ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಬರಹ

ಮಾತನ್ನು ಬಲ್ಲಾತಗೆ ಏತವದು ಸುರಿದಂತೆ
ಮಾತಾಡಲು ಅರಿಯದಾತಂಗೆ| ಬರಿ ಏತ
ನೇತಾಡಿದಂತೆ - ಸರ್ವಜ್ಞ

ಮೌನ ಜಗತ್ತಿನ ಸಮೃದ್ಧ ಭಾಷೆಯಾದರೂ ಮಾತೆಂಬುದು ಮನುಷ್ಯನಾದವನಿಗೆ ಮಾತ್ರ ಸಿದ್ಧಿಸಿದ ಕಲೆ. ಮಾತು ಮನಸ್ಸು ಅರಳಿಸುತ್ತದೆ, ಕೆರಳಿಸುತ್ತದೆ. ಸಂಬಂಧ ಬೆಳೆಸುವುದರ ಜೊತೆಗೆ ಸಂಬಂಧವನ್ನೂ ಮುರಿಯುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

ಸರ್ವಜ್ಞನ ವಚನ ಇದನ್ನೇ ಬಿಂಬಿಸಿದೆ. ಮಾತು ಬಲ್ಲಾತನಿಗೆ ಎಲ್ಲ ಕೆಲಸವೂ ಸುಲಭ. ಏಕೆಂದರೆ, ಆತ ವ್ಯಕ್ತಿಗಳೊಂದಿಗೆ ಸುಲಭವಾಗಿ ಬೆರೆಯುತ್ತಾನೆ. ಮನಸ್ಸು ಗೆಲ್ಲುತ್ತಾನೆ. ಭಿನ್ನಾಭಿಪ್ರಾಯಗಳನ್ನು ಇಲ್ಲವಾಗಿಸಿಕೊಂಡು, ತನ್ನ ಉದ್ದೇಶವನ್ನು ಸ್ಪಷ್ಟಪಡಿಸುತ್ತಾನೆ. ಏತದಿಂದ ನೀರು ಸುರಿಯುವಂತೆ ಸುಲಭವಾಗಿ ಮಾತು ಬಲ್ಲಾತ ಮಾತಾಡುತ್ತಾನೆ. ಅಂಥವರ ಮಾತು ಸಹಜವಾಗಿರುತ್ತದೆ. ನಂಬುವಂತಿರುತ್ತದೆ. ನಂಬಿಸುವಂತಿರುತ್ತದೆ.

ಆದರೆ, ಏನು ಮಾತಾಡಬೇಕು ಎಂಬುದು ಗೊತ್ತಿಲ್ಲದ ವ್ಯಕ್ತಿಯ ಸ್ಥಿತಿ ಖಾಲಿ ಏತದಂತೆ. ಅಲ್ಲಿಂದ ಏನೂ ಸುರಿಯದು. ಸುರಿದರೂ ಅದು ಪರಿಣಾಮಕಾರಿಯಾಗದು. ತನ್ನ ಮನಸ್ಸಿನಲ್ಲಿದ್ದುದನ್ನು ಸರಿಯಾಗಿ ಹೇಳಲಾಗದೇ ಅಂಥ ವ್ಯಕ್ತಿ ಇತರರ ಮನಸ್ಸಿನಲ್ಲಿ ಅಪಾರ್ಥ ಹುಟ್ಟಲು ಕಾರಣನಾಗಬಹುದು. ಅಥವಾ, ಅನುಮಾನ ಹುಟ್ಟಿಸಬಹುದು. ನಾಲಿಗೆಯಿಲ್ಲದ ಗಂಟೆಯಂತೆ, ಅವನ ಮಾತು ವ್ಯರ್ಥ.

- ಚಾಮರಾಜ ಸವಡಿ