"ಶಾಶ್ವತ" ಮೇಕಪ್

"ಶಾಶ್ವತ" ಮೇಕಪ್

ಬರಹ

"ಶಾಶ್ವತ" ಮೇಕಪ್

"ಶಾಶ್ವತ" ಮೇಕಪ್
ಮೇಕಪ್ ಎಲ್ಲಿ
ಅಳಿಸಿಹೋಗುವುದೋ ಎಂದು ಬಹು ಜಾಗ್ರತೆ ಮಾಡಬೇಕಾದ ಅಗತ್ಯ ಮೇಕಪ್ ಮಾಡಿಕೊಂಡವರಿಗೆ
ತಪ್ಪಿದ್ದಲ್ಲ. ಆದರೀಗ "ಶಾಶ್ವತ" ಎಂದು ಹೇಳಬಹುದಾದ ಮೇಕಪ್‌ಗಳನ್ನು ಮಾಡುವ ವಿಧಾನ
ಜನಪ್ರಿಯವಾಗುತ್ತಿದೆ. ಐದು ವರ್ಷಗಳ ವರೆಗೂ ಈ ಮೇಕಪ್ ಉಳಿಯುತ್ತದಾದ್ದರಿಂದ, ಮೇಕಪ್‌ಗೆ
ಬಳಸಿದ ಬಣ್ಣದ ಬಗ್ಗೆ ಜಾಗ್ರತೆ ವಹಿಸಬೇಕು. ಅದನ್ನು ಬೇಕೆಂದಾಗ ಅಳಿಸಲು
ಬರುವುದಿಲ್ಲವಲ್ಲ!ಇಂತಹ ಶಾಶ್ವತ ಮೇಕಪ್‍ ಮಾಡಿಸಲು ಕೆಲವೊಮ್ಮೆ ಸ್ಥಳೀಯ
ಅರಿವಳಿಕೆಯನ್ನೂ ಕೊಡಬೇಕಾಗುತ್ತದಂತೆ.ಇದನ್ನು ಮೈಮೇಲೆ ಹಚ್ಚೆ ಹಾಕುವ ವಿಧಾನಕ್ಕೆ
ಹೋಲಿಸಿದರೆ ತಪ್ಪಿಲ್ಲ. ಕಣ್ಣಿನ ಸುತ್ತ ಛಾಯೆ ಕೊಡಲು,ಗಲ್ಲಕ್ಕೆ ರಕ್ತವರ್ಣ
ತುಂಬಲು,ತುಟಿಯ ಆಕಾರ ಇವನ್ನೆಲ್ಲಾ ಶಾಶ್ವತ ಮೇಕಪ್ಪಿನಲ್ಲಿ ಬದಲಿಸುವುದಿದೆ. ದೇಹಕ್ಕೆ
ಹಾನಿ ಮಾಡದ ನೈಸರ್ಗಿಕ ಬಣ್ಣಗಳು ಮತ್ತು "ಶಾಯಿ"ಯನ್ನುಬಳಸಲೂ ಬರುತ್ತದೆ.ಮೇಕಪ್
ಮಾಡುವಾಗ ಸೂಜಿಯ ಬಳಕೆಯೂ ಬೇಕಾಗಬಹುದು.ಹಾಗೆ ಮಾಡುವಾಗ ಹೊಸ ಸೂಜಿಯನ್ನೇ ಬಳಸುವ ಬಗ್ಗೆ
ಜಾಗ್ರತೆ ಅಗತ್ಯ.ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲೂ ಈ ವಿಧಾನ ಪ್ರಯೋಜನಕಾರಿ.
