ಧನಾತ್ಮಕ (Positive Thinkers)ಚಿಂತಕರಾಗೋಣ!
ಮೊನ್ನೆ ಎಲ್ರೂ ರಸವತ್ತಾಗಿ, ಖುಷಿಯಾಗುವಂತೆ ಸ್ಮಿತಪೂರ್ವಭಾಷಿಯ ಗುಣಗಾನಗಳನ್ನು ಮಾಡುತ್ತಿರುವಾಗ, ಐತಾಳರು ಪೋಸ್ಟ್ ಮಾಡಿದ ಕಾಮೆಂಟಿನಲ್ಲಿ ಅವರಿಗೆ ಗೊತ್ತಿದೆಯೋ ಇಲ್ವೋ ಆದ್ರೆ ನನಗೆ ಅನೇಕ ಸ್ವಾರಸ್ಯಗಳು ಗೋಚರವಾದವು. ಅಲ್ಲಿಯೇ ಈ ರಿಪ್ಲೈ ಕೊಡಬಹುದಿತ್ತು ಆದರೆ ಎಲ್ಲರ ಕಣ್ಣಿಗೂ ಈ ಸ್ವಾರಸ್ಯಗಳು ಕಣ್ಣಿಗೆ ಬೀಳದೆ ಹೋಗಬಹುದು ಅನ್ನಿಸಿತು ಅದಕ್ಕೆ ಸೆಪರೇಟಾಗಿ ಬ್ಲಾಗ್ ಮಾಡಿದ್ದೀನಿ. ಸ್ವಲ್ಪ ದೀರ್ಘ ಅನ್ನಿಸಿದ್ರೂ ಪರವಾಗಿಲ್ಲ ಓದಿರಿ. ಇದನ್ನು ನಾನು ಐತಾಳರ ಮೇಲೆ ಆಗ್ರಹದಿಂದ ಬರೆಯುತ್ತಿದ್ದೇನೆ ಅಂತ ದಯವಿಟ್ಟು ಅನ್ಕೋಬೇಡ್ರಿ. ಆಸಕ್ತಿಯುಳ್ಳವರಿಗೆ ಈ ಪಾಯಿಂಟುಗಳು ಒಳ್ಳೆ ಸಂತಸವನ್ನಂತು ನೀಡಬಲ್ಲವು.
ಐತಾಳ್ರೇ! ದೇವ್ರು ಏನ್ ಮಾಡಿದ್ರೂ ನಡೆಯುತ್ತೇ ಸ್ವಾಮಿ ಎನ್ನುವ ನಿಮ್ಮ ಅಭಿಪ್ರಾಯವೇನೂ ತಪ್ಪಲ್ಲ ಬಿಡಿ, ಯಾಕಂದ್ರೆ "ಏನು ಮಾಡಿದರೂ ನಡೆಯುವಂತಹ ಕೃತಿಗಳನ್ನೇ" ತಾನೆ ಅವನು ಮಾಡೋದು? ಹೀಗಾಗಿಯೇ ಅವನಿಗೊಂದು ವಿಶೇಷಣ "ಮರ್ಯಾದಾಪುರುಷೋತ್ತಮ"ಎಂದು.
ಲೋಕದಲ್ಲಿ ಸಂಪೂರ್ಣ ಮರ್ಯಾದೆಯುಳ್ಳವರಾಗಿರುವವರೇ ಕಮ್ಮಿ. ಇರುವವರು ಎಲ್ಲರೀತಿಯಲ್ಲಿಯೂ ಸರ್ವಸದ್ಗುಣ ಸಂಪನ್ನರಾಗಿರಲಾರರು. ಈ ಎಲ್ಲರಲ್ಲೂ ಉತ್ತಮಪುರುಷನೆನಿಸಿಕೊಂಡವನು ಕೇವಲ ಶ್ರೀರಾಮಚಂದ್ರಪ್ರಭು ಮಾತ್ರವೇ.ಇವನೇ The Best and The Invincible.
