ಬದುಕು

ಬದುಕು

ಬರಹ

"ಒಗಟಿನೊಳಗೊಂದು ಒಗಟು, ಮುಟ್ಟ ಹೋದಷ್ಟೂ ಜಿಗುಟು
ಬಿಚ್ಚ ಹೋದಷ್ಟೂ ಗಂಟು, ಬಿಡಿಸಬಲ್ಲನು ಅವನು
ಇದಕುತ್ತರವೇನು? "

"ಬದುಕು"........................... ನಿಜ, ಬದುಕು.
ಬದುಕು ತುಂಬಾ ಚಿಕ್ಕದು, ಹೇಗೇ ಅಂದರೆ ಹಾಗೆ ಬದುಕೋದು ಸ್ವಲ್ಪ ಕಷ್ಟ ಅಲ್ವಾ, ಹತ್ತರಲ್ಲಿ ಹನ್ನೋಂದನೆಯವರಾಗಿ ಬದುಕುವ ಬದಲು, ತನ್ನದೇ ಆದ ಪ್ರತ್ಯೇಕತೆಯನ್ನು ಮನುಷ್ಯ ಬೆಳೆಸಿಕೊಳ್ಳಬೇಕು, ೧೦ ಜನ ಮೆಚ್ಚಿ ನುಡಿಯೋವಂತಹ ಬದುಕು ಬೇಕು ಅಂತ ಸಹಜವಾಗಿ ಮನುಷ್ಯ ಬಯಸುವುದು ತಪ್ಪಲ್ಲಾ , ಅಲ್ಲವಾ ?

ತನ್ನನ್ನ ಜನ ಹೇಗೆ ಗುರುತಿಸುತ್ತಾರೆ, ನನ್ನ ನಡವಳಿಕೆಗಳು ಹೇಗಿರಬೇಕು, ಜನ ತನ್ನನ್ನ ಗೌರವಿಸುತ್ತಾರೆ ಅದಕ್ಕೆ ತಕ್ಕನಾಗಿ ಬದುಕಬೇಕಲ್ಲವೇ, ನನ್ನನ್ನ ನೋಡಿ ೪ ಜನ ಕಲಿತಾರೆ ಅನ್ನೋದಾದರೆ ಆ ೪ ಜನಕ್ಕಾಗಿಯೇ ಯಾಕೆ ಬದುಕಬಾರದು?, ಹೀಗೆ ತಮ್ಮೊಳಗೆ ಎಳುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಬದುಕು ದೂಡುತ್ತಾರೆ,
ಸ್ವಾರ್ಥ ಬದುಕಲಿ ಹಾಸು ಹೊಕ್ಕಾಗಿದೆ, ಅದನ್ನು ಮೆಟ್ಟಿ ನಿಲ್ಲಬೇಕು ಅನ್ನಿಸೋಲ್ಲವಾ? ಸ್ವಾರ್ಥದ ಹೊರತು ಒಂದು ಬದುಕಿದೆ, ಮನುಷ್ಯನ ಜೀವನ ಅಂದ ಮೇಲೆ ನೋವು ನಲಿವು ಎಲ್ಲಾ ಇರುತ್ತೆ , ಇರುತ್ತೆ ಏನ್ ಬಂತು ಇದೆ, ಹಾಗಂತ ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಮನಸ್ಸನ್ನು ಚಿಕ್ಕದು ಮಾಡಿಕೊಳ್ಳೋದು, ಈ ಬದುಕೇ ಸಾಕು ಎಂದೆಲ್ಲಾ ನಿರ್ದಾರಗಳನ್ನು ತೆಗೆದು ಕೊಳ್ಳೋದು ಎಷ್ಟು ಸರಿ, ಅಲ್ವಾ?

ಅವಳು ಇನ್ನ ಮುಂದೆ ನನ್ನ ಜೀವನದಲ್ಲಿ ಇರೊಲ್ಲ, ನಾಳೆ ಅವಳ ಮದುವೆ ಅವಳೇ ಇಲ್ಲ ಅಂದ ಮೇಲೆ ಈ ಬದುಕು ಇನ್ನೇಕೆ ಎಂದೆಲ್ಲಾ ನಿರ್ಧರಿಸೋ ಪ್ರೇಮಿ, ಆ ಒಂದು ಕ್ಷಣದಲ್ಲಿ ತನ್ನ ಹೆತ್ತವರನ್ನೋ , ಅಥವಾ ತನ್ನನ್ನ ನಂಬಿದವರನ್ನೋ ಒಂದು ನಿಮಿಷ ನೆನೆದರೆ ಅವಳಿಗಿಂತ ಇವರು ಹೆಚ್ಚಿನವರೆನ್ನಿಸುತ್ತಾರೆ, ಅವರಿಗಾಗಿ ನಡೆಸುವ ಬದುಕು ಸಾರ್ಥಕವಾದದ್ದೇ ಅಲ್ಲವಾ?

