ಕೃಷಿ ಸಾರ್ವಭೌಮತ್ವ

ಕೃಷಿ ಸಾರ್ವಭೌಮತ್ವ

ಬರಹ

ಅಪ್ಪ ಹಾಗೂ ತಮ್ಮ ಟೇಪು ಹಿಡಿದು ಬಗ್ಗೇ ಬಿಟ್ಟರು. ನಾನು ಮನೆಯಿಂದಲೇ ತೆಗೆದು ಕೊಂಡು ಬಂದಿದ್ದ ಒಂದು ಬಳಿ ಕಾಗದದಲ್ಲಿ ಇವರಿಬ್ಬರು ಹೇಳಿದ ಅಳತೆಯನ್ನು ಅಡಿಗಳಲ್ಲಿ ದಾಖಲಿಸುತ್ತಾ ಹೋದೆ. ಅದು ಬೆಳಗ್ಗೆ 8 ಸುಮಾರಿಗೆ. ಅಯ್ಯೋ ಸದ್ಯ ನಮ್ಮನ್ನು ಯಾರು ನೋಡಲಿಲ್ಲ. ಏಕೆಂದ್ರೆ, ಆ ಹೊಲವಿದ್ದಿದ್ದು ಊರ ಹೊರಗಿನ ದಿಣ್ಣೆ ಮೇಲೆ. ಆ ಸಂದರ್ಭದಲ್ಲಿ ಊರಿನ ಯಾರಾದ್ರೂ ನೋಡಿದ್ರೂ ನಮ್ಮಗೆ ಧರ್ಮದೇಟುಗಳು ಖಂಡಿತ. ಯಾಕಪ್ಪಾ ಅಂದ್ರೆ, ಅದು ನಮ್ಮ ಜಮೀನಲ್ಲ. ಬೇರೆ ಯಾರೋ ಜಮೀನಲ್ಲಿ ಹೀಗೆ ಅಳತೆ ಮಾಡಿದ್ರೆ ಯಾರು ತಾನೆ ಬಿಟ್ಟಾರು ಬೆಳ್ಳಂ ಬೆಳ್ಳಗೆ..

ಹೌದು.. ಇದು ಜನವರಿಯ ಮೊದಲ ವಾರದ ಮಂಗಳವಾರ. ಅದು ನಮ್ಮ ಊರಿನಿಂದ 130 ಕಿಲೋ ಮೀಟರ್‍ ದೂರವಿರುವ ತುಮಕೂರು ಜಿಲ್ಲೆ ಹಾಗೂ ಚಿತ್ರದುರ್ಗಜಿಲ್ಲೆಗಳ ತುದಿಯ ವಾಣಿವಿಲಾಸ ಕಣಿವೆ ಬಳಿ. ಅಲ್ಲೊಂದಷ್ಟು ಭೂಮಿ ಖರೀದಿಸುವ ಆಸೆಯಿಂದ ಅಪ್ಪ ಕಳೆದ 4 ತಿಂಗಳಿನಿಂದ ತಡಕಾಡಿ ಸ್ವಲ್ಪ ಜಮೀನು ನೋಡಿ ಬಂದಿದ್ರು. ನಂತರ ನಾನು ತಮ್ಮ ಅಣ್ಣ ಕೂಡ ಆ ಭೂಮಿಯನ್ನು ಖುದ್ದು ನೋಡಿ ಒಪ್ಪಿ ಬಂದಿದ್ವಿ. ಆದ್ರೆ, ನಮಗೆ ಕಾಡಿದ ಯೋಚನೆ ಅಂದ್ರೆ, ಇದು ಮಾಲೀಕ ಹೇಳಿದಂತೆ ವಿಸ್ತೀರ್ಣದಲ್ಲಿ 8 ಎಕರೆ ಇದೆಯಾ ಅನ್ನೋದು. ಅದನ್ನು ತಿಳಿಯಲೇ ನಾವು ಅಂದು ಅಳತೆ ಟೇಪು ಹಿಡಿದು ಹೊಲಕ್ಕೆ ನುಗ್ಗಿದ್ದು..

