ಲೋಕಲ್ ಅನುಭವ

ಲೋಕಲ್ ಅನುಭವ

ಬರಹ

ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ ಹೋದರೆ ೭.೫೦ಕ್ಕೆ ಚರ್ಚ್‍ಗೇಟ್ ತಲುಪುತ್ತೇನೆ, ಅದರ ಬದಲಿಗೆ ನಂತರದ ೭.೧೪ ರ ಸ್ಲೋ ಗಾಡಿಯಲ್ಲಿ ಹೋದರೆ ೮.೦೦ ಘಂಟೆಗೆ ಚರ್ಚ್‍ಗೇಟ್ ತಲುಪುತ್ತೇನೆ. ಅಲ್ಲಿಂದ ನಮ್ಮ ಆಫೀಸಿಗೆ ಹೋಗಲು ಮೊದಲ ಬಸ್ಸು ಇರುವುದು ೮.೧೫ಕ್ಕೆ. ಯಾವುದರಲ್ಲಿ ಹೊರಟರೂ ತೊಂದರೆ ಇಲ್ಲ. ಆದರೆ ಸ್ಲೋ ಗಾಡಿಯಲ್ಲಿ ಹೊರಟರೆ ಗೋರೆಗಾಂವಿನಲ್ಲೇ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆ ಆದರೆ ಫಾಸ್ಟ್ ಗಾಡಿಯಲ್ಲಿ ಹೊರಟರೆ ಬಾಂದ್ರಾವರೆವಿಗೆ ನಿಂತು ಹೋಗಬೇಕು, ನಂತರ ಕುಳಿತುಕೊಳ್ಳಲು ಅವಕಾಶ ಸಿಗುವುದು ಮತ್ತು ಅಲ್ಲಿಂದ ಚರ್ಚ್‍ಗೇಟಿಗೆ ೨೫ ನಿಮಿಷಗಳ ಪ್ರಯಾಣ. ಆದರೆ ಫಾಸ್ಟ್ ಗಾಡಿಯಲ್ಲಿ ಹೋದರೆ ಗಾಳಿ ಚೆನ್ನಾಗಿ ಬರುತ್ತದೆ ಮತ್ತು ಬೆವರುತ್ತಿರುವ ಮೈಯನ್ನು ಆ ಗಾಳಿಗೆ ಒಡ್ಡಿದರೆ ಮನಕಾಗುವ ಆಹ್ಲಾದತೆ ಅವರ್ಣನೀಯ. ಅದಕ್ಕಾಗಿಯೇ ಪ್ರಯಾಣಿಕರು ಹೆಚ್ಚಾಗಿ ಫಾಸ್ಟ್ ಗಾಡಿಗಳಲ್ಲೇ ಪ್ರಯಾಣಿಸುವುದು.

