ಜೀವ ಉಳಿಸಿದ ಬೋಸ್ ಹೆಡ್ ಫೋನ್ !!

ಜೀವ ಉಳಿಸಿದ ಬೋಸ್ ಹೆಡ್ ಫೋನ್ !!

ಟೈಟಲ್ ನೋಡಿ ವಿಚಿತ್ರ ಅನ್ನಿಸ್ತಾ? ಇದೊಂದು ತರಹ ವಿಚಿತ್ರದ ಘಟನೆ ಆದ್ರೂ ನಿಜ.

ಮೊನ್ನೆ ಮೊನ್ನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹತ್ತಿರ ಸಂಭವಿಸಿದ ಬಸ್ಸು-ಲಾರಿ ನಡುವಿನ ಭೀಕರ ಅಪಘಾತದಲ್ಲಿ ಆರು ಜನ ಸತ್ತು ಹಲವರು ಗಂಭೀರವಾಗಿ ಗಾಯಗೊಂಡರು. ಆ ನತದೃಷ್ಟ ಬಸ್ಸಿನಲ್ಲಿ ನನ್ನ ಗೆಳೆಯ ರವಿ ಕೂಡ ಬೆಂಗಳೂರಿನಿಂದ ತನ್ನೂರು ಹಾಸನಕ್ಕೆ ಹೊರಟಿದ್ದ.  ಆತನ ಜೀವ ಕಾಪಾಡಿದ್ದು ಬೋಸ್ ಕಂಪನಿಯ Noise Cancellation ಹೆಡ್ ಫೋನ್ ಅಂದರೆ ನಂಬೋಕೆ ಸ್ವಲ್ಪ ಕಷ್ಟ ಆಗುತ್ತೆ ಅಲ್ವಾ? ಆದ್ರೂ ಅದು ದಿಟ.

ಆಗಿದ್ದು ಏನಂದ್ರೆ, ರವಿ ಕಳೆದ ವರ್ಷ ತನ್ನ ಕಂಪನಿಯಿಂದ ಅಮೇರಿಕಕ್ಕೆ ಹೋಗಿದ್ದ. ಅಲ್ಲಿ ಬೋಸ್ ಕಂಪನಿಯ  Noise Cancellation ಹೆಡ್ ಫೋನ್ ಒಂದನ್ನು ಖರೀದಿಸಿದ್ದ. ಅದರ ಬೆಲೆ ಸುಮಾರು 15000 ರೂಪಾಯಿ. ಅದರ ವಿಶೇಷತೆ ಏನಂದ್ರೆ, ನೀವು ಎಂತದೇ ಗೌಜು-ಗದ್ದಲ-ಸದ್ದಿರುವ ಸ್ಥಳದಲ್ಲಿದ್ದರೂ,ಈ ಹೆಡ್ ಫೋನ್ ನಲ್ಲಿರುವ noise cancellation  ತಂತ್ರಜ್ಞಾನ ಆ ಸದ್ದಿನ ಒಂದು ಕಾಳಿನಷ್ಟನ್ನು ಒಳ ಬಿಡದೇ, ನಿಮಗೆ ಒಂದು ನಿಶ್ಯಬ್ದದ ಅನುಭವ ನೀಡುತ್ತೆ. ನಾನು ಅದಕ್ಕೆ 15000 ರೂಪಾಯಿ ಎಂದು ಕೇಳಿ, ಆತನಿಗೆ ಚೆನ್ನಾಗಿ ಉಗಿದೆ. ಅದು ಎಷ್ಟೇ ಚೆನ್ನಾಗಿದ್ದರೂ ಬರೀ ಒಂದು ಹೆಡ್ ಫೋನ್ ಗೆ 15000 ರೂಪಾಯಿ ಕೊಟ್ಟಿದ್ದು ಮೂರ್ಖತನ ಅನ್ನುವುದು ನನ್ನ ನಿಲುವಾಗಿತ್ತು.