ಖಂಡಿತಾ ಮನಸ್ಸಿಗೆ ಅತೀವ ಖೇದವಾಯ್ತು.. ಅತೀ ಹಿಂದುಳಿದ ತಾಲೂಕಾದ ತುಮಕೂರಿನ ಸಿರಾವನ್ನು ನಾನು ನೋಡಿದ ಬಳಿಕ ಮನಸ್ಸಿನಲ್ಲಿ ಮೂಡಿದ ಮೊದಲನೆ ಪ್ರಶ್ನೆ. ನಮ್ಮ ರೈತರು ಯಾಕೆ ಇಷ್ಟು ಹಿಂದಿದ್ದಾರೆ ಕೃಷಿಯಲ್ಲಿ ? ನಾನು ಮೂಲತಃ ಕೋಲಾರ ಭಾಗದ ವ್ಯಕ್ತಿ. ಅಲ್ಲದೆ, ಮಧ್ಯಮ ವರ್ಗದ ಕೃಷಿಕ ಕುಟುಂಬ. ನಾವು ಕೂಡ ವ್ಯವಸಾಯದಿಂದಲೇ ಜೀವನದ ಬಂಡಿ ಎಳೆದವರು. ನಮ್ಮ ಕಡೆ ಭೂಮಿಯನ್ನು ಸಮತಟ್ಟವಾಗಿ ವಿಂಗಡಿಸಿ ಬಧು ನಿರ್ಮಿಸಿ ಕೃಷಿ ಮಾಡ್ತೀವಿ. ಅದು ಭೂಮಿ ನೋಡಿ. 10 ಗುಂಟೆಯಾಗಲಿ, ಅರ್ಧ ಎಕರೆಯಾಗಲಿ, ಒಂದು ಎಕರೆಯಾಗಲಿ ಒಂದು ತುಂಡ ಇರುತ್ತದೆ.

ಆದ್ರೆ, ಸಿರಾ ಕಡೆ ಒಂದು ತುಂಡ, ಸೀಳು, ಪಟ್ಟಿ (ಸಾರಿಗೆ) ಎಷ್ಟು ಅಂದ್ಕೋಂಡ್ರಿ. ಅಯ್ಯೋ 10, ಎಕರೆ.. ಅದಕ್ಕೂ ಹೆಚ್ಚೇ.. ಇದು ನಿಜ. ಒಂದು ಕ್ಷಣ ನಾವೆಲ್ಲಾ ದಂಗಾಗಿ ಹೋದೆವು. ಮಾಲೀಕನ ಹೆಸರಲ್ಲಿ ಎಷ್ಟು ಎಕರೆಯಿರುತ್ತೋ ಅಷ್ಟು ಜಮೀನೂ ಒಂದೇ ತುಂಡ. ಸುತ್ತಲೂ ನಾಲ್ಕೇ ಬಧು. ಅದರಲ್ಲಿ ಯಾವುದೇ ಭಾಗಗಳಿರೊಲ್ಲ. ಮಳೆ ನೀರು ಹರಿಯಲು ವ್ಯವಸ್ಥಿತವಾದ ಕಾಲುವೆಯಾಗಲಿ, ವೈಜ್ಞಾನಿಕ ರೀತಿಯ ಸಮಪಾತಳಿ ಉಳುಮೆಯಾಗಲಿ ಹೊಂದಿಲ್ಲ. ಹೀಗಾಗಿ ಬಿದ್ದ ನೀರು ಬೇಕಾ ಬಿಟ್ಟಿಯಾಗಿ ಹೊಲದಲ್ಲಿ ಹರಿದು ಹಳ್ಳ, ಕೊರಕಲುವುಂಟಾಗಿರುತ್ತದೆ.

ಇವತ್ತಿಗೂ ಕೋಲಾರ ಭಾಗದಲ್ಲಿ ನೋಡಬಹುದು ಅಚ್ಚುಕಟ್ಟಾದ ಭೂಮಿ. ಮಳೆ ನೀರು ಹೊಲದಲ್ಲಿ ನಿಂತು ಹೆಚ್ಚಾದ ನೀರು ಹರಿದು ಹೋಗಲು ಎರಡು ಹೊಲಗಳ ಕಡೆಯಿಂದಲೂ (ಸಮಜಾರು) ಹಳ್ಳವಿರುವ ಕಡೆ ಒಂದು ವ್ಯವಸ್ಥಿತ ಕಾಲುವೆ ಇರುತ್ತದೆ. ಹೀಗೆ ಹರಿದು ಬರುವ ನೀರಿಗೆ ಅಲ್ಲಲ್ಲಿ ಮಡಾಯಿ (ಹೆಚ್ಚಾದ ನೀರು ಹರಿದು ಹೋಗುವಾಗ ಮಣ್ಣಿನ ಸವಕಳಿ ತಡೆಗಟ್ಟಲು ಕಲ್ಲುಗಳಿಂದ ನಿರ್ಮಿಸುವ ಸಣ್ಣ ಸ್ಥಳ) ಅಲ್ಲದೆ, ನೀರು ಹರಿಯುವ ದಿಕ್ಕಿಗೆ ಉಳುಮೆ ಮಾಡದೆ ಅದಕ್ಕೆ ವಿರುದ್ದವಾಗಿ ಉಳುವುದು. ಇದರಿಂದಾಗಿ ಬಿದ್ದ ಮಳೆ ನೇಗಿಲ ದೋಣಿಯಲ್ಲಿ ಬಿದ್ದು ಮಣ್ಣು ಕೊಚ್ಚಿ ಹೋಗಲ್ಲ. ಬದಲಾಗಿ ನೀರನ್ನು ಇಂಗಿಸುವ ಪ್ರಯತ್ನ ಮಾಡುತ್ತದೆ.

ಇದಕ್ಕಿಂತಲೂ ಚಿಂತಿತವಾದ ವಿಚಾರ ಎಂದ್ರೆ, ಸಿರಾ ತಾಲೂಕಿನ ಜನತೆಗೆ ಕಬ್ಬಿಣದ ನೇಗಿಲು ಗೊತ್ತಿಲ್ಲ. ಬಹುತೇಕ ಹಳೆ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ಬಳಸುವ ಕಬ್ಬಿಣದ ‘ಗುಳ’ ವಿರುವ ನೇಗಿಲು. ಇದು ಹೆಚ್ಚಿನ ಆಳಕ್ಕಿಳಿದು ಮಣ್ಣನ್ನು ಹದಗೊಳಿಸುತ್ತದೆ. ಅಲ್ಲದೆ, ಎತ್ತುಗಳಿಗಳನ್ನೂ ಘಾಸಿಯಾಗುತ್ತದೆ. ಆದ್ರೆ, ಸಿರಾ ಭಾಗದಲ್ಲಿ ಇಂಥ ಕೃಷಿ ಸಾಧನ ಇಲ್ಲವೇ ಇಲ್ಲ ಎನ್ನಬಹುದು. ಕೇವಲ ಮರದ ನೇಗಿಲನ್ನು ಬಳಸುತ್ತಾರೆ.

ಅಲ್ಲದೆ, ನರಜು (ಸಣ್ಣ ಮೃದು ಕಲ್ಲು ಕಲ್ಲು) ಭೂಮಿಗಿರುವ ಬೆಲೆ ಕೆಂಪು ಮಣ್ಣಿನ ಜಮೀನಿಗಿಲ್ಲ. ಹೇಳಿ ಕೇಳಿ ಕಬ್ಬಿಣ ಸೇರಿದಂತೆ ಖನಿಜ ಸಂಪತ್ತಿನ ಭೂಮಿ ಕೆಂಪು ಮಣ್ಣು. ಅಲ್ಲದೆ, ಸಿರಾ ಭಾಗದಲ್ಲಿ ಕೆಂಪು ಮಣ್ಣಿನ ಗಂಧವೇ ಗೊತ್ತಿಲ್ಲ. ನಮಗೆ ಕಲ್ಲು ಮಿಶ್ರಿತ ಮಣ್ಣೇ ಬೇಕು. ಇದರಿಂದಾಗಿ ಶೇಂಗಾದಲ್ಲಿ ಹೆಚ್ಚಿನ ಇಳುವರಿ ಪಡೆಯೋಲು ಸಾಧ್ಯ ಅನ್ನೋದು ಇವರು ಕೊಡುವ ಕಾರಣ.

