SMS ಎಂಬ ನವ ಜಾನಪದ

SMS ಎಂಬ ನವ ಜಾನಪದ

ಬರಹ

ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.

Namaskar. This is All India Wake up Call Association morning service. Our aim is to wake up SOMARIES like u. Gd mng.
*
Why boys go 2 temple? Bcoz temple is d only place wr u can find Pooja, Bhkti, Bhawana, Shrda, Arti, Archana, Aradhna, Laxmi, Sarswati, Jyoti...
*
ಭೂಮಿ ನಕ್ಕರೆ ಭೂಕಂಪ, ಸಮುದ್ರ ನಕ್ಕರೆ ಸುನಾಮಿ, ನೀನು ನಕ್ಕರೆ ಹೂನಗೆ, ನಿನ್ನ ಮೊಬೈಲ್‌ ನಕ್ಕರೆ... ನನ್ನ ಎಸ್‌ಎಂಎಸ್‌!
***
ವಿಚಿತ್ರ ಭಾಷೆ, ತಮಾಷೆ, ವ್ಯಂಗ್ಯಗಳ ಮಿಶ್ರಣದೊಂದಿಗೆ ಬೇರೇನನ್ನೋ ಹೇಳ ಹೊರಟಂತಿರುವ ಈ ಪುಟ್ಟ ಸಾಲುಗಳನ್ನು ಎಲ್ಲೋ ಓದಿದಂತಿದೆಯಲ್ಲ ಅನಿಸುತ್ತಿದೆಯೇ? ಹಾಗಿದ್ದರೆ ನಿಮ್ಮ ಮೊಬೈಲ್‌ನ ಮೆಸೇಜ್‌ ಬಾಕ್ಸ್‌ ಒಮ್ಮೆ ನೋಡಿಕೊಳ್ಳಿ. ಅಲ್ಲಿ ಇದ್ದರೂ ಇರಬಹುದು.
ನಿಜ, ಇವು `ಶಾರ್ಟ್‌ ಮೆಸೇಜ್‌ ಸರ್ವೀಸಸ್‌' ಎಂಬುದರ ಎಸ್‌ಎಂಎಸ್‌ ರೂಪ- ಅಂದರೆ ಎಸ್‌ಎಂಎಸ್‌ಗಳು!
ಆಧುನಿಕ ಕೊಳ್ಳುಬಾಕ ಸಂಸ್ಕೃತಿಯ ಮಾರುಕಟ್ಟೆಯಲ್ಲಿ ಮೊಬೈಲ್‌ ಎಂಬ ಮೂರು ಬೆರಳುಗಳ ಅಳತೆಯ ಪುಟ್ಟ ಸಾಧನವೊಂದು ಇನ್ನಿಲ್ಲದ ಕ್ರಾಂತಿ ಮಾಡಿಬಿಟ್ಟಿದೆ. ಮೊಬೈಲ್‌, ನಮ್ಮ ಕಿವಿಯ ಅವಿಭಾಜ್ಯ ಅಂಗ ಎಂಬಷ್ಟರ ಮಟ್ಟಿಗೆ ನಾವು ಅದಕ್ಕೆ ಆತುಕೊಂಡಿದ್ದೇವೆ. ಮೊಬೈಲ್‌ಗಳ ವಿಶ್ವರೂಪ, ಅವುಗಳ ಹತ್ತುಹಲವು `ಅವಧಾನ'ಗಳ ಬಗ್ಗೆ ಬರೆಯಹೊರಟರೆ ಒಂದು ಥಿಯರಿಯನ್ನೇ ಮಂಡಿಸಬೇಕಾಗಬಹುದು. ಮೊಬೈಲ್‌ನ ಪುಟ್ಟ ಪರದೆ ಮೇಲೆ ತನ್ನದೇ ಆದ ಶೈಲಿಯಲ್ಲಿ ಮೂಡಿಬರುವ ಅಕ್ಷರ ಸಾಹಿತ್ಯ ಈ ಎಸ್‌ಎಂಎಸ್‌ಗಳು. ಅನಿರ್ದಿಷ್ಟ ಅಂತರದಲ್ಲಿರುವ ವ್ಯಕ್ತಿಗಳಿಬ್ಬರ ನಡುವೆ ಬಾಯಿಮಾತಿನ ಸಂಪರ್ಕದ ಹೊರತಾಗಿ ಮೊಬೈಲ್‌ಗಳು ಅಕ್ಷರ ರೂಪದಲ್ಲೂ ಸಂಪರ್ಕ ಏರ್ಪಡಿಸುವುದು ಈ ಎಸ್‌ಎಂಎಸ್‌ಗಳ ಮೂಲಕ. ಈ ಸಂದೇಶವಾಹಕಗಳು ಮಾಡುವ ಕೆಲಸ ಬಾಯಿಮಾತಿನ ಸಂಪರ್ಕದಷ್ಟೇ ಪರಿಣಾಮಕಾರಿ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು. ನೀವು ಒಬ್ಬ ವ್ಯಕ್ತಿಯ ಎದುರು ನಿಂತು ಹೇಳಲಾರದ ವಿಷಯವನ್ನು ಈ ಎಸ್‌ಎಂಎಸ್‌ಗಳು ಹೇಳಬಲ್ಲವು. ಈ ಕೆಟಗರಿಯಲ್ಲಿ ಅಶ್ಲೀಲ, ಪೋಲಿ ಜೋಕ್‌/ವಿಷಯಗಳಿಗೆ ಮೊದಲ ಸ್ಥಾನ!
ಎಸ್‌ಎಂಎಸ್‌ಗಳು ಅನಾಥರಲ್ಲದ ಅನಾಥ ಮಕ್ಕಳಂತೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಯಾರ ಕೈಯಲ್ಲೋ ತಿದ್ದಿ ತೀಡಲ್ಪಟ್ಟು ಜಗತ್ತಿನೆಲ್ಲೆಡೆ ಪ್ರಯಾಣ ಮಾಡುವ ಪ್ರಯಾಣಿಕನಂತೆ. ಇದರ ರಚನೆಕಾರರು ಯಾರೋ, ಬಳಸುವವರು ಯಾರೋ. ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್‌ಗೆ, ಇನ್ನೊಂದು ಮೊಬೈಲ್‌ನಿಂದ ಮತ್ತೊಂದು ಮೊಬೈಲ್‌ಗೆ, ಮತ್ತೊಂದು ಮೊಬೈಲ್‌ನಿಂದ ನೂರೊಂದು ಮೊಬೈಲ್‌ಗೆ... ಹೀಗೆ ಸಂದೇಶಗಳು ವಾಹಿನಿಯಂತೆ ಹರಿಯುತ್ತಲೇ ಇರುತ್ತವೆ. ನೀವು ರಚಿಸಿ ಕಳಿಸಿದ ಸಂದೇಶ ಎಲ್ಲೆಲ್ಲೋ ಸುತ್ತಿ ಕೊನೆಗೆ ಪುನಃ ನಿಮಗೇ ಬೌನ್ಸ್‌ ಆಗುವ ತಮಾಷೆಯೂ ಇಲ್ಲಿ ಜರುಗುತ್ತದೆ. ರಚನೆಕಾರರು ಯಾರು ಅಂತಲೇ ಗೊತ್ತಿಲ್ಲದ, ಬಾಯಿಂದ ಬಾಯಿಗೆ ಹರಡಿ ಬೆಳೆಯುವ ಸಾಹಿತ್ಯವನ್ನು ನಾವು ಜಾನಪದ ಅನ್ನುವುದಾದರೆ, ಈ ಮೊಬೈಲ್‌ ಸಾಹಿತ್ಯವನ್ನು ಆಧುನಿಕ ಜಾನಪದದ ಪಟ್ಟಿಗೆ ಸೇರಿಸಬಹುದು.
