ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !

ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !

ಬರಹ

ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !
ಸಾರಾಂಷ :
ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ 'ಅನುಸಂಧಾನದ ಪ್ರಮಾಣ,' "ದೈತ್ಯಾಕಾರ," ವಾಗಿರುವುದು ಕಂಡು ಬರುತ್ತದೆ. ೧೯೧೨ ರಲ್ಲಿ, ಡಾ. ಬಾಲ್ಸ್ ನಿಂದ ಆರಂಭವಾಗಿ ಇಂದಿನವರೆಗಿನ ಕಾರ್ಯವಿಧಾನಗಳನ್ನು, ಅಂದರೆ, ನಿರಂತರವಾಗಿ ಬೆಳೆಯುತ್ತಿದ್ದ, ಹತ್ತಿಯ ಮರಗಳನ್ನು ಮೆಳೆಗಳಲ್ಲಿ ಅಥವ ಪೊದೆಗಳಲ್ಲಿ ಪರಿವರ್ತಿಸಿ, ವಾರ್ಷಿಕ ಫಸಲನ್ನಾಗಿಸಿದ್ದು, ಹತ್ತಿಯ ತಂತುಗಳಲ್ಲಿ ತಂದ ಅನೇಕ ಉತ್ತಮ ಗುಣಗಳು, (ತಂತುಶಕ್ತಿ, ತಂತು ಮಹೀನತೆ, ತಂತುಗಳ ಉದ್ದದಲ್ಲಿ ವೃದ್ಧಿ,) ಇತ್ಯಾದಿಗಳು, 'ಸಸ್ಯವಿಜ್ಞಾನ'ದ ಬೆಳವಣಿಗೆಯೆಂದೇ ಗುರುತಿಸಬಹುದು ! 'ವಂಶವಾಹಿನಿ ವಿಜ್ಞಾನ ಶಾಸ್ತ್ರ' ಬೆಳಕಿಗೆ ಬರುವ ಮೊದಲೇ, 'ಅರಿವಿಲ್ಲದೆ ಆದ' ಈ ಎಲ್ಲಾ ಬೆಳವಣಿಗೆಗಳೂ, ಸ್ತುತ್ಯಾರ್ಹ ! ಭಾರತದಲ್ಲಿ ೭೦ ರ ದಶಕದಲ್ಲಿ ರೂಪಗೊಂಡ 'ಹಸಿರು ಕ್ರಾಂತಿ'- ನೀರಾವರಿ, ರಸಗೊಬ್ಬರ, ಕೀಟನಾಶಕಗಳಿಗೆ ಒತ್ತು ಕೊಟ್ಟಿತ್ತು. ಹತ್ತಿಯ ಬೆಳೆಯೂ ಸೇರಿದಂತೆ ಆಹಾರಧಾನ್ಯಗಳಲ್ಲಿ ಆದ ಪ್ರಚಂಡ ಹೆಚ್ಚುವರಿ ಉತ್ಪಾದನೆ ಹೊಸ ಮೈಲಿಗಲ್ಲುಗಳನ್ನು ನಿರ್ಮಾಣಮಾಡಿದುದು ಸರ್ವ ವಿದಿತ. ಆದರೆ ದಿನಕಳೆದಂತೆ, ಮೇಲೆ ತಿಳಿಸಿದ ಬೆಳೆ ಸಂವರ್ಧಕ ಪರಿಕರಗಳನ್ನು ಅನಿರ್ಭಂಧಿತ ಪ್ರಮಾಣದಲ್ಲಿ ಬಳಕೆಮಾಡಿದ್ದರಿಂದ, ಪರಿಸರ ಮಾಲೀನ್ಯವಾಗಿ ಮಣ್ಣಿನಲ್ಲಿ ಕ್ಷಾರತೆ ಜಾಸ್ತಿಯಾಗಿ, ಇಳುವರಿಯಲ್ಲಿ ಗಮನಾರ್ಹ ವೃದ್ಧಿ ಕಾಣಲಿಲ್ಲ. ಕೆಲವು ಕಡೆ ಕಡಿಮೆಯಾದ ಸಂಗತಿಗಳೂ ಬೆಳಕಿಗೆ ಬಂತು. ವಿಜ್ಞಾನಿಗಳು ಇದನ್ನು ಗಮನಿಸುತ್ತಿದ್ದು, 'ಜೈವಿಕ ತಂತ್ರಜ್ಞಾನ'ವನ್ನು ವಿಕಸಿತಗೊಳಿಸಿದರು. ಭಾರತದಲ್ಲಿ ೬ ವರ್ಷಗಳಿಂದ ಪ್ರಚಲಿತವಿರುವ ಈ ತಂತ್ರಜ್ಞಾನದ ಶಿಶು ಅಂಬೆಗಾಲಿಟ್ಟು, ಎದ್ದು ಬಿದ್ದು ನಡೆಯಲು ಕಲಿತು, ಈಗ ಓಡಲು ಸನ್ನದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನದ, ಛತ್ರಛಾಯೆಯ ಅಡಿಯಲ್ಲಿ ಅನುವಂಶಿಕೀ ಅಭಿಯಂತಿಕೆಯನ್ನು ಬಳಸಿ ತಯಾರಿಸಿದ ಸಿದ್ಧ ವಸ್ತುವೇ 'ಬೀ.ಟಿ' ಹತ್ತಿ ! ಹೆಚ್ಚು ಲಾಭ, ಕೀಟನಾಶಕಗಳ ಉಪಯೋಗದಲ್ಲಿ ಉಳಿತಾಯ ! ಈ ಸಂಗತಿಗಳೇ ೯ ರಾಜ್ಯಗಳ ರೈತರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಅವರೇ ಮುಂದೆಬಂದು ಜೈವಿಕ ತಂತ್ರಜ್ಞಾನದ ಕೂಸಾದ, ಬೀ.ಟಿ. ಹತ್ತಿಯನ್ನು ಸ್ವಾಗತಿಸುತ್ತಿದ್ದಾರೆ !

ಪಾರಂಪರಿಕ 'ಜೈವಿಕ ತಂತ್ರ ಜ್ಞಾನ' ಮನುಕುಲಕ್ಕೆ ಹೊಸದೇನಲ್ಲ. ಎಂದಿನಿಂದಲೋ ರೂಢಿಯಲ್ಲಿತ್ತು ಎಂಬುದು ಸರ್ವರಿಗೂ ತಿಳಿದಿರುವ ಸಂಗತಿ. ಉದಾ; ಹಾಲಿನಿಂದ ಮೊಸರು ಮಾಡುವುದು, ದ್ರಾಕ್ಷೀ ಹಣ್ಣಿನಿಂದ ಮದ್ಯಸಾರ ತಯಾರಿಸುವುದು ಇತ್ಯಾದಿ. ಆದರೆ, ಪ್ರಸಕ್ತ, ಆಧುನಿಕ ಜೈವಿಕ ತಂತ್ರಜ್ಞಾನ, ಅತ್ಯಂತ ಪರಿಷ್ಕೃತ, ವಂಷವಾಹಿ ತತ್ವಗಳ ಮೇಲೆ ನಿಂತಿದ್ದು, ವೈಜ್ಞಾನಿಕ ಕ್ಷೇತ್ರದ ಹಲವು ಪ್ರಮುಖ ಶಾಖೆಗಳಾದ ಸೂಕ್ಷ್ಮ ಜೀವಶಾಸ್ತ್ರ, ಜೀವ ರಸಾಯನ ಶಸ್ತ್ರ, ಸಸ್ಯ ಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ಭೌತ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಿವಿಧ ತರಹದ ಗಣಕಯಂತ್ರ ವಿಜ್ಞಾನದ ಜ್ಞಾನ, ಹಾಗೂ ಕ್ಷಿಪ್ರವೇಗದ ಅಂತರ್ಜಾಲ, ಇದರೊಂದಿಗೆ ಹೊಂದಿಕೊಂಡ ವಿಷ್ವ ಮಾಹಿತಿ ಜಾಲಗಳ ಬಳಕೆಯಿಂದಾದ ಗಮನಾರ್ಹ ಪ್ರಗತಿಯಿಂದ, ಕೃಷಿ ಕೈಗಾರಿಕೆ ಕ್ಷೇತ್ರಗಳಿಗೆ ವರದಾನವಾಗಿರುವುದು ಹೆಮ್ಮೆಯ ವಿಶಯ. ಬೀ.ಟಿ. ಹತ್ತಿ ಶಾಶ್ವತವಾಗಿ ನೆಲೆಗೊಳ್ಳಬಲ್ಲ ಕೃಷಿ ವ್ಯವಸ್ಥೆ ಎಂಬುದು ಖಚಿತವಾಗುತ್ತಾ ಇದೆ. ವಿಶ್ವದ ರೈತರೆಲ್ಲಾ ಜೈವಿಕ ವೈಜ್ಞಾನಿಕ ಪದ್ಧತಿಯ ಬಗ್ಗೆ ತೀವ್ರವಾದ ಆಸಕ್ತಿ ತೋರಿಸುತ್ತಿದ್ದು ಈಗ ಅದು ಭಾರತದ ರೈತರ ಗಮನವನ್ನೂ ಸೆಳೆಯುತ್ತಿದೆ ! ಪ್ರಗತಿಯ ಜೊತೆಗೆ ಹಣೆಗೆ ಅಂಟಿಕೊಂಡ ಅಪವಾದಗಳ ಸುರುಳಿ ಪಟ್ಟಿಗಳಿಗೇನೂ ಕೊರತೆಇಲ್ಲ. ಅವುಗಳ ಸೂಕ್ಷ್ಮಪರಿಚಯವೇ ಈ ಲೇಖನ ಬರೆಯಲು ಪ್ರೇರಣೆ, ಎಂದರೆ ತಪ್ಪಿಲ್ಲ !

