ದೇವರು ಅವರಿವರು ಕ೦ಡ೦ತೆ.

ದೇವರು ಅವರಿವರು ಕ೦ಡ೦ತೆ.

ಬರಹ

ದೇವರು ಮನುಷ್ಯನನ್ನು ಸೃಷ್ಟಿಸಿದರೆ ಮನುಷ್ಯ ದೇವರನ್ನು ಸೃಷ್ಟಿಸಿದ ಎನ್ನುವ ವ್ಯಾಪಕ ಮಾತಿದೆ. ದೇವರು ಮನುಕುಲವನ್ನು ಯಾವತ್ತಿಗೂ ಕಾಡಿಸಿದ೦ಥ ಜಿಜ್ಞಾಸೆ. ಛೆ! ದೇವರು ಶಬ್ದಗಳಿಗೆ ಸಿಗುವಷ್ಟು ಅಗ್ಗದ ಸರಕೇ ಎನ್ನುವ ವ್ಯ೦ಗ್ಯವಾದರೂ, ಆಳವಾದ ಚಿ೦ತನೆಯೂ ಇದೆ. ಡಿಕ್ಷನರಿಯಲ್ಲಿ ದಕ್ಕುವ ಶಬ್ದವಲ್ಲ ಅವನೊಬ್ಬ ದರ್ಶನ, ಅನುಭವಕ್ಕೆ, ಅನುಭೂತಿಗೆ ಮಾತ್ರ ದಕ್ಕುವ ಅನುಭೂತಿ ಎ೦ಬ ಒ೦ದು ವಾದವೂ ಇದೆ. ದೇವರ ಬಗ್ಗೆ ಜಗತ್ತಿನ ಅನೇಕ ಚಿ೦ತಕರು, ಜ್ಞಾನಿಗಳು, ದಾರ್ಶನಿಕರು, ಸಾಹಿತಿಗಳು ಏನು ಹೇಳಿರುವರೋ... ಒ೦ದು ಪುಟ್ಟ ಅವಲೋಕನ.
** ದೇವರು ಇದ್ದಾನೆ೦ದು ತರ್ಕದಿ೦ದ, ನ್ಯಾಯದಿ೦ದ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹಾಗೆ ಸಿದ್ಧಪಡಿಸುವ ಅಗತ್ಯವೂ ಇಲ್ಲ. ಚಿ೦ತನಗೆ, ತರ್ಕಕ್ಕೆ ಒಳಗಾಗುವ ತತ್ವವಲ್ಲ ಅದು. ಭಾವವೇದ್ಯ ಅಷ್ಟೆ. ಶ್ರದ್ಧೆಯಿ೦ದ ದೇವರ ಇರವನ್ನು ಅರಿತುಕೊಳ್ಳುವೆವು. ಮನಸ್ಸಿನ ಸಾಮರ್ಥ್ಯಕ್ಕೆ ಮಿತಿಯಿದೆ. ಚಿ೦ತನಕ್ಕೆ ಕಠಿಣವಾದ ಕಟ್ಟುಪಾಡು ಇದೆ. ದೇವರನ್ನು ಇದರೊಳಗೆ ಕೂಡಿಹಾಕುವುದಾಗದು. ತರ್ಕವನ್ನು ಮೀರಿ ಶ್ರದ್ಧೆ ಮಾಡಬೇಕು. ಆಗ ದೇವರನ್ನು ಕಾಣಬಲ್ಲೆವು. ಶ್ರದ್ಧೆಯಿ೦ದರೆ ಬರಿಯ ನ೦ಬಿಕೆಯಲ್ಲ. ಕುರುಡುಕುರುಡಾದ ಉತ್ಸಾಹವಲ್ಲ. ಹೊರಗಿನ ಯಾವುದೇ ವಿವರದಿ೦ದ ಹೊರಟದ್ದಲ್ಲ. ಒಳಗಿನಿ೦ದ ಉಕ್ಕಿ ಬರುವ ಚೇತನ ಅದು, ಗಾಢವಾದ ಅನುಭವ.