ಆದ್ರೆ ಮೊನ್ನೆ ಸಂಭಿವಿಸಿದ ಆ ಅಪಘಾತದಲ್ಲಿ ನನ್ನ ಗೆಳೆಯನ ಜೀವ ಉಳಿಸಿದ್ದು ಅದೇ ಹೆಡ್ ಫೋನ್. ಬೆಂಗಳೂರಲ್ಲಿ ಬಸ್ಸು ಹತ್ತಿದ ರವಿ ತನ್ನ ಮ್ಯೂಸಿಕ್ ಪ್ಲೇಯರ್ ನಿಂದ ಹಾಡು ಹಾಕಿ ಬೋಸ್ ಹೆಡ್ ಫೋನ್ಸ್ ಹಾಕಿಕೊಂಡು ಕಣ್ಣು ಮುಚ್ಚಿ ಹಾಡು ಕೇಳುತ್ತಾ ಕುಳಿತಿದ್ದ. ಚನ್ನರಾಯಪಟ್ಟಣದ ಬಳಿ ಓವರಟೇಕ್ ಮಾಡೋ ಪ್ರಯತ್ನದಲ್ಲಿ  ಬಸ್ಸಿನ ಎದುರಿಗೆ ಒಂದು ತರಕಾರಿ ಲಾರಿ ಬಂದಿದೆ. ಅದು ಬರುತ್ತಾ ಇರೋದನ್ನು, ಹಾಗೂ ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆಯುವದನ್ನು ತಡೆಯಲು ಆಗದು ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಬಸ್ಸಲಿದ್ದ ಎಲ್ಲ ಪ್ರಯಾಣಿಕರು ಜೋರಾಗಿ ಕಿರುಚ್ಚುತ್ತ, ತಮ್ಮ ತಮ್ಮ ಸೀಟನಲ್ಲಿ ಎದ್ದಿದ್ದಾರೆ. ಆಗ ಸಂಭವಿಸಿದ ನೇರ ಢಿಕ್ಕಿಯಲ್ಲಿ ಬಸ್ಸಿನಲ್ಲಿದ ಐದು ಜನ ಮುಂದಿನ ಸೀಟ್ ನ ರಾಡ್ ಬಡಿದು ತೀವ್ರ ಏಟಾಗಿ ಹತರಾಗಿದ್ದಾರೆ. ಅವರೆಲ್ಲ ಅಷ್ಟು ಕಿರುಚಿದರೂ ನನ್ನ ಸ್ನೇಹಿತನಿಗೆ ಅದ್ಯಾವುದು ಕೇಳಿಸಿಲ್ಲ, ಹೀಗಾಗಿ ಢಿಕ್ಕಿ ಹೋಡೆದಾಗ ಈತ ನೇರವಾಗಿ ಮುಂದಿನ ಸೀಟ್ ನ ಕಬ್ಬಿಣದ ಹಿಡಿಕೆಗೆ ತಲೆ ಬಡಿಯದೇ, ಚಿಕ್ಕ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಅಪಘಾತದ ತೀವ್ರತೆಗೆ ಇತನ ಹೆಡ್ ಫೋನ್ ಎಗರಿ ತರಕಾರಿ ಚೀಲವೊಂದರ ಕೆಳಗೆ ಹೋಗಿ ಬಿದ್ದಿತಂತೆ.ಅದನ್ನು ಎತ್ತಿಕೊಂಡು, ಅಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದು ಹಾಸನಕ್ಕೆ ಮರಳಿದ್ದಾನೆ.ಬೆಂಗಳೂರಿಗೆ ಬಂದು ಈ ಘಟನೆಯನ್ನು ವಿವರಿಸಿದಾಗ ನಿಜಕ್ಕೂ ಚಕಿತನಾದೆ.  ನನ್ನ ಜೀವದ ಗೆಳೆಯನ ಜೀವ ಉಳಿಸಿದ ಬೋಸ್ ಹೆಡ್ ಫೋನ್ ಗೆ ಕೈ ಮುಗಿದೆ.

ತಂತ್ರಜ್ಞಾನ ಮನುಷ್ಯನ ಬಾಳನ್ನು ಸುಗಮವಾಗಿಸುವತ್ತ ಸಾಗುತ್ತಿರುವುದನ್ನು ನೋಡ್ತಾನೇ ಇದೀವಿ, ಅದರಲ್ಲಿ ಇದೊಂತರ ಹೊಸ ಅನುಭವ. ಏನಂತೀರಾ ಗೆಳೆಯರೇ ?

 

 

Rating
No votes yet

Comments