ಭ್ರಮೆ

ಭ್ರಮೆ

ಬರಹ

ಇದು ನನ್ನ ಮನೆಯು
ಮನೆಯಲ್ಲಿ ಸಿರಿಯು
ಇದಕೆಲ್ಲ ನಾನೆ ಒಡೆಯ|
ಅದು ನಿನ್ನ ಭ್ರಮೆಯು
ಸಿರಿಗಿಲ್ಲ ನೆಲೆಯು
ಜಗಕೆಲ್ಲ ಆತ ಒಡೆಯ||

ನೀ ನಿರುವ ಮನೆಯ
ತಳಹದಿಯಲಿರುವ
ಕಲ್ಲನ್ನು ಕೇಳಿ ನೋಡು|
ಮನೆ ತುಂಬ ಇರುವ
ಮರಮುಟ್ಟುಗಳ
ಬಾಯಲ್ಲಿ ಕಥೆಯ ಕೇಳು||

ಜಗಕೆಲ್ಲ ಬೆಳಕ
ಕೊಡುವಂತ ರವಿಗೆ
ನಾನೆಂಬ ಗರ್ವವಿಲ್ಲ|
ಹಗಲೆಲ್ಲ ದುಡಿದು
ಕತ್ತಲೆಯ ರಾತ್ರಿಯಲಿ
ರವಿ ಮಾಯವಾದನಲ್ಲ||

ನಾನೆಂಬ ಭ್ರಮೆಯ
ತೊರೆದಾಗ ಗೆಳೆಯ
ನಿಜರೂಪ ಕಾಣಬಲ್ಲೆ|
ಹತ್ತಾರು ಜನರ
ಸ್ವತ್ತಾದ ನೀನು
ಮಾನವತೆಯ ಬೆಳೆಸ ಬಲ್ಲೆ||