಮಾತುಗಳನ್ನು ತದೇಕಚಿತ್ತದಿಂದ ಕೇಳುತಿದ್ದ. ಶಂಕರ ಮುಂದುವರೆಸಿದ, "ನಮ್ಮ ಸಂಸಾರ ಈಗ ಸಾಕಷ್ಟು ಸುಧಾರಿಸಿದೆ. ಮೊದಮೊದಲು, ಅಪ್ಪನ ಮೇಲೇ ಪೂರ್ತಿ ಜವಾಬ್ದಾರಿಯಿತ್ತು. ಆದರೆ ಈಗ ಹಾಗಲ್ಲ. ನೀನು, ಶ್ರೀನಾಥ ಸೇರಿಕೊಂಡು ಸಾಕಷ್ಟು ಉತ್ತಮಗೊಳಿಸಿದ್ದೀರಿ. ನಾನು ಮನೆ ಬಿಟ್ಟು ಹೋದಾಗಿನಿಂದ ಇಲ್ಲಿಯವರೆಗೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಿದ್ದೀರಿ. ತಮ್ಮಂದಿರನ್ನ ಚೆನ್ನಾಗಿ ಪೋಷಿಸಿದ್ದೀರಿ. ನಿಮಗೆ ನಾನೆಷ್ಟು ಕೃತಜ್ಞತೆಗಳನ್ನರ್ಪಿಸದರೂ ಸಾಲದು." ಶಂಕರನ ಕಣ್ಣು ಒದ್ದೆಯಾಗಿತ್ತು...ಆದರೂ ಮುಂದುವರೆಸಿದ, "ಈಗ, ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಲು ನಾನು ಎಲ್ಲ ರೀತಿಯಿಂದಲೂ ಸನ್ನದ್ಧನಾಗಿದ್ದೇನೆ. ಸಂಸಾರವನ್ನು ತಕ್ಕ ಮಟ್ಟಿಗೆ ನೋಡಿಕೊಳ್ಳುವ ಚೈತನ್ಯವಿರುವಷ್ಟು ದುಡಿಯುತ್ತಿದ್ದೇನೆ. ನಮ್ಮೆಲ್ಲರನ್ನೂ ಸಾಕಿ ದೊಡ್ದವರನ್ನಾಗಿ ಮಾಡುವಲ್ಲಿಯೇ ತನ್ನ ಜೀವವನ್ನು ತೇಯುತ್ತಿರುವ ಅಮ್ಮನಿಗೆ ಇನ್ಮುಂದೆ ನೆರವಾಗಲು, ಬೆಂಗಾವಲಾಗಲು ಕಮಲಳು ಇಲ್ಲಿಯೇ ಇರುತ್ತಾಳೆ. ನಾನು ಪ್ರತಿ ವಾರಕ್ಕೊಮ್ಮೆ ಬಂದು ಹೋಗುತ್ತಿರುತ್ತೇನೆ. ನೀನು ನನ್ನ ಜೊತೆ ಬೆಂಗಳೂರಿಗೆ ಬಾ. ನನ್ನ ಮನೆ, ಇನ್ಮುಂದೆ ನಿನ್ನ ಮನೆ. ಪಿ.ಯು.ಸಿ ಸೇರಲು ಇನ್ನು ಜಾಸ್ತಿ ದಿನ ಉಳಿದಿಲ್ಲ. ನಿನ್ನ ಓದಿನ ಭಾರವನ್ನು ಸರ್ಕಾರ ಹೊರುತ್ತಿರುವುದು ನಮ್ಮೆಲ್ಲರ ಹೊರೆಯನ್ನು ಸ್ವಲ್ಪವಾದರೂ ಕಡಿಮೆಮಾಡಿದೆ. ಇಲ್ಲಿ ಅಪ್ಪ ಅಮ್ಮ, ತಮ್ಮಂದಿರನ್ನು ನೋಡಿಕೊಳ್ಳಲು