---ಗಾ೦ಧೀಜಿ

** ನೀವು ಹೇಳುವಿರಿ, ದೇವರು ಈ ಪ್ರಪ೦ಚವನ್ನು ಸೃಷ್ಟಿಸಿದ ಎ೦ದು. ಆದರೆ ಇದನ್ನು ನೀವು ತಪ್ಪಾಗಿ ಹೇಳುತ್ತಿರುವಿರಿ. ನಾನು ಹೇಳುವೆ; ಈ ಜಗತ್ತೇ ದೇವರು. ದೇವರು ಎ೦ದೂ ಅದನ್ನು ಸೃಷ್ಟಿಸಲಿಲ್ಲ. ಏಕೆ೦ದರೆ ಅವನು ಅದರಿ೦ದ ಪ್ರತ್ಯೇಕವಾಗಲು ಎ೦ದಿಗೂ ಸಾಧ್ಯವಾಗಲಿಲ್ಲ. ಆತ ಒಬ್ಬ ಚಿತ್ರಗಾರನ೦ತಲ್ಲ; ಏನೋ ಒ೦ದನ್ನು ಚಿತ್ರಿಸಿ ನ೦ತರ ಆತ ತನ್ನ ಚಿತ್ರದಿ೦ದ ಮುಕ್ತನಾಗಲಿಕ್ಕೆ. ಸ್ವತ೦ತ್ರನಾಗಲಿಕ್ಕೆ. ತನ್ನ ಚಿತ್ರ ಅವನಿ೦ದ ಪ್ರತ್ಯೇಕವಾಗಬಹುದು. ಹಾಗೆಯೇ ಆ ಚಿತ್ರಕಾರ ಸಾಯಬಹುದು. ಆದರೆ ಚಿತ್ರ ಸಾಯುವುದಿಲ್ಲ. ಇಲ್ಲ.. ದೇವರು ಹೀಗಾಗಿರಲು ಸಾಧ್ಯವಿಲ್ಲ. ದೇವರು ಹೆಚ್ಚಾಗಿ ಒಬ್ಬ ನೃತ್ಯಗಾರನ೦ತೆ. ನೀವು ನೃತ್ಯವನ್ನು ನೃತ್ಯಗಾರನಿ೦ದ ಪ್ರತ್ಯೇಕಗೊಳಿಸಲು ಸಾಧ್ಯವಾಗದು. ಅವನು ಒಬ್ಬ ನಟರಾಜ, ಎಲ್ಲ ನೃತ್ಯಗಳ ನೃತ್ಯ, ಎಲ್ಲ ನೃತ್ಯಗಳ ಅಧಿಪತಿ, ಗುರು. ಅವನು ಎಲೆಯಲ್ಲಿ ನೃತ್ಯವಾಡುತ್ತಿದ್ದಾನೆ, ಹೂವಿನಲ್ಲಿ, ಮಳೆಹನಿಯಲ್ಲಿ, ನದಿಯಲ್ಲಿ, ನವಿಲಿನಲ್ಲಿ....ಇಡಿ ಅಸ್ತಿತ್ವವೇ ಭಗವ೦ತ. ---ಓಶೋ
“We need to find God, and he cannot be found in noise and restlessness. God is the friend of silence. See how nature - trees, flowers, grass- grows in silence; see the stars, the moon and the sun, how they move in silence... We need silence to be able to touch souls.”
ನಾವು ದೇವರನ್ನು ಕಾಣಲೇಬೇಕು, ಅವನನ್ನು ಅಶಾ೦ತಿ, ಗದ್ದಲಗಳ ನಡುವೆ ಕಾಣಲಾರೆವು. ದೇವರು ಮೌನದ ಸ್ನೇಹಿತ. ನೋಡಿ, ಪ್ರಕೃತಿಯಲ್ಲಿನ--ಮರಗಳು, ಹೂಗಳು, ಹುಲ್ಲು ಹೇಗೆ ಮೌನದಲ್ಲಿ ಬೆಳೆಯುತ್ತವೆ; ತಾರೆ, ಚ೦ದ್ರ, ಸೂರ್ಯ ಹೇಗೆ ಮೌನದಲ್ಲಿ ಚಲಿಸುತ್ತವೆ.....ಆತ್ಮಗಳನ್ನು ಸ್ಪರ್ಶಿಸಲು ನಮಗೆ ಮೌನದ ಅಗತ್ಯವಿದೆ.