ಬೀ.ಟಿ ಹತ್ತಿಯ ಬೆಳವಣಿಗೆ, ಭಾರತದಲ್ಲೇ ಏಕೆ, ಅಮೆರಿಕದಂತಹ ಪ್ರಗತಿಶೀಲದೇಶದಲ್ಲಿಯೂ ಪಾದಾರ್ಪಣೆಮಾಡಿದ್ದೂ ಈ ಒಂದು ದಶಕದ ಹಿಂದೆ, ಎಂದರೆ ಆಶ್ಚರ್ಯವಿಲ್ಲ. ಬೀ.ಟಿ. ಹತ್ತಿಯ ತಂತ್ರಜ್ಞಾನದ ಹಿಂದೆ, ಜೈವಿಕತಂತ್ರಜ್ಞಾನದ ಶಾಖೆಗಳಲ್ಲಿ ಒಂದಾಗಿರುವ ಸಸ್ಯ 'ಅಂಗಾಂಷ ಕೃಷಿ'ಯ ತತ್ವಗಳನ್ನು ಉಪಯೋಗಿಸಿ ಬೆಳೆಸಿದ 'ಟ್ರಾನ್ಸ್ ಜೆನಿಕ್' ಸಸ್ಯಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ತಂದಿವೆ. ಹತ್ತಿಯೂ ಸೇರಿದಂತೆ ಅನೇಕ ಬೆಳೆಗಳು; ಉದಾ: ಅಕ್ಕಿ, ಮೆಕ್ಕೆಜೋಳ, ಸೊಯಾಬೀನ್, ಪಪ್ಪಯ್ಯ, ಆಲೂಗೆಡ್ಡೆ, ಟೊಮ್ಯಾಟೊಗಳು ವಿಶ್ವದಾದ್ಯಂತ ಈಗಾಗಲೆ ಕೃಷಿ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿವೆ.
೧೯೮೩ ರಲ್ಲೇ 'ಸಸ್ಯ ಅಂಗಾಂಶ ಕೃಷಿ' ಮತ್ತು 'ಅನುವಂಷಿಕ ಅಭಿಯಂತಿಕೆ'ಗಳನ್ನು ಅಳವಡಿಸಿಕೊಂಡು ತಂಬಾಕಿನ 'ಟ್ರಾನ್ಸ್ ಜೆನಿಕ್' ಸಸ್ಯಗಳನ್ನು ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಈ ವಿಧಾನದಿಂದ ಬ್ಯಾಕ್ಟೀರಿಯ, ವೈರಸ್ ಅಥವಾ ಪ್ರಾಣಿಗಳ ವಿಶಿಷ್ಟ ಗುಣ ಹೊಂದಿರುವ ವಂಶವಾಹಿನಿಯನ್ನು, ಬೇರ್ಪಡಿಸಿ ನಮಗೆ ಬೇಕಾಗಿರುವ ಜೀವಕೋಶದ ಮೂಲ ವರ್ಣ ತಂತುಗಳಿಗೆ ಸಂಯೋಜಿಸಿ ಈ ಸಂಯೋಜಿಸಲ್ಪಟ್ಟ ಜೀವಕೋಶದಿಂದ ವಿಶಿಷ್ಠ ಗುಣ ಹೊಂದಿರುವ ಸಸ್ಯಗಳನ್ನುಪಡೆಯ ಬಹುದು. ಈ ವಿಧಾನದಿಂದ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಶೇಷ ಲಾಭ ಉಂಟಾಗಿದೆ. 'ಬೀ.ಟಿ. ಹತ್ತಿ' ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ !
ಇಂದು ದೇಶದ ಜನಜೀವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ, ಹಲವು ವಿರೋಧಾಭಾಸಗಳ ಕೇಂದ್ರ ಬಿಂದುವಾಗಿದ್ದಾಗ್ಯೂ, ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ, ಬೀ.ಟಿ. ಹತ್ತಿಯ 'ಸಾಧಕ ಬಾಧಕ' ಗಳನ್ನು ತಿಳಿಯುವುದು ಅತಿ ಮುಖ್ಯ.

ಪೀಟಿಕೆ:
ಹತ್ತಿ, ನಮ್ಮ ಭಾರತೀಯ ಜೀವನದ ಅವಿಭಾಜ್ಯ ಅಂಗ ! ಋಗ್ವೇದದಲ್ಲಿ, ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿಯೂ, ಹತ್ತಿಯ ಉಲ್ಲೇಖವಿದೆ ! ಹತ್ತಿ ಬೆಳೆಯ ಸಾಗುವಳಿ, ಮತ್ತು ಅದರೊಂದಿಗೆ ಸೇರಿದ ಹತ್ತಿಯ ನೂಲುವ, ನೂಲಿನಿಂದ ವಸ್ತ್ರ ತಯಾರಿಸುವ ಕಲೆ, ವಸ್ತ್ರ ವಿನ್ಯಾಸ, ಬಣ್ಣಹಾಕುವ, ಮುದ್ರಿಸುವ ಕಲೆ, ಜಗತ್ತಿಗೆ ತಿಳಿದದ್ದು 'ಮೂರ್' ಜನರಿಂದ. ೧೭ ಮತ್ತು ೧೮ನೇ ಶತಮಾನದಲ್ಲಿ, ಮೊಘಲರ, ನಂತರ, ಪೋರ್ಚುಗೀಸ್, ಬ್ರಿಟಿಷ್, ಡಚ್, ಫ್ರೆಂಚರು, ಭಾರತದ ಗ್ರಾಮೋದ್ಯೋಗಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. 'ಢಾಕಾಮಸ್ಲಿನ್' ಬಟ್ಟೆ, 'ಕ್ಯಾಲಿಕೋ', 'ಇಂಡಿಗೋ' ಮುಂತಾದ ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದ ಅರಿವೆಗಳು, ಯೂರೋಪಿನ ಪ್ರಮುಖ 'ಆಮದಿನ' ವಸ್ತುಗಳಾದವು ! (ಕಳೆದ ದಶಕದಲ್ಲಾದ ಸಂಶೋಧನೆಯಿಂದ ದಕ್ಷಿಣ ಅಮೆರಿಕದ 'ಇಂಕ' ಜನರ ಸಂಸ್ಕೃತಿ ಭಾರತಕ್ಕಿಂತಲೂ ಬಹಳ ಪುರಾತನವೆಂದು ಗೊತ್ತಾಗಿದೆ' ! ಹತ್ತಿಯಿಂದ ತಯಾರಾದ ವಸ್ತ್ರಗಳನ್ನು ನೋಡಿದಾಗ, ಬಟ್ಟೆ ನೇಯುವ ಕಲೆಯಲ್ಲಿ ಅವರಿಗಿದ್ದ 'ಪ್ರಾವೀಣ್ಯತೆ' ಯ ಅರಿವಾಗುತ್ತದೆ. ಹಿಮಯುಗದಲ್ಲಿ ಈ ಸಂಸ್ಕೃತಿ ಪ್ರವರ್ಧಮಾನದಲ್ಲಿತ್ತೆಂದು ವಿಜ್ಞಾನಿಗಳ ಅಭಿಪ್ರಾಯ.) ಯೂರೋಪಿಯನ್ನರು ನಮ್ಮ ದೇಶದ ಹತ್ತಿ ಉತ್ಪನ್ನಗಳು, ರೇಶ್ಮೆ, ಸಾಂಬಾರ ಪದಾರ್ಥಗಳು, ಕರಕುಶಲ ವಸ್ತುಗಳಿಗೆ ಮನಸೋತಿದ್ದರು. ಅವರಿಗೆ ಉಣ್ಣೆ, ಹಾಗೂ ಲಿನನ್ ನಾರಿನಿಂದ ತಯಾರಿಸಿದ ವಸ್ತ್ರಗಳ ಬಗ್ಗೆ ಮಾತ್ರ ಗೊತ್ತಿತ್ತು. ಅಂದಿನ ದಿನಗಳಲ್ಲಿ ಯೂರೋಪಿನ ಮಹತ್ವಾಕಾಂಕ್ಷಿ ಯುವಕರು, ತಾವು ಅನೇಕ ಪ್ರವಾಸಿಗಳಿಂದ ಕೇಳಿ ತಿಳಿದಿದ್ದ, ಮಾಹಿತಿಗಳಿಂದ ಪ್ರಭಾವಿತರಾಗಿ, ಭಾರತ ಮತ್ತು ಚೈನ ದೇಶಗಳಲ್ಲಿ ಪ್ರವಾಸಮಾಡುವುದೂ ಅಲ್ಲಿನ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವುದು, ತಮ್ಮ ಜೀವನದ ಧ್ಯೇಯವೆಂದು ತಿಳಿದಿದ್ದರು. ಹತ್ತಿಯ ಬಗ್ಯೆ, "ಕುರಿಯತುಪ್ಪಟದಂತಹ, ಮೃದುವಾದ, 'ಶುಭ್ರ ಬಿಳಿಯ ಉಣ್ಣೆ,'ಯನ್ನು ಹೊತ್ತ ಮರಗಳು, ನೋಡಲು ಅದೆಶ್ಟು ಚೆಂದ," ! ಇದು ಬಿಳಿಯರು ಹತ್ತಿಯನ್ನು ನೋಡಿ, ಅಭಿವ್ಯಕ್ತಿಸುತ್ತಿದ್ದ ಬಗೆ. ! ಕೊಲಂಬಸ್ ಕೂಡ, 'ಭಾರತ' ಮತ್ತು 'ಚೀನ' ಗಳನ್ನು ಕಾಣಲು ಉತ್ಸುಕನಾಗಿ ಹೊರಟಿದ್ದವನು, 'ವೆಸ್ಟ್ ಇಂಡೀಸ್' ದ್ವೀಪಗಳಲ್ಲಿ ಹೊಕ್ಕು, 'ಅಮೆರಿಕ' ಖಂಡವನ್ನು ಕಂಡುಹಿಡಿದನು.

ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಪರಿಗಣಿಸಿ, ಪ್ರಗತಿಶೀಲವಾಗಿರುವ ದೇಶಗಳು :

ಪ್ರಪಂಚದಲ್ಲಿ ಇಂದು ಸುಮಾರು ೮೦ ಕ್ಕಿಂತಾ ಹೆಚ್ಚು ರಾಶ್ಟ್ರಗಳು ಹತ್ತಿಯನ್ನು ವಾಣಿಜ್ಯೋದ್ಯಮವಾಗಿ ಬೆಳೆಯುವುದನ್ನು ಆರಂಭಿಸಿದ್ದಾರೆ. ಭಾರತವೂ ಸೇರಿದಂತೆ, ಉತ್ತರಾರ್ಧ ಗೋಳದ ಭೂಭಾಗದ ದೇಶಗಳು, ವಿಶ್ವದ ಅರಳೆ ಉತ್ಪಾದನೆಯ ಶೇ. ೬೫% ಕ್ಕಿಂತಾ ಹೆಚ್ಚು ಅರಳೆಯನ್ನು ಉತ್ಪಾದಿಸುತ್ತವೆ. ಭಾರತ ಅತಿ ಹೆಚ್ಚಿನ ಪ್ರದೇಶದಲ್ಲಿ (೯ ಮಿ. ಹೆಕ್ಟೇರ್) ಹತ್ತಿಯನ್ನು ಬೆಳೆದರೂ, ಉತ್ಪಾದನೆಯಲ್ಲಿ, ಮೂರನೆಯ ಸ್ಥಾನ ದಲ್ಲಿದೆ. ಚೀನ, ಅಮೆರಿಕಾಸಂಯುಕ್ತ ಸಂಸ್ಥಾನಗಳ ನಂತರ. ಉತ್ಪಾದನೆ ಸರಾಸರಿ ೩೨೦ ಕೆ ಜಿ./ಪ್ರತಿ ಹೆ. ಅತಿಕಡಿಮೆ.(೨೦೦೧-೨೦೦೨ ರ ಪ್ರಕಾರ)
ಭಾರತ ಸುಮರು ೩೦ ಲಕ್ಷ ಟನ್, ಪ್ರತಿ ವರ್ಷ ಹತ್ತಿ ಉತ್ಪಾದನೆ ಮಾಡುತ್ತಿದೆ. ಹತ್ತಿಯ ಜೊತೆಗೆ ಸೇರಿದ, ಎಣ್ಣೆ ತಯಾರಿಕೆ, ವಸ್ತ್ರೋದ್ಯಮ, ಉಪಕೈಗಾರಿಕೆಗಳಾದ, ಪೇಪರ್, ಬಯೋ ಗ್ಯಾಸ್, ಆಹಾರಕ್ಕೆ ಉಪಯೋಗಿಸಲ್ಪಡುವ ಅಣಬೆಗಳು, ಇತ್ಯಾದಿ; ಇತ್ಯಾದಿ. ವಸ್ತ್ರೋದ್ಯಮವಂತೂ, ಅನೇಕ ಉಪಶಾಖೆಗಳ ಆಗರಗಳ ಒಂದು 'ಬೃಹತ್ ಕೈಗಾರಿಕೆ.' ! ಇದರ ವ್ಯಾಪ್ತಿ ಬಲು ವಿಸ್ತಾರವಾದದ್ದು ! ಸುಮಾರು ೬೦ ಮಿ. ಜನರ ಜೀವನ- ಹತ್ತಿ ಬೆಳೆಯುವ, ಮಾರುವ, ಇಲ್ಲವೇ ವಸ್ತ್ರೋದ್ಯಮ, ಯಂತೋಪಕರಣಗಳ ತಯಾರಿಕೆ, ಶಿಕ್ಷಣ, ಅನುಸಂಧಾನಗಳಮೇಲೆ ಅವಲಂಭಿಸಿರುವುದನ್ನು ಗಮನಿಸಬಹುದು.
ಭಾರತದಲ್ಲಿ ಹತ್ತಿ ಬೆಳೆಯುವ ಪ್ರದೇಶಗಳನ್ನು ೩ ವಿಭಾಗಗಳಲ್ಲಿ ಗುರುತಿಸಬಹುದು. ಉತ್ತರ ಭಾರತದಲ್ಲಿ ಯು.ಪಿ, ರಾಜಾಸ್ಥಾನ, ಹರಿಯಾಣ, ಪಂಜಾಬ್; ಮಧ್ಯಭಾರತದಲ್ಲಿ, ಎಮ್.ಪಿ, ಮಹಾರಾಷ್ತ್ರ, ಗುಜರಾಥ್, ದಕ್ಷಿಣಭಾರತದಲ್ಲಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು.

ಭಾರತದ ಜನರ ವಸ್ತ್ರ ಪೂರೈಕೆ ಗಾಗಿ ಹತ್ತಿಬೆಳೆಯ 'ಉತ್ಪಾದನಾಸಾಮರ್ಥ್ಯ' ಹೆಚ್ಚಿಸುವಲ್ಲಿ ಬಾಧಕವಾಗಿರುವ ಹಲವು ತೊಡಕುಗಳು :

