ಹೊಸ ವರುಷ - ಹಲವು ತೆರ

ಹೊಸ ವರುಷ - ಹಲವು ತೆರ

ಬರಹ

ಹೊಸ ವರುಷ

ಹೊಸ ಕನಸ ಜೊತೆ ಇರಿಸಿ
ಹೊಸ ನೆನೆಪ ತೆರೆ ಸರಿಸಿ
ಕಳೆದಿರುವ ಕಹಿ ಮರೆಸಿ
ಹೊಸತು ಯೋಚನೆ ತರಿಸಿ
ಹೊಸ ವರುಷ ಬರುತಲಿದೆ
ಹಳೆಯದಂತೆ.....
ಕಳೆದ ವರುಷದಂತೆ

ಉದಯಿಸುವ ರವಿಗೆ ದಿನ ಅನುದಿನವು,
ಸ್ವಚ್ಛಂದ ಬಾನಾಡಿಗಳಿಗೆ ಆ ಕ್ಷಣವು,
ದೂರ ತಾರೆಗಳಿಗೆ ಪ್ರತಿ ಇರುಳ ಬರವೂ,
ದಿನ, ಕ್ಷಣಗಳಾ ಹರುಷ
ಹೊಸತು ವರುಷ

ಹುಚ್ಚು ಕನಸನು ಹೊಸೆವ ಮುಗ್ಧ ಮನಕೆ,
ವಾಸ್ತವದ ಅಲೆಗಳಿಗೆ ನರಳುತಿಹ ಇಹಕೆ,
ನಿನ್ನೆ ನಾಳೆಯ ಭಯಕೆ ಬಸವಳಿದ ಜಗಕೆ,
ಉಸಿರು, ಜೀವದ ಬೆಸುಗೆ
ಹೊಸತು ಒಸಗೆ

ಮರಿ ಹಕ್ಕಿಗಿಂದು ಹೊರ ಹಾರ್‍ವ ಬಯಕೆ
ಮುದಿ ಜೀವ ಬೆದರಿಹುದು ಜವದ ಭಯಕೆ
ಹೊಸ ಹಸಿರು ಚಿಗುರೆಲೆಗೆ ಹಣ್ಣೆಲೆಯ ಹರಕೆ
ಒಂದೊಂದು ನಡೆ ನಡಿಗೆ
ಹೊಸತನದ ಕಡೆಗೆ

- ದಿಶಾಂತಯಾತ್ರಿ