ನಮ್ಮ ಗುಣಗಳನ್ನು ಶ್ರೀರಾಮದೇವರ ಔದಾರ್ಯದ ಜೊತೆಗೆ ಹೋಲಿಸಿಕೊಂಡು ನಮ್ಮ ಅವಿವೇಕದ ಪರಿಧಿಯನ್ನು ಪರೀಕ್ಷಿಸೋಣವೇ?
ಘಟನೆ ಒಂದು
ರಾಮಚಂದ್ರ:
ಸ್ವಾಭಾವಿಕವಾಗಿಯೇ ಬರಬೇಕಿದ್ದ ರಾಜಪಟ್ಟ ಕೈತಪ್ಪಿ, ಅದರ ಬದಲು ವನವಾಸದ ಕಟುಯಾತ್ರೆಯ ಯೋಗ ಕಣ್ಣೆದುರು ಬಂದರೂ ದಶರಥನನ್ನಾಗಲಿ, ಕೈಕೇಯಿಯನ್ನಾಗಲಿ, ಭರತನನ್ನಾಗಲಿ ಅಥವ ಇದಕ್ಕೆ ಕಾರಣೀಭೂತಳಾದ ಮಂಥರೆಯನ್ನಾಗಲೀ ದೂಷಿಸಿದನೆ? ಇಲ್ಲ. ತಂದೆಯ ಮಾತು ನಡೆಸಿಕೊಡುವುದು ಮಗನ ಕರ್ತವ್ಯ ಎಂಬುದನ್ನು ಜಗತ್ತಿಗೆ ತೋರಿಸಲೋಸುಗ ಮಂದಸ್ಮಿತನಾಗಿಯೇ ಈ ಕಾರ್ಯಕ್ಕೆ ಮುಂದಾದ
ನಾವು:
ದಶರಥನಿಗೆ:-
ಅಪ್ಪಾ! ನೀನ್ಯಾಕೆ ಚಿಕ್ಕಮ್ಮನ (ಕೈಕೇಯಿಯ) ಮಾತು ಕೇಳಬೇಕು? ಅಥವಾ ಅವಳ ಮೇಲೆ ನಿಂಗೆ ಕಂಟ್ರೋಲ್ ಇಲ್ವೇ? ಅವಳೇನು ಹೇಳಿಬಿಟ್ಟರೂ ಒಪ್ಪಿಕೊಂಡು ಬಿಡೋದೆ? ಛೆ, ಛೆ ಇವಾಗ್ನೋಡು ಎಲ್ರಿಗೂ ಸಮಸ್ಯೆ.
ಕೈಕೇಯಿಗೆ:
ನಿನಗೆ ರಾಜ್ಯ ಬೇಕಾದರೆ ಬೇರೆ ಕಡೆ ಕೊಡ್ತೀವಿ. ನೀನು, ನಿನ್ನ ಮಗ ಸುಖವಾಗಿರಲು ಎಲ್ಲ ಏರ್ಪಾಡನ್ನೂ ಮಾಡಿಕೊಡ್ತೀವಿ. ಆಯ್ತಲ್ಲ? ರಗಳೆ ಮಾಡ್ಬೇಡ ಅಷ್ಟೇ
ಭರತನಿಗೆ (ಪಾಪ ಈತನಿಗೆ ಅನ್ಯಾಯ ಗೊತ್ತಿಲ್ಲದೇ ಹೋದ್ರೂ) :
ನೋಡು ಭರತ! ನಿಮ್ಮಮ್ಮಂಗೆ ನೀನಾದ್ರೂ ಹೇಳು ಇದೆಲ್ಲ ಸರಿಯಲ್ಲ ಅಂತ. ನಿಮ್ ಪಾಲಿಂದು ನಿಮ್ಗೆ ಕೊಟ್ರಾಯ್ತಲ್ಲ, ನಿಮ್ಮಮ್ಮ ನಮ್ಮನ್ಯಾಕೆ ಕಾಡಿಗೆ ಹೋಗು, ಕಾಡಿಗೆ ಹೋಗು ಅನ್ನೋದು? ಇನ್ನೂ ಕಿರಿಕಿರಿ ಮಾಡಿದ್ರೆ ಕೋರ್ಟಲ್ಲಿ ನೋಡ್ಕೊಳ್ಳೋಣ ಹೋಗು. ಇನ್ಮೇಲೆ ನೀನ್ಯಾರೋ ನಾನ್ಯಾರೋ.