ಇನ್ನು ತಿಪ್ಪೆಗೊಬ್ಬರ, ಸಾವಯವ ಗೊಬ್ಬರದ ಅನುಕೂಲ ಕೂಡ ಅಷ್ಟಾಗಿ ಗೊತ್ತಿಲ್ಲ. ಬಹುಶಃ ಹೀಗಿರಬಹುದು. ಹೆಚ್ಚಾಗಿ ಸೀಮೆ ಹಸುಗಳು ಸಾಕದಿರಬಹುದು. ಅಥವಾ ಹೆಚ್ಚು ಎಕರೆಯ ಭೂಮಿ ಹೊಂದಿರುವುದರಿಂದ ಅಷ್ಟಕ್ಕೂ ತಿಪ್ಪೆ ಗೊಬ್ಬರ ಹಾಕಲು ಅಸಾಧ್ಯ. ಹಾಗಾಗಿ ಇರುವ ಎರಡು ಜೊತೆ ಎತ್ತುಗಳು ಹಾಗೂ ಕುರಿ ಗೊಬ್ಬರದ ಭಾಗ್ಯವಷ್ಟೇ ಭೂಮಿಗೆ. ಕೋಲಾರ ಹೇಳಿ ಕೇಳಿ ಸಿಲ್ಕ್‌ ಮಿಲ್ಕ್‌ಗೆ ಖ್ಯಾತಿ. ಹೀಗಾಗಿ ಹೆಚ್ಚಿನ ಪಶುಪಾಲನೆಯಿಂದಾಗಿ ತಿಪ್ಪೆ ಗೊಬ್ಬರ ಸಾಮಾನ್ಯವಾಗಿ ಹೆಚ್ಚು. ಜೊತೆಗೆ ಪಶುಪಾಲನೆ ಮುಖ್ಯ ಕಸುಬು ಆಗಿ ಸ್ವೀಕರಿಸಿರುವುದೂ ಒಂದು. ಹೀಗಾಗಿ ರಾಸುಗಳ ಮೇವಿಗಾಗಿ ಹೆಚ್ಚಿನ ಶ್ರಮ ಹಾಗೂ ಬಂಡವಾಳ ವಿನಿಯೋಗ ಮಾಡ್ತಾರೆ. ಅಲ್ಲದೆ, ಕಡಿಮೆ ಪ್ರಮಾಣದ ಜಮೀನು ಇರುವುದರಿಂದ ತಿಪ್ಪೆ ಗೊಬ್ಬರ, ರೇಷ್ಮೆ ಹುಳುವಿನ ತ್ಯಾಜ್ಯ ಜತೆಗೆ ಕೋಳಿ ಗೊಬ್ಬರವೂ ಯಥೇಚ್ಚವಾಗಿ ಸಿಗುತ್ತೆ. ಇದನ್ನು ಬಳಸಿಕೊಂಡು ತೋಟಗಾರಿಕೆಯಲ್ಲೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೆ, ಹೆಚ್ಚಾಗಿ ಔಷಧೋಪಚಾರ ಕೂಡ ನಡೆಯೊಲ್ಲ. ಬಹುತೇಕವಾಗಿ ಕೃಷಿಗೆ ಬೇವಿನ ಹಿಂಡಿ, ಕಡಲೆ ಕಾಯಿ ಹಿಂಡಿ ಅಲ್ಲದೆ, ಔಷಧಿಯಾಗಿ ಗಂಜಲವನ್ನೂ ಬಳಸಲಾಗುತ್ತದೆ. ಗದ್ದೆಗಳಿಗೆ ಹೊಂಗೆ ಸೊಪ್ಪು ಸೇರಿದಂತೆ ಹಸಿರು ಸೊಪ್ಪನ್ನು ಬಳಸುವುದನ್ನೂ ನೋಡಬಹುದು.

ತೋಟಗಳಲ್ಲಿ ಬೆಳೆಗಳ ಮಧ್ಯೆ ಬೆಳೆಯುವ ಅನಪೇಕ್ಷಿತ ಬೆಳೆಗೆ ಕಳೆ ಎನ್ನುತ್ತಾರೆ. ಅದರಲ್ಲಿ ಹೆಚ್ಚಿನ ಪಾಲು ಗರಿಕೆ ಹಾಗೂ ತುಂಗೆ ಆಗಿರುತ್ತದೆ. ಈ ಎರಡು ಕಳೆ ತೆಗೆದು ಬೆಳೆಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಲ್ತಾರೆ. 500 ಕ್ಕೂ ಹೆಚ್ಚು ಅಡಿ ಆಳದ ಕೊಳವೆ ಬಾವಿಗಳಲ್ಲಿ 1000 ಗ್ಯಾಲನ್‌ಕ್ಕೂ ಹೆಚ್ಚು ನೀರು ಸಿಕ್ಕರೆ ಕನಿಷ್ಟ ಒಂದು ಎಕರೆ ತೋಟ ಮಾಡುತ್ತಾರೆ.

ಹೀಗಾಗಿ ತುಮಕೂರು ಭಾಗದ ಜನರು ಕೂಡ ಕೋಲಾರ ಭಾಗದ ಜನತೆಯಂತೆ ಸಾಂಪ್ರದಾಯಿಕ ಕೃಷಿಯಲ್ಲೂ ಪ್ರಗತಿ ಕಾಣಬೇಕಾಗುತ್ತದೆ. ಮನೋಸ್ಥೈರ್ಯ ಸಾಧಿಸುವ ಛಲದೊಂದಿಗೆ ಸ್ಫರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳಬೇಕಾಗಿದೆ. ಮೊದಲನೆಯದಾಗಿ ಸ್ವಾಭಿಮಾನಿಗಳಾಗಿ ಬದುಕಲು ಹಪಹಪಿಸಬೇಕಿದೆ. ಜತೆಗೆ ತೋಟಗಾರಿಕೆಗೆ ಅನುಕೂಲವಾದ ರೀತಿಯಲ್ಲಿ ಭೂಮಿಯನ್ನು ವಿಂಗಡಿಸಿ ಹದಗೊಳಿಸುವ ವಿಧಾನವನ್ನು ಮನಗಾಣಬೇಕು. ಕೇವಲ ಶೇಂಗಾ ಬೆಳೆ ಜೊತೆ ಪಶುಪಾಲನೆಗೂ ತೊಡಗುವುದು ಉತ್ತಮ. ಇದು ತುಮಕೂರು ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರೂ ಮನಗಾಣುವುದು ಲೇಸು.

-ಬಾಲರಾಜ್ ಡಿ.ಕೆ