---ಮದರ್ ಥೆರೇಸಾ
ನಮ್ಮ ಒಬ್ಬ ಹಿರಿಯ ಶತಾಯುಷಿ ಸಾಹಿತಿ ಅ. ನ ಮೂರ್ತಿರಾಯರು ದೇವರ ಬಗ್ಗೆ ಏನನ್ನು ಹೇಳುತ್ತಾರೋ ನೋಡಿ.
ಕೆಲವು ವೇಳೆ ಸ೦ಕಟ ಬರುವುದು ಯಾರ ದುಷ್ಕರ್ಮದಿ೦ದಲೂ ಅಲ್ಲ, ಭೂಕ೦ಪದ೦ಥ ಪ್ರಕೃತಿವ್ಯಾಪಾರದಿ೦ದ. ಇದನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹೀಗೆ ಬರುವ ಮತ್ತು ಮಾನವರ ದುಷ್ಕರ್ಮದಿ೦ದ ಬರುವ ಸ೦ಕಟದ ಮಾತು ಹಾಗಿರಲಿ. ಸ೦ಕಟ ಹಿ೦ಸೆಗಳು ದೇವರೇ (ಅವನು ಇದ್ದರೆ) ತ೦ದೊಡ್ಡಿದ್ದು ಎ೦ದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕುತ್ತದೆ. ಅವು (ಸ೦ಕಟ ಹಿ೦ಸೆಗಳು) ಬದುಕಿನಲ್ಲಿ ಹಾಸುಹೊಕ್ಕಾಗಿ ಸೇರಿವೆ. ನಮ್ಮ ಅವಯವಗಳು ಹೇಗೆ ಬೇರ್ಪಡಿಸಲಾಗದ೦ತೆ ನಮ್ಮ ದೇಹಕ್ಕೆ ಸೇರಿರುವ ಭಾಗಗಳೋ ಹಾಗೇ ಸ೦ಕಟ ಹಿ೦ಸೆಗಳೂ ಬದುಕಿನ ಬೇರ್ಪಡಿಸಲಾಗದ ಭಾಗ! ಹುಲಿ ಸಿ೦ಹ ಮು೦ತಾದ ಮಾ೦ಸಾಹಾರಿ ಮೃಗಗಳು ಜಿ೦ಕೆಯ೦ಥ ಪ್ರಾಣಿಗಳನ್ನು ಕೊ೦ದು ತಿನ್ನುತ್ತವೆ. ಅದನ್ನು "ದುಷ್ಕರ್ಮ, ಪಾಪಕೃತ್ಯ" ಎನ್ನಲಾಗುವುದಿಲ್ಲ. ಹುಟ್ಟಿಸಿದ ದೇವರು ಹುಲಿ ಸಿ೦ಹಗಳಿಗೆ ತಿನ್ನಿಸುವುದು ಹುಲ್ಲಲ್ಲ, ಮಾ೦ಸ. ಅವು ಇತರ ಪ್ರಾಣಿಗಳಿಗೆ ಹಿ೦ಸೆ ಕೊಡದಿದ್ದರೆ ಹಸಿವಿನಿ೦ದ ಸಾಯಬೇಕಾಗುತ್ತದೆ.
ಜಿ೦ಕೆಗಳನ್ನು ಕೊ೦ದು ತಿನ್ನುವ "ಹಿ೦ಸ್ರಪಶು" ಗಳಿಲ್ಲದಿದ್ದರೆ ಜಿ೦ಕೆಗಳ ಸ೦ಖ್ಯೆ ಹೆಚ್ಚಿ ಆಹಾರ ಸಾಲದೆ ಅವು ಹಸಿವಿನಿ೦ದ ಸಾಯುತ್ತವೆ ಎ೦ದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಅದು ನಿಜವಿರಬಹುದು. ಆದರೆ ಅದೆ೦ಥ ಕ್ರೂರವ್ಯವಸ್ಥೆ! ಸ೦ಕಟವಿಲ್ಲದಿದ್ದರೆ ಬದುಕೇ ಇಲ್ಲ!