ಪ್ರಮುಖ ಸಮಸ್ಯೆಗಳೆಂದರೆ, ಹೆಚ್ಚುತ್ತಲೇ ಇರುವ ಅಗಾಧ ಜನಸಂಖ್ಯೆ ; ೧.೦೮ ಬಿಲಿಯನ್ ನಿಂದ ೧.೫೦ ಬಿಲಿಯನ್ ಕೆಲವೇ ವರ್ಷಗಲ್ಲೇ ಆಗುವ ಸಂಭವವಿದೆ. ಈ ಬೃಹತ್ ಜನಸಮುದಾಯಕ್ಕೆ ಅನ್ನ/ಬಟ್ಟೆಯ ಪೂರೈಕೆ ಒಂದು ದೊಡ್ಡಸವಾಲೇ ಸರಿ ! ಬೇಸಾಯ ಮಾಡುವ ಜಾಗ ಕ್ರಮೇಣ ಕ್ಷೀಣಿಸುತ್ತಿದೆ. ಬರ, ಅತಿವೃಶ್ಟಿ, ಇತ್ತೀಚಿನ ಪ್ರಕೃತಿ ವಿಕೋಪಗಳಾದ, 'ಭೂಕಂಪ,''ಸೋನಾಮಿ,' ಇತ್ಯಾದಿ; ಈಗ, ಅನೇಕ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಬಡಜನರ ದಿನಕೆಲಸದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಹೇಗೆ ? ಎನ್ನುವುದೇ ಒಂದು ಪ್ರಮುಖ ಸವಾಲು ! ಹತ್ತಿ ಬೆಳೆಯಲ್ಲಿ ಕಾಲಕಾಲಕ್ಕೆ ತಗಲುವ ಕ್ರಿಮಿ ಕೀಟಗಳ ಸಂಖ್ಯೆ ಅಪಾರ. ಈ ಪಿಡಿಗು, ಭಾರತವೂ ಸೇರಿದಂತೆ, ವಿಶ್ವದ ಕ್ರುಷಿಕರ ನಿದ್ದೆ ಕೆಡಸಿದೆ ! ಸುಮಾರು ೧೬೨ ಪ್ರಜಾತಿಯ ಕ್ರಿಮಿಕೀಟಗಳಿವೆ, ಅದರಲ್ಲಿ ೧೫ ಅತಿ ಘಾತಕವೆಂದು ಪರಿಗಣಿಸಲಾಗಿದೆ. ಅವುಗಳಲ್ಲಿ, ಜ್ಯಾಸಿಡ್ಸ್, ಅಫಿಡ್ಸ್, ಬಿಳಿನೊಣ, ಸ್ಪಾಟೆಡ್ ಬೋಲ್ವರ್ಮ್, ದೊಡ್ಡ ಬೋಲ್ವರ್ಮ್, ಅಮೆರಿಕನ್ ಬೋಲ್ವರ್ಮ್ ; ಅಮೆರಿಕನ್ 'ಬೋಲ್ವರ್ಮ್'ಗಳ ಪಾತ್ರ ಅತಿ ದೊಡ್ಡದು ! ಎಶ್ಟು ಕೀಟನಾಷಕ ಸಿಂಪಡಿಸಿದರೂ ಕೀಟಗಳು ಸಾಯುತ್ತಲೇಯಿರಲಿಲ್ಲ. ಇನ್ನೂ ಇತರ ಕೀಟಗಳಾದ, ಬ್ಯಾಕ್ಟೀರಿಯಲ್ ಬ್ಲಾಯ್ಟ್, ಫ್ಯೂಸೋರಿಯಮ್ ಕಳೆ, ಆಲ್ಟೆರ್ ನೇರಿಯ ಲೀಫ್ ಸ್ಪೊಟ್, ಗ್ರ್ಯೆ ಮಿಲ್ಡ್ಯು, ಮತ್ತು, ಎಲೆ ಮುದುರಿಕೊಳ್ಳುವ ವೈರಸ್ ಇತ್ಯಾದಿ; ಇವೂ ಬೆಳೆಯ ಹಾನಿಗೆ ಕಾರಣಗಳಾಗಿವೆ. ಕೀಟನಾಷಕಗಳು ಬಹಳ ದುಬಾರಿ ಕೂಡ. ಅದಕ್ಕಾಗಿಯೇ ಜೈವಿಕ ತಂತ್ರಜ್ಞಾನ ಬಳಸಿ ಸಸ್ಯಗಳ ತಳಿ ಅಭಿವೃದ್ಧಿ ಮತ್ತು ಹೊಸ ತಳಿಗಳ ಉತ್ಪಾದನೆಯಲ್ಲಿ ವಿಜ್ಞಾನಿಗಳು ಅನೇಕವರ್ಷಗಳಿಂದ ದುಡಿಯುತ್ತಿದ್ದು ಈಗ ಯಶಸ್ವಿಯಾಗಿದ್ದಾರೆ. ಅಮೆರಿಕದ 'ಮೋನ್ಸ್ಯಾಂಟೋ' ಎಂಬ ಖಾಸಗಿ ಸಂಸ್ಥೆ, ಯೂ.ಎಸ್.ಡಿ.ಎ, ಜೊತೆಗೆ ಸೇರಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವೆ, ಬೀ.ಟಿ, ಹತ್ತಿಯ ಮೂಲ ರೂಪ ! ಅಮೆರಿಕಾ ತಾನು ಕಂಡುಹಿಡಿದ ಯಶಸ್ವೀ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಅನೇಕ ರಾಷ್ತ್ರಗಳು ಒಪ್ಪಿಕೊಂಡಿವೆ. ಅದನ್ನು ಅನುಸರಿಸಿ ಯಶಸ್ಸು ಕಂಡ ದೇಶಗಳೆಂದರೆ, ಅರ್ಜೆಂಟೈನಾ, ಆಸ್ಟ್ರೇಲಿಯ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಚೀನ, ಇಂಡೊನೇಷಿಯ, ದಕ್ಷಿಣ ಆಫ್ರಿಕ, ಮೆಕ್ಸಿಕೊ, ಸೋವಿಯೆತ್ ರಶ್ಯ, ಝಿಂಬಾಬ್ವೆ. ಕಳೆದ ೨-೩ ವರ್ಷದಿಂದ ಭಾರತದಲ್ಲೂ ರೈತರು ತಮ್ಮ ಹೊಲಗಳಲ್ಲಿ ಬೀ.ಟಿ.ಹತ್ತಿಯ ಸಾಗುವಳಿಮಾಡಿರುವುದು ಬೀ.ಟಿ. ಹತ್ತಿಯ ಒಂದು ದಿಟ್ಟ ಹೆಜ್ಜೆಯೇ ಸರಿ !
ಜಗತ್ತಿನ ಹತ್ತಿ ಬೆಳೆಯ ಗುಣ ಸುಧಾರಿಸುವ ಕಾರ್ಯದಲ್ಲಿ ಅಮೆರಿಕ ಮಂಚೂಣಿಯಲ್ಲಿದೆ. "ಸುಮಾರು ೧೦೦ ವರ್ಷಗಳ ಸತತ ಸಂಶೋಧನೆಗಳ ಫಲವಾಗಿ ಅಮೆರಿಕ ಈ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆದಿದೆ". 'ಪಿಮಾ ಹತ್ತಿ' ಅಮೆರಿಕದ ಅತ್ಯಂತ ಶ್ರೇಷ್ಟ ಹತ್ತಿಗಳಲ್ಲೊಂದು ! ಇದು 'ಈಜಿಪ್ಷಿಯನ್ ಹತ್ತಿ'ಯಂತೆ ಗುಣಮಟ್ಟ ಪಡೆದಿದೆ. ಮೊದಲೇ ಬೇಡಿಕೆ ಸಲ್ಲಿಸಿದರೆ, ಕೇಳಿದಶ್ಟು ಪ್ರಮಾಣದಲ್ಲಿ ಒದಗಿಸಲ್ಪಡುವ ದಾಖಲೆ ಸ್ಠಾಪಿಸಿದೆ. ವಿಶ್ವದಲ್ಲಿ ಬೆಳೆಯುವ ೯೬% ಗಿಂತ ಹೆಚ್ಚು ಭಾಗ 'ಅಮೆರಿಕನ್ ಅಪ್ಲ್ಯಾಂಡ್, ಅಥವಾ, ಜೀ. ಹರ್ಸುಟಮ್ ಹತ್ತಿಯ ತಳಿಗಳೇ' ಎಂದರೆ, ಆಶ್ಚರ್ಯವಿಲ್ಲ !