ದೂರದಲ್ಲಿ ಬರುತ್ತಿದ್ದ ಆ ಗಾಡಿ ಪ್ರಯಾಣಿಕರಿಂದ ತುಂಬಿದಂತೆ ಕಾಣುತ್ತಿರಲಿಲ್ಲ. ಹಾಗಿದ್ರೆ ನಾನು ಸುಲಭವಾಗಿ ಒಳಗೆ ಹೋಗಬಹುದೆಂದೂ, ಬೇಗನೆ ಕುಳಿತುಕೊಳ್ಳಲು ಜಾಗ ಸಿಗುವುದೆಂದೂ ಅಂದುಕೊಳ್ಳುತ್ತಿದ್ದೆ. ಹಾಗಾಗಿ ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿರುವಷ್ಟರಲ್ಲಿ ಗಾಡಿ ಹತ್ತಿರ ಬಂದಿತ್ತು. ನೋಡಿದ್ರೆ, ಕಾಲಿಡಲು ಒಂದಿಂಚೂ ಜಾಗವಿಲ್ಲ. ಹೆಚ್ಚಿನ ಜನಗಳು ಬಾಗಿಲಿಗೆ ಜೋತುಬಿದ್ದಿರಲಿಲ್ಲವಾದ್ದರಿಂದ ರಷ್ ಇರುವ ಬಗ್ಗೆ ನನಗೆ ತಿಳಿದಿರಲಿಲ್ಲ. ಗಾಡಿ ಹತ್ತಲು ಸಜ್ಜಾಗಿದ್ದುದರಿಂದ ನನ್ನ ಹಿಂದೆ ಇನ್ನೂ ಬಹಳಷ್ಟು ಜನಗಳು ಹತ್ತಲು ತಯಾರಾಗಿದ್ದರು. ಈಗ ನಾನು ಕಾಲು ಹಿಂತೆಗೆಯುವಂತಿಲ್ಲ (ಬಿಟ್ಟ ಬಾಣದಂತೆ). ಗಾಡಿ ನಿಲ್ಲುವ ಮುಂಚೆಯೇ ಹಿಂದಿದ್ದ ಜನಗಳೆಲ್ಲರೂ ಒಮ್ಮೆಲೇ ಒಳ ನುಗ್ಗಲಾರಂಭಿಸಿದರು. ಅವರುಗಳ ಮುಂದಿದ್ದ ನನ್ನನ್ನು ಸುಂಟರಗಾಳಿಗೆ ಸಿಕ್ಕ ತರಗೆಲೆಯಂತೆ ಗಾಡಿಯ ಒಳಕ್ಕೆ ದಬ್ಬಿದ್ದರು. ಒಂದೇ ಸಮನೆ ಮುಂದೆ ಮುಂದಕ್ಕೆ ದಬ್ಬುತ್ತಲೇ ಇದ್ದರು. ಒಂದು ಕೈನಲ್ಲಿ ಚೀಲವನ್ನು ಗಟ್ಟಿ ಹಿಡಿದಿದ್ದೆ. ಏಕೆಂದರೆ ಇಂತಹ ಸನ್ನಿವೇಶದಲ್ಲೇ ಜೇಬುಗಳ್ಳತನ, ಚೀಲವನ್ನು ಕತ್ತರಿಸುವುದು ನಡೆಯುವುದು. ಇನ್ನೊಂದು ಕೈನಲ್ಲಿ ಮೇಲಿನ ಹಿಡಿಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೆ. ಆದರೆ ಒಂದೇ ಸಮನೆ ತಳ್ಳುವಿಕೆಯಿಂದ ಮೇಲಿನ ಹಿಡಿ ಹೀಡಿಯಲು ಆಗುತ್ತಲೇ ಇರಲಿಲ್ಲ. ಅದೂ ಅಲ್ಲದೇ ಮುಂದೆಯೂ ಜನಗಳು ತುಂಬಿದ್ದಾರೆ. ನಾನು ಮುಂದೆ ಇರುವವರನ್ನು ತಳ್ಳುತ್ತಿದ್ದಂತೆ (ಹಿಂದಿನವರ ಬಲವಂತದಿಂದ) ಅವರುಗಳು ನನ್ನನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಹಿಂದಿನವರು ಮುಂದಕ್ಕೆ ತಳ್ಳುತ್ತಿದ್ದಾರೆ. ಅಡಕೊತ್ತಿಯಲ್ಲಿ ಸಿಕ್ಕ ಅಡಿಕೆಗಾದರೂ ಸ್ವಲ್ಪ ಸ್ವಾತಂತ್ರ್ಯ ಸಿಗಬಹುದೇನೋ ಆದರೆ ಆ ಸನ್ನಿವೇಶದಲ್ಲಿ ನಾನೂ ಪೂರ್ಣವಾಗಿ ಅತಂತ್ರನಾಗಿದ್ದೆ. ಕೆಳಗೆ ಕಾಲಿಡಲೂ ಜಾಗವಿಲ್ಲದೇ ಎಡಗಾಲನ್ನು ಯಾರದ್ದೋ ಕಾಲಿನ ಮೇಲೆ ಇಡಲು, ಅವರಿಂದ ಮರಾಠಿಯಲ್ಲಿ ಬೈಗುಳ. ಅವರ ಬೈಗುಳ ಅಷ್ಟು ಸರಿಯಾಗಿ ನನಗರ್ಥವಾಗದ್ದರಿಂದ ಮನಸ್ಸಿಗೆ ನಾಟಲಿಲ್ಲ. ಅವರು ನನ್ನ ಕಾಲನ್ನು ಹಿಂದಕ್ಕೆ ತಳ್ಳಿದ್ದರು. ಹಿಂದಿದ್ದವರು ಗುಜರಾತಿ ಭಾಷೆಯಲ್ಲಿ ಇನ್ನೇನನ್ನೋ ಅಂದು ಇನ್ನೊಂದು ಪಕ್ಕಕ್ಕೆ ಆ ಕಾಲನ್ನು ತಳ್ಳಿದ್ದರು. ಅಷ್ಟು ಹೊತ್ತಿಗೆ ಬಲಗಾಲನ್ನು ಇತ್ತ ಕಡೆಯಿಂದ ಇನ್ನೊಬ್ಬರು ಅತ್ತಲಿಗೆ ತಳ್ಳಿದ್ದರು. ಎಡಗಾಲು ಒಂದೆಡೆಯಾದರೆ ಬಲಗಾಲು ಇನ್ನೊಂದೆಡೆ. ಒಂದು ಕೈ ಮೇಲಿನ ಹಿಡಿ ಹಿಡಿಯಲು ಅಸಫಲವಾಗಿ ಮುಂದಿದ್ದವರೊಬ್ಬರ ಹೆಗಲ ಮೇಲೆ ವಿಶ್ರಮಿಸುತ್ತಿತ್ತು. ಇನ್ನೊಂದು ಕೈ ಚೀಲವನ್ನು ನನ್ನ ದೇಹಕ್ಕೆ ಬಲವಾಗಿ ಅಪ್ಪುತ್ತಿತ್ತು. ಅತ್ತಿತ್ತವರು ಆಡುವ ಮಾತುಗಳಿಗೆ ತಡೆ ಹಿಡಿಯಲು ಅವರೆಡೆ ಒಮ್ಮೆಯಾದರೂ ದುರುಗುಟ್ಟಿ ನೋಡಿದರೆ ಸರಿಯಾಗಬಹುದೆಂದೆಣಿಸಿ, ನನ್ನ ತಲೆಯನ್ನು ಅತ್ತಿತ್ತ ತಿರುಗಿಸುತ್ತಿದ್ದೆ. ದಾಸರ ಪದದಂತೆ ಯುಗಗಳು ಕ್ಷಣವಾದರೆ ಆ ಸನ್ನಿವೇಶದಲ್ಲಿ ನನಗೆ ಕ್ಷಣಗಳು ಯುಗವೆಂದೆನಿಸುತ್ತಿತ್ತು. ಈ ಮಧ್ಯೆ ಒಬ್ಬ ಯಾರೋ ತನ್ನ ಕೈನಲ್ಲಿ ನನ್ನ ಪ್ಯಾಂಟಿನ ಜೇಬನ್ನು ತಡಕಾಡುತ್ತಿದ್ದ. ಅವನ್ಯಾರೆಂದು ನೋಡಲೂ ಅವಕಾಶವಿರಲಿಲ್ಲ. ಇಂತಹ ಸ್ಥಳಗಳಲ್ಲಿ (ಬಾಗಿಲಿನ ಹತ್ತಿರ) ಇರುವ ಜನಗಳೆಲ್ಲರೂ ಒಂದು ದೊಡ್ಡ ಗುಂಪಿಗೆ ಸೇರಿರುವವರಾಗಿರುತ್ತಾರೆ. ಅವರ ಕೈನಲ್ಲಿ ಆಯುಧಗಳೂ ಇರುತ್ತವೆ. ನಮ್ಮ ಕಣ್ಣೆದುರೇ ನಮ್ಮದೆಲ್ಲವನ್ನೂ ಕಸಿದರೂ ಏನೂ ಮಾಡಲಾಗುವುದಿಲ್ಲ. ಅಷ್ಟಲ್ಲದೇ ಸುತ್ತಮುತ್ತಲಿರುವ ಪ್ರಯಾಣಿಕರು ತಾವೇನೂ ನೋಡೇ ಇಲ್ಲವೇನೋ ಎಂಬಂತೆ, ಇಹಲೋಕವನ್ನೇ ಮರೆತವರಂತೆ ನಿಂತಿರುತ್ತಾರೆ. ಸದ್ಯಕ್ಕೆ ನಾನು ಅಂಗಿ ಅಥವಾ ಪ್ಯಾಂಟಿನ ಜೇಬುಗಳಲ್ಲಿ ಒಂದು ಬಾಚಣಿಗೆ ಮತ್ತು ಕರವಸ್ತ್ರವನ್ನು ಬಿಟ್ಟು ಬೇರೇನನ್ನೂ ಇಡುವುದಿಲ್ಲ. ಎಲ್ಲವೂ ನನ್ನ ಚೀಲದಲ್ಲಿ ಭದ್ರವಾಗಿರುತ್ತವೆ. ಅತ್ತ ಗುಜರಾತಿ ಭಾಷೆಯನ್ನೂ ಅರಿಯದ ಇತ್ತ ಮರಾಠಿಯನ್ನೂ ಮಾತನಾಡಲು ಬರದವನು ನಾನೆಂತು ಜಗಳವಾಡಿ ಅವರ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಲ್ಲೆನು. ಅದೂ ಅಲ್ಲದೇ ಇದು ನಮ್ಮೂರೂ ಅಲ್ಲದ ಪರಸ್ಥಳ. ಅಷ್ಟಲ್ಲದೇ ಇದೇ ಸಮಯವೆಂದು ಕೈಲಾಗದವರೂ ತಿವಿದು ತಟ್ಟಿ ತಮ್ಮ ತೀಟೆಗಳನ್ನು ತೀರಿಸಿಕೊಳ್ಳುವರು. ಇಂತಹ ಸನ್ನಿವೇಶ ನರಕಸದೃಶವಲ್ಲದೇ ಮತ್ತಿನ್ನೇನು? ಸ್ವಲ್ಪ ಸ್ಥಳ ಸಿಕ್ಕರೆ ಮುಂದೆ ಹೋಗಿ ಇವರೆಲ್ಲರೂ ಯಾರೆಂದು ಒಮ್ಮೆಯಾದರೂ ದುರುಗುಟ್ಟಿ ನೋಡಿ ಸಮಾಧಾನ ಮಾಡಿಕೊಳ್ಳಬೇಕು ಎಂದೆಣಿಸುತ್ತಿದ್ದೆ. ಇದೆಲ್ಲ ಆದುದ್ದು ಎಷ್ಟು ಹೊತ್ತು ಗೊತ್ತೇ? ಕೇವಲ ನಾಲ್ಕು ನಿಮಿಷಗಳು. ಅಷ್ಟಲ್ಲದೇ ಅಂಧೇರಿಯಲ್ಲಿರುವ ೩-೪ ಕಾಲೇಜುಗಳಿಗೆ ಹೋಗುತ್ತಿರುವ ಪಡ್ಡೆ ಹುಡುಗರುಗಳಿಗೆ ತಮಾಷೆ ಮಾಡಲು ಇದೇ ಸದವಕಾಶ. ಅವರುಗಳೊಂದಿಗಿರುವ ಹುಡುಗಿಯರುಗಳ ಮುಂದೆ ಹೀರೋ ಎನ್ನಿಸಿಕೊಳ್ಳಲು ಕಾಯುತ್ತಿರುತ್ತಾರೆ. ಆ ರಷ್ಷಿನಲ್ಲಿ ನನ್ನ ಪಕ್ಕೆ ತಿವಿದು ಮುಸಿ ಮುಸಿ ನಗುತ್ತಿದ್ದರು. ನಾನು ಒಬ್ಬ ಹುಡುಗನ ಕಡೆ ನೋಡಿದರೆ ಇನ್ನೊಬ್ಬ ತರಲೆ ಮಾಡುತ್ತಿದ್ದ. ದುರುಗುಟ್ಟಿ ನೋಡಿದರೆ ಅಥವಾ ಏನಾದರೂ ಬೈದರೇ ಎಲ್ಲರೂ ಸೇರಿ ಗೇಲಿ ಮಾಡುವರು, ಅವರ ಮುಂದೆ ದೊಂಬರಾಟದ ಮಂಗನಾಗುವೆ. ಹಾಗೆಂದುಕೊಂಡು ಸುಮ್ಮನಾಗಿದ್ದೆ.