ಮಂಥರೆಗೆ:
ಏಯ್ ಮಂಥರೆ, ನಿಂದು ಅತಿಯಾಯ್ತು. ಅದೇನೋ ಅಂತಾರಲ್ಲ ಉಂಡ ಮನೆಯ ಗಳ ಎಣಿಸೋದು ಅಂತ ಆಥರಾ ಆಯ್ತು. ಯಾಕೆ ಸುಮ್ನಿರೋಕೆ ಆಗಲ್ವಾ? ನಿಂಗ್ಯಾಕೆ ಬೇಕು ನಮ್ಮನೆ ಸಮಾಚಾರ, ಸುಮ್ನೆ ತಿಂದ್ಕೊಂಡು ಬಿದ್ದಿರು ಇಲ್ಲಾಂದ್ರೆ ಮತ್ತೆ ನಾನ್ಯಾರು ಅಂತ ತೋರಿಸ್ಬೇಕಾಗುತ್ತೆ ಹುಷಾರ್.
ಘಟನೆ ಎರಡು:
ಶ್ರೀರಾಮಚಂದ್ರ :
ಬಂಗಾರದ ಜಿಂಕೆಯನ್ನು ಬೆನ್ನತ್ತಿ ಹೋದಾಗ ಲಕ್ಷಣನಿಗೆ ಸೀತಾಮಾತೆಯ ಯೋಗಕ್ಷೇಮವನ್ನು ನೋಡಿಕೊಂಡು ಇಲ್ಲೇ ಇರು ಎಂದು ಹೇಳಿದ್ದ. ಆದರೆ ನಂತರ ಆದದ್ದೇನು, ಸೀತೆಯ ಬಲವಂತಕ್ಕೆ ಅನಿವಾರ್ಯವಾಗಿ ರಾಮನನ್ನು ಹುಡುಕಿಕೊಂಡು ಹೊರಟ. ಹೋಗುವಾಗ ಹಾಕಿಹೋಗಿದ್ದ ಲಕ್ಷ್ಮಣರೇಖೆಯನ್ನು ಸೀತೆಯು ದಾಟಿ ಬಿಟ್ಟಿದ್ದಕ್ಕೆ ರಾವಣ ಅವಳನ್ನು ಹೊತ್ತೇ ಒಯ್ದುಬಿಟ್ಟ. ವಿಚಿತ್ರವೆಂದರೆ ಈ ಎರಡೂ ತಪ್ಪುಗಳು ತೊಂದರೆಯನ್ನು ತಂದೊಡ್ಡಿದ್ದು ಶ್ರೀರಾಮಚಂದ್ರನಿಗೆ! ಆದರೆ ಶ್ರೀರಾಮ ಇಬ್ಬರನ್ನು ಮಾತ್ರವಲ್ಲ ಜಿಂಕೆಯ ವೇಷಧಾರಿಯಾದ ಕಾರಸ್ಥಾನಿ ಮಾರಿಚನನ್ನು ಸಹ ಬಯ್ಯದೆ ಧೀರೋದಾತ್ತ ಕಾರ್ಯಸಾಧಕನಾದ.