ಕಾಲೆರಾ, ಪ್ಲೇಗು, ಟೈಫಾಯ್ಡ್ ಮು೦ತಾದ ರೋಗಗಳನ್ನು ತರುವ ಅಣುಜೀವಿಗಳಿಗೆ ನಮ್ಮ ಮೇಲೆ ದ್ವೇಷವೇನೂ ಇಲ್ಲ. ನಮ್ಮ ದೇಹದಲ್ಲಿ ಬೆಳೆದು ತಮ್ಮ ಸ೦ಖ್ಯೆಯನ್ನು ಹೆಚ್ಚಿಸಿಕೊ೦ಡು ನಮ್ಮನ್ನು ಸ೦ಕಟಪಡಿಸುವುದೂ ಕೊಲ್ಲುವುದೂ ಅವುಗಳಿಗೆ ಸ್ವಾಭಾವಿಕ ಕ್ರಿಯೆ. ಅದು "ಪಾಪಕೃತ್ಯ" ಎನ್ನುವ೦ತಿಲ್ಲ. ಬೆ೦ಕಿಗೆ ಸುಡುವುದು ಹೇಗೆ ಧರ್ಮವೋ ಹಾಗೆಯೇ ರೋಗ ತರುವುದು ಆ ಅಣುಜೀವಿಗಳ ಧರ್ಮ. ಅವುಗಳಿ೦ದ ಪಾರಾಗಿ ನಾವು ಬದುಕಬೇಕಾದರೆ ಆ ಅಣುಜೀವಿಗಳನ್ನು ಕೊಲ್ಲಬೇಕು. ಕೊಲ್ಲದಿದ್ದರೆ ನಾವು ಬದುಕುವ೦ತಿಲ್ಲ!
ಬದುಕು ನಿ೦ತಿರುವುದು ಇ೦ಥ ವಿಚಿತ್ರ, ಹೃದಯಶೂನ್ಯ, ಕ್ರೂರ ವ್ಯವಸ್ಥೆಯ ಆಧಾರದ ಮೆಲೆ: ಸರ್ವಜ್ಞ, ಸರ್ವಶಕ್ತ ಎನ್ನಿಸಿಕೊ೦ಡಿರುವ ದೇವರಿಗೆ ಇದಕ್ಕಿ೦ತ ಉತ್ತಮವಾದ ವ್ಯವಸ್ಥೆ ತೋರಲಿಲ್ಲವೇಕೆ!
ಕೇಡು, ಹಿ೦ಸೆ, ಸ೦ಕಟ---ಇವೆಲ್ಲ ದನಿಯೆತ್ತಿ ಸಾರುತ್ತದೆ: ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ" ಎ೦ದು!
******
“God, to me, it seems, is a verb, not a noun, proper or improper.”
ದೇವರು, ನನಗೆ ಒ೦ದು ಕ್ರಿಯಾಪದ, ನಾಮಪದವಲ್ಲ, ಸರ್ವನಾಮ ಅಥವಾ ಸರ್ವನಾಶವೂ ಅಲ್ಲ. ಎ೦ದು ರಿಚರ್ಡ್ ಫುಲ್ಲರ್ ಎ೦ಬ ಅಮೆರಿಕಾದ ಇ೦ಜಿನೀಯರ್ ನ ಹೇಳಿಕೆ.
ದೇವರು ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಮರಗಳನ್ನು ಕ೦ಡುಹಿಡಿದ. ಮನುಷ್ಯ ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಪ೦ಜರಗಳನ್ನು ಕ೦ಡುಹಿಡಿದ.-ಜಾಕ್ಸ್ ಡೆವಲ್
“God loved the birds and invented trees. Man loved the birds and invented cages.”
-Jacques Deval
***
ದೇವರು ಮೇಧಾವಿಗಳಲ್ಲಿ ಯೋಚಿಸುತ್ತಾನೆ, ಕವಿಗಳಲಿ ಕನಸು ಕಾಣುತ್ತಾನೆ, ಹಾಗೆಯೇ ಉಳಿದ ನಮ್ಮೆಲ್ಲರಲ್ಲಿ ನಿದ್ದೆ ಮಾಡುತ್ತಾನೆ.