ಶ್ರೀನಾಥ, ಭಟರು, ಕಮಲ ಇವರೆಲ್ಲರೂ ಇದ್ದಾರೆ. ಏನಾದರೂ ತುರ್ತು ವಿಷಯವಿದ್ದರೆ, ಶ್ರೀನಾಥ ಭಟರ ಮೂಲಕ ನಮಗೆ ಟೆಲಿಗ್ರಾಮ್ ಕೊಡಲಿ ಅಥವಾ ಬೆಂಗಳೂರಿನ ನಮ್ಮ ಪಕ್ಕದಮನೆಯವರಿಗೆ ಫೋನಾಯಿಸಲಿ. ಏನಂತ್ಯೋ ಶ್ರೀನೀ?" ಶ್ರೀನಾಥನಿಗೆ ಮಾತೇ ಹೊರಡುತ್ತಿಲ್ಲ..ಮೌನದಿಂದಲೆ ಹೌದೆಂಬಂತೆ ತಲೆಯಲ್ಲಾಡಿಸಿದ. ಶಂಕರ ಹೇಳುವುದು ಇನ್ನೂ ಮುಗಿದಿರಲಿಲ್ಲ, "ನೋಡು ಮಾರುತಿ, ನಿನ್ನ ಅಣ್ಣನಾಗಿ ನಾನು ನಿನಗಿಂತ ಸ್ವಲ್ಪ ಜಾಸ್ತಿ ಈ ಪ್ರಪಂಚವನ್ನು ಅರ್ಥಮಾಡಿಕೊಂಡಿದ್ದೇನೆ. ಸಾಕಷ್ಟು ನೋವು-ಕಷ್ಟಗಳನ್ನು ಅನುಭವಿಸಿದ್ದೇನೆ. ನೀನು, ಅಪ್ಪ, ಅಮ್ಮ, ಶ್ರೀನೀ ಎಲ್ಲರೂ ನೋವು-ಕಷ್ಟಗಳನ್ನು ಉಂಡವರೇ. ನಮ್ಮ ತಮ್ಮಂದಿರೂ ಆ ನೋವಿನಲ್ಲಿ ತೋಯಬೇಕೆ? ಅವರು ಮುಂದೆ ಓದಿ, ವಿದ್ಯಾವಂತರಾಗಬೇಕಲ್ಲವೇ? ಅವರು ವಿದ್ಯಾವಂತರಾಗಲು ನೀನು ಮಾರ್ಗದರ್ಶಿಯಾಗಬೇಕಲ್ಲವೇ? ಅಣ್ಣಂದಿರಾದ ನಾವೇ ಓದದೇ ತಮ್ಮಂದಿರಿಗೆ ಓದಲು ಹೇಳಿದರೆ ನಮ್ಮ ಮಾತಿಗೆ ಬೆಲೆಕೊಡುತ್ತಾರೆಯೇ? ಮುಂದೆ ಅವರು ಏನು ಓದಬೇಕು, ಎತ್ತ ದಿಕ್ಕಿನಲ್ಲಿ ಸಾಗಬೇಕು ಎಂದು ಅರ್ಥಮಾಡಿಕೊಂಡು ಅವರಿಗೆ ಬುದ್ಧಿಹೇಳಲು ನಮಗೆ ಸಾಕಷ್ಟು ಯೋಗ್ಯತೆ ಇರಬೇಕಲ್ಲವೇ? ನೀನು ಓದಿ ದೊಡ್ಡ ಹುದ್ದೆಯನ್ನೇರಿದರೆ, ನೀನು ನಮಗೆಲ್ಲರಿಗೂ ಆಧಾರಸ್ತಂಭ ಮಾತ್ರವಲ್ಲ, ತಮ್ಮಂದಿರೆಲ್ಲರಿಗೂ ಸ್ಪೂರ್ತಿಯಾಗುವೆಯಲ್ಲವೇ? ನಿನ್ನಂತೆ ತಾನೂ ಓದಿ ಮುಂದೆ ಬರಬೇಕೆಂಬ ಆಸೆ, ಉತ್ಸಾಹ, ಛಲ ಅವರಲ್ಲಿಯೂ ಮೂಡುತ್ತದೆಯಲ್ಲವೇ? ನೀನೇ ಓದುವುದಿಲ್ಲವೆಂದರೆ ಅವರೆಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುವುದಿಲ್ಲವೇ? ನೀನಿಷ್ಟು ದಿನ ಕಷ್ಟಪಟ್ಟು ಓದಿದ್ದು, ರ್‍ಯಾಂಕ್ ಬಂದದ್ದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುವುದಿಲ್ಲವೇ?" ಕ್ಷಣಕಾಲ ಸುಮ್ಮನಾದ ಶಂಕರ ಮಾರುತಿಯನ್ನು ಗಮನಿಸುತ್ತಾನೆ. ಮಾರುತಿ ಶಂಕರನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾನೆ, ಕಿವಿಯಲ್ಲಿ ಕಿವಿಯಿಟ್ಟು ಕೇಳುತ್ತಿದ್ದಾನೆ. ತಾನು ಕೇಳುತ್ತಿರುವುದು, ನೋಡುತ್ತಿರುವುದು ವಾಸ್ತವವೋ, ಭ್ರಾಂತಿಯೋ ಎಂದು ಕ್ಷಣಕಾಲ ಗೊಂದಲಕ್ಕೀಡಾಗುತ್ತಾನೆ. ನಿಧಾನವಾಗಿ ಗೊಂದಲದಿಂದ ಚೇತರಿಸಿಕೊಂಡು, "ಶಂಕ್ರಣ್ಣಾ...ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ...ಮಾತೇ ಹೊರಡುತ್ತಿಲ್ಲ" ಎಂದಷ್ಟೇ ಹೇಳಿ ನಿಲ್ಲಿಸುತ್ತಾನೆ. ಅವನ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿದ್ದ ಕಾಂತಿಯನ್ನು ಬಹುಬೇಗ ಗ್ರಹಿಸಿದ ಶಂಕರ, "ನೀನೇನೂ ಹೇಳಬೇಕಿಲ್ಲ. ಎಲ್ಲವನ್ನೂ ನಾನೇ ಅರ್ಥ ಮಾಡಿಕೊಂಡೆ" ಎಂದು ಸಂತೋಷದಿಂದ ಮಾರುತಿಯ ಭುಜವನ್ನು ತಟ್ಟಿದ. ಮಾರುತಿಯ ಮನಸ್ಸು ಪರಿವರ್ತನೆಗೊಂಡದ್ದನ್ನು ಮನಗಂಡ ಶ್ರೀನಾಥನಿಗೆ ಸ್ವರ್ಗವೇ ಧರೆಗಿಳಿದಂತಾಯ್ತು. ಕೂಡಲೆ, "ಅಬ್ಬಾ..ಆ ದೇವ್ರು ದೊಡ್ಡವ್ನು, ಬೆಟ್ಟದಂಗಿದದ್ದನ್ನ, ಮಂಜಿನಂತೆ ಕರಗಿಸಿಬಿಟ್ಟ" ಎಂದು ಮಾರುತಿಯ ಕೈಯನ್ನು ತೆಗೆದು ಶಂಕರನ ಕೈಗಿಟ್ಟು ಮೆದುವಾಗಿ ಎರಡು ಸಲ ತಟ್ಟುತ್ತಾನೆ. ಮೂವರೆದೆಯಲ್ಲೂ ಸಂತಸ ಉಕ್ಕಿ ಹರಿಯುತಿದೆ. ಮನೆ ಕಡೆಗೆ ವಾಪಸಾಗಹತ್ತಿದರು.