***
ಯುವಜನರಿಗೆ ಮೊಬೈಲ್‌ ಅತ್ಯಂತ ಹೆಚ್ಚಿನ ಮೆಚ್ಚಿನ ನೆಚ್ಚಿನ ಸಂಗ(ಗಾ)ತಿ. ಕೆಲವೊಮ್ಮೆ ಹುಚ್ಚಿನ ಜೊತೆಗಾತಿ ಕೂಡ. ಅದರಲ್ಲೂ ಅಪ್ಪ ಕೊಡುವ ಸ್ವಲ್ಪ ಪಾಕೆಟ್‌ ಮನಿಯಲ್ಲೇ ಮೊಬೈಲ್‌ನ ಹೊಟ್ಟೆಯನ್ನೂ ಹೊರಬೇಕೆಂದರೆ ಈ ಅಕ್ಷರ ಸಾಹಿತ್ಯಕ್ಕೆ ಜೋತುಬೀಳಲೇಬೇಕು. ಬಸ್ಸಿನಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದರೆ ನಿಮಗಿಷ್ಟ ಬಂದವರಿಗೆ ಎಸ್‌ಎಂಎಸ್‌ ಮಾಡುತ್ತಾ, ಅಲ್ಲೇ ಹರಟುತ್ತಾ ಸಹನೀಯವಾಗಿರಬಹುದು. ರೈಲಿನಲ್ಲಿ ದೂರದ ಪ್ರಯಾಣ ಬೋರ್‌ ಹೊಡೆಸಿದರೆ `ಕೂಕಂಡ್‌ ಕೂಕಂಡ್‌ ಬ್ಯಾಜಾರ್‌ ಆತಿತ್‌ ಮಾರಾಯ' ಎಂದು ಅಪ್ಪಟ ಕುಂದಾಪುರ ಭಾಷೆಯಲ್ಲಿ ಯಾರಿಗಾದರೂ ಎಸ್‌ಎಂಎಸ್‌ ಮಾಡಿ `ಬ್ಯಾಜಾರ್‌' ಕಳೆಯಬಹುದು. ಪಾರ್ಕಿನಲ್ಲಿ ನಿಮಗಾಗಿ ಅಷ್ಟೊತ್ತಿನಿಂದ ಕಾಯುತ್ತಿರುವ ಗೆಳತಿಗೆ `ಇನ್ನೊಂದೈದು ನಿಮಿಷದಲ್ಲಿ ಬಂದೆ' ಎಂದು ಎಸ್‌ಎಂಎಸ್‌ ಮಾಡಿ ಇನ್ನೂ ಹತ್ತು ನಿಮಿಷ ನಿರಾಳವಾಗಿರಬಹುದು! ಆಫೀಸಿನಿಂದ ಹೊರಡುವುದು ತಡವಾದರೆ `ಲೇಟು, ನೀನು ಊಟ ಮಾಡಿ ಮಲಗು' ಎಂದು ಮಡದಿಯನ್ನು ಎಸ್‌ಎಂಎಸ್‌ನಲ್ಲೇ ಮುದ್ದಿಸಿ, ಲಾಲಿ ಹಾಡಿ ಮಲಗಿಸಬಹುದು. ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.
ಇವೆಲ್ಲ ಎಸ್‌ಎಂಎಸ್‌ಗಳ ತಮಾಷೆಯ ಮುಖ. ಇದಕ್ಕೆ ಗಂಭೀರ ಮುಖವೂ ಇದೆ. ಮೊನ್ನೆ ಜೆಸ್ಸಿಕಾ ಲಾಲ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನೆಲ್ಲ ಖುಲಾಸೆ ಮಾಡಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಒಂದು ಖಾಸಗಿ ಟಿವಿ ವಾಹಿನಿ ಎಸ್‌ಎಂಎಸ್‌ ಚಳವಳಿಯನ್ನೇ ಹಮ್ಮಿಕೊಂಡಿತು. ಕಳೆದ ವರ್ಷ ಮುಂಬೈ ಮಹಾನಗರ ಕುಂಭದ್ರೋಣ ಮಳೆಗೆ ಸಿಕ್ಕಿ ನಲುಗುತ್ತಿರುವಾಗ, ನೆರೆಯಲ್ಲಿ ಸಿಕ್ಕಿಹಾಕಿಕೊಂಡವರು ತಮ್ಮ ಸುರಕ್ಷತೆಯ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದು ಎಸ್‌ಎಂಎಸ್‌ಗಳನ್ನು ಟಿವಿ ವಾಹಿನಿಗಳಿಗೆ ಕಳುಹಿಸುವ ಮೂಲಕ. ನನ್ನ ಸಹೋದರ ಮೊನ್ನೆ ಮುಂಬೈನಿಂದ ಬೆಂಗಳೂರಿಗೆ ಬರುವಾಗ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳಬಯಸುತ್ತೇನೆ. ರೈಲು ಬೆಂಗಳೂರು ಬರುವುದು ತಡರಾತ್ರಿಯಾಗಿದ್ದರಿಂದ, ಆತನ ಜೊತೆ ಬೆಂಗಳೂರಿಗೆ ಬರುತ್ತಿದ್ದ ಸಹ ಪ್ರಯಾಣಿಕ ತಾನೆಲ್ಲಿ ಇಳಿಯಬೇಕು ಎಂಬ ಗೊಂದಲದಲ್ಲಿದ್ದ. ನನ್ನ ಸಹೋದರನ ಮೊಬೈಲ್‌ ಪಡೆದ ಆತ ಯಾರಿಗೋ ಎಸ್‌ಎಂಎಸ್‌ ಮಾಡಿದ. ಕೆಲವೇ ಕ್ಷಣಗಳಲ್ಲಿ ಎಸ್‌ಎಂಎಸ್‌ ಮೂಲಕವೇ ಉತ್ತರ ಬಂತು- `ಸಿಟಿ ರೈಲ್ವೇ ಸ್ಟೇಷನ್‌'. ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಹೀಗೆ ಯಾರೋ ಒಬ್ಬರಿಗೆ ಅಪರಿಚಿತ ಊರಿನಲ್ಲಿ ದಾರಿ ತೋರಿದ್ದೂ ಎಸ್‌ಎಂಎಸ್ಸೇ.
ಇಂದು ಮೊಬೈಲ್‌ ಹಿಡಿಯದ ಕೈಗಳಿಲ್ಲ. ಕಾಲೇಜು ಕ್ಯಾಂಪಸ್‌ಗಳಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ಅದರಿಂದೇನೂ ಪ್ರಯೋಜನವಾಗಿಲ್ಲ. `ಕ್ಲಾಸಿನಲ್ಲಿ ಹುಡುಗರು ನಮ್ಮ ಮುಖ ನೋಡ್ತಿರ್ತಾರೆ, ಕೈ ಮಾತ್ರ ಮೊಬೈಲ್‌ ಮೇಲೆ. ಮೊಬೈಲ್‌ ನೋಡದೆಯೂ ಎಸ್‌ಎಂಎಸ್‌ ಟೈಪ್‌ ಮಾಡಿ, ಕಳುಹಿಸುವ ಚಾಣಾಕ್ಷತನ ಅವರಿಗಿದೆ' ಎನ್ನುತ್ತಾರೆ ಪ್ರಾಧ್ಯಾಪಕರಾದ ಅನಿಲ್‌ಕುಮಾರ್‌. ಅವರ ಪ್ರಕಾರ, ಎಸ್‌ಎಂಎಸ್‌ಗಳು ಟೈಪಾಂಸ್‌ಗಷ್ಟೇ ಅಲ್ಲ, ಕೈಬೆರಳುಗಳಿಗೆ ವ್ಯಾಯಾಮವನ್ನೂ ಕೊಡುತ್ತವೆ.
***
ಎಸ್‌ಎಂಎಸ್‌ಗಳ ಸ್ವರೂಪವೇ ವಿಶಿಷ್ಟವಾದದ್ದು. ಒಂದು ಎಸ್‌ಎಂಎಸ್‌ ಮೂಲಕವೇ ಇದರ ಬಗ್ಗೆ ಚರ್ಚಿಸಬಹುದು: V r on d way 2 htl. U pls com thre. ಈ ಎಸ್‌ಎಂಎಸ್‌ನಲ್ಲಿ ಬರೋಬ್ಬರಿ 23 ಅಕ್ಷರಗಳು ಮತ್ತು ಎರಡು ಫುಲ್‌ಸ್ಟಾಪ್‌ಗಳಿವೆ. ನಾಮಪದ, ಕ್ರಿಯಾಪದಗಳು ಸರಿಯಾಗಿ ಗೋಚರಿಸದ, ಪದಪುಂಜಗಳಿಲ್ಲದ, ಶಬ್ದಾರ್ಥಗಳೂ ಇಲ್ಲದ ಈ ಎರಡು ವಾಕ್ಯಗಳು ಹೇಳುವ ಅರ್ಥ ಮಾತ್ರ ವಿಶಾಲವಾದುದು- `ನಾವು ಹೋಟೆಲ್‌ಗೆ ಹೊರಟಿದ್ದೇವೆ. ನೀನು ದಯವಿಟ್ಟು ಅಲ್ಲಿಗೆ ಬಾ'. ಅಂದರೆ ಹೆಚ್ಚಿನ ಸಮಯ, ಶಕ್ತಿ ಯಾವುದನ್ನೂ ವ್ಯಯ ಮಾಡದೆ ಒಂದು ಕ್ರಿಯೆಯನ್ನು ಎಸ್‌ಎಂಎಸ್‌ಗಳು ಇಲ್ಲಿ ಪೂರ್ಣಗೊಳಿಸುತ್ತವೆ.