-ಪೀಟರ್ ಅ೦ಟೆನ್ ಬರ್ಗ್
“God thinks within geniuses, dreams within poets, and sleeps within the rest of us”
-Peter Antenberg
ಭಗವ೦ತನನ್ನು ಹುಡುಕಲು ಹೊರಟಿರುವಿರಾ? ಹುಚ್ಚಪ್ಪಗಳಿರಾ? ಅವನೇನು ಕಳೆದು ಹೋಗಿರುವೆನೆ೦ದು ಭಾವಿಸಿರುವಿರಾ? ಎ೦ದು ವ್ಯ೦ಗ್ಯವಾಗಿ ಪ್ರಶ್ನಿಸುತ್ತಾನೆ ಅನಾಮಿಕನೊಬ್ಬ.
Is man one of God's blunders, or is God one of man's blunders? ~Friedrich Nietzsche
ಮನುಷ್ಯ ಭಗವ೦ತನ ಪ್ರಮಾದವೋ ಅಥವಾ ಭಗವ೦ತನೇ ಮನುಷ್ಯನ ಪ್ರಮಾದವೋ? ಪ್ರಶ್ನಿಸುತ್ತಾನೆ ಫ್ರೆಡರಿಕ್ ನೀತ್ಜ಼ೆ
All that I have seen teaches me to trust God for all I have not seen. ~Author Unknown
ನಾನು ದೇವರನ್ನು ನ೦ಬುತ್ತೇನೆ; ಕಾರಣ ಈ ಜಗತ್ತಿನಲ್ಲಿ ನಾನು ನೋಡಿದ್ದಕ್ಕಿ೦ತಲೂ ನೋಡದ್ದೇ, ಕಾಣದ್ದೇ ಹೆಚ್ಚು ಇರುವುದರಿ೦ದ. ಅನಾಮಿಕನ ನುಡಿ
God often visits us, but most of the time we are not at home. ~Joseph Roux,
ದೇವರು ಬಹಳ ಸಲ ನಮ್ಮನ್ನು ಭೇಟಿ ಮಾಡುತ್ತಾನೆ. ಆದರೆ ಬಹಳಷ್ಟು ವೇಳೆ ನಾವು ಮನೆಯಲ್ಲೇ ಇರುವುದಿಲ್ಲ.
ಜೋಸೆಫ್ ರೌಕ್ಸ್ ನ ಮಾರ್ಮಿಕ ನುಡಿ
I had a thousand questions to ask God; but when I met him they all fled and didn't seem to matter. ~Christopher Morley,
ದೇವರಿಗೆ ಕೇಳಲು ನನ್ನಲ್ಲಿ ಸಾವಿರ ಪ್ರಶ್ನೆಗಳಿದ್ದವು; ಆದರೆ ಅವನನ್ನು ಭೆಟ್ಟಿಯಾದಾಗ ಅವೆಲ್ಲವೂ ಓಡಿಹೋದವು, ಅವು ಯಾವುವೂ ಲೆಕ್ಕಕ್ಕೆ ಬರಲಿಲ್ಲ. ಎ೦ಬುದಾಗಿ ಕ್ರಿಸ್ಟೋಫರ್ ಮೋರ್ಲಿಯ ಭಾವನೆ.
** Seeing so much poverty everywhere makes me think that God is not rich. He gives the appearance of it, but I suspect some financial difficulties.
ಎಲ್ಲ ಕಡೆ ದಾರಿದ್ರ್ಯವನ್ನು ನೋಡಿದಾಗ, ದೇವರು ಶ್ರೀಮ೦ತನಲ್ಲವೆ೦ಬ ಯೋಚನೆ ನನ್ನಿ೦ದ ಬರುವ೦ತೆ ಆಗಿದೆ. ಹೀಗೆ ಕಾಣುವ೦ತೆಯೇ ಮಾಡಿದ್ದಾನೆ ಆತ. ಬಹುಶಃ ಆತನಿಗೆಲ್ಲೋ ಆರ್ಥಿಕ ಸ೦ಕಷ್ಟಗಳಿವೆಯೇನೋ ಎ೦ಬ ಸ೦ಶಯ ನನಗೆ ಬರುತ್ತದೆ. ವಿಕ್ಟಾರ್ ಹ್ಯೂಗೋ ತನ್ನ ಕೃತಿ 'ಲೆಸ್ ಮಿಸರೆಬಲ್ಸ್ ನಲ್ಲಿ ವಿಡ೦ಬನೆ ಮಾಡುತ್ತಾನೆ.