ಅಷ್ಟು ಹೊತ್ತಿಗೆ ಜೋಗೇಶ್ವರಿ ಸ್ಟೇಷನ್ ಬಂದಿತ್ತು. ಮುಂದೆ ಕೆಲವರು ಇಳಿದರು, ಮತ್ತೆ ದುಪ್ಪಟ್ಟು ಜನರು ಹತ್ತಿದ್ದರು. ಆದರೇನು ಅಷ್ಟು ಹೊತ್ತಿಗೆ ಸ್ವಲ್ಪ ಸೀನಿಯರ್ ಆಗಿದ್ದ ನನಗೆ ಸ್ವಲ್ಪ ಒಳ ಹೋಗಲು ಬಡ್ತಿ ಸಿಕ್ಕಿತ್ತು. ಎರಡು ಕಾಲುಗಳನ್ನು ಸರಿಯಾಗಿ ಊರಲು ಅವಕಾಶ ಸಿಕ್ಕಿತ್ತು. ಆ ಎರಡೂ ಕಾಲುಗಳನ್ನು ನೋಡಿ ಎಷ್ಟೋ ವರುಷಗಳಾದವೇನೋ ಎಂಬಂತೆ ನನ್ನ ಮನಸ್ಸಿಗೆ ಅವುಗಳ ಮೇಲೆ ಆಪ್ಯಾಯತೆ ಹೆಚ್ಚಾಗಿತ್ತು. ಕೈಗಳಿಗೂ ಸ್ವಲ್ಪ ಚೈತನ್ಯ ಬಂದಿತ್ತು. ಈ ಸಂತೋಷದಲ್ಲಿ ನಾ ಅಂದುಕೊಂಡಂತೆ ಅತ್ತಿತ್ತ ನೋಡಿ ದುರುಗುಟ್ಟಿ ನೋಡಿ ನನ್ನ ತೀಟೆ ತೀರಿಸಿಕೊಳ್ಳುವುದೇ ಮರೆತು ಹೋಗಿತ್ತು.