ಮೇಲಿನ ಎಸ್‌ಎಂಎಸ್‌ನ್ನೇ ಗಮನಿಸಿ. ಮೇಲ್ನೋಟಕ್ಕೆ ಅಲ್ಲಿ ಕಾಣಿಸುವುದು ಬರೀ ಇಂಗ್ಲಿಷ್‌ ವರ್ಣಮಾಲೆಯ ABCDಗಳಷ್ಟೇ. ಆದರೆ ಅವೇ ವರ್ಣಮಾಲೆಯ ಅಕ್ಷರಗಳು ಇಬ್ಬರು ವ್ಯಕ್ತಿಗಳ ನಡುವೆ ಸಂಪರ್ಕ ಏರ್ಪಡಿಸುತ್ತವೆ ಎಂದಾದರೆ ಅಲ್ಲೊಂದು ಭಾಷೆ ಖಂಡಿತಾ ಇದೆ. ಅದು ಎಸ್‌ಎಂಎಸ್‌ ಭಾಷೆ. ಹಾಗಂತ ಈ ಥರದ ಭಾಷೆ ಈ ಮೊದಲು ಖಂಡಿತ ಇರಲಿಲ್ಲ. ಮೊಬೈಲ್‌ ಬಳಕೆಗೆ ಬರುವ ಮೊದಲು ಹೀಗೊಂದು ಸಂಪರ್ಕ ಭಾಷೆಯನ್ನು ಯಾರೂ ಉಪಯೋಗಿಸುತ್ತಿರಲಿಲ್ಲ. ಎಲ್ಲೋ ಒಂದೆರಡು ಕಡೆ, ಖಾಸಗಿ ಬಸ್ಸುಗಳ ಕ್ಯಾಬಿನ್‌ ಬಾನೆಟ್‌ ಮೇಲೆ `Eದರ ಮೇಲೆ ಕುಳಿತುಕೊಂಡವ Muದಿ ಮಂg' ಎಂಬಂಥ ಸಾಲುಗಳನ್ನು ಬರೆದಿದ್ದು ಬಿಟ್ಟರೆ, `Eದರ ಮೇಲೆ 1/4 EಡಬೇD ಎಂಬಂಥ ಪ್ರಯೋಗ ತಮಾಷೆಗಾಗಿ ನಡೆದಿದ್ದು ಬಿಟ್ಟರೆ ಅದನ್ನು ವಿಶಾಲ ವ್ಯಾಪ್ತಿಯಲ್ಲಿ ಯಾರೂ ಬಳಸುತ್ತಿರಲಿಲ್ಲ. ಆದರೆ ಮೊಬೈಲ್‌ಗಳು ಬಂದ ಮೇಲೆ ಇದೇ ಭಾಷೆಯ ವಿಸ್ತೃತ ರೂಪವೊಂದು ಪ್ರತ್ಯಕ್ಷವಾಯಿತು. ಅಂದರೆ ತನಗೆ ಅನುಕೂಲವಾದ ಹಾಗೆ, ಮೊಬೈಲ್‌ನ ಪುಟ್ಟ ಪರದೆಯೊಳಗೆ ಹಿಡಿಸಿ, ದೊಡ್ಡ ಪರಿಣಾಮ ಬೀರಬಹುದಾದ ಭಾಷೆಯೊಂದನ್ನು ಹುಟ್ಟುಹಾಕುವ ಗುಣವನ್ನು ಎಸ್‌ಎಂಎಸ್‌ ತಾನೇ ತಾನಾಗಿ ಪಡೆಯಿತು.