---------------------------------------------------------------
ಕರ್ನಾಟಕದಲ್ಲಿ ಸರಣಿ ನಗೆ ಸ್ಫೋಟ
"ವಾರೆಕೋರೆ"
ನಗೆ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಕನ್ನಡ ಜನತೆ
www.vaarekore.blogspot.comನ ಬ್ಲಾಗ್ ತಾಣದ ಮೂಲಕವೇ ಪಡೆದಿದ್ದರು. ಇದೀಗ
"ವಾರೆಕೋರೆ"ಯ ಚೊಚ್ಚಲ ಸಂಚಿಕೆಯು ಜನವರಿ ಇಪ್ಪತ್ತಮೂರರಂದು ಬಿಡುಗಡೆಯಾಗಲು ಸೂಟ್‌ಕೇಸ್
ಒಳಗಡೆ ಬೆಚ್ಚನೆ ಕುಳಿತಿವೆ.ನಗೆಬಾಂಬುಗಳು ಜನರ ಸರಣಿ ನಗೆಸ್ಫೋಟಕ್ಕೆ
ಕಾರ್‍ಅಣವಾಗಬಹುದೆಂಬ ಶಂಕೆ ವ್ಯಕ್ತವಾಗಿದೆ.ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್
ಶೆಟ್ಟಿಯವರ ನೇತೃತ್ವದಲ್ಲಿ ಬರುತ್ತಿರುವ ನಗೆಬಾಂಬನ್ನು ತಯಾರಿಸಲು ಅವರಿಗೆ ಸೋದರ
ಹರಿಣಿ,ಜೀವನ್ ಅವರಿಂದ ಹಿಡಿದು ಜೇಮ್ಸ್‌ವಾಜ್,ಕೆ ಆರ್ ಸ್ವಾಮಿ,ಶ್ರೀಧರ್,ಸತೀಶ್
ಶೃಂಗೇರಿ,ಗೋಪಾಲ್ ಹೀಗೆ ಹಲವು ನಗೋತ್ಪಾದಕರ ದಂಡೇ ಇದೆ.ಸಂಚಿಕೆಯ ಜತೆ ಉಚಿತವಾಗಿ ಸಿಗುವ
"ಕಾರ್ಟೂನ್ ಮಾಸ್ತರ" ಬ್ಲಾಗಿನ ಮೂಲಕವೂ ಅಂತರ್ಜಾಲದಲ್ಲಿ ಲಭ್ಯವಾಗಲಿದೆ.
-----------------------------------------------------------------
ತಂತ್ರಜ್ಞ ರಾಜಕೀಯ ಕಣಕ್ಕೆ!
ವ್ಯಂಗ್ಯಚಿತ್ರಕಾರನಾಗಿಯೂ
ಹೆಸರು ಮಾಡಿದ ಜನಾರ್ದನ ಸ್ವಾಮಿಯವರು,ಚಿಪ್ ವಿನ್ಯಾಸಕಾರನಾಗಿ ಅಮೆರಿಕಾದಲ್ಲಿ
ದುಡಿಯುತ್ತಿದ್ದರು. ಸನ್ ಮೈಕ್ರೋಸಿಸ್ಟಮ್ಸ್ ಕಂಪೆನಿಯ ಮುಖ್ಯ ಇಂಜಿನಿಯರ್
ಆಗಿದ್ದು,ಇತ್ತೀಚೆಗೆ ಭಾರತಕ್ಕೆ ಮರಳಿದ್ದರು.ಜನ ಸೇವೆ ಮಾಡಬೇಕು ಎನ್ನುವ ಅಭಿಲಾಷೆಯಿಂದ
ಅವರು ರಾಜಕೀಯ ಕಣಕ್ಕೆ ಧುಮುಕುವ ನಿರ್ಣಯ ಕೈಗೊಂಡಿದ್ದಾರಂತೆ.ಆರ್ಥಿಕ ದುಸ್ಥಿತಿಯಿಂದ
ಕಂಗೆಟ್ಟು,ರಾಜಕಾರಣಕ್ಕೆ ಬರುತ್ತಿದ್ದರೆ ಎಂದು ವ್ಯಂಗ್ಯಚಿತ್ರಕಾರ ಯಾರಾದರೂ ಜನಾರ್ದನ
ಸ್ವಾಮಿಯವರನ್ನು ಚಿತ್ರಿಸುವ ಅಪಾಯ ಇದ್ದೇ ಇದೆ! ಅವರು ರಚಿಸಿದ ವ್ಯಂಗ್ಯಚಿತ್ರಗಳು
www.jswamy.comನಲ್ಲಿ ಲಭ್ಯ.

