ಕ್ಯಾಲೆಂಡರ್‌ ಬದಲಿಸುವ ಮುನ್ನ

ಕ್ಯಾಲೆಂಡರ್‌ ಬದಲಿಸುವ ಮುನ್ನ

ರಾತ್ರಿಗಿನ್ನೂ ಸಮಯವಿದೆ ಮಿತ್ರಾ
ಮುಸ್ಸಂಜೆಯಲ್ಲೇಕೆ ಮಲಗುತ್ತಿರುವೆ

ಕಸ ಗುಡಿಸಬೇಕು, ದೀಪ ಹಾಕಬೇಕು
ಶ್ರದ್ಧೆ ಇದ್ದರೆ ಗೂಡಿನೊಳಗೊಂದು ಪಣತಿ
ಬಾಗಿಲ ಸಂದಿಯಲ್ಲೊಂದು ಊದುಬತ್ತಿ
ಕೈಮುಗಿಯದಿದ್ದರೂ ನಡೆಯುತ್ತದೆ

ಒಳ ಬಾ, ಟೇಬಲ್‌ ಸರಿಪಡಿಸು
ಪತ್ರಿಕೆ-ಪುಸ್ತಕಗಳನ್ನು ಜೋಡಿಸಿಡು
ಬರೆಯುವುದಿದ್ದರೆ ಹೊಸ ಹಾಳೆಗಳಿರಲಿ
ಹಸನಾದ ಪೆನ್ನಿದ್ದರೆ ಒಳಿತು

ಸುಮ್ಮನೇ ಕೂಡು, ಒಳಗಣ್ಣ ತೆರೆ
ದಿನವೆಲ್ಲ ನಡೆದಿದ್ದ ನೆನಪಿಸಿಕೋ
ನಲಿವ ಜೊತೆಗೆ ನೋವನ್ನೂ ವಿಂಗಡಿಸು
ಎಲ್ಲವನ್ನೂ ತಕ್ಕಡಿಯ ಎರಡೂ ಕಡೆ ಹಾಕು

ಎತ್ತ ವಾಲಿತು ತೂಕದ ಮುಳ್ಳು?
ನೋವೋ, ನಲಿವೋ
ಯಾವುದೇ ಇರಲಿ, ಎತ್ತಿಕೋ ಅದನ್ನು
ಇಳಿಸು ಭಾವನೆಗಳನ್ನು ಅಕ್ಷರಗಳನ್ನಾಗಿಸಿ

ರಾತ್ರಿ ಮಲಗುವ ಮುನ್ನ, ಇಷ್ಟು ಮಾಡು
ದಿನದ ನೆನಪು ದಿನಚರಿಯಲ್ಲಿ ದಾಖಲಾಗಲಿ
ನೋವೋ ನಲಿವೋ, ಅಳುವೋ ನಗುವೋ
ಎಲ್ಲವೂ ಅಲ್ಲಿ ಅಕ್ಷರಗಳಾಗಲಿ

ಯಾವತ್ತೋ ಒಂದಿನ ಬದುಕ ಮುಸ್ಸಂಜೆಯಲಿ
ಅದು ನಿನ್ನ ಅತ್ಯುತ್ತಮ ಸಂಗಾತಿಯಾದೀತು
ನೆನಪ ಕೆದಕಿ, ನಡೆದ ದಾರಿಯ ನೆನಪಿಸಿ
ಅರಳಿಸಲೊಂದು ಮುಗುಳ್ನಗೆ ಉಳಿಸೀತು

- ಚಾಮರಾಜ ಸವಡಿ

Rating
No votes yet

Comments