ಈ ಜಗತ್ತಿನ `ಕ್ರಿಯೇಟಿವ್‌' ಲಿಸ್ಟ್‌ನಲ್ಲಿ ಮೊಟ್ಟಮೊದಲು ಸೇರಬೇಕಾದ ವಿಷಯವೆಂದರೆ ಜಾಹೀರಾತುಗಳು, ಎರಡನೆಯದು ಎಸ್‌ಎಂಎಸ್‌ಗಳು ಎಂಬ ಮಾತನ್ನು ಮುಲಾಜಿಲ್ಲದೇ ಬರೆದಿಡಬಹುದು. ಅದರ ರಚನೆಯಲ್ಲೇ ಎಂಥ ಸೃಜನಶೀಲತೆ ದುಡಿಯುತ್ತದೆ. ಅನಿಲ್‌ಕುಮಾರ್‌ ಹೇಳುವ ಪ್ರಕಾರ, ಇಂಟರ್‌ನೆಟ್‌ನಲ್ಲಿ ಸಿಗುವ ಮಾಮೂಲಿ ಜೋಕ್‌ಗಳಿಗಿಂತ ಬೇರೆಯದೇ ಆದ ಎಸ್‌ಎಂಎಸ್‌ ಜೋಕ್‌ಗಳೇ ಹೆಚ್ಚಾಗಿ ಹರಿದಾಡುತ್ತಿರುತ್ತವೆ. ಅಂದರೆ ಎಸ್‌ಎಂಎಸ್‌ ರಚಿಸುವ ಸೃಜನಶೀಲ ಮನಸ್ಸು ನಮ್ಮ-ನಿಮ್ಮ ನಡುವೆಯೇ ಇದೆ.'