----------------------------------------------------------
ಅಮೆರಿಕನ್ನರಿಗೆ ಹಲ್ಲು,ಭಾರತೀಯರಿಗೆ ಹೊಟ್ಟೆಗೆ ಹುಲ್ಲು!
ಹೊರಗುತ್ತಿಗೆಯೀಗ
ದಂತ ವೈದ್ಯಕೀಯ ರಂಗವನ್ನು ಮುಟ್ಟಿದೆ. ಅಮೆರಿಕಾದ ವೈದ್ಯರುಗಳೀಗ ತಮ್ಮ ರೋಗಿಗಳಿಗೆ
ಬೇಕಾದ ಹಲ್ಲಿನ ಸೆಟ್ ಮತ್ತು ಹಲ್ಲಿನ ಮುರಿದ ಭಾಗಗಳನ್ನು ರಿಪೇರಿ ಮಾಡಲು ಬಳಸುವ
ಹಲ್ಲಿನ ಮುಕುಟವನ್ನು ಭಾರತದ ದಂತ ಪ್ರಯೋಗಾಲಯಗಳಿಂದ ಆಮದು ಮಾಡಿಕೊಳ್ಳುವ ಪದ್ಧತಿ
ಜನಪ್ರಿಯವಾಗುತ್ತಿದೆ.ಅಮೆರಿಕಾದ ವೈದ್ಯರು ರೋಗಿಯ ಹಲ್ಲಿನ ಅಚ್ಚನ್ನು ಅಂತರ್ಜಾಲದ ಮೂಲಕ
ಭಾರತಕ್ಕೆ ರವಾನಿಸುತ್ತಾರೆ.ಅಚ್ಚಿಗೆ ಅನುಸಾರ ಮುಕುಟವನ್ನು ತಯಾರಿಸಿ,ಅಮೆರಿಕಾಕ್ಕೆ
ರವಾನಿಸಲಾಗುತ್ತದೆ. ಮೊದಲೆಲ್ಲಾ ಈ ಕೋರಿಕೆಗಳು ಚೀನಾಕ್ಕೆ ಹೋಗುತ್ತಿದ್ದುದೇ ಹೆಚ್ಚು.
ಅದರೀಗ ಚೀನಾ ದುಬಾರಿಯಾಗಿ ಬಿಟ್ಟಿದೆ. ರುಪಾಯಿ ಡಾಲರು ವಿರುದ್ಧ ಕುಸಿದ
ನಂತರವಂತೂ,ಭಾರತದಲ್ಲಿ ಈ ಕೆಲಸ ಮಾಡಿಸಿದರೆ ಶೇಕಡಾ ಇಪ್ಪತ್ತು ಲಾಭವಾಗುತ್ತದಂತೆ.
-------------------------------------------------------------------------------

ಕಂಪ್ಯೂಟರ್ ಜಾಲವನ್ನು ಹೊಕ್ಕಿರುವ "ಹುಳು"

ವಿಶ್ವದ
ಕಂಪ್ಯೂಟರ್ ಜಾಲಗಳನ್ನು ಬಾಧಿಸುತ್ತಿರುವ "ಹುಳು’ ಪ್ರೊಗ್ರಾಮ್ ಒಂದು ಹತ್ತಿರ ಹತ್ತಿರ
ಒಂದು ಕೋಟಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಬಾಧಿಸಿದೆ. ಇದರಿಂದ
ಬಾಧೆಗೊಳಗಾಗಿರುವ ಕಂಪ್ಯೂಟರುಗಳನ್ನು ಹ್ಯಾಕರುಗಳು ತಮ್ಮ ನಿಯಂತ್ರಣಕ್ಕೆ
ತೆಗೆದುಕೊಳ್ಳುವ ಭೀತಿ ಇದೆ. ಈ "ಹುಳು" ಕಂಪ್ಯೂಟರನ್ನು ಬಾಧಿಸಿ, ನಂತರ ತನ್ನ
