ಸಂಪದ ಸಂವಾದದ ಸವಿ ಸಂಜೆ

ಸಂಪದ ಸಂವಾದದ ಸವಿ ಸಂಜೆ

ಬರಹ

ಎಳೆಗಳೆಲ್ಲವ ಸೇರಿಸಿ ಎಳೆದ ಇನಿದಾದ ಸಂಜೆ ಅದಾಗಿತ್ತು. ಆಕಸ್ಮಿಕವಾಗಿ ಸಂಪದದ ಕೆಲ ಗೆಳೆಯರಿಗೆ ಹೊಳೆದ ಸಮ್ಮಿಲನ ಯೋಚನೆ  "ಸಂಪದ ಸಂವಾದ" ಕಾರ್ಯಕ್ರಮವಾಗಿ, ಇಂಟರ್ನೆಟ್ ಎಂಬಲ್ಲಿ ಬ್ಲಾಗ್ ನೊಂದಿಗೆ ಕಟ್ಟಿ ಕೊಂಡಿರುವ ಕಾಲ್ಪನಿಕ ಲೋಕದಿಂದ ನಮ್ಮನ್ನೆಲ್ಲ (ಎಲ್ಲ ಸಂಪದಿಗರನ್ನ)ಹೊರತಂದು ಮುಖಾಮುಖಿ ಭೇಟಿಗೆ, ಮಾತುಕತೆಗೆ ಅನುವು ಮಾಡಿಕೊಡಲೊಂದು ಮುನ್ನುಡಿ ಬರೆದಿದೆ.


ಇದ್ದಕ್ಕಿದ್ದಂತೆ ಹಾಕಿಕೊಂಡ ಕಾರ್ಯಕ್ರಮಕ್ಕೆ  ಯಾರಾದ್ರೂ ಬರ್ತಾರ್ಯೆ? ಎಂದು ಮಾತಾಡ್ಕೊಳ್ತಿದ್ದ  ವಿಷಯಕ್ಕೆ ಇಲ್ಲಿ ಉತ್ತರ ದೊರಕಿತ್ತು. ಹಾಸನದಿಂದ  ನಮ್ಮನ್ನೆಲ್ಲ ಕಂಡು ಮಾತನಾಡಿಸಲು ಬಂದ ಹರಿಹರಪುರಶ್ರೀಧರ್ ರವರ ಉತ್ಸಾಹದ ಮುಂದೆ ನಮ್ಮ ಉತ್ಸಾಹ ಎಲ್ಲಿಗೂ ಎಣೆಯಿಲ್ಲ.

ಅಲ್ಲಿ ಬಂದದ್ದಾಯಿತು. ವಕಾರ್ಡ್ ಆಸ್ಪತ್ರೆಯ ಹಿಂದಿದ್ದ  ಐ.ಟಿ ಫಾರ್ ಛೇಂಜ್ ಕಚೇರಿಗೆ ಹೋಗ್ಬೇಕಾದ್ರೆ ನಾವೇನು ಆಸ್ಪತ್ರೆಗೆ ಬಂದ್ವಾ? ಅಂತ ಅಂದ್ಕೊಂಡು ಐದನೇ ಮಹಡಿಗೆ ಹೋಗಿ ಮತ್ತೆ  ವಾಪಸ್ ಮೂರನೇ ಮಹಡಿಗೆ ಬಂದು ಎಲ್ಲಾರನ್ನ ನೋಡಿ ಪರಿಚಯ ಮಾಡಿಕೊಂಡ ನಂತರ ಎಲ್ಲರ ಮುಖದಲ್ಲಿ ಒಂದೇ ಪ್ರಶ್ನೆ, ಏನಕ್ಕೆ ಸೇರಿದ್ದೇವೆ ಅಂತ. ಸರಿ, ಪರಸ್ವರ  ಮುಖತ: ಭೇಟಿ, ಪರಿಚಯ ಅದಾಯ್ತಲ್ಲ. ಇನ್ನೇನು? ಆಗ ಶುರುವಾಯ್ತು ನೋಡಿ ಯಾಕೆ ನಾವು ಸಂಪದಕ್ಕೆ ಬಂದ್ವಿ, ಹ್ಯಾಗೆ?ಆಮೇಲೆ , ಸಂಪದ ಹ್ಯಾಗೆ ಶುರುವಾಯಿತು, ಯಾರು, ಉದ್ದೇಶ ಏನಿತ್ತು ಅಂತ ಮಾತಾಡ್ಕೊ ಹೊತ್ತಿಗೆ ಅದರ ಅಂತರಾಳವ ಕೆದಕಿ ತೆಗೆಯೋ ಕೆಲಸ ಆಗಿತ್ತು. ನಾವು ಬಳಸುತ್ತಿರುವ ತಂತ್ರಾಂಶ, ಯಾವುದು ಸುಲಭ, ಇಂಟರ್ನೆಟ್ ನ ಸುತ್ತ ಮುತ್ತಲಿನ ವಿಷಯಗಳು, ಸ್ವತಂತ್ರ ತಂತ್ರಾಂಶ, ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಎಲ್ಲವನ್ನ ಸಾಂಸಾರಿಕ ಮಾತುಕತೆಯಂತೆ ಸಂಪದದ ಗೆಳೆಯರು ಹಂಚಿಕೊಳ್ಲಿಕ್ಕೆ ಶುರು ಮಾಡಿಕೊಂಡ್ರು.
ಆರೋಗ್ಯಕರ ಸಂವಾದದ ಜೊತೆಗೆ ಅನಾರೋಗ್ಯದ ವಿಚಾರವಾಗಿ, ಅದಕ್ಕೆ ಮದ್ದನ್ನ ಹ್ಯಾಗೆ ಎಲ್ಲಿ ಕಂಡು ಹಿಡಿಯೋದು ಅಂತ ಹುಡುಕಿ. ಅದು ನಮ್ಮ ಹಿತ್ತಲಲ್ಲೇ ಇರುವ ವಿಚಾರವನ್ನೂ ಕೆತ್ತಿ ಕೆದಕಿ ನೋಡಿದ್ದಾಯಿತು.