ಹಾಸ್ಯ, ವ್ಯಂಗ್ಯ, ದ್ವಂದ್ವಾರ್ಥ, ತುಂಟಾಟ, ಪ್ರೀತಿ, ಕೋಪ, ಹಾರೈಕೆ- ಎಲ್ಲವನ್ನೂ ಎರಡು ಸಾಲಿನ ಪುಟ್ಟ ಎಸ್‌ಎಂಎಸ್‌ನಲ್ಲಿ ಅಡಗಿಸುವುದು ಕಾವ್ಯ ಕಟ್ಟುವ ಕೆಲಸದಂತೆಯೇ ಅಲ್ಲವೇ? ಮೇಲಿನ `ಸೋಮಾರಿ' ಎಸ್‌ಎಂಎಸ್‌ ತೆಗೆದುಕೊಳ್ಳಿ. ಅದು ಬೆಳಿಗ್ಗೆ ತಡವಾಗಿ ಏಳುವವರನ್ನು ಪರೋಕ್ಷವಾಗಿ ಅಣಕವಾಡುವಂತಿದೆ, ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವಂತಿದೆ. `ಹುಡುಗರು ಏಕೆ ದೇವಸ್ಥಾನಕ್ಕೆ ಹೋಗುತ್ತಾರೆ?' ಎಂಬ ಎಸ್‌ಎಂಎಸ್‌ನಲ್ಲಿ ತಮಾಷೆ ಇದೆ, ತುಂಟಾಟವಿದೆ, ಕೆಲಮಟ್ಟಿನ ವಾಸ್ತವವೂ ಸೇರಿಕೊಂಡಿದೆ. `ಭೂಮಿ ನಕ್ಕರೆ ಭೂಕಂಪ...' ಒಂದು ಸುಂದರ ಕಲ್ಪನೆಯೇ ಸರಿ. ಹೀಗೆ ಲೌಕಿಕ, ಅಲೌಕಿಕ ವಿಷಯಗಳನ್ನೆಲ್ಲ ಒಂದೆಡೆ ಸೇರಿಸಿ ಒಂದು ಸುಂದರ ಚಿತ್ರವನ್ನಾಗಿಸುವ ಕಲೆಗಾರಿಕೆ ಎಸ್‌ಎಂಎಸ್‌ ರಚನೆಕಾರರಲ್ಲಿರುತ್ತದೆ. ಇಲ್ಲಿ ಒಂದು ವಿಷಯಕ್ಕೆ ಆಧಾರವಾಗಿ ನಿಲ್ಲುವ ಸಂಗತಿಗಳು ಭೂತ, ವರ್ತಮಾನ, ಭವಿಷ್ಯತ್‌- ಯಾವುದೇ ಕಾಲದ್ದಾಗಿರಬಹುದು. ಹಾಗೆಯೇ ಇತಿಹಾಸ, ವೇದ, ಪುರಾಣಗಳ ಪುಟಗಳಿಂದಲೂ ಎತ್ತಿಕೊಂಡ ವಿಷಯಗಳಾಗಿರಬಹುದು. ಅಮಿತಾಬ್‌, ಶೆರಾವತ್‌, ಸಾನಿಯಾರಂಥ ಸೆಲೆಬ್ರಿಟಿಗಳನ್ನೂ ಎಳೆತರಬಹುದು. ನೀವು ಪ್ರೀತಿಸುವ/ದ್ವೇಷಿಸುವ ಗಣಿತ, ಸಮಾಜ, ವಿಜ್ಞಾನದಂಥ ಅಧ್ಯಯನ `ಶಾಸ್ತ್ರ'ಗಳನ್ನೂ ನೋಡಬಹುದು. ಅಂಥ ಕೆಲವು ಎಸ್‌ಎಂಎಸ್‌ಗಳು ಇಲ್ಲಿವೆ.

* `ಎಂಥಾ ಜಗತ್ತಿದು ನೋಡಿ! ನಿಮ್ಮ ತೊಂದರೆಗಳನ್ನು ಹಾಸಿಗೆಯವರೆಗೆ ತೆಗೆದುಕೊಂಡು ಹೋಗಬೇಡಿ ಎಂಬ ಹಿರಿಯರ ಮಾತು ಗೊತ್ತಿದ್ದೂ ಎಷ್ಟೋ ಜನ ಈಗಲೂ ತಮ್ಮ ಹೆಂಡತಿಯೊಡನೆ ಮಲಗುತ್ತಾರೆ'- ಇಲ್ಲಿ ನಮ್ಮ ಹಿರಿಯರು ಹೇಳಿದ ಮಾತನ್ನು ಅನ್ಯೋಕ್ತಿಯಂತೆ ಬಳಸಿ ಬೇರೆಯದೇ ಚಿತ್ರಣ ಕೊಡಲಾಗಿದೆ. `ಹೆಂಡತಿ ಎಂದರೆ ತೊಂದರೆ' ಎಂದು ಮನಸ್ಸಿನಲ್ಲೇ ಅಂದುಕೊಳ್ಳುವವರು ಈ ಸಂದೇಶವನ್ನು ಗೌಪ್ಯವಾಗಿ ಚಪ್ಪರಿಸಬಹುದು!

* `ಸನ್‌ ಈಸ್‌ ಮಿಂಚಿಂಗ್‌, ಕೋಳಿ ಈಸ್‌ ಕೂಗಿಂಗ್‌, ಹಕ್ಕಿ ಈಸ್‌ ಹಾರಿಂಗ್‌, ಮಕ್ಕಳು ಕ್ರೈಯಿಂಗ್‌, ಡು ಯು ನೋ ವಾಟ್‌ ಆರ್‌ ದೇ ಸೇಯಿಂಗ್‌...? ಸೋಂಬೇರಿ, ಎದ್ದೇಳು, ಗುಡ್‌ ಮಾರ್ನಿಂಗ್‌'- ಇದು ಮೇಲೆ ಹೇಳಿದ `ಸೋಂಬೇರಿ' ಎಸ್‌ಎಂಎಸ್‌ನ ಇನ್ನೊಂದು ರೂಪ. ಈ ಎಸ್‌ಎಂಎಸ್‌ನಲ್ಲಿ ಇನ್ನೊಂದು ವೈಶಿಷ್ಟ್ಯವಿದೆ. ಅದು ಪದಗಳದ್ದು. ಮಿಂಚಿಂಗ್‌, ಕೂಗಿಂಗ್‌, ಹಾರಿಂಗ್‌, ಎದ್ದೇಳು- ಇಲ್ಲೆಲ್ಲ ನಮ್ಮ ಆಡುಭಾಷೆಯ ಬಳಕೆಯಾಗಿದೆ; `ಕಂಗ್ಲಿಷ್‌' ರೂಪದಲ್ಲಿ.