ನಾವು
ಲಕ್ಷ್ಮಣನಿಗೆ:
ಅಲ್ವೋ ಲಕ್ಷ್ಮಣಾ! ನಾನು ನಿಂಗೆ ಮುಂಚೆನೆ ಹೇಳಿರ್ಲಿಲ್ವಾ ಸೀತನ್ನ ಬಿಟ್ಬರ್ಬೇಡ ಅಂತ. ನೀನು ಇಷ್ಟು ಬೇಜವಾಬ್ದಾರಿ ಅಂತ ಅನ್ಕೊಂಡಿರ್ಲಿಲ್ಲ ಬಿಡು. ಇವಾಗ ನೋಡು ಅವ್ಳನ್ನ ಯಾರು ಹೊತ್ಕೊಂಡು ಹೋಗಿದಾರೋ ಏನೋ? ಎಲ್ಲಂತ ಹುಡ್ಕೋದು? ಏನು ರೇಖೆ ಹಾಕಿದ್ರೇನು? ಪ್ರಾಬ್ಲಮ್ಮೇನು ಸಾಲ್ವಾಯ್ತಾ? ನೀನೇ ಹುಡ್ಕೊಂಡು ಬಾ ಹೋಗು ಗೊತ್ತಾಗುತ್ತೆ ಕಷ್ಟ ಏನು ಅಂತ. ನಿನ್ನಿಂದ ಬರೀ ಪ್ರಾಬ್ಲಮ್ಮುಗಳೇ. ವಾಪಸ್ಸು ಹೋಗಿ ಬಿಡು ಮಹರಾಯ.
ಸೀತೆಗೆ (ಮನಸ್ಸಿನಲ್ಲಿಯೇ):
ಇವ್ಳೊಬ್ಳು ಕಮ್ಮಿಯಾಗಿದ್ಲು ನಂಗೆ ತಲೆನೋವು ತರೋದಿಕ್ಕೆ. ಮೊದ್ಲೇ ಬಡ್ಕೊಂಡೆ ಬರ್ಬೇಡ ನಂಜೊತೆ ಅಂತ ಕೇಳ್ಲಿಲ್ಲ. ಹೊಸ ಸಮಸ್ಯೇನ ತಂದಿಟ್ಲು. ಕೈಗೆ ಸಿಗ್ಲಿ ಇದೆ ಹಬ್ಬ. ಈ ಮಾರೀಚನೊಬ್ಬ ಸಾಯೋದು ಸತ್ತ, ಸುಮ್ನಾದ್ರು ಸಾಯ್ಬಾರ್ದಾ? ಸೀತಾ... ಲಕ್ಷ್ಮಣಾ ಅಂತೆಲ್ಲಾ ಯಾಕೆ ಕೂಗಬೇಕಿತ್ತೋ? ಒಟ್ನಲ್ಲಿ ನನ್ ಟೈಮು ಸರಿ ಇಲ್ಲ ಅಷ್ಟೆ.
ಘಟನೆ ಮೂರು (ತುಂಬಾ ಇಂಪಾರ್ಟೆಂಟ್)
ಯಾರೋ ಊರಿನ ಅಗಸರವನೊಬ್ಬ ಸೀತಾದೇವಿಯ ಬಗ್ಗೆ ಹಗುರವಾಗಿ ಮಾತನಾಡಿದಾಗ "ರಾಮ ಸೀತಾದೇವಿಯನ್ನು ಕಾಡಿಗಟ್ಟಿದ", "ಅಗ್ನಿ ಪರೀಕ್ಷೆಗೆ ಗುರಿಮಾಡಿದ; ಇದು ಅಮಾನವೀಯ" ಹಾಗೆ ಹೀಗೆ ಎಂದೆಲ್ಲ ತೀರಾ ನಾವು ಕೇವಲವಾಗಿ, ಲಘುವಾಗಿ ಮಾತಾಡ್ತೀವಿ. ಆದ್ರೆ "ಎಂತಹ ಪರೀಕ್ಷೆಯಲ್ಲಿಯೂ ಗೆದ್ದು ತನ್ನ ಪಾವಿತ್ರ್ಯತೆಯ ಪರಾಕಾಷ್ಠೆಯನ್ನು ಪ್ರದರ್ಶಿಸಬಲ್ಲಳು