ನನ್ನ ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ?

ನನ್ನ ಪರಿಸ್ಥಿತಿಯಲ್ಲಿ ನೀವಿದ್ದರೆ ಏನು ಮಾಡ್ತಿದ್ರಿ?

ಬರಹ

ನಮಸ್ಕಾರ ಗೆಳೆಯರೆ/ಗೆಳತಿಯರೆ,

ನಾನಿವತ್ತು ನಿಮ್ಮ ಮುಂದೆ ಕೆಲವು ಘಟನೆಗಳನ್ನು ಹೇಳಲಿದ್ದೇನೆ, ತುಂಬಾ ನೊಂದು ಬರೆಯುತ್ತಿದ್ದೇನೆ, ಯಾಕೆ ನಮಗೆ ನಮ್ಮ ನಾಡಿನಲ್ಲೆ ಹೀಗಾಗುತ್ತೆ? ಯಾಕೆ ನಮಗೆ ಇದನೆಲ್ಲಾ ಪ್ರತಿಭಟಿಸೋಕೆ ಸಾಧ್ಯ ಆಗ್ತಿಲ್ಲ? ಅಥವ ಪ್ರತಿಭಟಿಸೋ ಮನೋಭಾವನೆಯೆ ನಮ್ಮ ಕನ್ನಡಿಗರಲ್ಲಿ ಇಲ್ಲವಾ ? ಕನ್ನಡಿಗರು ಹೇಡಿಗಳಾ? ಕನ್ನಡಿಗರಲ್ಲಿ ಒಗ್ಗಟ್ಟಿಲ್ಲವಾ?
ಘಟನೆ ಹೇಳುವುದಕ್ಕಿಂತ ಮುಂಚೆ ನನ್ನ ಹಿನ್ನಲೆಯನ್ನ ಸ್ವಲ್ಪ ಹೇಳಿಬಿಡ್ತಿನಿ, ನಾನು ವೃತ್ತಿಯಿಂದ ವೈದ್ಯೆ. ಚರ್ಮ ರೋಗ ತಜ್ಞೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಅಂದ್ರೆ ಪ್ರಾಣ, ಗೆಳತಿಯರು ನನ್ನ ಹುಚ್ಚಿ ಅಂತ ಕರಿತಿದ್ರು, ಗೇಲಿ ಮಾಡ್ತಿದ್ರು, ಅದ್ರೆ ಈ ಘಟನೆಗಳಾದ ಮೇಲೆ ನನ್ನ ಕನ್ನಡ ಪ್ರೀತಿ ಇನ್ನು ಹೆಚ್ಚಾಗಿದೆ.