"ತವರಿ"ಗೆ ಸುದ್ದಿ ಮುಟ್ಟಿಸಲು,ಜನರು ಬಳಸುವ ಸಣ್ಣ ಪಾಸ್‌ವರ್ಡ್‌ಗಳನ್ನು
ಪ್ರಯತ್ನಿಸಿ,ಕಂಪ್ಯೂಟರಿನ ಖಾತೆಗಳನ್ನು ಮುರಿಯಲು ಶಕ್ತವಾಗಿದೆ. ಎರಡು ಮೂರು ತಪ್ಪು
ಪಾಸ್‌ವರ್ಡ್ ಕೊಟ್ಟಾಗ ಲಾಕ್ ಆಗುವ ವ್ಯವಸ್ಥೆಯಿದ್ದರೆ,ಖಾತೆಯನ್ನು ಬಳಸಲಾಗದಂತೆ ಲಾಕ್
ಆಗುವ ಘಟನೆಗಳು ನಡೆದಿವೆ.ಮೈಕ್ರೋಸಾಫ್ಟ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್
ಭದ್ರತಾ ಕೊರೆಯನ್ನು ಬಳಸಿಕೊಂಡು ಇದು ಕೆಲಸ ಮಾಡುತ್ತದೆ.MS08-067 ಎನ್ನುವ ಸಣ್ಣ
ತಂತ್ರಾಂಶವನ್ನು ಕಂಪ್ಯೂಟರಲ್ಲಿ ಅಳವಡಿಸಿದರೆ, ಇದರಿಂದ ಮುಕ್ತಿ ಸಿಗುತ್ತದೆ.ಮನೆಯಲ್ಲಿ
ಬಳಸುವ ಕಂಪ್ಯೂಟರುಗಳನ್ನು ಹುಳು(ವರ್ಮ್) ಬಾಧಿಸಿಲ್ಲ.ಕಂಪೆನಿಗಳಿಗೆ ಬಾಧಿಸಿದ್ದೇ
ಹೆಚ್ಚು.ಫ್ಲಾಶ್ ಡ್ರೈವ್ ಮೂಲಕವೂ ಈ ಕಂಪ್ಯೂಟರ್ ವರ್ಮ್ ಹಬ್ಬುವುದು ಕಂಡು ಬಂದಿದೆ.
---------------------------------------------------------------------
ಕೆಲವು ಟೆಕ್ ದುರಭ್ಯಾಸಗಳು
ತಂತ್ರಜ್ಞಾನದ
ಸದ್ಬಳಕೆಯನ್ನು ಮಾಡುವವರಿಗಿಂತ ಅದರ ದುರ್ಬಳಕೆಯನ್ನು ಮಾಡುವವರೇ ಹೆಚ್ಚು.ಕೆಲವು
ತಂತ್ರಜ್ಞಾನ ಪರಿಣತರಲ್ಲಿ ಕಾಣಿಸುವ ದುರಭ್ಯಾಸಗಳನ್ನು ಪಟ್ಟಿ ಮಾಡುವುದಿದ್ದರೆ:
*ಎದುರಿಗೆ ಕುಳಿತ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದೆ,ಐಫೋನಿನ ಮೇಲೆ ಕಣ್ಣಿಡುವುದು.
*ತಮಗೆ ಬಂದ ಸಂದೇಶವನ್ನು ತಮಗೆ ತಿಳಿದವರಿಗೆಲ್ಲಾ ಮುಟ್ಟಿಸುವುದು.
*ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ.
*ತಮಗೆ ಬೇಕಾದ ಮಾಹಿತಿಯನ್ನು ಗೂಗಲ್ ಅಂತಹ ಶೋಧ ಸೇವೆಯ ಮೂಲಕ ಹುಡುಕುವುದು ಬಿಟ್ಟು,ಗೆಳೆಯರ ಮೊರೆ ಹೋಗುವುದನ್ನೇ ಅಭ್ಯಾಸ ಮಾಡಿಕೊಂಡಿರುವುದು.