ಮುಂದೆ ಸೀಟುಗಳಲ್ಲಿ ಕುಳಿತವರ ಮಧ್ಯೆ ನಿಲ್ಲಲು ಅವಕಾಶ ಸಿಕ್ಕಿದಾಗ, ಕೊನೆಯಲ್ಲಿ ತ್ರಿಶಂಕುವಿನಂತೆ ಕುಳಿತವನ ಕಾಲು ತಗುಲಲು ಅವನು ಸಾಕ್ಷಾತ್ ಮೂರನೆಯ ಕಣ್ಣನ್ನು ತೆರೆದ ಮುಕ್ಕಣ್ಣನಂತೆ ಕಂಡಿದ್ದ. ಅಷ್ತು ಹೊತ್ತಿಗೆ (ಇನ್ನು ಮುಂದಿನ ಮೂರು ನಿಮಿಷಗಳು) ಲೋಕಲ್ ಟ್ರೈನ್ ಅಂಧೇರಿ ಸ್ಟೇಷನ್ನಿಗೆ ಬಂದು ತಲುಪಿತ್ತು. ತಕ್ಷಣ ನನಗೆ ಜ್ಞಾನೋದಯವಾಗಿ ನನಗೆ ನರಕದರ್ಶನ ಮಾಡಿಸಿದ ಮಹನೀಯರ ದರ್ಶನ ಮಾಡಲು ನೋಡಿದರೆ ಅಲ್ಲಿರುವವರೆಲ್ಲರೂ ಬೇರೆಯವರು. ನಾನು ನೋಡುತ್ತಿದ್ದ ಪರಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದವರೊಬ್ಬರು, 'ಆ ಜನಗಳನ್ನು ಹುಡುಕುತ್ತಿದ್ದೀರಾ? ಗಾಡಿ ಅಂಧೇರಿ ಸ್ಟೇಷನ್ನಿನ ಪ್ಲಾಟ್‍ಫಾರಂ ತಲುಪುತ್ತಿದ್ದಂತೆಯೆ ಹಾರಿ ಓಡಿ ಹೋದರು, ಅವರೆಲ್ಲರೂ ಕಳ್ಳರು, ನಿಮ್ಮ ಜೇಬಿಗೆ ಕತ್ತರಿ ಬಿದ್ದಿದೆಯೇ ನೋಡಿಕೊಳ್ಳಿ' ಎಂದಿದ್ದರು. ಮಹಾನ್ ಕಾರ್ಯಸಾಧಿಸಿದವನಂತೆ ನಾನು ನಸು ನಗೆ ಬೀರಿ, ಇಂತಹವರುಗಳ ಬಲೆಗೆ ನಾನು ಬೀಳೋನಲ್ಲ ಎಂದಿದ್ದೆ.

ಆದರೇನು ನನ್ನ ಶನಿಕಾಟ ಇನ್ನೂ ಮುಗಿದಿರಲಿಲ್ಲವಲ್ಲ. ಮೂರು ಜನಗಳು ಕುಳಿತುಕೊಳ್ಳುವ ಸ್ಥಳದಲ್ಲಿ ನಾಲ್ಕನೆಯವನಾಗಿ ಒಂದಂಡು ಊರಿಸಿ ಇನ್ನೊಂದನ್ನು ಗಾಳಿಗೆ ಬಿಟ್ಟು ಕುಳಿತಿದ್ದ ತ್ರಿಶಂಕುವಿನ ಕೆಂಗಣ್ಣು ಇನ್ನೂ ಉರಿಯುತ್ತಲೇ ಇತ್ತು. ಅವನು ಹಿಂದಿ ಭಾಷಿಗ. ಇಲ್ಲಿಯ ಜನಗಳು ಅವರುಗಳನ್ನು ಭೈಯ್ಯಾ ಎಂದು ರೇಗಿಸುತ್ತಾರೆ. ಇಷ್ಟು ಹೊತ್ತು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದ ಅಗ್ನಿ ಪರ್ವತದ ಜ್ವಾಲೆಯನ್ನು ಆತನ ಪ್ರಹರಿಸಿದೆ. ಹಿಂದಿಯಲ್ಲೇ ಅವನಿಗೆ ಸುಲಭದಲ್ಲಿ ಅರ್ಥವಾಗುವಂತೆ, 'ಮೂರು ಜನಗಳು ಕುಳಿತುಕೊಳ್ಳುವ ಸ್ಥಳದಲ್ಲಿ ನಾಲ್ಕನೆಯವನಾಗಿ ನೀನ್ಯಾಕೆ ಕುಳಿಕೊಂಡೆ? ಹಾಗೆ ಕುಳಿತುಕೊಂಡ ಮೇಲೆ ಕಷ್ಟಾನೋ ಸುಖಾನೋ ಅನುಭವಿಸಬೇಕು, ನಾವುಗಳೂ ನಿನ್ನಂತೆಯೇ ಮನುಷ್ಯರು. ನಿನ್ನ ಕಾಲಿನ ಬಗ್ಗೆ ಅಷ್ಟು ಕಾಳಜಿ ಇದ್ದವನಾಗಿದ್ದರೆ ಮೊದಲ ದರ್ಜೆಯಲ್ಲಿ ಪ್ರಯಾಣಿಸು, ಇಲ್ಲದೇ ಇದ್ದರೆ ಖಾಲಿ ಗಾಡಿಯಲ್ಲಿ ಪ್ರಯಾಣಿಸು' ಎಂದು ರೇಗಿದ್ದೆ. ಅಕ್ಕ ಪಕ್ಕದಲ್ಲಿದ್ದವರು, ಗೋರೆಗಾಂವಿನಿಂದ ನನ್ನನ್ನು ಗಮನಿಸುತ್ತಿದ್ದವರು ಮುಸಿ ಮುಸಿ ನಗುತ್ತಿದ್ದರು. ಆ ಭೈಯ್ಯಾನಿಗೆ ಬಹಳ ಅವಮಾನವಾಗಿತ್ತು. ಮುಂದಿನ ಸ್ಟೇಷನ್ನಾದ ಬಾಂದ್ರದಲ್ಲಿಯೇ ಇಳಿದು ಹೋಗಿದ್ದ. ಅವನು ಅಲ್ಲಿಯೇ ಇಳಿಯಬೇಕಿತ್ತೋ ಅಥವಾ ಮುಂದೆ ಹೋಗಬೇಕಿತ್ತೋ ಏನೋ! ನನ್ನ ಮಾತುಗಳಿಂದ ಅವನಿಗೆ ಅವಮಾನವಾದದ್ದಂತೂ ನಿಜ. ಅಂದು ಹೆಚ್ಚಿನ ಜಯ ಸಾಧಿಸಿದ ಹೆಗ್ಗಳಿಕೆ ನನಗಾಗಿತ್ತು.

ಚರ್ಚ್‍ಗೇಟ್ ಸ್ಟೇಷನ್ ಬಂದಾಗ ಜೇಬಿನಲ್ಲಿನ ಕರವಸ್ತ್ರಕ್ಕಾಗಿ ಕೈ ಹಾಕಲು, ಕೈ ಪೂರ್ಣವಾಗಿ ಕೆಳಗೆ ಇಳಿದಿತ್ತು. ಪ್ಯಾಂಟಿನ ಜೇಬಿನಲ್ಲಿ ದೊಡ್ಡ ಪ್ರಪಾತದಂತಹ ಗುಂಡಿ ಇರುವ ಅನುಭವ. ಆ ಜೇಬಿಗೆ ತಳವೇ ಇಲ್ಲವೇನೋ ಎಂಬಂತೆ ನಿಷ್ಕರುಣೆಯಿಂದ ಕತ್ತರಿಸಿದ್ದರು, ಆ ಪಾಪಿಗಳು.

ಇಷ್ಟೆಲ್ಲಾ ಆದದ್ದನ್ನು ನೋಡಿಯೂ ಪ್ರತಿ ದಿನ ನನಗೆ ಸಿಗುವ ಆ ಭಿಕ್ಷುಕ ನನಗೆ, 'ಏಕ್ ರೂಪ್ಯಾ ದೇ ದೋ ಸಾಬ್' ಎಂದಾಗ ಮನಸ್ಸಿನಲ್ಲಿ ಎಷ್ಟು ರೋಷವುಕ್ಕಿರಬೇಕು.