ಭಾರತದಲ್ಲಿ ಬೀ.ಟಿ. ಹತ್ತಿ :
ಬೀ.ಟಿ. ಹತ್ತಿಯನ್ನು ಭಾರತದ ಕೃಷಿ ಕ್ಷೇತ್ರಕ್ಕೆ ಪರಿಚಯಿಸಿದ ಶ್ರೇಯ ಮಹಾರಾಷ್ಟ್ರದ, ಮ.ಹೈ.ಕಂ ಗೆ ಹೋಗಬೇಕು! ಡಾ. ಬರವಲೆಯವರ ನೇತೃತ್ವದಲ್ಲಿ ಮಹಾರಾಶ್ಟ್ರವೂ ಸೇರಿದಂತೆ ಭಾರತದ ರೈತರಿಗೆ ಹತ್ತಿ, ತರಕಾರಿ, ಕಾಳುಗಳು, ಎಣ್ಣೆಕಾಳುಗಳು, ಶುಧ್ಧ ಬೀಜಗಳನ್ನು ಒದಗಿಸುತ್ತಾ ಬಂದಿದೆ. (ಸುಮಾರು ೪ ದಶಕಗಳಿಂದ) ದೇಷದ ಒಟ್ಟು ಕೃಷಿಗೆ ಉಪಯೋಗವಾಗುವ ಕೀಟನಾಷಕದ ೫೦% ಹತ್ತಿ ಬೆಳೆಗೇ ಆಗುತ್ತಿತ್ತು. ಹತ್ತಿ ಬೆಳೆಯಲ್ಲಿ ಕಂಡುಬರುವ ಕೀಟಗಳು ೫೦ ರಿಂದ ೬೦% ಫಸಲುಗಳನ್ನು ನಾಷಪಡಿಸುತ್ತಿತ್ತು. ಪಾರಂಪರಿಕವಾಗಿಯು ಇವನ್ನು ತಡೆಗಟ್ಟಲು ಪವ್ಡರ್ ಅಥವ ಹರಳು ಗಳರೂಪದಲ್ಲಿ ನೀರಿನಲ್ಲಿ ಬೆರಸಿ ಫಸಲಿನ ಮೇಲೆ ಸಿಂಪಡಿಸುತ್ತಿದ್ದರು. ಅದು 'ಬೋಲ್ವರ್ಮ್' ಗಳ ಸಂಪರ್ಕಕ್ಕೂ ಬರುತ್ತಿರಲಿಲ್ಲ. ಹಾಗಾಗಿ ಸತತ ಅನುಸಂಧಾನದ ಫಲದಿಂದ 'ಬೇಸಿಲಸ್ ಥುರಿಂಗೆನಿಸಿಸ್' ಎಂಬ ಸಾಮಾನ್ಯ ಬ್ಯಾಕ್ಟೀರಿಯ ಮಣ್ಣಿನಲ್ಲಿ ದೊರೆಯಿತು. ಇದರಲ್ಲಿ ಉತ್ಪತ್ತಿ ಯಾಗುವ ಒಂದು ವಿಷೇಷ ಪ್ರೋಟಿನ್, ಬೋಲ್ವರ್ಮ್ ನಂತಹ ಕೀಟಗಳಿಗೆ ಮಾರಕ ವಾಗಿದೆ. ಆದರ ಜೀನ್ ಹೈಬ್ರಿಡ್ ಗಿಡದಲ್ಲಿ ಹಾಕುತ್ತಾರೆ. ವಿಜ್ಞಾನಿಗಳು ಇದನ್ನು, ಜರ್ಮನಿಯ, 'ತುರಿಂಗಿಯ', ಪ್ರಾಂತ್ಯ ದಿಂದ ಐಸೊಲೇಟ್ ಮಾಡಿದ್ದರಿಂದ ಈ ಹೆಸರು ಬಂದಿದೆ ! ಅದು ಬೋಲ್ವರ್ಮ್ ಗಳಿಗೆ'; ಸಿಂಹ ಸ್ವಪ್ನ.' ಕೀಟಗಳು ಸಾಯುತ್ತವೆ. ರೈತರ ಭವಿಷ್ಯ ಉತ್ತಮವಾಗಲಿದೆ. ೧೯೯೩ ರಲ್ಲಿ ಮಹಾರಾಷ್ಟ್ರ ಮಹೈಕೊ ಮತ್ತು ಅಮೆರಿಕಾದ 'ಮೋನ್ಸ್ಯಾಂಟೊ' ಎಂಬ ಕಂಪೆನಿಗಳು ಜೊತೆಗೂಡಿ ಅಮದು ಮಾಡುವ ಮಂಜೂರಾತಿ ಪದೆದುಕೊಂಡರು. ಬೀ.ಟೀ.ಜೀನ್ ಅನ್ನು ಮ.ಹೈ.ಕಂ ಯ, ೩ ಹೈಬ್ರಿಡ್ ಗಳಲ್ಲಿ ಹಾಕಲಾಯಿತು. ಅಲ್ಲಿಂದ ಶುರುವಾದ ಮಹತ್ವದ ಸಂಶೋಧನೆಗಳು ಇಂದಿನವರೆಗೂ ನಡೆಯುತ್ತಿವೆ. ಸರಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಹತ್ತಿ ಗುಣ ವಿಕಾಸ ನಿಯಂತ್ರಣ ಸಮಿತಿಗಳೂ, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಖಾತೆಗಳೂ ಮೌಲ್ಯಮಾಪನ ಮಾಡಿದವು. ಅಲ್ಲಿಂದ ಕ್ರಮವಾಗಿ ಮಾಡಿದ ಅಧ್ಯಯನ ಭೊಜನ, ಮೇವು, ಪರಿಸರ ಪರೀಕ್ಷೆಗಳು. ಬೀ.ಟಿ ಹತ್ತಿಯ ಪ್ರಥಮ ಪರೀಕ್ಷೆ, ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ, ನಡೆಯಿತು. ಬೀ.ಟಿ. ಹತ್ತಿ ಜೈವಿಕ ತಂತ್ರಜ್ಞಾನದ ಬಳಕೆಯಿಂದಾದ ಪ್ರಥಮ ಫಸಲಾಗಿದೆ. ಇದರ ಯಶಸ್ಸು ಬೇರೆ ಫಸುಲಗಳಿಗೆ ಬೀ.ಟಿ. ಜೀನ್ ಅಳವಡಿಸಲು ಪ್ರೇರಣೆ ನೀಡುವಂತಾಗಬೇಕಾಗಿದೆ.
ಹತ್ತಿ ಗುಣ ನಿಯಂತ್ರಣ ಹಾಗೂ ವಿಕಾಸ ಮಂಡಳಿಗಳು ಐ.ಸಿ.ಎ.ಅರ್ /ಸಿ.ಎಸ್.ಐ.ಅರ್ ಜೊತೆಗೆ ಜಂಟಿಯಾಗಿ ಅನೇಕ ಮೌಲ್ಯಮಾಪನ ಸಮಿತಿಗಳನ್ನು ರಚಿಸಿದ್ದು, ಅವುಗಳ ಅಧ್ಯಯನ ಪ್ರತಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಯ ಎಲ್ಲಾ ಹಂತದಲ್ಲೂ ನಡೆಸುತ್ತವೆ. ದೊಡ್ಡಪ್ರಾಣಿಗಳು, ಚಿಕ್ಕ ಪ್ರಾಣಿಗಳು, ಜಲಚರಗಳನ್ನು ಒಳಗೊಂಡಿವೆ. ಜಿ.ಇ.ಎ.ಸಿ ಕೊನೆಗೆ ಎಲ್ಲಾ ಮೌಲ್ಯಮಾಪನದ ಸಮೀಕ್ಷಣೆಗಳ ವರದಿಗಳ ಆಧಾರದಮೇಲೆ, ಐ.ಸಿ.ಆರ್.ಟಿ, ಐ.ಸಿ.ಎ.ಆರ್ ಜೊತೆಗೆ ಸಮಾಲೋಚನೆ ನಡೆಸಿ, ಮಾರುಕಟ್ಟೆಗಳಿಗೆ 'ವಾಣಿಜ್ಯ ಫಸಲಾಗಿ' ಬಿಡುಗಡೆ ಮಾಡುತ್ತದೆ. ಜಾನುವಾರುಗಳ ಆರೋಗ್ಯ ರಕ್ಷಣೆ, ಮೇವು, ಪರಿಸರ ಸಂರಕ್ಷಣೆಗಳಂತಹ ಪರೀಕ್ಷೆಗಳಲ್ಲಿ ತೇರ್ಗಡೆಯಾದನಂತರ, ೨೦೦೧-೦೨ ರಲ್ಲಿ, ೩ ಹೈಬ್ರಿಡ್ ಗಳನ್ನು ೩ ವರ್ಷಗಳಿಗೆ ವಾಣಿಜ್ಯ ಫಸಲನ್ನಾಗಿ ಬಿಡುಗಡೆ ಮಾಡಲಾಯಿತು. ರೈತರಿಗೆ, ರೂ. ೭,೦೦೦-ರಿಂದ ರೂ. ೧೧,೦೦೦/ಹೆ, ಲಾಭ ಬಂತು. ಸನ್. ೨೦೦೪ ರಲ್ಲಿ ೩ ಲಕ್ಷ ರೈತರು ೫ ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಭೂಮಿಯಲ್ಲಿ ಬಿ. ಟಿ. ಹತ್ತಿಯ ಸಾಗುವಳಿ ಮಾಡಿದ್ದಾರೆ. ಉತ್ಪಾದನೆ ೫ ಪಟ್ಟು ಹೆಚ್ಚಿದೆ. ಬೀಜದಲ್ಲಿ ಎಣ್ಣೆಯ ಅಂಷ ೧೦% ಹೆಚ್ಚು. ಎಣ್ಣೆ ತೆಗೆದ ಮೇಲೆ ಸಿಗುವ 'ಕೇಕ್' ಗೆ ಒಳ್ಳೆಯ 'ರೇಟ್' ದೊರೆತಿದೆ.
ಬೀ.ಟಿ. ಹತ್ತಿ ಬೀಜದ ಬೆಲೆ, ೧೬೦೦-೧೮೦೦ ರೂ, ಇದ್ದು ರೈತರಿಗೆ ಇದನ್ನು ಕೊಳ್ಳಲು ಬಹಳ ಕಶ್ಟ.( ಬೀ.ಟಿ ಯಲ್ಲದ ಹತ್ತಿ ಬೀಜಗಳ ಬೆಲೆ- ೩೦೦ ರೂ. ರಿಂದ ೪೦೦ ರೂ ಇತ್ತು.) ವರ್ಷ, ೨೦೦೨ ರಲ್ಲಿ ಗಂಭೀರ ಸಮಸ್ಯೆ ಎಂದರೆ, ನಕಲಿ ಹಾಗು ಕಾನೂನು ರಹಿತ ಅಗ್ಗದ ಬೀಜ ಮಾರುಕಟ್ಟೆಗೆ ಬಂದವು. ಅಗ್ಗದ ಬೀಜದ ಪೈರು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಬೀ.ಟಿ. ಹತ್ತಿಯ ಉತ್ಪಾದನೆ ೧೨ ಕ್ವಿ/ಹೆ.ನ ಬದಲು ಅಗ್ಗದ ಬೀಜ ೭-೮ ಕ್ವ್. ಉತ್ಪಾದನೆ. ಕೀಟನಾಶಕದ ಉಪಯೋಗ ೪೦-೬೦% ಕಡಿಮೆ. ಸಿಂಪಡಣೆ ಕಮ್ಮಿ. ಇನ್ನೊಂದು ಚಿಂತೆ ಎಂದರೆ ಎಲ್ಲಿ ಕೀಟ ಗಳ ಮೇಲೆ ಪ್ರತಿರೊಧಶಕ್ತಿ ಹೆಚ್ಚುತ್ತದೋ ಎಂದು. ಸರಕಾರದ ಸಲಹೆಯಂತೆ 'ರೆಫ್ಯೂಜ್'ಅನ್ನು ಹಾಕಬೇಕು. 'ರೆಫ್ಯೂಜ್' ಒಟ್ಟು ಹತ್ತಿಯ ಕ್ಷೇತ್ರದ ೨೦%, ಅಥವ ಕೊನೆಯ ೫ ಸಾಲುಗಳಲ್ಲಿ ನಾಲ್ಕೂ ಕಡೆ 'ರೆಫ್ಯೂಜ್' ಹಾಕಬೇಕು. ಬೀ.ಟಿಯಲ್ಲದ ಅದೇ ಜಾತಿಯ ತಳಿಗಳು ರೆಫ್ಯೂಜಿನಲ್ಲಿ ಬೆಳೆಯಲ್ಪಡುತ್ತವೆ. ಬೀ.ಟಿ ಹತ್ತಿಯ ಪ್ರತಿರೊಧಕ ಶಕ್ತಿ ನಿರಂತರ ವಾಗಿರಲು ಪ್ರಯತ್ನ ನಡೆಯುತ್ತಿದೆ. ಪ್ರಪಂಚದ ಹೆಚ್ಚು ಬೀ.ಟಿ. ಹತ್ತಿ ಸಾಗುವಳಿ ಮಾಡುತ್ತಿರುವ ಚೀನ, ಯು.ಎಸ್.ಎ ಗಳಿಂದ ಯಾವ ಆಕ್ಷೇಪವೂ ಬಂದಿಲ್ಲ. ೨೦೦೧-೨ ರಲ್ಲಿ ಬಿಡುಗಡೆ ಮಾಡಿದ ೩ ಹೈಬ್ರಿಡ್ ಗಳಲ್ಲಿ ೨೫-ರಿಂದ ೬೦% ವೃದ್ಧಿ ಕಂಡುಬಂತು. ಸಿಂಪಡಣೆ ೨-೫ ಬಾರಿ ಮಾತ್ರ. ಸಸ್ಯದ ರಸ ಹೀರುವ ಕೀಟಗಳಿಗೆ ಸಿಂಪಡಣೆ ಬೇಕೆ ಬೇಕು. 'ಬೋಲ್ಗಾರ್ಡ್' ಕೇವಲ ಬೋಲ್ವರ್ಮ್ ನಾಶಕ್ಕೆ ಮಾತ್ರಾ ಕಂಡುಹಿಡಿದ ತಂತ್ರಜ್ಞಾನ ! ಬೇರೆ ರಸ ಹೀರುವ ಕೀಟಗಳು ಸಾಯುವುದಿಲ್ಲ. ಅವುಗಳಿಗೆ ಸಿಂಪಡಣೆ ಬೇಕೆ ಬೇಕು. ರ್‍ಐತರಿಂದ ಹಿಡಿದು ಎಲ್ಲರಿಗೂ ಈ ಮಾಹಿತಿಗಳನ್ನು ಒದಗಿಸಿ ತಿಳುವಳಿಕೆಕೊಡುವುದು ಅಗತ್ಯ.
ದೇಶದ ಹತ್ತಿ ಬೆಳೆ ಈ ವರ್ಷದಲ್ಲಿ ೨೪೦ ಮಿ. ಬೇಲುಗಳು; ಪ್ರತಿ ಹೆಕ್ಟೇರ್ ನಲ್ಲಿ ೪೬೦ ಕೆಜಿ ಹತ್ತಿ ಈಗ ಸಿಗುತ್ತಿದೆ. ಕಳೆದ ೫ ವರ್ಷದ ಸರಾಸರಿಗೆ ಹೋಲಿಸಿದರೆ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿದೆ. ಮೇಲಿನ ಎಲ್ಲಾ ಅಂಕಿ ಅಂಶಗಳು, 'ಡಾಟಾ'ಗಳು ಬೀ. ಟಿ. ತಂತ್ರಜ್ಞಾನ, ಫಲಕಾರಿಯಾಗಿದೆ ಎನ್ನುವುದನ್ನು ಸಾಬೀತುಮಾಡಿವೆ ! ೨೦೦೫-೦೬ ರಲ್ಲಿ ಬಿಡುಗಡೆಯಾಗಿರುವ ಒಟ್ಟು ಹೈಬ್ರಿಡ್ ಗಳ ಸಂಖ್ಯೆ ೨೦ ಬೀ.ಟಿ.(ಬೋಲ್ಗಾರ್ಡ್) ಹೈಬ್ರಿಡ್ ಗಳು. ಅಂಕುರ್ ಸೀಡ್ ಕಂ. ಯ ೩ ತಳಿಗಳು, ನಝೀವೀಡು ಬೀಜದ ಕಂ.ಯ ೨ ಹೈಬ್ರಿಡ್ ಗಳೂ ಸೇರಿವೆ. ಈ ಎಲ್ಲಾ ೨೦ ಹೈಬ್ರಿಡ್ ಗಳೂ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ, ಹವಾಮಾನ, ನೀರಾವರಿ ವ್ಯವಸ್ಥೆ ಮತ್ತು ಆ ಪ್ರದೇಶದಲ್ಲಿರುವ ಅಗತ್ಯಗಳನ್ನು ಅವಲಂಭಿಸಿವೆ. ಉತ್ತರಪ್ರದೇಶಕ್ಕೆ ನಿಗದಿಮಾಡಿದ ತಳಿಗಳು ಮಧ್ಯಪ್ರದೇಶಕ್ಕೆ ಒಗ್ಗುವುದಿಲ್ಲ. ಹಾಗೆಯೇ ಆಂಧ್ರಪ್ರದೇಶಕ್ಕೆ ಕೊಟ್ಟ ಬೀಜಗಳು ಬೇರೆ. ಸನ್. ೨೦೦೪ ರಲ್ಲಿ ಇದ್ದ, ೦.೫ ಮಿ.ಹೆ. ಭೂಮಿಯು ಹೆಚ್ಚಿ ೨೦೦೫ ರಲ್ಲಿ ೧.೩೦ ಮಿ.ಹೆ.ಆಗಿದೆ. ಇಳುವರಿಯು ೪೬೫ ಕೆಜಿ/ಹೆ. ಇಶ್ಟು ಹೆಚ್ಚುವರಿ ಆಗಿರುವುದು ಇದೇ ಮೊದಲು !
ಜಗತ್ತಿನಲ್ಲಿ ಇಂದು ೯೦ ಮಿ.ಹೆ.ನಲ್ಲಿ ಜೈವಿಕ ತಂತ್ರಜ್ಞಾನದ ವತಿಯಿಂದ ಬೆಳೆಗಳು ಪ್ರಚಂಡ ಗತಿಯಲ್ಲಿ ಪಸರಿಸುತ್ತಿವೆ. ಬೇರೆ ಬೆಳೆಗಳಾದ, ಸೇಬು, ಮಾವು, ಬಾಳೆ, ಅನಾನಸ್, ಬಾರ್ಲಿ, ಗೆಣಸು, ತೆಂಗು ಪರೀಕ್ಷಣೆಗಳ ವಿವಿಧ ಹಂತಗಳಲ್ಲಿವೆ.
ಭಾರತದಲ್ಲಿ ಬೆಳೆಯುತ್ತಿರುವ ಬೀ.ಟಿ, ಹತ್ತಿಯ ವಿವಾದಗಳಲ್ಲಿ ಮೊದಲನೆಯದು, ದೇಶದ ಬಡ ರೈತರ 'ಆತ್ಮ ಹತ್ಯೆ' ಯ ಪ್ರಕರಣ. ೪ ವರ್ಷಗಳಲ್ಲಿ ೧,೦೦೦ ಕ್ಕಿಂತ ಹೆಚ್ಚು ಜನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸತ್ತಿದ್ದಾರೆ. ಆತ್ಮಹತ್ಯೆಯ ೫ ಜನರಲ್ಲಿ ೪ ಜನರು ಆಂಧ್ರ ಪ್ರದೇಶದ ಬಡ ರೈತರು. ಸರ್ಕಾರ ತನ್ನ ಕಾನೂನು ಪ್ರನಾಳಿ ಯನ್ನು ಕೇವಲ ಕಾಗದದಮೇಲೆ ಇರಿಸದೆ ಕಾರ್ಯಾನ್ವಯನ ಮಾಡುವುದು ಅತಿ ಮುಖ್ಯ. ಜನರು ನೀತಿವಂತರಾಗಬೆಕು. ಬಡ ರೈತಜನರ ಶೋಷಣೆ ಆಗದಂತೆ ಕ್ರಮ ವಹಿಸುವುದು ತುಂಬಾ ಅಗತ್ಯವಾಗಿದೆ.