ನನ್ನ ಸೀತೆ" ಎನ್ನುವ ಅಮೋಘ ವಿಶ್ವಾಸ ಶ್ರೀರಾಮನಿಗಿದೆ ಎನ್ನುವ ಧನಾತ್ಮಕ ಅಂಶವನ್ನು ನಾವು ಮರೆತೇ ಬಿಡುತ್ತೇವೆ. ಹುಲುಮಾನವರಾದ ನಮಗೆ ಈ ಪರಿಯ ಆತ್ಮವಿಶ್ವಾಸವಿದೆಯೇ? ನಮ್ಮ ಹೆಂಗಸರು ನಮ್ಮವರೇ ಆದ ಪರಿಚಯಸ್ಥ ಗಂಡಸರೊಂದಿಗೆ ಸ್ವಲ್ಪವೇ ತಮಾಶೆಯಾಗಿ ಮಾತಾಡ್ತಾ ಇದ್ದರೂ ಸಹನೆಯಾಗದಿರುವವರು ನಾವು. ಇದನ್ನ ಚೆನ್ನಾಗಿ ತಿಳ್ಕೊಂಡಿರೋರು (ಅಂತ ತಿಳಿಕೊಂಡಿರೋರು?) ಪೊಸೆಸಿವ್ನೆಸ್ ಅನ್ನೋ ಹೆಸರಿಡ್ತಾರೆ. ಆದರೆ ಶ್ರೀರಾಮಚಂದ್ರನು ಈ ಪೊಸೆಸಿವ್ನೆಸ್ ತರಹದ ತೀರ ಕ್ಷುಲ್ಲಕ ವೀಕ್ನೆಸ್ಗಳಿಗೆ ಅತೀತ.
ಒಂದೇ ಎರಡೇ ನಮ್ಮ ರಾಮಚಂದ್ರನ ಮಹದ್ಗುಣಗಳು? ಸಾಕ್ಷಾತ್ ರಾಮಚಂದ್ರನೇ ಆಗಲು ಯಾರಿಗೂ ಸಾಧ್ಯವಿಲ್ಲ. ಆದರೆ ಅವನ ಗುಣಗಳನ್ನು ನಾನು ಸಹ ಪಾಲಿಸಲು ಯತ್ನಿಸುತ್ತೇನೆ ಎನ್ನುವುದು ನಿಜವಾಗಿಯೂ ಸಲ್ಲಕ್ಷಣ.
--------------------------------------------------------------
* ಕೃಷ್ಣ unlimited ಅಗಿ ಕಣ್ಣು ಹೊಡೀತಾ ಇದ್ನಾ? ಹೀಗೆನ್ನುವಾಗ ನಾವು ಮೊದಲು ಕೃಷ್ಣನೆನ್ನುವ ಹೆಸರು ಹೇಗೆ ಬಂತೆನ್ನುವದನ್ನು ಆಲೋಚಿಸಬೇಕಲ್ಲವೆ? ಕರ್ಷತಿ ಇತಿ ಕೃಷ್ಣಃ. ಆಕರ್ಷಣೆ ಮಾಡ್ತಾನಾದ್ರಿಂದ ಕೃಷ್ಣ. ಎಲ್ಲರಿಗೂ ಅವನೆಂದರೇನೇ ಆಕರ್ಷಣೆ ಇರುವಾಗ ಅವನು ಬೇರೆಯವರಿಗೆ ಲೈನು ಹೊಡೆಯುವ ಪ್ರಸಂಗ ಎಲ್ಲಿ? ಅವನ ಮೇಲಿನ ಮೋಹದಿಂದ ಎಲ್ಲರೂ ಅವನಿಗೇ ಲೈನು ಹಾಕುವವರು. ಇನ್ಕ್ಲುಡಿಂಗ್ ಗಂಡಸರು !