* `ಜೀವನದಲ್ಲಿ ನಿಮ್ಮ ಸುಖ ಅಮಿತಾಬ್‌ಬಚ್ಚನ್‌ ಥರ ಉದ್ದವಾಗುತ್ತಾ ಹೋಗಲಿ, ದುಃಖ ಮಲ್ಲಿಕಾ ಶೆರಾವತ್‌ ಬಟ್ಟೆ ಥರ ಕಡಿಮೆಯಾಗುತ್ತಾ ಹೋಗಲಿ'- ಎಂಥಾ ಕಲ್ಪನೆ ನೋಡಿ! ಇದು ಯಾವುದೋ ಸಿನಿಮಾದಲ್ಲಿ ಬಂದ ಡೈಲಾಗ್‌. ಅದನ್ನು ಕ್ಯಾಚ್‌ ಮಾಡಿ ಎಸ್‌ಎಂಎಸ್‌ಗೆ ಇಳಿಸಿದ ಭೂಪನಿಗೆ ಹ್ಯಾಟ್ಸಾಫ್‌.
ಇನ್ನೂ ಕೆಲವು ಎಸ್‌ಎಂಎಸ್‌ಗಳಿವೆ. ನಮ್ಮ ರಾಮಾಯಣ, ಮಹಾಭಾರತದ ಕೆಲ ಸನ್ನಿವೇಶಗಳು, ಪಾತ್ರಗಳು ಇದರಲ್ಲಿ ಬರುತ್ತವೆ.
* `ರಾವಣನಿಗೆ ಡಿಸ್ಕೋಥೆಕ್‌ಗೆ ಹೋಗುವ ಮನಸ್ಸಾಯಿತು. ಆದರೆ ಆತ ಒಳಗೆ ಹೋಗಲು ಆಗಲೇ ಇಲ್ಲ. ಯಾಕೆ? ಏಕೆಂದರೆ ಅಲ್ಲಿ `ತಲೆಗೆ 200 ರೂ.' ಅಂತ ಬರೆದಿತ್ತು!'- ಇಲ್ಲಿ ರಾಮಾಯಣದ ರಾವಣನ ಪಾತ್ರ ಬರುತ್ತೆ, ಆತನ ಹತ್ತು ತಲೆಯೂ ಬರುತ್ತೆ. ಈ ಪಾತ್ರ ಸಮಕಾಲೀನ ಸನ್ನಿವೇಶದಲ್ಲಿ ತಮಾಷೆಗಾಗಿ ಹೀಗೆ ಬಳಕೆಯಾಗುತ್ತದೆ. ಇನ್ನೊಂದು ವಿಧದಲ್ಲಿ, ಡಿಸ್ಕೋಥೆಕ್‌ಗಳ ಬಗೆಗಿನ ವ್ಯಂಗ್ಯವೂ ಇಲ್ಲಿ ಸೇರಿಕೊಂಡಿದೆ.

* `ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಕೋ ಲಂಕಾ ಪರ್‌ ಹಮ್ಲಾ ಕರ್ನೇ ಕೇ ಲಿಯೇ 500 ವಾನರ್‌ ಚಾಹಿಯೇ. 499 ಪಹುಂಚ್‌ಗಯಾ ಹೈ. ಎಸ್‌ಎಂಎಸ್‌ ಮಿಲ್ತೇ ಹಿ ತುರಂತ್‌ ನಿಕ್ಲೋ. ಜೈ ಶ್ರೀರಾಮ್‌'- ಓದಿ ನಗು ತಡೆಯಲಾಗಲಿಲ್ಲವೇ? ಎಂಥಾ ಕಲ್ಪನೆ, ಎಂಥಾ ಸೃಜನಶೀಲತೆ ಇದೆ ನೋಡಿ. ನಿಮ್ಮ ಪ್ರೀತಿಪಾತ್ರರನ್ನು `ಮಂಗ' ಮಾಡುವ ವಿಧಾನವಿದು!

ಈ ಥರ ಕ್ರಿಯೇಟಿವ್‌ ಅನಿಸುವ ಇನ್ನೊಂದಿಷ್ಟು ಎಸ್‌ಎಂಎಸ್‌ಗಳನ್ನು ನೋಡಬಹುದು:
* `ಹಾಯ್‌, ನಾನು ಮುಂದಿನ ಮಂಗಳವಾರ ಮದುವೆಯಾಗಲಿದ್ದೇನೆ. ಒಂದು ಪಾರ್ಟಿ ಇದೆ. ನೀವೆಲ್ಲ ಬನ್ನಿ. ಬರುವಾಗ ಗಿಫ್ಟ್‌ ಜೊತೆ ಮದುವೆಯಾಗಲು ಒಬ್ಬ ಹುಡುಗಿಯನ್ನೂ ಕರೆತನ್ನಿ!'