ಭಾರತದ ಕೃಷಿ ವಿದ್ಯಮಾನಗಳ ಪ್ರಕಾರ, ಸುಮಾರು ೪ ಮಿ. ಕೃಷಿಕರು, ದೇಷಕ್ಕೆ ಅನ್ನ ಹಾಗೂ ವಸ್ತ್ರೋದ್ಯಮಕ್ಕೆ ಬೇಕಾದ ಹತ್ತಿ, ರೇಶ್ಮೆ, ಸೆಣಬು, ಉಣ್ಣೆಗಳಂತಹ ಫೈಬರುಗಳನ್ನು ಉತ್ಪಾದಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳ ಕೋಟ್ಯಾಂತರ ರೂ. ಗಳ ವಹಿವಾಟಿನ ವರದಿಗಳು ಆಗಾಗ ಕಿವಿಗೆ ಬೀಳುವುದನ್ನು ಬಿಟ್ಟರೆ, ಅವು ರೈತನ ಜೀವನದಲ್ಲಿ ಯಾವ ಪರಿಣಾಮವನ್ನೂ ಉಂಟುಮಾಡಿಲ್ಲ ! ಕೃಷಿಯನ್ನು ರೈತ, ತೀವ್ರವಾಗಿ ಪ್ರ್‍ಈತಿಸುತ್ತಾನೆ. ಆದರೆ ಆ ವೃತ್ತಿಯನ್ನು ಅವನು 'ಸ್ವ ಇಛ್ಛೆ' ಇಂದ ಆರಿಸಿಕೊಂಡಿಲ್ಲ. ಪಿತ್ರಾರ್ಜಿತವಾಗಿ ಬಂದ ೨-೩ ಎಕರೆ ಭೂಮಿಯನ್ನು ಹಾಳುಮಾಡಲು ಆಗದೆ, ತನಗೆ ಲಭ್ಯವಾಗದ ವಿಧ್ಯಾಭ್ಯಾಸ ಹಾಗೂ ಬೇರೆ ಅನಾನುಕೂಲತೆಗಳಿಂದಾಗಿ ಕೃಷಿ ಅವನ ಭಾಗಕ್ಕೆ ಬಂತು ಅಷ್ಟೆ ! ಏನೂ ಮೂಲಭೂತ ಸವಲತ್ತಿಲ್ಲದ ಕಗ್ಗ ಹಳ್ಳಿಗಳಲ್ಲಿ ಬಡತನದ ಬೇಗೆಯಿಂದ ನರಳಿ ತನ್ನ ಪ್ರಾರಬ್ಧ ಕರ್ಮವನ್ನು ನಿಂದಿಸುತ್ತಾ ದೊಡ್ಡ ಪರಿವಾರದ ಭಾರ, ಸಾಲದ ಹೊರೆಯನ್ನು ಹೊತ್ತುಕೊಂಡು ಜೀವನ ನಿರ್ವಹಿಸುತ್ತಿದ್ದಾನೆ. ಹೊಟ್ಟೆತುಂಬ ಅನ್ನ, ಮೈತುಂಬ ಬಟ್ಟೆ ಇಂದಿಗೂ ಅವನಿಗೆ ಸರಿಯಾಗಿ ಸಿಕ್ಕಿಲ್ಲ. ಎಲ್ಲರೂ ರೈತನ ಶೋಷಣೆಗೆ ಸೊಂಟಕ್ಕೆ ಬಟ್ಟೆಕಟ್ಟಿ ನಿಂತಿರುವವರೆ ! ಪ್ರಕೃತಿ ವಿಕೋಪಗಳಾದ, ಅತಿವೃಷ್ಟಿ, ಬರ, ಭೂಕಂಪ, ಸೋನಾಮಿಗಳಂತಹ ಪಿಡುಗುಗಳು ಒಂದೆಡೆಯಾದರೆ, ಮಧ್ಯವರ್ತಿಗಳು, ದಳ್ಳಾಳಿಗಳು, ವ್ಯಾಪಾರಗಾರರು, ಎಲ್ಲರೂ ಪಾಲುದಾರರೆ. ಸರ್ಕಾರ ತಾನೇನೋ ರೈತರಿಗೆ, ಕೃಷಿಕ್ಷೇತ್ರದ ಉನ್ನತಿಗೆ ಹಮ್ಮಿಕೊಂಡ ಕ್ರುಶಿ ತಂತ್ರಜ್ಞಾನದಬೆಳವಣಿಗೆ ಬಗ್ಗೆ ತಿಳಿಯಹೇಳುವುದನ್ನು ಬಿಟ್ಟರೆ, ಬಡ ರೈತನ ಪರಿಸ್ಥಿತಿ ೧೦ ವರ್ಷದ ಹಿಂದೆ ಇದ್ದಹಾಗೆಯೇ ಇರುವುದು ಗಮನಕ್ಕೆ ಬರುವುದು ಶೋಚನೀಯ ! ಇದಕ್ಕೆ ಸಾಕ್ಷಿ, ರೈತರ ಆತ್ಮಹತ್ಯೆಯ ಪ್ರಕರಣಗಳು. ಎನ್.ಡಿ.ಟೀ.ವಿ ಮತ್ತು ಪತ್ರಿಕೆಗಳಾದ 'ಇಂಡಿಯಾ ಟುಗೆದರ್, ಬಿಸಿನೆಸ್ ಲಾಇನ್, ಪ್ರಜಾಸಕ್ತಿ, ಪತ್ರಿಕೆಗಳಲ್ಲಿ ವರದಿಮಾಡುವ ಶ್ರೀ. ಸಾಯಿನಾಥ್, ಸೋನಿಯ ಫೆಲೇರಿಯೋ, ಡಾ. ದೇವಿಂದರ್ ಶರ್ಮ, ಶೀಲಾಭಟ್, ಜೆನಿಫರ್ ಇಫತ್, ಚಂದ್ರಶೇಖರ್, ಮುಂತಾದ ಪತ್ರಿಕಾಕರ್ತರುಗಳು ಪ್ರತ್ಯಕ್ಷ ದರ್ಶನ ಮಾಡಿ ಕೊಟ್ಟ ವರದಿಗಳು 'ರೈತನ ಬವಣೆಯ ಜೀವನ'ವನ್ನು ಪ್ರತಿಬಿಂಬಿಸುತ್ತವೆ. ಪರಿಸರವಾದಿಗಳಾದ ವಂದನಾ ಶಿವ, ಡಾ. ಸುಮನ್ ಸಹಾಯ್ ಮತ್ತಿತರು, ವಿತ್ತ ಮಂತ್ರಿ ಶ್ರೀ. ಚಿದಂಬರಂರವರಿಗೆ ನೇರ ಪತ್ರವ್ಯವಹಾರ ಮಾಡಿ, ರೈತರ ಆತ್ಮಹತ್ಯೆಯ ಎಲ್ಲಾ ವಿವರಗಳನ್ನು (ಒಂದು ವರದಿಯ ಪ್ರಕಾರ, ಯವತ್ಮಲ್-೩೦, ಅಮರಾವತಿ-೩೦, ಅಕೋಲ ೧೬, ಆವಾಷಿಮ್-೧೦,) ಪ್ರಕಟಿಸಿರುವುದು ಮೇಲಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ೮ ವರ್ಷಗಳಲ್ಲಿ ಬೀ.ಟಿ. ಹತ್ತಿ ನಡೆದುಬಂದ ದಾರಿ ದುರ್ಗಮವಾಗಿ ಕಲ್ಲು ಮುಳ್ಳುಗಳಿಂದ ತುಂಬಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಹಣ ಹೊಲಕ್ಕೇ ತೊಡಗಿಸಿದ್ದು, ಬೆಳೆ ಕೈಕೊಟ್ಟಾಗ, ಸಾಲದ ಹಣ, ಬಡ್ಡಿ ತೀರಿಸಲು ಹೇಗೆ ಸಾಧ್ಯ ? ಆತ್ಮಸ್ಥೈರ್ಯ ಕುಗ್ಗಿದಾಗ ಅತ್ಮಹತ್ಯೆಯೇ ಕೊನೆಯ ಉಪಾಯವಲ್ಲವೇ ? ಕರ್ನಾಟಕದ ರೈತರು ಗಲಭೆ ಮಾಡಿ, ಹತ್ತಿ ಬೆಳೆಯನ್ನು ಸುಟ್ಟರು. ಎಲ್ಲಾ ಕಡೆ ಗೊಂದಲ, ನಿರಾಸೆಗಳ ವಾತಾವರಣ !
ಆಶ್ಚರ್ಯವೆಂದರೆ, ಸರ್ಕಾರವಾಗಲೀ ಮ.ಹೈ.ಕಂ. ಯಾಗಲೀ, ಈ ಆತ್ಮಾಹುತಿಗಳಬಗ್ಗೆ ಚಕಾರವೆತ್ತದಿರುವುದು ! ಇಂತಹ ಅಚಾತುರ್ಯಗಳು ಭಾರತದಲ್ಲಿ ಸಹಜ. ಅದಕ್ಕೇಕೆ ತಲೆ ಕೆಡಸಿಕೊಳ್ಳಬೇಕು ಎನ್ನುವಂತಿದೆ ಅವರ ನಿಲುವು !
ಪ್ರಗತಿಶೀಲ ರಾಶ್ಟ್ರಗಳಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಕೇವಲ ರೈತರೇ ಕೃಷಿಯನ್ನು ಅತ್ಯಂತ ಹೈಟೆಕ್ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾರೆ. ಪ್ರಕೃತಿ ವಿಕೋಪವಿಲ್ಲ. ಮಧ್ಯವರ್ತಿಗಳು ರೈತರ ಕೆಲಸಕಾರ್ಯಗಳಲ್ಲಿ ಮೂಗು ಹಾಕುವುದಿಲ್ಲ. ಎಲ್ಲಾ ರೈತರೂ ವಿದ್ಯಾವಂತರು. ಸರ್ಕಾರದ ನೀತಿ ಮತ್ತು ವಿಜ್ಞಾನದ ಪ್ರಕ್ರಿಯೆಗಳನ್ನು ನಂಬುವವರು. ಕಲಬೆರೆಕೆಯಿಲ್ಲ. ಎಲ್ಲ ಅನುಕೂಲವೇ ಅನುಕೂಲ !

ಭಾರತದಲ್ಲಿ 'ಬೇಸಾಯ' ವನ್ನು ಯಾವ ಯುವಕನೂ ಖುಷಿಯಿಂದ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳಲು ಮುಂದೆ ಬರುವುದಿಲ್ಲ. ಕಾರಣಗಳು ಹಲವಾರು. ಅತ್ಯಂತ ಅಸಹಾಯಕ, ಯಾವ ಕೆಲಸಕ್ಕೂಬಾರದ ಎಲ್ಲೂ ಬೇಡಿಕೆಯಿಲ್ಲದ ವ್ಯಕ್ತಿ, ಕೃಷಿಕನಾಗಿರುವುದನ್ನು ನಾನು ಕಣ್ಣಾರೆಕಂಡಿದ್ದೇನೆ !! ಕೃಷಿಯಲ್ಲಿ ವಿದ್ಯಾರ್ಜನೆ ಮಾಡಿ ಪರಿಣಿತಿ ಹೊಂದಿದ ಒಬ್ಬ, ಆಫೀಸಿನಲ್ಲಿ ಅಧಿಕಾರಿಯಾಗುವುದನ್ನು ಇಶ್ಟಪಡುತ್ತಾನೆಯೇ ಹೊರತು ಕೃಷಿಕನಾಗಲು ಅಲ್ಲ ! ಇದು ಕಟು ಸತ್ಯ !! (ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ದೊಡ್ದ ರೈತರು (ಜಮೀನ್ದಾರ್ ರೈತರು !) ತಮ್ಮ ದೊಡ್ಡ ಜಮೀನುಗಳಲ್ಲಿ ಟ್ರ್ಯಾಕ್ಟರ್ ಗಳನ್ನು ಉಪಯೋಗಿಸಿ ಸಾಗುವಳಿ ಮಾಡುತ್ತಾರೆ. ನೀರಾವರಿ ವ್ಯವಸ್ಥೆ ಚೆನ್ನಾಗಿದೆ. ಇನ್ನೂ ಕೆಲವು ವ್ಯಕ್ತಿಗಳ ವೈಯಕ್ತಿಕವಾದ ಸಾಧನೆ ಕೃಷಿಕ್ಷೇತ್ರದಲ್ಲಿ ಈಗಾಗಲೇ ಧಾಖಲಾಗಿದೆ. ಕರ್ನಾಟಕದ ಹಲವು ರೈತರು ಇಂತಹ ಸಾಧನೆಗಳನ್ನು ಮಾಡಿ ತೋರಿಸಿರುವ ಬಗ್ಗ್ಯೆ ನಾವು ತರಂಗ, ಸುಧಾ ಗಳಂತಹ ಪತ್ರಿಕೆಗಳಲ್ಲಿ ಓದಿದ್ದೇವೆ !)
ಬೀ.ಟಿ, ಫಸಲು ಇನ್ನೂ ಬಿಡುಗಡೆ ಯಾಗುವ ಮೊದಲೇ, ಅಹಮದಾಬಾದಿನ ನವಭಾರತ್ ಎಂಬ ಬೀಜದ ಕಂ. ಮಾರುಕಟ್ಟೆಯಲ್ಲಿ ಪ್ರವೇಶಿಸಿ ತನ್ನ ನವಭಾರತ್-೧೫೧ ಎಂಬ ತಳಿಯನ್ನು ಭಾರಿ ಮಾತ್ರದಲ್ಲಿ ಎಲ್ಲಾ ರಾಜ್ಯದ ರೈತರಿಗೆ ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಮಾರಾಟ ಮಾಡಿತು. ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲೇ, ಹತ್ತಿ ಬೆಳೆ ಕೊಯಲಿನ ಹಂತಕ್ಕೆ ಬಂದಿತ್ತು. ಜಿ.ಇ.ಎ.ಸಿ. ಎಲ್ಲಾ ಬೆಳೆಯನ್ನು ಸುಟ್ಟು ಹಾಕಲು ಸುಗ್ರೀವಾಜ್ಞೆ ನೀಡಿತು. ಲಿಟಿಗೇಶನ್; ಕೋರ್ಟು, ಇತ್ಯಾದಿ ಇತ್ಯಾದಿಗಳಾದವೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ.
ಅಂಧ್ರ ಪ್ರದೇಶದಲ್ಲಿ ೩ ಬೀ.ಟಿ ಹೈಬ್ರಿಡ್ ಗಳನ್ನು ರದ್ದು ಮಾಡಿದ್ದರು.
ಈವರ್ಷದ ವರದಿಗಳ ಪ್ರಕಾರ ೧೩ ವರ್ಷಗಳನಂತರ ಆಂಧ್ರವೂ ಸೇರಿದಂತೆ ಎಲ್ಲಾ ೯ ಹತ್ತಿ ಬೆಳೆಯುವ ರಾಜ್ಯಗಳೂ ಬೀ.ಟಿ. ಹತ್ತಿಯನ್ನು ಸ್ವಾಗತಿಸಿವೆ. ಬಾರತದ ಒಂದು ಮಿಲಿಯನ್ ರೈತರು ೩.೧೦ ಮಿಲಿಯನ್ ಎಕರೆ ಗಳಲ್ಲಿ ಬೀ.ಟಿ.ಹತ್ತಿಯ ಬೇಸಾಯ ಮಾಡುತ್ತಿದ್ದಾರೆ ! ಹೀಗೆ ಬೀ.ಟಿ. ಹತ್ತಿಯ ಕಥೆ ಮುಂದುವರೆದಿದೆ. ಸರ್ಕಾರ ನಕಲಿ ಬೀಜದ ಮಾರಾಟವನ್ನು ರದ್ದುಗೊಳಿಸುವ ಮಸೂದೆ ತರಲಿಲ್ಲ. ಇಂದಿಗೂ 'ಬಾಲ್ ಗಾರ್ಡ್' ಜೊತೆಗೆ ಕಲಬೆರಕೆ ಬೀಜಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
'ಇವು ಬೀ.ಟಿ. ಹತ್ತಿಯ ವೈವಿಧ್ಯಮಯ ಮುಖಗಳ ಎರಡು ಪ್ರಮುಖ ಮುಖಗಳು'. ರೈತರ ಆತ್ಮಹತ್ಯೆಯನ್ನು ಪರಿಸರವಾದಿಗಳೇ ಏಕೆ ವರದಿಮಾಡಬೇಕು ? ಹಳ್ಳಿಯ ಸರ್ಕಾರೀ ಅಧಿಕಾರಿ ಜಾಗಕ್ಕೆ ಹೋಗಿ ಪರಿಸ್ಥಿತಿಯನ್ನು ಸುಧಾರಿಸಿ, ಬೇಕಾದ ಎಲ್ಲಾ ಸಹಾಯವನ್ನೂ ಮಾಡಬೇಕು. ಸರ್ಕಾರ ದೊಡ್ಡ ಭೂಮಿಕೆ ನಿಭಾಯಿಸಬೇಕಾಗಿದೆ. ಹತ್ತಿಗೆ ಸಂಬಂಧಿಸಿದ ಎಲ್ಲಾ ಸಮಿತಿಗಳನ್ನೆಲ್ಲಾ ಸರಿಯಾಗಿ ಸಂಯೋಜಿಸಿ, ಅಭಿಯಾನದ ಪ್ರತಿಹಂತದಲ್ಲೂ ಸಂಬಂಧ ಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಗಳನ್ನು ಪ್ರತಿಭಾಪೂರ್ವಕವಾಗಿ, ಕರ್ತವ್ಯ ನಿಷ್ಠೆ, ದಕ್ಷತೆಯಿಂದ ಮಾಡಿದಾಗ ಮಾತ್ರ ಸಂಪೂರ್ಣ ಯಶಸ್ಸನ್ನು ನಿರೀಕ್ಷಿಸಬಹುದು. ರೈತರಾದಿಯಾಗಿ ಯೋಜನೆಯಲ್ಲಿ ಭಾಗವಹಿಸಿದ ಸರ್ವರಿಗೂ ಎಲ್ಲಾ ವಿವರಗಳನ್ನೂ ಒದಗಿಸಬೇಕು. ಇದು ನನ್ನ ಕೆಲಸ, ಅದು ನನ್ನ ವ್ಯಾಪ್ತಿಯಲಿಲ್ಲ ಎನ್ನುವ 'ಸೊಲ್ಲೇ' ಕೇಳಿಸಬಾರದು.