* ಇನ್ನೊಂದರ್ಥದಲ್ಲಿ ಕೃಷಿಯನ್ನು ನಾಶ ಮಾಡ್ತಾನಾದ್ದರಿಂದ ಕೃಷ್ಣ. ನಾವು ಮಾಡಿಕೊಂಡಿರುವ ದುರ್ಗುಣಗಳ ಕೃಷಿಯನ್ನು ನಾಶ ಮಾಡ್ತಾನಾದ್ದರಿಂದ ಕೃಷ್ಣ. ಸಿಕ್ಸಿಕ್ಕೋರಿಗೆ ಕಣ್ಣು ಹೊಡೆದು ತಲೆ ಕೆಡಿಸಿಕೊಳ್ಳೋ ಬದ್ಲು, ಕೃಷ್ಣನನ್ನೇ ಪ್ರೀತಿಸಿ ಪರಿಶುದ್ಧ ಮನಸ್ಸು ಇಟ್ಕೊಳ್ಳೋದು ಉತ್ತಮ ಅಲ್ವೇ?
* ನಗ್ನರಾಗಿ, ಪಬ್ಲಿಕ್ಕಲ್ಲಿ ಸ್ನಾನ ಮಾಡ್ತಾ ಇದ್ದ ಹೆಂಗಸರಿಗೆ ಕೃಷ್ಣ ಬಟ್ಟೆ ಕದ್ದ(?) ಅನ್ನೋದು ಮಾತ್ರ ಗೊತ್ತಾಯ್ತೇ ವಿನಃ ತಾವು ಬರೀ ಮೈಯಲ್ಲಿದ್ದದ್ದು ತಿಳೀಲೇ ಇಲ್ಲ. ಅವರೆಲ್ಲರಿಗೂ (ನಮಗೆಲ್ಲರಿಗೂ ಯಾಕಾಗಬಾರದು?) ಕೃಷ್ಣ ತಮ್ಮ ಅಂಗೋಪಾಂಗಗಳನ್ನು ನೋಡಲು ಈ ಚೇಷ್ಟೆ ಮಾಡಿದ ಎನ್ನುವುದೇ ಅಭಿಪ್ರಾಯ. ಭುವನೈಕಸುಂದರಿಯಾದ ರುಕ್ಮಿಣಿಯೇ ಅವನೊಂದಿಗಿರುವಾಗ ಅವನಿಗೆ ಇತರ ಎಲ್ಲ ಸ್ತ್ರೀಯರೂ ಸಾಮಾನ್ಯರೇ. ಹೀಗಿರುವಾಗ "ಅಪರೂಪದ ಸೌಂದರ್ಯವತಿಯರಾದ ನಮ್ಮನ್ನು ಈ ಕೃಷ್ಣ ಕಾಮಿಸುತ್ತಿದ್ದಾನೆ" ಅಂದುಕೊಂಡ ಈ ಸ್ತ್ರೀಯರ(ಅಂದರೆ ನಮ್ಮ) ಅವಿವೇಕಕ್ಕೇನು ಹೇಳುವುದು ? ಮಾತ್ರವಲ್ಲ ಇಲ್ಲಿ ಒಂದು ಧರ್ಮ ಸೂಕ್ಷ್ಮವಿದೆ. ಎಂತಹ ಏಕಾಂತ ಸ್ಥಳವೇ ಇರಲಿ ಸ್ತ್ರೀಯರಾಗಲಿ ಪುರುಷರಾಗಲಿ ನಗ್ನಸ್ಥಿತಿಯಲ್ಲಿಯೇ ಸ್ನಾನ ಮಾಡುವುದು ಅಧರ್ಮ. ಹೀಗಾಗಿಯೇ ಆ ಸ್ತ್ರೀಯರೆಲ್ಲರೂ ಎದೆ ಮೇಲೆ ಕೈಮುಚ್ಚಿಕೊಂಡು ನಾಚಿಕೆಯಿಂದ ಕೇಳಿದರೆ ವಸ್ತ್ರಗಳನ್ನು ಕೊಡದ ಕೃಷ್ಣ ನಂತರ ಬರಿಮೈಯಲ್ಲಿ ಸ್ನಾನ ಮಾಡುವುದು ಅಸಹ್ಯ ಹಾಗು ಅಶಾಸ್ತ್ರೀಯ ಎನ್ನುವ ತಿಳುವಳಿಕೆಯನ್ನು ಮೂಡಿಸಿ ವಾಪಸ್ಸು ಮಾಡಿದ. ಅಷ್ಟೇ ಅಲ್ಲ "ಪರಮಾತ್ಮನಲ್ಲಿ ಬೇಡುವಾಗ ಆತ್ಮಾಭಿಮಾನ ಇರಬಾರದು" ಎನ್ನುವ ತತ್ತ್ಚದ ಅರಿವನ್ನು ಸಹ ಅವರಲ್ಲಿ ಬಿತ್ತಿದ. ಇದನ್ನೇ ಕನಕದಾಸರು 'ನಾನು' ಹೋದರೆ ಹೋದೇನು ಎಂದು ಮಾರ್ಮಿಕವಾಗಿ ಸೂಚಿಸಿದ್ದು.