* `ಗ್ರಹಾಂ ಬೆಲ್‌ ಟೆಲಿಫೋನ್‌ ಕಂಡುಹಿಡಿದ, ಎಡಿಸನ್‌ ಎಲೆಕ್ಟ್ರಿಕ್‌ ಬಲ್ಬ್‌ ಕಂಡುಹಿಡಿದ, ಮಾರ್ಕೋನಿ ರೇಡಿಯೋ ಕಂಡುಹಿಡಿದ, ಕೊಲಂಬಸ್‌ ಅಮೆರಿಕಾ ಕಂಡುಹಿಡಿದ. ನೀನು ಮಾತ್ರ ಗೂಬೆ ಥರ ಎಸ್‌ಎಂಎಸ್‌ ನೋಡ್ತಾ ಇರು'.

* `ಸುನಾ ಹೈ ಆಪ್‌ ಕಿ ಸ್ಮೈಲ್‌ ಪರ್‌ ಲೋಗ್‌ ಮರ್ತೇ ಹೈ. ಸೋ ಕೀಪ್‌ ಸ್ಮೈಲಿಂಗ್‌ ಟು ರೆಡ್ಯೂಸ್‌ ಪಾಪ್ಯುಲೇಶನ್‌. ಸೇವ್‌ ಇಂಡಿಯಾ!'
* `ನೀವು ಪ್ರತೀದಿನ ಒಳ್ಳೆಯ ಆಹಾರ ತಿನ್ನಬೇಕು. ಏಕೆಂದರೆ ನೀವು ಬದುಕಬೇಕು. ಅದೇ ರೀತಿ ನೀವು ದಿನಾ ಬೆಳಿಗ್ಗೆ ಹಲ್ಲುಜ್ಜಿ ಸ್ನಾನ ಮಾಡಬೇಕು. ಯಾಕಂದ್ರೆ ನಾವೂ ಬದುಕಬೇಕು'.

* When pockets full of money, girls says u r my Tata, Birla. When pockets are empty, same girls says TATA BARLA?

* `ಪ್ರೀತಿಯ ಸೋದರ, ನನ್ನ ಗೆಳೆಯನ ಮೊಬೈಲ್‌ ಮೂಲಕ ನಿನಗೆ ರಾಖಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ. ಇಂತಿ ನಿನ್ನ ಪ್ರೀತಿಯ ಸಾನಿಯಾ ಮಿರ್ಜಾ'.

* `ಜಗತ್ತೇ ಒಂದು ಚಿತ್ರಮಂದಿರ. ನಮ್ಮ ಜೀವನವೇ ಸಿನಿಮಾ. ದೇವರೇ ನಿರ್ದೇಶಕ. ಪ್ರಕೃತಿಯೇ ನಿರ್ಮಾಪಕ. ನಾನು ಹೀರೋ, ಸಾನಿಯಾ ಮಿರ್ಜಾ ಹೀರೋಯಿನ್‌, ನೀನು ಕಾಮೆಡಿಯನ್‌.'