ಭಾರತದಲ್ಲಿ ರೈತರ ಆತ್ಮಹತ್ಯೆಗಳು ಪೂರ್ತಿಯಾಗಿ ಎಂದು ನಿಲ್ಲುತ್ತವೋ ಅಂದು ಈ 'ಅಭಿಯಾನ' ಸಫಲತೆ ಪಡೆದಿದೆ ಎಂದು ಹೇಳಬಹುದು !!

* ಕರ್ತೃ : ಶ್ರೀ. ವೆಂಕಟೇಶ್ (ಅವರ ಪೂರ್ಣ ಹೆಸರು: ಲಕ್ಷ್ಮೀವೆಂಕಟೇಶ್) ಅವರು ಕೇಂದ್ರೀಯ ಹತ್ತಿ ಅನುಸಂಧಾನ ಸಂಸ್ಥೆ, ಮಾಟುಂಗ, ಮುಂಬೈ(ಸಿ.ಐ.ಆರ್.ಸಿ.ಒಟಿ) ನಲ್ಲಿ ೩೭ ವರ್ಷಗಳ ಸೇವೆಯನಂತರ, ೨೦೦೪ ರಲ್ಲಿ ನಿವೃತ್ತಿ ಹೊಂದಿದರು. ಹತ್ತಿ ಬೆಳೆಯ ವಿವಿಧ ಮಜಲುಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಇದು ಬೀ.ಟಿ. ಹತ್ತಿಯ ಕಿರು ಪರಿಚಯ. ಕಿರಿಯ ಗೆಳೆಯರಿಗಾಗಿ ಬರೆದ ಇವರ, "ಮೈ ಸ್ಪಿನ್ ಲ್ಯಾಬ್" ಎಂಬ ಪುಸ್ತಕ, ಈಗ ತಾನೇ ಪ್ರಕಟಗೊಂಡಿದೆ.