ಮುಂದೇನು, ಸಂಪದಕ್ಕೆ ಯಾವುದಾದರೂ ರೂಪದಲ್ಲಿ ನಾವು ಕಾಣಿಕೆಯನ್ನ ನೀಡ ಬಹುದಾ? ಟೆಕ್ನಾಲಜಿ ಮಟ್ಟದಲ್ಲಾಗದಿದ್ದರೂ ಇನ್ಯಾವುದಾದರೂ ರೀತಿ ನಾವೂ ನಮ್ಮನ್ನೂ ತೊಡಗಿಸಿ ಕೊಳ್ ಬಹುದಾ ಅಂದದಕ್ಕೆ ಸಂಪದದ ಹರಿಕಾರ ಹರಿಪ್ರಸಾದ್ ನಾಡಿಗ್, ನೀವು ಇಲ್ಲಿ ಸೇರಿದ್ದೇ ಒಂದು ಹೊಸ ಕೆಲಸ, ಸಂಪದವನ್ನ ಉಪಯೋಗಿಸಿಕೊಂಡು ಅದರ ಮೂಲ ಉದ್ದೇಶವನ್ನ ಸಾಕಾರ ಗೊಳಿಸುವಲ್ಲಿ ಸಹಕರಿಸಿದ್ದೀರಿ, ನಿಮ್ಮ ಸಮುದಾಯವನ್ನ ನಿಮ್ಮ ಇಚ್ಚಾನುಸಾರ ಬೆಳಸಲಿಕ್ಕೆ ನೀವೂ ಮುಂದೆ ಬರಬಹುದು ಅದನ್ನ ಮುಂದೆ ನೆಡೆಸ್ಕೊಂಡು ಹೋಗಬಹುದು ಎಂದು ತಿಳಿಸಿದ್ದಾಯಿತು. ಸಂಪದದ ಎಲ್ಲರನ್ನೂ ಒಮ್ಮೆ ಕರೆಯೋಣ ಅಂದಾಗ, ಅದರ ಸುತ್ತಮುತ್ತ ನೆಡೆದ ವಿಚಾರ ವಿನಿಮಯ ಚಿಕ್ಕ ಮತ್ತು ಚೊಕ್ಕವಾದ ಇಂದಿನಂತಹ ಭೇಟಿಯೇ ಚೆಂದ ಅಂತ  ಆ ಚರ್ಚೆಗೆ ಅಂತ್ಯವನ್ನ ಹಾಡಿತು.

ಈ ರೀತಿ ಸಂಪದದಲ್ಲಿ ಬರೆಯುತ್ತಿರುವ ಅನೇಕ ಕನ್ನಡಿಗರನ್ನ ಸಿಗುವ ಅವಕಾಶ ಮತ್ತೆ ಮತ್ತೆ ಸಿಗಲಿ ಎಂದು ಆಶಿಸುತ್ತ, ಕಾರ್ಯಕ್ರಮವನ್ನ ಆಯೋಜಿಸಿದ ನಾಗರಾಜ್, ರಾಕೇಶ್ ಮತ್ತು ಅರವಿಂದರಿಗೆ ಬೆನ್ತಟ್ಟುತ್ತಾ, ಭೇಟಿಯಾದ ಎಲ್ಲ ಸಂಪದಿಗರಿಗೆ ಸಂಪದದಲ್ಲಿ ಹೊಸ  ಸಂಚಯನಕ್ಕೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳನ್ನ ತಿಳಿಸುತ್ತ

ನಿಮ್ಮ
ಓಂಶಿವಪ್ರಕಾಶ್.

ಕೆಳಗೆ ಈ ಕಾರ್ಯಕ್ರಮದ ಕೆಲ ಚಿತ್ರಗಳಿವೆ :

ಅ)

 

 

 

 

 

 

 

 

 

 

 

 

 

ಆ)

ಇ)

ಈ)

 

 

ಇತರೆ ಇಲ್ಲಿವೆ. ನಿಮ್ಮಲ್ಲಿರುವ ಚಿತ್ರಗಳನ್ನು ಕಳಿಸಿದರೆ ಚೆನ್ನ :)