ಮನೆಯ ಬಾಗಿಲಲ್ಲಿಯೇ ನಿಂತಿದ್ದ ಭಾಗಿರಥಮ್ಮಳಿಗೆ, ಮೂವರು ಮಕ್ಕಳೂ ಹಸನ್ಮುಖಿಯರಾಗಿ ಮನೆಯ ಕಡೆ ಬರುತ್ತಿರುವದನ್ನು ನೋಡಿ, ನಿರಾಶೆಯ ಕಾರ್ಮೋಡಗಳೆಲ್ಲವೂ ಚದುರಿದಂತಾಯ್ತು. ಮಾರುತಿಯ ಮೊಗದಲ್ಲಿ, ಆ ರೀತಿಯ ಕಾಂತಿ, ಮುಗುಳ್ನಗೆ ನೋಡಿದ್ದನ್ನೇ ಮರೆತಿದ್ದಳು ಆ ತಾಯಿ. ಅವನ, ಓದಿನ ಬಗ್ಗೆ ಕಟ್ಟಿದ್ದ ಆಶಾಗೋಪುರಕ್ಕೆ ಹೊಸ ಜೀವ ಬಂದಿತ್ತು.
ಶ್ರೀನಾಥ ಓಡಿ ಬಂದು, "ಅಮ್ಮಾ, ಮಾರುತಿ ಮುಂದಕ್ಕೆ ಓದ್ತಾನೆ! ಅಪ್ಪಾ, ಮಾರುತಿ ಮುಂದಕ್ಕೆ ಓದ್ತಾನೆ!!" ಎಂದು ಗಂಟಲಿನಲ್ಲಿರುವ ಶಕ್ತಿಯನ್ನೆಲ್ಲಾ ಉಪಯೊಗಿಸಿ ಕಿರುಚುತ್ತಾ ತನ್ನ ಸಂತಸ ವ್ಯಕ್ತಪಡಿಸುತ್ತಾನೆ. ತಂದೆ, ತಾಯಿ, ತಮ್ಮಂದಿರ ಆನಂದಕ್ಕೆ ಪಾರವೇ ಇರಲಿಲ್ಲ. ಭಾಗಿರಥಮ್ಮ ಮಾರುತಿಯನ್ನು ಬಾಚಿ ತಬ್ಬುತ್ತಾಳೆ, "ಮಗಾ...ಕೊನೆಗೂ ಒಪ್ಕೊಂಡ? ನನ್ ಕಿವಿನೇ ನಂಬಕ್ಕಾಗ್ತಿಲ್ಲ" ಎಂದು ಗದ್ಗದಿತಳಾದಳು. ಶಂಕರ "ಅಮ್ಮ ಇನ್ಮೇಲೆ, ಇವ್ನು ನಂಜೊತೆ ಬೆಂಗಳೂರ್‍ನಲ್ಲಿರ್ತಾನೆ.  ಅಲ್ಲೇ ಪಿ.ಯು.ಸಿ ಗೆ ಸೇರ್ತಾನೆ. ಇನ್ಮೇಲೆ ಇವನ ಜವಾಬ್ದಾರಿ ನಂದು". ಇಷ್ಟೇಳುವಷ್ಟರಲ್ಲಿ, ಮನೆಮಂದಿಯೆಲ್ಲಾ ಹೊರಗೋಡಿ ಬಂದಿದ್ದರು. ವಿಶ್ವನಾಥರಾಯರು, ಮಾರುತಿಯ ತಲೆ ನೇವರಿಸಿ ಎದೆಗಪ್ಪಿಕೊಂಡರು. ಇದನ್ನೆಲ್ಲಾ ನೋಡಿದ ಭಟರು ಕೂಡಲೆ ಹೋಟೆಲಿನಿಂದ ಸಿಹಿತಿಂಡಿಗಳನ್ನು ತರಲು ಧಾವಿಸಿದರು. ಅಷ್ಟೊತ್ತಿಗಾಗಲೆ, ಕಮಲಳ ಅಡುಗೆ ಘಮ್ಮೆನ್ನುತ್ತಿತ್ತು. ಮನೆಯಲ್ಲಿ ಹಿಂದೆಂದೂ ಕಾಣದಂತಹ ಹಬ್ಬದ ವಾತವರಣ ಮೂಡಿತ್ತು. ಎಲ್ಲರೂ ಸಾಲಾಗಿ ಕುಳಿತರು. ಮಾರುತಿಯ ಒಂದು ಪಕ್ಕದಲ್ಲಿ ಕೈ ಹಿಡಿದು ಭಾಗಿರಥಮ್ಮ ಕುಳಿತರೆ, ಇನ್ನೊಂದು ಪಕ್ಕದಲ್ಲಿ ಪ್ರೀತಿಯ ಅಣ್ಣನ ಷರಟು ಗಟ್ಟಿಯಾಗಿ ಹಿಡಿದು ಕುಳಿತಿರುವ ಕಿಶೋರ. ಕಮಲಳು ಎಲ್ಲರಿಗೂ ಬಡಿಸುವಷ್ಟರಲ್ಲಿ, ಓಡೋಡಿ ಬಂದ ಭಟರು, ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚುತ್ತಾ..."ನಂಗೂ ಊಟ ಬಡಿಸಮ್ಮ ಕಮಲ" ಎಂದು ಮುಗುಳ್ನಗುತ್ತಾ ರಾಯರ ಪಕ್ಕದಲ್ಲಿ ಆಸೀನನಾಗುತ್ತಾರೆ.
ಎಲ್ಲರೆದೆಯಲ್ಲೂ ಹರುಷದ ಹೊನಲು...ಜೊತೆಗೆ ಘಮ್ಮೆನ್ನುವ ಅಡುಗೆ, ಈಗ ಭಟರು ತಂದಿರುವ ಸಿಹಿತಿಂಡಿ ಬೇರೆ. ಆಹಾ..ಈ ಪಂಕ್ತಿಯ ಊಟದಲ್ಲಿರುವ ಸವಿಯೇ ಸವಿ. ಇದಕ್ಕಿಂತ ಬೇರೆ ಸ್ವರ್ಗ ಉಂಟೆ?
ರಾತ್ರಿ ಪೂರ್ತಿ, ಅಣ್ಣತಮ್ಮಂದಿರು ಹಾಡಿ ಕುಣಿದರು. ದೊಡ್ಡ ಮಕ್ಕಳೂ ಎಳೆಯ ಮಕ್ಕಳಾಗಿದ್ದರು. ಕಿಶೋರ ಮಾರುತಿಯ ಷರಟು ಬಿಟ್ಟೇ ಇರಲಿಲ್ಲ. ಶಂಕರನು, ತನ್ನ ತಾಯಿಯನ್ನು, ಹೆಂಡತಿಯನ್ನು ಕರೆದು ಸ್ವಲ್ಪ ಕಾಲ ಮಾತಾಡಿದನು. ಅಪ್ಪನ ಆರೋಗ್ಯದ ಬಗ್ಗೆ, ತಮ್ಮಂದಿರ ಓದಿನ ಬಗ್ಗೆ, ಮನೆಯ ನಿರ್ವಹಣೆ ಬಗ್ಗೆ ಕೆಲವು ಹಿತನುಡಿಗಳನ್ನು ಹೇಳಿದನು. ಮಾರುತಿಯ ಬಗ್ಗೆ ಯಾವುದೇ ರೀತಿಯಲ್ಲೂ ಚಿಂತಿಸದಂತೆ ತಾಯಿಯಲ್ಲಿ ಕೇಳಿಕೊಂಡನು. ತಮ್ಮಂದಿರು ಏನಾದರು ತಪ್ಪು ಮಾಡಿದರೆ, ಅದನ್ನು ಹೊಟ್ಟೆಗೆ ಹಾಕಿಕೊಂಡು, ಅವರ ತಪ್ಪನ್ನು ತಿದ್ದಿ  ಅವರನ್ನು ಸರಿದಾರಿಗೆ ತರುವಂತೆ ಹೆಂಡತಿಯಲ್ಲಿ ವಿನಂತಿಸಿಕೊಂಡನು. ತಾನು ತಂದಿದ್ದ ಸ್ವಲ್ಪ ಹಣವನ್ನು ತಾಯಿಯ ಕೈಗಿಟ್ಟು, "ಇನ್ಮೇಲಾದ್ರು ನಿನ್ನ ಜೀವ ನೆಮ್ಮದಿಯಾಗಿರ್ಬೇಕು ಅನ್ನೋದೆ ನನ್ನ ಆಸೆ" ಅನ್ನುವನು. ಇವೆಲ್ಲಕ್ಕೂ ತಾಯಿಯು ಕಣ್ಣಿನಲ್ಲಿಯೇ ಆನಂದ ಸೂಚಿಸುತ್ತಾಳೆ.