ಘಟನೆ ೧)
ಸುಮಾರು ಎರಡು ವಾರಗಳ ಹಿಂದೆ ಅಂತರ್ ರಾಷ್ಟ್ರೀಯ ಮಟ್ಟದ ಚರ್ಮ ವೈದ್ಯರ ಸಮಾವೇಶವೊಂದು ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾಗಿತ್ತು ಆದರಲ್ಲಿ ನಾನೂ ಭಾಗವಹಿಸಿದ್ದೆ, ಅಲ್ಲಿ ಕಂಡ ವ್ಯವಸ್ಥೆ ನನ್ನನ್ನು ಮೂಕವಿಸ್ಮಿತ ಗೊಳಿಸಿತು. ಪ್ರತಿಯೊಂದು ಆಷ್ಟು ಅಚ್ಚುಕಟ್ಟಾಗಿತ್ತು. ಸಮಾವೇಶ ಆಯೋಜಿಸಿದ್ದ ಹೋಟೆಲ್ಲಿನಲ್ಲಿ ಪ್ರವೇಶ ಮಾಡಬೇಕಾದರೆ ಅಲ್ಲಿಯ ಕಾವಲುಗಾರ ಪ್ರೀತಿಯಿಂದ “ವಣಕ್ಕಂ” ಅಂತ ಅಂದ , ಕಾರ್ಯಕ್ರಮ ಸರಿಯಾದ ಸಮಯಕ್ಕೆ ಶುರುವಾಯಿತು. ಅಲ್ಲಿದ್ದ ನಿರೂಪಕರು ತಮಿಳು ಮತ್ತು ಆಂಗ್ಲಭಾಷೆಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದ ಸಚಿವರು ತಮಿಳಿನಲ್ಲೆ ನಿರರ್ಗಳವಾಗಿ, ಅರ್ಥಪೂರ್ಣವಾಗಿ ಭಾಷಣ ಮಾಡಿದರು. ಹೇಗೆ ಗೊತ್ತಾಯ್ತು ಅಂದುಕೊಂಡ್ರಾ? ಎಲ್ಲಾರಿಗು ಭಾಷಣದ ಆಂಗ್ಲ ಭಾಷೆಯ ಪ್ರತಿಯನ್ನು ನೀಡಿದ್ರು (ನಮ್ಮ ಬೆಂಗಳೂರಿನ ಐ ಐ ಎಂ ನಲ್ಲಿ ನಡೆದ ಶಾಸಕರ ತರಬೇತಿ ಕಾರ್ಯಕ್ರಮಕ್ಕೆ ಹೋಲಿಸಿ ನೋಡಿ. ನಮ್ಮ ಶಾಸಕರೊಬ್ಬರು ಕನ್ನಡದಲ್ಲಿ ಪಾಠ ಮಾಡಿ ಅಂತ ಅಂದಿದ್ದಕ್ಕ ಅವರನ್ನ ಹೀಯಾಳಿಸಿ ಪತ್ರಿಕೆಯಲ್ಲಿ ಬರೆಯಲಾಗಿತ್ತು). ಸಾಯಂಕಾಲದವರೆಗೂ ನಮ್ಮ ಸೆಮಿನಾರುಗಳು ನಡೆದವು. ಸಂಜೆ, ಎಲ್ಲ ಮುಗಿದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದವು. ಎಲ್ಲದರಲ್ಲೂ ತಮಿಳು ನಾಡಿನ ಸಂಸ್ಕೃತಿ ಬಿಂಬಿಸುವಂತಹ ಕಾರ್ಯಕ್ರಮಗಳು. ವಿದೇಶದಿಂದ ಬಂದಿದ್ದ ಮತ್ತು ಹೊರರಾಜ್ಯಗಳಿಂದ ಬಂದಿದ್ದ ನಮ್ಮಂಥವರಿಗೆಲ್ಲ ತಮಿಳುನಾಡಿನ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡಲಾಯಿತು.