------------------------------------------------------------
ಆನ್‌ಲೈನಿನಲ್ಲಿ ರೈತರ ಉತ್ಪನ್ನಗಳ ಮಾರಾಟ
www.foodzie.com
ಎನ್ನುವುದು ರೈತರ ಉತ್ಪನ್ನಗಳ ಮಾರಾಟಕ್ಕಾಗಿಯೇ ಹುಟ್ಟಿರುವ ಅಂತರ್ಜಾಲ ತಾಣ.ಕಳೆದ
ತಿಂಗಳಷ್ಟೇ ವರ್ಜಿನಿಯಾ ಟೆಕ್‌ನ ವಿದ್ಯಾರ್ಥಿಯೊಬ್ಬ ಹುಟ್ಟುಹಾಕಿದ ತಾಣ ರೈತರಿಗೆ
ಲಭ್ಯವಾಯಿತು.ರೈತರು ತಮ್ಮ ಹಾಲು-ಹೈನು ಉತ್ಪನ್ನಗಳನ್ನು, ಸಾವಯವ ಕೄಶಿಯಿಂದ ಬೆಳೆದ
ಉತ್ಪನ್ನಗಳನ್ನು ಈ ತಾಣದ ಮೂಲಕ ಬಳಕೆದಾರರಿಗೆ ಮುಟ್ಟಿಸಲು
ಪ್ರಯತ್ನಿಸುತ್ತಿದ್ದಾರೆ.ಈಗಾಗಲೇ ಐವತ್ತು ಬೆಳೆಗಾರರು ನೋಂದಾಯಿಸಿ ಕೊಂಡಿದ್ದಾರೆ.
ಖರೀದಿದಾರರ ವಿವರ ಪಡೆದು, ವಸ್ತುವಿನ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಡೆದು,
ಅಂತಹ ವಸ್ತುಗಳನ್ನು ಕೊರಿಯರ್ ಮೂಲಕ ರವಾನೆಗೆ ವಿಳಾಸ, ವಸ್ತುವಿನ ವಿವರ ಮಾಹಿತಿಯನ್ನು
ರೈತರಿಗೆ ಮೂಲಕ ಮುಟ್ಟಿಸಲು ಈ ತಾಣ ವ್ಯವಸ್ಥೆ ಮಾಡುತ್ತಿದೆ.
---------------------------------------------------------------------
ಅಂಧರಿಗೆ ದಾರಿ "ತೋರಿಸುವ" ಕ್ಯಾಮರಾ!
ಅಂಧರಿಗೆ
ನಡೆಯಲು ಸಹಾಯ ಮಾಡುವ ಅಲ್ಟ್ರ್‍ಆ ಸೌಂಡ್ ಆಧಾರಿತ ಬೆತ್ತ,ಧ್ವನಿ ಮೂಲಕ ವ್ಯಕ್ತಿಗೆ
ಮಾರ್ಗದರ್ಶನ ಮಾಡುವ ಜಿ ಪ್ ಎಸ್ ವ್ಯವಸ್ಥೆಯನ್ನು ಬದಿಗೆ ಸರಿಸುವ ಹೊಸ ತಂತ್ರಜ್ಞಾನವೀಗ
ಬಂದಿದೆ.ಬೆರಳ ತುದಿಗೆ ಧರಿಸುವ ಕ್ಯಾಮರಾ ಲಭ್ಯವಿದೆ. ಕಂಪ್ಯೂಟರ್ ಮೂಲಕ ಈ ಕ್ಯಾಮರಾ
ಸೆರೆ ಹಿಡಿದ ಚಿತ್ರಗಳನ್ನು ವಿಶ್ಲೇಷಿಸಿ,ನಡಿಗೆಗೆ ಇರುವ ಅಡ್ಡಿ-ಆತಂಕಗಳನ್ನು
ಕಂಡುಕೊಂಡು ಎಚ್ಚರಿಕೆ ನೀಡುವುದು ಸಾಧ್ಯ.ಹಾಗೆಯೇ ವ್ಯಕ್ತಿಗೆ ಬೇಕಾದ ವಸ್ತುವಿನ ಬಳಿ
ಆತ ಬಂದಾಗ ಆತನಿಗೆ ಸೂಚನೆ ಕೊಡಲೂ ಇದನ್ನು ಬಳಸಬಹುದು.ಈ ಬೆರಳ ತುದಿಯ ಕ್ಯಾಮರಾವು
ಕಂಪಿಸುವ ಮೂಲಕ ವ್ಯಕ್ತಿಗೆ ಸೂಚನೆ ಕೊಡುವ ವ್ಯವಸ್ಥೆಯಿದೆ.
----------------------------------------------------------
udayavani
ashokworld