* `ಬಿ ಎ ಆಪಲ್‌ ಜ್ಯೂಸ್‌, ಬಿ ಎ ಮ್ಯಾಂಗೋ ಜ್ಯೂಸ್‌. ಬಟ್‌ ಡೋಂಟ್‌ ಬಿ ಎ ಕಂಜೂಸ್‌'.
***
ಕೆಲವು ಎಸ್‌ಎಂಎಸ್‌ಗಳು ಯಾವುದಾದರೂ ವಿಶೇಷ ದಿನಗಳ ಬಗ್ಗೆ ಇರಬಹುದು. ಇನ್ನೂ ಕೆಲವು ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತಿರುತ್ತವೆ. ಮತ್ತೂ ಕೆಲವು `ಆಟೋಗ್ರಾಫ್‌' ಪುಸ್ತಕಗಳಲ್ಲಿ ಕಾಣಸಿಗುವ ಫ್ರೆಂಡ್‌ಶಿಪ್‌, ಪ್ರೀತಿ, ಅಕ್ಕರೆಗೆ ಮೀಸಲಿಟ್ಟ ಸಂದೇಶಗಳಾಗಿರುತ್ತವೆ. ಅಂಥ ಒಂದು ಸಂದೇಶ ಹೀಗಿದೆ: Flower says touch me not. Leaves says pick me not. But I say forget me not. . ಕೆಲವು ಎಸ್‌ಎಂಎಸ್‌ಗಳು ವಿಸ್ತೃತ ಕಥಾರೂಪದಲ್ಲಿರುತ್ತವೆ. ಅಂಥ ಎಸ್‌ಎಂಎಸ್‌ಗಳ ರಚನೆಕಾರರ ಕೈಬೆರಳುಗಳಿಗೆ ವ್ಯಾಯಾಮ ಸಿಗುವುದರಲ್ಲಿ ಸಂದೇಹವೇ ಇರುವುದಿಲ್ಲ! ಎಸ್‌ಎಂಎಸ್‌ಗಳಲ್ಲಿ `ಪಿಕ್ಚರ್‌ ಮೆಸೇಜ್‌'ಗಳಿಗೂ ಮುಖ್ಯ ಸ್ಥಾನವಿದೆ. ಎಸ್‌ಎಂಎಸ್‌ನಲ್ಲಿ ಕನ್ನಡ ಭಾಷೆಯ ಬಳಕೆ ಸದ್ಯಕ್ಕೆ ಸಾಧ್ಯವಿಲ್ಲದಿದ್ದರೂ, ಇಂಥ ಪಿಕ್ಚರ್‌ ಮೆಸೇಜ್‌ಗಳ ರೂಪದಲ್ಲಿ ಕನ್ನಡ ಭಾಷೆಯೂ ಮೊಬೈಲ್‌ನಲ್ಲಿ ಕುಣಿದಾಡುತ್ತದೆ. ಹಾಗೆಯೇ ಮೊಬೈಲ್‌ನಲ್ಲಿರುವ ಅಕ್ಷರ, ಸಿಂಬಲ್‌ಗಳನ್ನೇ ಉಪಯೋಗಿಸಿ ವಿವಿಧ ಆಕೃತಿ ರಚಿಸುವ ಕಲಾಕಾರರೂ ಇದ್ದಾರೆ, ಆಧುನಿಕ ಶಾಯರಿ ರಚಿಸುವ ಪುಂಡರೂ ಇದ್ದಾರೆ!
ಇನ್ನು, ಎಸ್‌ಎಂಎಸ್‌ಗಳಲ್ಲಿ ಹರಿದಾಡುವ ಜೋಕ್‌ಗಳಿಗೇನೂ ಕೊರತೆಯಿಲ್ಲ. ಹೆಚ್ಚಿನ ಜೋಕ್‌ಗಳೆಲ್ಲ ಸರ್ದಾರ್‌ಜಿಗಳಿಗೆ ಸಂಬಂಧಿಸಿದ್ದು. ಪೋಲಿ, ಅಶ್ಲೀಲ ಜೋಕ್‌ಗಳಿಗೂ ಫಸ್ಟ್‌ ರ್ಯಾಂಕ್‌. ಇಂಥ ಜೋಕ್‌ಗಳಲ್ಲಿ ಬಹುತೇಕವು ಇಂಟರ್‌ನೆಟ್‌ನಿಂದ ಅಥವಾ ಪತ್ರಿಕೆಗಳಿಂದ, ಪುಸ್ತಕಗಳಿಂದ ನಕಲು ಮಾಡಿದಂಥವು. ಹಾಗಾಗಿ ಇಲ್ಲಿ ಯಾವುದೇ `ಕ್ರಿಯೇಟಿವ್‌' ಕೆಲಸ ಗೋಚರಿಸುವುದಿಲ್ಲ. ಆದಾಗ್ಯೂ, B.Ed ಎಂಬ ಶೈಕ್ಷಣಿಕ ಹಂತವನ್ನು `Bed' ಎಂದು ಬದಲಿಸುವ ತುಂಟ ಮನಸ್ಸುಗಳು ಅಶ್ಲೀಲತೆಯ ಆಚೆಗೆ ನಿಂತು ಆಪ್ತವಾಗಿಬಿಡುತ್ತವೆ.
***
ಲೇಖನ ಮುಕ್ತಾಯಕ್ಕೆ ಮುನ್ನ, ಒಂದು ಎಸ್‌ಎಂಎಸ್‌ನ ಹಳೆಯ ರೂಪ ಮತ್ತು ಅದರ ಇತ್ತೀಚಿನ ರೂಪದ ಬಗ್ಗೆ ಪ್ರಸ್ತಾಪಿಸಬೇಕು.
ಸಿನಿಮಾಗಳಲ್ಲಿ ಐಯಾಮ್‌ ಬಾಂಡ್‌, ಜೇಮ್ಸ್‌ ಬಾಂಡ್‌ ಎನ್ನುತ್ತಿದ್ದ ಜೇಮ್ಸ್‌ ಬಾಂಡ್‌, ವಿವಿಎಸ್‌ ಲಕ್ಷ್ಮಣ್‌ ಅವರನ್ನು ಭೇಟಿಯಾದ ಮೇಲೆ ಜೇಮ್ಸ್‌ ಬಾಂಡ್‌ ಅಂತಷ್ಟೇ ಹೇಳುತ್ತಿದ್ದಾನೆ ಎನ್ನುವುದು ಒಂದು ಎಸ್‌ಎಂಎಸ್‌ ಜೋಕ್‌ನ ಹಳೆಯ ರೂಪ. ಅದರ ಹೊಸ ರೂಪ ಹೀಗಿದೆ:
`ಜೇಮ್ಸ್‌ ಬಾಂಡ್‌ ಇತ್ತೀಚೆಗೆ ತನ್ನ ಹೆಸರನ್ನು ಬರೀ ಬಾಂಡ್‌ ಅಂತಷ್ಟೇ ಹೇಳುತ್ತಿದ್ದಾನಂತೆ, ಏಕೆ? ಏಕೆಂದರೆ, ಇತ್ತೀಚೆಗೆ ಆತ ಶ್ರೀಲಂಕಾಕ್ಕೆ ಹೋದಾಗ ಚಾಮಿಂಡ ವಾಸ್‌ ಪರಿಚಯವಾಯಿತು. ಎಂದಿನಂತೆ `ಐಯಾಮ್‌ ಬಾಂಡ್‌, ಜೇಮ್ಸ್‌ ಬಾಂಡ್‌' ಎಂದಾಗ ವಾಸ್‌ ತನ್ನನ್ನು ಪರಿಚಯಿಸಿಕೊಂಡ ಬಗೆ ಹೀಗಿತ್ತು: `ಐಯಾಮ್‌ ವಾಸ್‌... ಚಾಮಿಂಡ ವಾಸ್‌... ಜೋಸೆಫ್‌ ಚಾಮಿಂಡ ವಾಸ್‌... ಉಶಾಂತ ಜೋಸೆಫ್‌ ಚಾಮಿಂಡ ವಾಸ್‌... ಪಟಬೆಂಡಿಗೆ ಉಶಾಂತ ಜೋಸೆಫ್‌ ಚಾಮಿಂಡ ವಾಸ್‌... ವರ್ಣಪುರವೀರ ಪಟಬೆಂಡಿಗೆ ಉಶಾಂತ ಜೋಸೆಫ್‌ ಚಾಮಿಂಡ ವಾಸ್‌...!'
ಬಾಂಡ್‌ ಮೂರ್ಛೆ ತಪ್ಪದೇ ವಿಧಿ ಇಲ್ಲ!

2006 ಮಾರ್ಚ್ 12ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ

-ಸುರೇಶ್‌ ಕೆ.