ವಾಪಸ್ಸು ಬರುತ್ತಾ ವಿಮಾನದಲ್ಲಿ ಯೊಚಿಸುತ್ತಿದ್ದೆ. ಸುಮಾರು ೬ ತಿಂಗಳ ಹಿಂದೆ ಬೆಂಗಳೂರಿನ ಪಂಚತಾರ ಹೋಟೆಲಿನಲ್ಲಿ ಇಂತಹುದೆ ಒಂದು ಕಾರ್ಯಕ್ರಮವಿತ್ತು, ಅಲ್ಲಿಗೆ ನಮ್ಮ ರಾಜ್ಯದ ಪ್ರಮುಖ ಆಸ್ಪತ್ರೆಯ ಎಲ್ಲಾ ವೈದ್ಯರುಗಳು ಬಂದಿದ್ದರು, ಕಾರಣಾಂತರಗಳಿಂದ ನನಗೆ ಹೋಗುವುದಕ್ಕೆ ಆಗಿರಲಿಲ್ಲ. ಅಲ್ಲಿಗೆ ಬಂದಿದ್ದ ನಮ್ಮ ರಾಜ್ಯದ ಮಾನ್ಯ ಸಚಿವರೊಬ್ಬರು ತಮ್ಮ ಆಂಗ್ಲಭಾಷೆಯ ಪಾಂಡಿತ್ಯವನ್ನು ಪ್ರದರ್ಶಿಸಿದರು(ಬಂದಿದ್ದ ಎಲ್ಲಾ ವೈದ್ಯರು ಕರ್ನಾಟಕದವರೆ ಅಂತ ಗೊತ್ತಿದ್ದು !!), ಅಲ್ಲಿಯ ಆಯೋಜಕರು ಎಲ್ಲಾ ಆಂಗ್ಲಭಾಷೆಯಲ್ಲೆ ವಿವರಗಳನ್ನ ನೀಡೋಕೆ ಶುರುಮಾಡಿದಾಗ, ನನ್ನ ಹುಬ್ಬಳ್ಳಿಯ ವೈದ್ಯ ಸ್ನೇಹಿತ “ಸ್ವಾಮಿ ನಾವು ಹಳ್ಳಿಗರ ಜೊತೆ ವ್ಯವಹರಿಸೋಕೆ ಈ ವಿವರಗಳನ್ನ ಕನ್ನಡದಲ್ಲಿ ನೀಡಿ ಅಂತ ಕೇಳಿದ್ದಕ್ಕೆ ಏನೋ ಹಾರಿಕೆ ಉತ್ತರ ನೀಡಿ ಬಾಯಿ ಮುಚ್ಚಿಸಿದ್ರು”. ಎಲ್ಲಾ ಕಾರ್ಯಕ್ರಮಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದಿ ಹಾಡು ಹಾಕಿ ಎಲ್ಲಾರು ಕುಣೀಬೇಕು ಅಂತ ಅಪ್ಪಣೆ ಬೇರೆ (ಇದು ನಮ್ಮ ಸಂಸ್ಕೃತಿನಾ???). ಇದನ್ನ ನನ್ನ ಸ್ನೇಹಿತ ಪ್ರತಿಭಟಿಸಿದ್ದಕ್ಕೆ ಅಲ್ಲಿಯ ಆಯೋಜಕರು ಅವರಿಗೆ ಅವಮಾನ ಮಾಡಿದ್ದಾರೆ, ಅಲ್ಲೆ ಇದ್ದ ನಮ್ಮ ಕರ್ನಾಟಕದ ಇತರೆ ವೈದ್ಯರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರೇ ಹೊರತು ಅವನ ಸಹಾಯಕ್ಕೆ ಯಾರು ಹೋಗಲಿಲ್ಲ.
ಇದೇನಾ ನಮ್ಮ ಸಂಸ್ಕೃತಿ, ನಮ್ಮ ನೆಲದ ಗುಣ, ವಿಜಯನಗರವಾಳಿದ ನಾಡು, ಸಣ್ಣವಳಿರುವಾಗ ನಮ್ಮ ಮೇಷ್ಟ್ರು ಕನ್ನಡ ರಾಜ್ಯವಾಳಿದ ವೀರರ ಹೆಸರು, ಅವರ ವೀರಗಾಥೆಗಳನ್ನ ಹೆಮ್ಮೆಯಿಂದ ಹೇಳ್ತಿದ್ರು. ಅಂಥ ನೆಲದಲ್ಲಿ ಈ ಮಟ್ಟಿಗಿನ ಅಭಿಮಾನ ಶೂನ್ಯತೆ ನೋಡಿ ಮನಸ್ಸಿಗೆ ನೋವಾಯಿತು. ವಿಮಾನದಲ್ಲಿದ್ದ ಪರಿಚಾರಿಕೆ “Madam Would you like to read news paper” ಅಂತ ಅಂದಾಗ ವಿಜಯ ಕರ್ನಾಟಕ ಅಂತ ಬಾಯಿಗೆ ಬಂದಿದ್ದ ಮಾತು ಈ ವಿಮಾನದಲ್ಲಿ ಸಿಗೋಲ್ಲ ಅಂತ ಗೊತ್ತಾಗಿ ಮನಸ್ಸು ಇನ್ನಷ್ಟು ಘಾಸಿಗೊಂಡಿತು. ಹಾಗೆ ಸುಮ್ನೆ ಕಣ್ಣು ಮುಚ್ಚಿ ಕುಳಿತೆ.

