ನನ್ನ ಕಂಪ್ಯೂಟರ್‍ ಅನುಭವಗಳು -೧

ನನ್ನ ಕಂಪ್ಯೂಟರ್‍ ಅನುಭವಗಳು -೧

ನನ್ನ ಕಂಪ್ಯೂಟರ್‍ ಅನುಭವಗಳು

ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ , ನಮ್ಮ ಕಾಲೇಜಲ್ಲಿ ಕಂಪ್ಯೂಟರ್‍ ಇರಲಿಲ್ಲ. ಕೊನೇ ವರ್ಷದ ಪ್ರಾಜೆಕ್ಟಿಗೆ ಕಂಪ್ಯೂಟರ್‍ ಬೇಕಾದವರು IIScಗೋ ಬೇರೆಲ್ಲಿಗೋ ಹೋಗುತ್ತಿದ್ದರು. ನಮ್ಮ ಸಿಲಬಸ್ಸಿನಲ್ಲಿಯೂ ಕಂಪ್ಯೂಟರ್‍ ಬಗ್ಯೆ ಯಾವುದೇ ಕೋರ್ಸ್ ಇರಲಿಲ್ಲ. ಯಾವುದೋ ಒಂದು ಕೋರ್ಸಿನಲ್ಲಿ (ನೆನಪಿಲ್ಲ) ಒಂದು ಅಧ್ಯಾಯ ಕಂಪ್ಯೂಟರ್‍ ಮೇಲಿತ್ತು. ಪರೀಕ್ಷೆಯಲ್ಲಿ ಐದು ಮಾರ್ಕ್ ಇದರ ಬಗ್ಯೆ ಇರುತ್ತಿತ್ತು. ಬೇರೆ choice ಇದ್ದದ್ದರಿಂದ ನಾನು ಈ ಅಧ್ಯಾಯ ಓದಲೇ ಇಲ್ಲ. ಅಂತೂ ಕಂಪ್ಯೂಟರ್‍ ನೋಡದೆಯೇ, ಅಂದರೇನು ಅಂತ ತಿಳಿದುಕೊಳ್ಳದೆಯೇ ನಾನು ಎಂಜಿನಿಯರ್‍ ಆದೆ.

ಮುಂದಿನ ಓದಿಗಾಗಿ ಮದರಾಸಿಗೆ (ಇಂದಿನ ಚೆನ್ನೈ)ಗೆ ಹೋದರೆ , ಅಲ್ಲಿ ದೊಡ್ಡ ಕಂಪ್ಯೂಟರ್‍ ಸೆಂಟರೇ ಇತ್ತು.

ಅಲ್ಲಿಯ ಕಂಪ್ಯೂಟರ್‍ ಸೆಂಟರಿನಲ್ಲಿ ಪಂಚ್ ಕಾರ್ಡ್ ವ್ಯವಸ್ಥೆ ಇತ್ತು. ಟೈಪರೈಟರ್‍ ತರಹದ ಮಶಿನಿನಲ್ಲಿ ಪ್ರೋಗ್ರಾಮಿನ ಸ್ಟೇಟಮೆಂಟುಗಳನ್ನು ಟೈಪು ಮಾಡಿದರೆ, ಅದು ಕಾರ್ಡಿನ ಮೇಲೆ ಪಂಚಾಗಿ ಹೊರಬರುತ್ತಿತ್ತು. ಈ ಪಂಚಿಂಗ್ ಮೆಶಿನಿನ ಉಪಯೋಗಕ್ಕೂ time slot ಕಾದಿಡಬೇಕಾಗಿತ್ತು. ರಾತ್ರಿ ಹನ್ನೆರಡು, ಒಂದು ಹೀಗೆ ಅಪರಾತ್ರಿಯಲ್ಲಿಯೂ ಪಂಚಿಂಗ್ ಮಾಡುತ್ತಿದ್ದೆವು. ಇಂಥಾ ಕಾರ್ಡಿನ ಕಟ್ಟು (deck) ಸೆಂಟರಿನವರಿಗೆ ಕೊಟ್ಟರೆ , ಅದನ್ನು ಫೀಡ್ ಮಾಡಿ ಔಟ್ ಪುಟ್ ಕೊಡುತ್ತಿದ್ದರು. ಇದಕ್ಕೆ ಸಾಧಾರಣ ಒಂದು ದಿನ, ಅರ್ಜಂಟ್ ಇದ್ದರೆ ಕೆಲ ಘಂಟೆಗಳು , ಬೇಕಾಗುತ್ತಿತ್ತು. ಕಷ್ಟಪಟ್ಟು ಕಾರ್ಡು ಕಟ್ಟು ತಯಾರಿಸಿ ಕೊಟ್ಟು ಮಾರನೆಯ ದಿನ ಔಟ್ ಪುಟ್ ಬಂದಿರಬಹುದೆಂಬ ನಿರೀಕ್ಷೆಯಲ್ಲಿ ಬಹಳ ಸಂಭ್ರಮದಿಂದ ಬಂದರೆ, ಅಲ್ಲಿ ಅರ್ಧ ಪೇಜಿನ ಔಟ್ ಪುಟ್ನಲ್ಲಿ ಸಿಂಟ್ಯಾಕ್ಸ್ ತಪ್ಪುಗಳ ಲಿಸ್ಟುಗಳಿರುತ್ತಿದ್ದವು. ಸರಿ ಮತ್ತೆ , ಪಂಚುಮಾಡಿ. ತಪ್ಪು ಕಾರ್ಡುಗಳನ್ನು ಬದಲಾಯಿಸಿ ಕೊಟ್ಟರೆ, ಅದೃಷ್ಟ ಸರಿಯಾಗಿದ್ದರೆ ಗಾಡಿ ಮುಂದೆ ಓಡುತ್ತಿತ್ತು ಇಲ್ಲ ಮತ್ತೆ ಯಥಾ ಪ್ರಕಾರ ಸಿಂಟ್ಯಾಕ್ಸ್!!. ಅಂತೂ ಈ ಥರ ಸಿಂಟ್ಯಾಕ್ಸ್, ಲಾಜಿಕಲ್, ಕಂಪೈಲೇಷನ್ ಇತ್ಯಾದಿ ಬಗೆಬಗೆಯಾದ ತಪ್ಪುಗಳನ್ನು ಪರಿಹರಿಸಿಕೊಂಡು ಸರಿಯಾಗಿ ಔಟ್ ಪುಟ್ ಬರುವ ಹೊತ್ತಿಗೆ ಕೆಲವು ದಿನಗಳೇ ಕಳೆದಿರುತ್ತಿದ್ದವು. ಒಂದು ಸಣ್ಣ ಹೆರಿಗೆ ಅನುಭವ!

ಕಂಪ್ಯೂಟರ್‍ ಸೆಂಟರಿನ ಒಳಗೆ ನಮ್ಮಂಥ ಹುಲುಮಾನವರಿಗೆ ಪ್ರವೇಶ ಇರಲಿಲ್ಲ. ಅದೇನಿದ್ದರೂ ಅಲ್ಲಿ ಕೆಲಸಮಾಡುವವರಿಗೆ, ಪ್ರೊಫೆಸರುಗಳಿಗೆ ಇತ್ಯಾದಿಗಳಿಗೆ ಮಾತ್ರಾ. ಹೀಗಾಗಿ ಆ main frame ಕಂಪ್ಯೂಟರ್‍ ನೋಡಲೇ ಇಲ್ಲ.

ಮತ್ತೆ ಡಿಪಾರ್ಟ್‌ಮೆಂಟುಗಳಲ್ಲಿ PDP11 ಮಿನಿ ಕಂಪ್ಯೂಟರ್‍ ಇದ್ದವು. ಅದರಲ್ಲಿ ಪ್ರೊಗ್ರಾಮ್ ಲೋಡ್ ಮಾಡಿ ಎಕ್ಸಿಗ್ಯೂಟ್ ಆದೇಶ ಕೊಟ್ಟರೆ ಸುಮಾರು ೨೫-೩೦ ನಿಮಿಷದ ನಂತರ ಔಟ್ ಪುಟ್ ಬರುತ್ತಿತ್ತು.

ಮದರಾಸಿನಲ್ಲಿ ಮೊದಲ ಸೆಮಿಸ್ಟರಿನಿಂದ FORTRAN ಶುರುಮಾಡಿದರು. ಅಲ್ಲಿಂದ ಬಿಡುವಾಗ ಕಂಪ್ಯೂಟರ್‍ ಅಪ್ಲಿಕೇಷನ್ಸ್ ಬಗ್ಯೆ ಮೂರು ನಾಲ್ಕು ಕೋರ್ಸ್ ಮಾಡಿದ್ದು ಅಲ್ಲದೆ, ನನ್ನ ಪ್ರಧಾನ ಪ್ರಾಜೆಕ್ಟ್ ಕೂಡಾ main frame ಮೇಲೆ ಮಾಡಿದೆ. ಅಂತೂ ಅಲ್ಲಿಂದ ಹೊರಬೀಳುವ ಹೊತ್ತಿಗೆ ಕಂಪ್ಯೂಟರ್‍ ಬಗ್ಯೆ ತಕ್ಕ ಮಟ್ಟಿಗೆ ತಿಳುವಳಿಕೆ ಬಂದಿತ್ತು. ಮುಂದೆ ಕೆಲಸಕ್ಕೆ ಸೇರಿದಾಗ ನನ್ನ ಅಲ್ಲಿಯ automation ವಿಭಾಗಕ್ಕೆ ಹಾಕಿದರು.

ಮುಂದುವರಿಯುವುದು........

Rating
No votes yet

Comments