---------------------------------------------------------------
ನಾವು ಕಿಸ(ಸು)ಬಾಯಿದಾಸ ಅಂತ ಆಗಾಗ ಅನ್ನುತ್ತೇವಲ್ಲ, ಅದರ ಅರ್ಥವೇ ನಮಗೆ ಆಗಿರುವುದಿಲ್ಲ. ಶ್ರೀಜಗನ್ನಾಥದಾಸರು ಇದಕ್ಕೆ ಅರ್ಥವಿವರಣೆಯನ್ನು ಈ ರೀತಿ ನೀಡುತ್ತಾರೆ: ಯಾವಾಗಲೂ ಬಾಯಿ ಕಿಸಿದುಕೊಂಡೇ ಇರುವ ದೇವರು ಯಾರು? ನರಸಿಂಹ ತಾನೆ? ಈ ಕಿಸುಬಾಯಿಯವನ ದಾಸ ನಾನು ಎಂದು ಯಾರು ಅಂದುಕೊಳ್ಳುತ್ತಾರೋ ಅವರೇ ಕಿಸುಬಾಯಿದಾಸರು. ತಮ್ಮ ಕೃತಿಯೊಂದರಲ್ಲಿ ಪ್ರಹ್ಲಾದನ ಬಗ್ಗೆ ವಿವರಿಸುವಾಗ ಈ ವಿವರಣೆಯನ್ನು ಕೊಡುತ್ತಾರೆ. ನೋಡಿ ಎಂತಹ ಧನಾತ್ಮಕ ಚಿಂತನೆ! ನಾವೆಲ್ಲ ಸ್ವಲ್ಪ ನಿಧಾನವಾಗಿ ಹೇಳಿದ್ದನ್ನೂ ಬಯ್ಗುಳವೆಂದೋ, ಅವಮಾನವೆಂದೋ ತಿಳಿದುಕೊಳ್ಳುವ ಪ್ರಸಂಗಗಳಿರುರುವಾಗ ಬಯ್ಗುಳದಂತಹ ಶಬ್ದಕ್ಕೆ ಸುಂದರವಾದ ಅರ್ಥವನ್ನೂ ಮಾಡಬಹುದು ಎಂದು ತಿಳಿಸುವುದು ಜ್ಞಾನಿಗಳಿಗೆ ಮಾತ್ರವೇ ಸಾಧ್ಯ ಅಲ್ಲವೇ?
---------------------------------------------------
ಇರಲಿ. ನನ್ನ ತಿಳುವಳಿಕೆಯ ಮಟ್ಟಕ್ಕೆ ವಿವರಣೆ ಕೊಡುವಾಗ ಅಕಸ್ಮಾತ್ತಾಗಿ ಯಾರಿಗಾದರೂ ಹರ್ಟ್ ಆಗಿದ್ದರೆ ತಪ್ಪು ತಿಳಿದುಕೊಳ್ಳದಿರಿ.
ಎನಗಿಂತ ಕಿರಿಯರಿಲ್ಲ
ರಘುನಂದನ