ಬೆಳಗಾಯಿತು...ಶಂಕರ, ಮಾರುತಿ ಇಬ್ಬರೂ ಹೊರಟು ನಿಂತಿದ್ದಾರೆ. ರಾತ್ರಿ ಪೂರ್ತಿ ಕಮಲ ಏನೇನೋ ತಿಂಡಿ ತಿನಿಸುಗಳನ್ನು ತಯಾರಿಸಿದ್ದಾಳೆ. ಒಂದು ಡಬ್ಬಿಯಲ್ಲಿ ಹಾಕಿ ತಂದು ಮಾರುತಿಯ ಬಟ್ಟೆಯ ಬುಟ್ಟಿಯಲ್ಲಿಡುತ್ತಾಳೆ. ಮಾರುತಿಯು ಕಣ್ಣಲ್ಲೇ ಅತ್ತಿಗೆಗೆ ಕೃತಜ್ಞತೆ ಸಲ್ಲಿಸುತ್ತಾನೆ.
ಕಿಶೋರ ಮಾರುತಿಯ ಷರಟು ಹಿಡಿದೇ ಇದ್ದಾನೆ. ಮಾರುತಿಯು ಕಿಶೊರನನ್ನು ಎತ್ತಿ ತನ್ನ ಬೆನ್ನಿಗೆ ಹಾಕಿಕೊಂಡು, ಕಿಶೊರನ ಕೈಗಳನ್ನು ತನ್ನ ಕುತ್ತಿಗೆಗೆ ಗಂಟು ಹಾಕಿಕೊಳ್ಳುತ್ತಾನೆ. ಅಪ್ಪ, ಅಮ್ಮ,ಅತ್ತಿಗೆ ಅಣ್ಣಂದಿರೆಲ್ಲರ ಕಾಲು ಮುಟ್ಟಿ ನಮಸ್ಕರಿಸುತ್ತಾನೆ.  ಭಾಗೀರಥಮ್ಮ, ಕಣ್ಣೀರಿಡುತ್ತಲೇ ಆಶೀರ್ವಾದ ಮಾಡಿ ಕಳಿಸಿಕೊಡುತ್ತಾಳೆ.