ಘಟನೆ ೨)
ಸುಮಾರು ೫ ದಿನಗಳ ಹಿಂದೆ ನಡೆದ ಘಟನೆ, ನಮ್ಮ ಆಸ್ಪತ್ರೆಗೆ ಒಂದು ಕೇಸ್ ಬಂದಿತ್ತು, skin grafting ಗೆ ಸಂಭಂಧಿಸಿದ್ದು, ಸರಿ ನಾನು ಆ ಪೇಶಂಟ್ ನೋಡಿದೆ, ಆಕ್ಸಿಡೆಂಟ್ ಕೇಸ್, ಗಟ್ಟಿಯಾದ ನೆಲಕ್ಕೆ ಪಾದ ತರುಚಿ ಅಲ್ಲಿ ಚರ್ಮ ಬೆಳೆಯೋದಕ್ಕೆ ಸಾಧ್ಯವಿರಲಿಲ್ಲ. ಆವಾಗ ಬೇರೆ ಭಾಗದ ಚರ್ಮ ತಗೆದು ಅಲ್ಲಿಗೆ ಕಸಿಮಾಡಲಾಗುತ್ತದೆ. ನಾನು ಆ ವ್ಯಕ್ತಿಯನ್ನ ಪರೀಕ್ಷಿಸುತ್ತ ಕನ್ನಡದಲ್ಲಿ ಪ್ರಶ್ನೆ ಕೇಳಿದೆ. ಅದಕ್ಕೆ ಅವನು ಉತ್ತರ ಕೊಡಲಿಲ್ಲ, ಕನ್ನಡ ಗೊತ್ತಿಲ್ಲ ಅಂತ ಕನ್ನಡದಲ್ಲೆ ಅಂದ. ಅವನ ಆಡು ಭಾಷೆ ತಮಿಳು ಅಂತ ಗೊತ್ತಾಯಿತು. ಸರಿ ಹಾಗಾಗಿ ಆಂಗ್ಲ ಭಾಷೆಯಲ್ಲೆ ಪ್ರಶ್ನೆ ಕೇಳಿದೆ ಅದಕ್ಕೆ ಅವನ ಜೊತೆ ಬಂದವನು ತಮಿಳಿನಲ್ಲಿ ಮಾತನಾಡಿ ಅಂತ ತರಲೆ ಮಾಡಿದ. ನನಗೆ ತಮಿಳು ಬರಲ್ಲ, ಕನ್ನಡ ಅಥವ ಆಂಗ್ಲದಲ್ಲಿ ಮಾತನಾಡಿ ಅಂದಿದಕ್ಕೆ, ಬಾಯಿ ಮುಚ್ಚಿಕೊಂಡು ಕೂತ್ಕೊ ಅಂತ ಕೆಟ್ಟ ಪದ ಬಳಸಿ ಬೈದ. ಆ ಮನುಷ್ಯ ಅನಾಗರಿಕನಂತೆ ನನ್ನ ಮೇಲೆ ಕೂಗಾಡಿ ಅಲ್ಲಿ ದೊಡ್ಡ ಸೀನ್ ಕ್ರಿಯೇಟ್ ಮಾಡಿಬಿಟ್ಟ. ಸರಿ ನನಗೆ ಸಿಟ್ಟು ನೆತ್ತಿಗೇರಿತು, ನಾನು ಈ ಕೇಸ್ ಅಟ್ಟೆಂಡ್ ಮಾಡಲ್ಲ ಅಂತ ಹೇಳಿ, ಈ ಘಟನೆ ಬಗ್ಗೆ ನಮ್ಮ ಆಸ್ಪತ್ರೆಯ ಅಧಿಕಾರಿಗೆ ದೂರು ನೀಡಿದೆ. ಅವರು ಸ್ಥಳಕ್ಕೆ ಬಂದು ವಿಚಾರಿಸಿದರು, ನಾನು ಏನಾಯಿತು ಅನ್ನೋದನ್ನ ವಿವರಿಸಿ ಹೇಳಿದೆ, ಅಷ್ಟರಲ್ಲೆ ಆ ವ್ಯಕ್ತಿ ಯಾರಿಗೋ ಫೋನ್ ಮಾಡಿ ನಮ್ಮ ಅಧಿಕಾರಿಗೆ ನೀಡಿದ, ಮಾತನಾಡಿದ ನಂತರ ನನ್ನ ಹಿರಿಯ ಅಧಿಕಾರಿ ಶೋಭಾ ಆಗಿದ್ದು ಆಗಿ ಹೋಯಿತ ಸಂಭಾಳಿಸಿಕೊಂಡು ಹೋಗಿ ಅಂದ್ರು ಇವರು ಮಂತ್ರಿಯ ಸಂಭಂಧಿಕರು ಆಗಲ್ಲ ಅಂತ ಹೇಳಿದ್ರೆ ನಮ್ಮ ಸಂಸ್ಥಗೆ ತೊಂದ್ರೆ ಆಗುತ್ತೆ, You have to attend the case and it’s my order ಅಂತ ಮುಖದ ಮೇಲೆ ಹೇಳಿ ಹೋದ್ರು, ಅಲ್ಲಿದ್ದವರಿಗೆಲ್ಲರಿಗೂ ಏನಾಗಿದೆ ಅಂತ ಗೊತ್ತು ಆದ್ರು ಯಾರು ನನ್ನ ಸಹಾಯಕ್ಕೆ ಬರಲಿಲ್ಲ. ನಮಗ್ಯಾಗೆ ಬೇಕು ಅನ್ನೋ ಮನೋಭಾವನೆ. ಅಲ್ಲಿ ಬಹಳಷ್ಟು ಜನ ಕನ್ನಡಿಗರಿದ್ದರು, ನನಗೆ ಬೈದು ಹೋದ ನನ್ನ ಅಧಿಕಾರಿ ಕೂಡ ಕನ್ನಡವರೇ, ಎಲ್ಲರ ಮುಂದೆ ಅಳಬಾರದು ಅನ್ನೋ ಒಂದೆ ಕಾರಣಕ್ಕೆ ಅಲ್ಲಿಂದ ಓಡಿಬಂದೆ. ಯಾಕೆ ಹೀಗೆ, ಅಲ್ಲಿದ್ದ ನನ್ನ ಸಹೊದ್ಯೋಗಿಗಳು, ಅಲ್ಲಿದ್ದ ಬೇರೆ ಕನ್ನಡಿಗರು ಯಾಕೆ ನನ್ನ ಪರವಾಗಿ ಒಂದು ಮಾತನಾಡ್ಲಿಲ್ಲ?

