ನಿರ್ವಾಣ

ನಿರ್ವಾಣ

ಕಳೆದುಕೊಂಡಿದ್ದೇನೆ ನಿಜ ಚಹರೆ
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳನು
ಯಾರ್‍ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು

ತೊಟ್ಟ ಒಳ ಉಡುಪಿನ ಬಣ್ಣ ಅವರವರಿಗಷ್ಟೆ ಗೊತ್ತಿರುವಂತೆ
ಓರಣಗೊಳಿಸುತ್ತಾ ಆಸೆಯಾಗುತ್ತದೆ ನನ್ನ ಅಸಲು ಚಹರೆಯನ್ನೊಮ್ಮೆ ನೋಡಲು
ಇದಾ? ಇದಲ್ಲ, ಇದೂ ಅಲ್ಲ, ಅದಿರಬಹುದಾ? ಮತ್ತದೋ ಅದೂ? ಅಲ್ಲ..
ಹಾಂ! ಸಿಕ್ಕಿತು ಇದೋ ಇದು ನನ್ನ ಅಸಲುಚಹರೆಯಂತೇ ಕಾಣು...
ಇಲ್ಲ ಇದರಲ್ಲಿ ಸಾಮ್ಯತೆಗಳಿವೆ ಅಷ್ಟೆ...
ಸಣ್ಣಗೆ ಕಳವಳೊಂದು ಕೊನರುತ್ತಿದೆ..
ಕಳೆದುಕೊಂಡಿರಿವುದೇನು ಅನ್ನುವದರ ಅರಿವಾಗುತ್ತಲೇ ಚಡಪಡಿಕೆ
ಹೆಚ್ಚುತ್ತಿದೆ.. ಸ್ವಂತಿಕೆಗಾಗಿ, ನನ್ನತನಕ್ಕಾಗಿ, ಹಂಬಲಿಸತೊಡಗುತ್ತೇನೆ
ಮತ್ತೆ ಹುಡುಕಾಟ..ಹುಡುಕಾಟದ ಭರದಲ್ಲಿ ಓರಣಗೊಳಿಸಿದ
ಮುಖಗಳೆಲ್ಲ ಒಟ್ಟು ಕಲೆತು ಎಲ್ಲಾ ಗೊಜಲುಗೊಜಲು
ಆಯಾಸವಾಗುತ್ತಿದೆ, ಮೈಗೊ..? ಮನಸಿಗೊ..?
ಮನಸಿಗಾದರೆ ಯಾವ ಮುಖದ ಮನಸಿಗೆ??
ಮಡಿಲೊಂದು ನನ್ನನ್ನು ಪ್ರೀತಿಯಿಂದ ಕರೆಯುತ್ತಿದೆ
ಬಾ ವಿಶ್ರಮಿಸು ಕ್ಷಣ ಹೊತ್ತು ಎಂದು
ಮುಖ ನೋಡದೆ ಧಾವಿಸುತ್ತೇನೆ ಆ ಪ್ರೀತಿಯ ಮಡಿಲಿನೆಡೆಗೆ
ಮುಖ ನೋಡಿದ್ದೇ ಆದರೆ ಮತ್ತ್ಯಾವುದೋ ಮುಖವಾಡ ಧರಿಸಿಬಿಟ್ಟೇನು ಎಂಬ ಭಯ
ಮಡಿಲಿನಲ್ಲಿ ಮಗುವಾಗುತ್ತೇನೆ, ನಿಧಾನಕ್ಕೆ ನನಗೆ ನಾನು ಸಿಕ್ಕಂತಾಗಿ
ನೆಮ್ಮದಿಯ ನಿದ್ರೆಗೆ ಜಾರುತ್ತೇನೆ ಇನ್ನಿಲ್ಲದಂತೆ ಭದ್ರವಾಗಿ ಅವಚಿಕೊಂಡು ಮಡಿಲನ್ನು...

Rating
No votes yet

Comments