" ಬದುಕಲ್ಲಿ ೪ ಜನಕ್ಕಿಂತ ವಿಭಿನ್ನವಾಗಿ ಬದುಕ ಹೊರಟವಳು , ಹರೆಯಕ್ಕೆ ಕಾಲಿಡುವ ಪ್ರತಿ ಹುಡುಗಿಯಲ್ಲಿರುವಂತೆ ಇವಳಲ್ಲೂ ನೂರು ಕನಸುಗಳು ಬದುಕಲ್ಲಿ ತನ್ನದೇ ಆದ ಪ್ರತ್ಯೇಕವಾದ ಐಡೆಂಡಿಟಿ ಪಡೆಯುವ ಆಸೆ ಹೊತ್ತವಳು ಅದಕ್ಕಾಗಿ ಶ್ರಮ ಪಟ್ಟವಳು, ದೇಶಕ್ಕೆ ತನ್ನದೇ ಆದ ಸೇವೆ ಏನು ? ಹೀಗೆ ತನ್ನದೇ ಆದ ಕಲ್ಪನೆಗಳಲ್ಲಿ , ಆದರ್ಶಗಳಲ್ಲಿ ಬದುಕ ಹೊರಟವಳು. ತನ್ನ ಜೀವನವನ್ನು ತಾನೆ ರೂಪಿಸಿ ಕೊಂಡವಳು ಒಂದು ವಿದ್ಯಾ ಸಂಸ್ಥೆನಾ ಕಟ್ಟಿದವಳು, ಇಷ್ಟೆಲ್ಲಾ ಛಲದವಳು, ತನ್ನನ್ನಾ ಪ್ರೀತಿಸಿದವ ಸಿರಿವಂತನ ಮಗಳು ಸಿಕ್ಕಿದಳೆಂದು ತನಗೆ ಕೈಕೊಟ್ಟನೆಂದು, ಸಾವಿಗೆ ಶರಣಾಗಿದ್ದು , ಏಷ್ಟು ಸರಿ, ಮತ್ತೆ ಉಳಿಯೋದು ಪ್ರಶ್ನೆ ಮಾತ್ರ ?

ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಗಲಿಲ್ಲ ಅಂತ ನೊಂದ ವಿಧ್ಯಾರ್ಥಿ, ಇಂಟರ್ವ್ಯೂನಲ್ಲಿ ಸರಿಯಾಗಿ ಮಾಡಲಿಲ್ಲ ಅನ್ನೋ ಅಭ್ಯರ್ಥಿ, ಒಂದೇ ಒಂದು ಕ್ಷಣದಲ್ಲಿ ತನ್ನ ಮೊದಲ ಸ್ಥಾನ ಕಳೆದು ಕೊಳ್ಳುವ ಸ್ಪರ್ಧಿ, ಮನನೊಂದ ಗೃಹಿಣಿ ಹೀಗೆ ಅನೇಕ ಸಣ್ಣ ಪುಟ್ಟ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುವಂತ ಅನೇಕ ಸನ್ನಿವೇಶಗಳನ್ನು ನಾವು ನೀವು ನೋಡಿರುತ್ತೇವೆ, ಕೇಳಿರುತ್ತೇವೆ. ಕಡೆ ಕ್ಷಣದ ನಿರ್ಧಾರಕ್ಕೂ ಮುನ್ನ ಒಮ್ಮೆ ಯೋಚಿಸಿ ನೋಡಿದ್ದರೆ, ಹೀಗಾಗುತ್ತಿರಲಿಲ್ಲ. ಯಾಕೆ ಹೀಗೆ ಅವರು ಅನ್ನೋ ಒಂದು ಪ್ರಶ್ನೆ ? ಹಾಗೆ ಉಳಿದು ಹೋಗುತ್ತದೆ, ಅಲ್ಲವಾ ?