ಎಲ್ಲಾರು ಸಹಾನುಭೂತಿ ತೋರಿಸ್ತಾರೆ ಹೊರತು, ಇರೋ ಸ್ಥಿತಿಯನ್ನ ಅರಿತು ಪ್ರತಿಭಟಿಸೋಕೆ ತಯಾರಾಗೋಲ್ಲ. ನನ್ನ ಸುತ್ತಲಿದ್ದ ಜನರೆಲ್ಲರ ಮಧ್ಯೆ ನಾನು ಒಂಟ್ಟಿ ಹೆಣ್ಣು ಅನ್ನಿಸಿಬಿಡ್ತು. ಇಂತಹುದೇ ಘಟನೆ ಬೇರೆ ರಾಜ್ಯದಲ್ಲಿ ನಿರೀಕ್ಷಿಸೋದಕ್ಕೆ ಸಾಧ್ಯವಾ? ಅಲ್ಲಿಯ ವೈದ್ಯರಿಗೆ ಹೀಗೆ ಅವಮಾನ ಅದ್ರೆ ಅಲ್ಲಿಯವರು ಸುಮ್ಮನಿರ್ತಾರ?

ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ ಇದೆ ಅನ್ನೋ ಮಾತನ್ನ ಮೇಲಿನ ಎರಡು ಘಟನೆಗಳನ್ನ ನೋಡಿದ್ರೆ ಗೊತಾಗುತ್ತೆ. ಅಲ್ಲಿದ್ದ ಎಲ್ಲರೂ ಪ್ರತಿಭಟಿಸಿದ್ದರೆ ಕನ್ನಡವನ್ನ, ಮತ್ತು ಪರೋಕ್ಷವಾಗಿ ಕನ್ನಡಿಗರನ್ನ ಅವಮಾನಿಸಿದವನಿಗೆ ಸರಿಯಾಗಿ ಪಾಠ ಕಲಿಸಬಹುದಿತ್ತು. ಕನ್ನಡವನ್ನು ಅವಮಾನಿಸೋದು, ಹೆತ್ತ ತಾಯಿಯನ್ನು ಅವಮಾನಿಸೋದು ಎರಡೂ ಒಂದೇ ಎಂದು ನಂಬಿರುವವಳು ನಾನು. ಈ ರೀತಿ ನನ್ನೂರಲ್ಲೇ ನನ್ನ ಭಾಷೆಗೆ, ನಮ್ಮತನಕ್ಕೆ ಧಕ್ಕೆ ಬಂದಾಗಲೂ ಧ್ವನಿ ಎತ್ತದಷ್ಟು ಅಭಿಮಾನಶೂನ್ಯತೆ ಕನ್ನಡಿಗರಲ್ಲಿ ಅದು ಹೇಗೆ ತುಂಬಿತು? ಕನ್ನಡಿಗರ ಒಗ್ಗಟ್ಟು ಮಾತ್ರ ಇದೆಕ್ಕೆಲ್ಲ ಪರಿಹಾರ ಅನ್ನೋದು ನನ್ನ ಅನಿಸಿಕೆ. ಅದು ಯಾವತ್ತಿಗಾದರೂ ಬಂದೀತಾ ಅನ್ನೋದೆ “Million Dollar” ಪ್ರಶ್ನೆ.