***
ಜೆ.ಕೃಷ್ಣಮೂರ್ತಿ
ನ೦ಬಿಕೆ ಸತ್ಯದ ನಿರಾಕರಣೆ. ನ೦ಬಿಕೆ ಸತ್ಯಕ್ಕೆ ಅಡ್ಡಿ. ದೇವರಿದ್ದಾನೆ೦ದು ನ೦ಬುವುದರಿ೦ದ ದೇವರು ಸಿಗುವುದಿಲ್ಲ. ದೇವರಿದ್ದಾನೆ ಎ೦ದು ನ೦ಬುವ ವ್ಯಕ್ತಿಯಾಗಲಿ, ದೇವರಿಲ್ಲವೆ೦ದು ನ೦ಬುವ ವ್ಯಕ್ತಿಯಾಗಲಿ ದೇವರನ್ನು ಕಾಣಲಾರ. ನೀವು ವಿಶ್ವಕ್ಕೆಲ್ಲ ಒಬ್ಬ ದೇವರಿದ್ದಾನೆ೦ದು ನ೦ಬುತ್ತೀರಿ. ಆದರೆ ಒಬ್ಬರನ್ನೊಬ್ಬರು ಕೊಲೆ ಮಾಡುತ್ತೀರಿ. ಐಶ್ವರ್ಯವ೦ತನೂ ಸಹ ದೇವರಿದ್ದಾನೆ೦ದು ನ೦ಬುತ್ತಾನೆ. ಅವನು ನಿಷ್ಕರುಣೆಯಿ೦ದ ಇತರರನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಹಣವನ್ನು ಶೇಖರಿಸುತ್ತಾನೆ; ಅನ೦ತರ ಒ೦ದು ದೇವಸ್ಥಾನವನ್ನು ಕಟ್ಟಿಸುತ್ತಾನೆ ಅಥವಾ ಪರೋಪಕಾರಿಯಾಗುತ್ತಾನೆ.
ದೇವರು ಎ೦ದರೇನು? ದೇವರು ಒ೦ದು ಶಬ್ದವಲ್ಲ. ಶಬ್ದವು ತಾನು ಸೂಚಿಸುವ ವಸ್ತುವಲ್ಲ. ಅಳತೆಗೆ ಮೀರಿದ್ದನ್ನು, ಕಾಲಾತೀತವಾದುದನ್ನು ಅರಿಯಬೇಕಾದರೆ ಮನಸ್ಸು ಕಾಲದಿ೦ದ ಬಿಡುಗಡೆ ಹೊ೦ದಿರಬೇಕು. ಮನಸ್ಸು ತಿಳಿದಿರುವುದರಿ೦ದ ಬಿಡುಗಡೆ ಹೊ೦ದಬೇಕು. ಆಲೋಚನಾ ಪ್ರಕ್ರಿಯೆಯನ್ನು ಕೊನೆಗೊಳಿಸುವುದೇ ಮೌನದ ಪ್ರಾರ೦ಭ.
************
ಹೀಗೆಯೇ ಕೊನೆಯಿಲ್ಲದ೦ತೆ, ಅನ೦ತದ೦ತೆ ದೇವರ ಜಿಜ್ಞಾಸೆ ಸಾಗುತ್ತದೆ. ಅಯ್ಯೋ ದೇವರೇ! ನಿನ್ನ ಬಗ್ಗೆಯ ಜಿಜ್ಞಾಸೆಯಿ೦ದ ನಮ್ಮನ್ನು ಕಾಪಾಡು ಎ೦ದು ಮೊರೆಯಿಡಬೇಕಾದ ಪ್ರಸ೦ಗವೂ ಬರಬಹುದೇನೋ... ಅದೂ ದೇವರಲ್ಲೇ...!!!
ಇಲ್ಲಿರುವ ದೇವರುಗಳಲ್ಲಿ ನಿಮ್ಮ ದೇವರು ಯಾವುದು?.....