ಈಗ ಬೇಡ ಬಿಡಿ

ಈಗ ಬೇಡ ಬಿಡಿ

ಬರಹ

ನಾವಿರೋದೇ ನಿಮ್ಮ ಸೇವೆಗಾಗಿ
ನೀವು ಮೈಕಿನಲ್ಲಿ ಭಾಷಣ ಬಿಗಿಯೋ ಮುನ್ನ
ಸ್ಟೇಜಿನಲ್ಲಿ ಟೇಬಲ್ ಹಾಕಿ
ಬ್ಯಾನರ ಕಟ್ಟಿ, ಹಾರತುರಾಯಿ ರಡಿಮಾಡಿ
ಮೈಕಿನಲ್ಲಿ ಒಂಟುತ್ರಿ-ತ್ರಿ ಟು ಒನ್
ಹೇಳೋಕಾಗಿಯೇ ನಾವಿರೋದು ಬಿಡಿ||
ಮನೆ ಮನೇಗೆ ಹೋಗಿ ಕದತಟ್ಟಿ
ಕೈ ಮುಗಿದು ಚೀಟಿ ಕೊಟ್ಟು
ನೂರು ಜನ ಕರೆದ್ರೆ ಮೂರು ಜನ ಬರುಲ್ಲ ಅಂತ ಗೊತ್ತಿದ್ದೂ
ಅದನ್ನೇ ಪ್ರತಿ ಭಾರಿಯೂ ಮಾಡುವ
ನಮಗೆ ಅದರಲ್ಲೇ ತೃಪ್ತಿ, ಬಿಡಿ||
ಭಾಷಣ ಮಾಡೋ ನೀವ್ ಹೇಗಾದ್ರೂ ಇರಿ
ಅದು ನಿಮ್ ಖುಷಿ
ನಾವ್ ಮಾತ್ರ ಬಂದೋರ್ಗೆಲ್ಲಾ ಸಲಾಮ್ ಹೊಡೆದು
ಅವರ ಚಪ್ಲಿ ಕಾಯ್ಬೇಕು, ಇದು ನಮ್ಮ ಧರ್ಮ ಬಿಡಿ|
ಹಾ! ನೀವಿರೋದೇ ಉದ್ದುದ್ದ ಭಾಷಣ ಬಿಗಿಯೋಕೆ
ವೇದಿಕೆಯ ಮೇಲೆ -ನಾವೆಲ್ಲಾ ನಿಮ್ ಸೇವಕರು, ಅಂತ ಹೇಳೋಕೆ|
ಗೊತ್ತಾಯ್ತು, ಬಿಡಿ,
ಅದೇ ನಾವೆಲ್ಲಾ ಅವರ ಸೇವಕರು-
ನಿಮ್ಮನ್ನು ಬಿ‍ಟ್ಟು||
ನೀವ್ ಬಿಸಿ ಊಟ ಮಾಡಿ
ಉಳಿದಿದ್ದ ತಂಗಳು-ಪಂಗಳು
ಹಳ್ಸಿದ್ದು-ಕೆಟ್ಟಿದ್ದು
ಆಳಿಗೆ ಹಾಕೋ ವಿಚಾರ,
ಈಗ ಯಾಕೇ ಬಿಡಿ|
ನಿಮ್ಮ ಹನ್ನೆರಡು ವರ್ಷದ
ದಾಂಡಿಗ ಮಗನ ಪುಸ್ತಕದ ಹೊರೆಯನ್ನು
ಆ ಮುದ್ಕಾ ಹೊತ್ಕೊಂಡ್ ಬರ್ತಾನಲ್ಲ,
ಆ ವಿಚಾರ ಯಾರಿಗೂ ಹೇಳುಲ್ಲಾ, ಬಿಡಿ||
ಬೆಳಗಿನ ಜಾವ ಮೂರಕ್ಕೆ ಎದ್ದು
ಮನೇಲಿ ಗಂಜಿ ಬೇಯ್ಸಿಟ್ಟು
ಸ್ವಾಮಿ ಮೂಡೋಕೆ ಮುಂಚೆ
ನಿಮ್ಮ ಮನೇಗೆ ಹಾಜರಾಗಿ
ಮುಸ್ರೆ ತಿಕ್ಕುವ ಚೆನ್ನಿಯ ಮಾತು
ಈಗ ಬೇಡ ಬಿಡಿ||
ಬಡಪಾಯಿ ಜನಕ್ಕೆ ನೂರು ರೂಪಾಯಿ ಸಾಲ ಕೊಟ್ಟು
ವರ್ಷವೆಲ್ಲಾ ನಿತ್ಯವೂ ಒಂದು ರೂಪಾಯಿ
ಬಡ್ಡಿ ವಸೂಲು ಮಾಡೋ
ನಿಮ್ಮ ಚಾಣಾಕ್ಷ ಬುದ್ಧಿಯ ಬಗ್ಗೆ
ಬರೆಯುವುದಿಲ್ಲ, ಬಿಡಿ|
ಪೂರ್ವದಲ್ಲಿ ಹುಟ್ಟೋ ಸೂರ್ಯ
ಪಷ್ಚಿಮದಲ್ಲಿ ಅಪ್ಪಿ ತಪ್ಪಿ ಹುಟ್ಟಿದ್ರೂ
ನಿಮ್ಮಂತೋರು ಹಾಗೆಯೇ
ನಮ್ಮಂತೋರು ಹೀಗೆಯೇ
ಅವೆಲ್ಲಾ ಈಗ ಯಾಕೆ ಬಿಡಿ||