ಎಲ್ಲರಿಗೂ "ಹೋಗಿ ಬರ್ತೀನಿ" ಎಂದು ಹೇಳಿ, ಭಾರವಾದ ಮನಸ್ಸಿನಿಂದ ಬಸ್‍ಸ್ಟ್ಯಾಂಡ್ ಕಡೆಗೆ ತೆರಳುತ್ತಾರೆ ಶಂಕರ ಮತ್ತೆ ಮಾರುತಿ. ಜೊತೆಗೆ ಮಾರುತಿಯ ಬೆನ್ನಿಗಂಟಿರುವ ಕಿಶೋರ ಹಾಗು ಶಂಕರನ ಕೈ ಹಿಡಿದು ನಡೆದಿರುವ ಶ್ರೀನಾಥ. ಬಸ್ಸು ಹಾರ್ನ್ ಹೊಡೆಯತೊಡಗಿತು. ಕಿಶೋರನನ್ನು ಶ್ರೀನಾಥನಿಗೆ ಒಪ್ಪಿಸಿದನು ಮಾರುತಿ. ಕಿಶೋರನಿಗೆ ಅಳುವೇ ಬಂದಿತಾದರೂ, ಪ್ರೀತಿಯ ಅಣ್ಣನಿಗೆ ಟಾಟ ಮಾಡುತ್ತಾ ಕೈ ಅಲ್ಲಾಡಿಸುತ್ತಾನೆ. ಶಂಕರ, ಮಾರುತಿ ಇಬ್ಬರು ಬಸ್ಸನ್ನೇರಿ ಶ್ರೀನಾಥ ಮತ್ತು ಕಿಶೊರನ ಕಡೆ ನೋಡುತ್ತಲೆ ಸೀಟಿನಲ್ಲಿ ಕೂರುತ್ತಾರೆ. ಕಿಶೋರ ಕೈ ಆಡಿಸುತ್ತಲೇ ಇದ್ದಾನೆ, ಸಣ್ಣದಾಗಿ ಅಳುತ್ತಲೂ ಇದ್ದಾನೆ. ಮಾರುತಿಯ ಕೆನ್ನೆ ಮೇಲೆ ಹನಿಗಳು ಇಳಿಯುತ್ತಿವೆ, ಅವನೂ ಕಿಶೋರನ ಕಡೆ ಕೈ ಬೀಸುತ್ತಿದ್ದಾನೆ. ಬಸ್ಸು ಜೋರಾಗಿ ಹಾರ್ನ್ ಮಾಡುತ್ತಾ ಹೊರಟಿತು.
ಆ ಬಸ್ಸಿನ ಗಾಲಿಗಳ ವೇಗದಷ್ಟೇ ವೇಗವಾಗಿ ಕಾಲಚಕ್ರವು ಉರುಳಿತು. ಪಿ.ಯು.ಸಿ ಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡ ಮಾರುತಿ, ಅಲ್ಲಿಯೂ ಮೊದಲ ರ್‍ಯಾಂಕ್ ಗಿಟ್ಟಿಸಿದ. ನಂತರ, ಬೆಂಗಳೂರಿನ ಬಿ.ಎಂ.ಸಿ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿ, ಹಗಲಿರುಳು ಶ್ರಮಪಟ್ಟು ಓದಿ, ಡಾಕ್ಟರ್ ಆಗುತ್ತಾನೆ. ಬಹುಬೇಗ ಯಶಸ್ಸು, ಕೀರ್ತಿ, ಸಂಪತ್ತೆಲ್ಲವನ್ನೂ ಗಳಿಸುತ್ತಾನೆ. ತಾನು ಹತ್ತಿದ ಏಣಿಯನ್ನೆಂದೂ ಮರೆಯದೆ ಮನೆಮಂದಿಯನ್ನೆಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ತನ್ನ ತಾಯಿಯ ಕನಸು ನನಸು ಮಾಡುತ್ತಾನೆ. ತಮ್ಮಂದಿರೆಲ್ಲರೂ ವಿದ್ಯಾವಂತರಾಗುವಂತೆ ಮಾಡಿ, ಅವರೆಲ್ಲರಿಗೂ ಮಾರ್ಗದರ್ಶಿಯಾಗುತ್ತಾನೆ.
ಹೀಗೆ ನಮ್ಮ ಕಥಾನಾಯಕ ಮಾರುತಿಯು ಕರ್ಮಯೋಗಿಯಾಗಿ, ದಿವ್ಯ ಜ್ಯೋತಿಯಾಗಿ ಬೆಳಗುತ್ತಾನೆ.