ಇಷ್ಟೆಲ್ಲಾ ಒದ್ದಾಡಿಕೊಂಡು ಕೆಲಸಕ್ಕೆ ಹೋಗಿ, ಅಲ್ಲಿ ದಿನವೆಲ್ಲಾ ಬಾಸಿನಿಂದ ಬೈಸಿಕೊಂಡು, ಮನೆಗೆ ಬಂದಾಗ, 'ನೀವೇನೂ ಮಹಾ ಕೆಲಸ ಮಾಡೋದು', ಎಂಬ ಮೂದಲಿಕೆಯ ಮಾತನ್ನು ಪತ್ನಿ ಆಡಿದರೆ (ಆಡೋದು ಸಹಜವೇ - ಅವರವರ ಕಷ್ಟ ಅವರವರಿಗೆ ಮಾತ್ರವೇ ಅರ್ಥವಾಗುವುದು) ಆತ್ಮ ಹತ್ಯೆಯೇ ದಾರಿ ಎನ್ನುವಂತಾಗಿರುತ್ತದೆ ಅಲ್ಲವೇ? ಛೇ! ಹಾಗೆಲ್ಲಾ ಮಾಡಿಕೊಳ್ಳೋಕ್ಕೆ ಹೋಗೋಲ್ಲ ಬಿಡಿ. ನಾನೊಂದು ಗಟ್ಟಿಪಿಂಡ. ಎಂತೆಂಥ ಅವಮಾನಗಳನ್ನೇ ಸಹಿಸಿಕೊಂಡಿದ್ದೀನಿ, ಇದೆಲ್ಲಾ ಏನು ಮಹಾ. ಆದರೆ ಇಂತಹ ಸಮಯದಲ್ಲೂ ಕೂಡ ನನ್ನ ಆತ್ಮ, 'ತಾನು ಹೇಡಿಯಲ್ಲ ಎಂತಹ ಪರಿಸ್ಥಿತಿಯನ್ನೂ ಎದುರಿಸಬಲ್ಲೆ', ಎಂದು ಹೇಳುವಾಗ ಕೋಪ ಬಂದೇ ಬರತ್ತೆ. ನಾನೇನು ತಾನೆ ಮಾಡಬಲ್ಲೆ. ಅದೂ ಸರಿಯೇ ಇಂತಹ ಪರಿಸ್ಥಿತಿಯಿಂದಾಗಿ ನಾನು ಗಟ್ಟಿಗ ಆಗಬಹುದೇನೋ, ವೇದಾಂತಿಯಾಗಬಹುದೇನೋ. ಆದ್ರೂ ಈ ವೇದಾಂತಿ ಆತ್ಮವನ್ನು ಕಟ್ಟಿಕೊಂಡಿದ್ರೆ ಮಾನ ಹೋಗ್ತಿದ್ದಾಗ ಮಾನವನ್ನು ಕಾಪಾಡಿಕೊಳ್ಳಲಾಗುವುದೇ? ಹೊಟ್ಟೆ ಹಸಿವಾದಾಗ ಹೊಟ್ಟೆ ತುಂಬುತ್ಯೇ? ಹಾಗಂದುಕೊಂಡು ಈ ಆತ್ಮವನ್ನು ಬಿಟ್ಟುಬಿಡಕ್ಕಾಗಲ್ಲ, ನಾನು ಕಟ್ಟಿಕೊಂಡು ಬಂದದ್ದಲ್ವಲ್ಲ. ಅದೇ ಬಂದು ನನಗೆ ಅಂಟಿಕೊಂಡಿದೆ. ಅಷ್ಟೆ ಅಲ್ಲ ಎಲ್ಲ ಜನಗಳೂ ನನಗೆ ಮರ್ಯಾದೆ ಕೊಡ್ತಿರೋದು ಏಕೆ ಅಂದ್ರೆ ಈ ಆತ್ಮ ನನ್ನ ಜೊತೆ ಇದೆ, ಆಗಾಗ ಸೂಕ್ತ ಮಾರ್ಗದರ್ಶನವನ್ನು ಇತರರಿಗೆ ನೀಡುವುದು ಎಂದು.

07/04/2006