"ಮೈತುಂಬಾ ಹೂ ಹಣ್ಣುಗಳನ್ನು ಹೊತ್ತು ನಿಂತಿರುವ ಮರ , ಅದರಲ್ಲಿ ಇರುವ ಹೂ ಹಣ್ಣುಗಳು ಯಾವು ಯಾರ ಯಾರ ಪಾಲಾಗುತ್ತವೆ ಎಂದು ತಿಳಿದವರಿಲ್ಲ. ಆದರೆ ಉಳಿದ ಹಣ್ಣುಗಳು ಒಣಗಿ ಬೀಜಗಳಾಗುತ್ತವೆ. ಆ ಬೀಜಗಳು ಚದುರಿದಾಗ, ತಾಯಿ ಮರದ ಬಳಿಯಲ್ಲೇ ಬಿದ್ದ ಬೀಜ ಭದ್ರತೆಯ ಆನಂದ ಹೊಂದುತ್ತದೆ, ಇನ್ನುಳಿದ ಬೀಜಗಳು ಅದೆಷ್ಟೋ ಹಾಳಾಗಿ ಹೇಳ ಹೆಸರಿಲ್ಲದಾಗುತ್ತವೆ. ಮಳೆ ನೀರಲ್ಲಿ ಕೊಚ್ಚಿ ಹೋಗಿ, ಗಾಳಿ ರಭಸಕ್ಕೆ ಸಿಕ್ಕಿ ಅಂತು ಇಂತು ಉಳಿದ ಬೀಜ ಟಾರು ನೆಲದಲ್ಲಿ ಜನರ ಓಡಾಟದಿಂದಲೇ ಸಂಗ್ರಹವಾದ ಸಿಕ್ಕಷ್ಟೆ ಮಣ್ಣಿನಿಂದಲೇ ತನ್ನನ್ನ ತಾನು ಉಳಿಸಿ ಕೊಂಡು ತಲೆ ಎತ್ತುವ ಪ್ರಯತ್ನ ಮಾಡುತ್ತದೆ. ಮೊಳಕೆಯೊಡೆದು ಇಡೀ ಜಗತ್ತನ್ನು ತನ್ನ ಬೆರಗು ಕಂಗಳಿಂದ ನೋಡುತ್ತದೆ, ತಾಯಿ ತಂದೆಯ ನೆರಳಲ್ಲಿ, ಬೆಳೆಯೋ ಮಕ್ಕಳು, ಅನಾಥ ಪರಿಕಲ್ಪನೆಯಲ್ಲಿ ಬೆಳೆದವರು ಹೀಗೆ ಬೆಳೆದ ರೀತಿ ಬೇರೆಯಾದರು , ಎಲ್ಲರ ಬದುಕು ಒಂದೇ ಅದನ್ನ ನಮಗೆ ಸರಿ ಅನ್ನಿಸುವ ಹಾಗೆ, ನಾಲ್ಕು ಜನ ಸೈ ಅನ್ನುವ ಹಾಗೆ ಬದುಕಿ ತೋರಿಸ ಬೇಕು.

" ಮಾನವ ಜನ್ಮ ದೊಡ್ಡದು , ಇದನ್ನ ಕಳೆದು ಕೊಳ್ಳದಿರಿ ಹುಚ್ಚಪ್ಪಗಳಿರಾ " ಅನ್ನೋ ಮಾತಿನಂತೆ.

ಬೇಕನ್ನಿಸೋಲ್ಲವೇನ್ರಿ ಬದುಕಲ್ಲಿ ಆ ಟಾರು ರಸ್ತೆಯ ಬದಿಯಲ್ಲಿ ಮೊಳಕೆಯೊಡೆದು ನಿಲ್ಲುವ ಬೀಜಕ್ಕಿರುವಷ್ಟು, ಜೀವನೋತ್ಸಾಹ? ಸಾಲುಗಟ್ಟಿ ಹರಿಯುವ ಇರುವೆ ಗಳಿಗಿರುವಷ್ಟು ಭವಿಷ್ಯದ ಚಿಂತನೆ ಮತ್ತು ಶಿಸ್ತು. ಒಂದು ಅಗುಳನ್ನು ಕಂಡರೆ ಕಾ ಕಾ ಎಂದು ತನ್ನವರನ್ನೆಲ್ಲ ಕರೆದು ತಿನ್ನುವ ಕಾಗೆಗಿರುವಷ್ಟು ಹಂಚಿ ತಿನ್ನುವ ಗುಣ. ಬದುಕು ಕೇವಲ ಮೂರೇ ದಿನದ ಬದುಕಾಗಲಿ ಅದರಲ್ಲಿ ಸಾರ್ಥಕತೆ ಇದ್ದರೆ ಮಾತ್ರ ಅದು ಸ್ಮರಣೀಯ.

" ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ,
ಸುಟ್ಟರೆ ಕುರುಳಾದೆ, ಹಚ್ಚಿದರೆ ನೊಸಲಿಗೆ ವಿಭೂತಿಯಾದೆ,
ನೀನ್ಯಾರಿಗಾದೆಯೋ ಎಲೇ ಮಾನವ."

ತಾಜ್ ಹೋಟೆಲ್ ನ ಭಯೋತ್ಪಾದಕ ದಾಳಿಯಲ್ಲಿ ಹೋರಾಡಿ ಮಡಿದ ಸೈನಿಕರ ಸಾರ್ಥಕ ಬದುಕಿನ ಹಿನ್ನಲೆಯಲ್ಲಿ,
ಕಳೆದು ಹೋದವರ ನೆನಪಿನಲ್ಲಿ........................................... ವ್ಯರ್ಥವಾಗದಿರಲಿ ಬದುಕು, ಕೊನೆಗೊಳ್ಳುವುದೇ ಆದರೆ ಕೊನೆಗೊಳ್ಳಲಿ ದೇಶಸೇವೆಗಾಗಿ, ನಾಡು ನುಡಿಗಾಗಿ.

ಮಡಿದ ವೀರರಿಗೆ ಹೀಗೊಂದು ನಮನ....................ಜೈ ಹಿಂದ್.