ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ

ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ

ಬರಹ

ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ.

ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು . ಆದರೆ ಪ್ರತಿಯೊಬ್ಬ ದುಷ್ಟನಿಗೂ ಪ್ರತಿಯಾಗಿ ಗುಣಶಾಲಿ ನಾಯಕನಿರುತ್ತಾನೆ , ಪ್ರತಿಯೊಬ್ಬ ಸ್ವಾರ್ಥಿ ರಾಜಕಾರಣಿಗೂ ಪ್ರತಿಯಾಗಿ ಆದರ್ಶಗಳಿಗೆ ತನ್ನನ್ನು ಸಮರ್ಪಿಸಿಕೊಂಡ ಜನನಾಯಕನೊಬ್ಬನಿರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ.

ಶತ್ರುಗಳಿರುವಂತೆಯೇ ಮಿತ್ರರೂ ಇರುತ್ತಾರೆ ಎಂಬುದನ್ನು ಅವನಿಗೆ ಕಲಿಸಿ .

ಬಿಟ್ಟಿಯಾಗಿ ದೊರೆತ ಐದು ಡಾಲರ್ ಗಿಂತ ಶ್ರಮ ವಹಿಸಿಗಳಿಸಿದ ಒಂದು ಡಾಲರ್ ಹೆಚ್ಚು ಬೆಲೆಯುಳ್ಳದ್ದು ಎಂಬುದನ್ನು ಅವನಿಗೆ ಕಲಿಸಿ .

ಚೆನ್ನಾಗಿ ನಗುವುದರ ಮಹತ್ವವನ್ನು ಅವನಿಗೆ ಮನಗಾಣಿಸಿ .

ಗ್ರಂಥಗಳ ಮಹಿಮೆಯನ್ನು ಅವನಿಗೆ ತಿಳಿಸಿ . ಆದರೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳ ಸುಖದ ಸೂರ್ಯರಶ್ಮಿಯಲ್ಲಿ ಮೀಯುವ ದುಂಬಿಗಳ ಮತ್ತು ಬೆಟ್ಟದ ತಪ್ಪಲಲ್ಲಿ ಹಸಿರು ಹಿನ್ನೆಲೆಯ ಹೂಗಳ ಚಿರಂತನ ಕೌತುಕವನ್ನು ಆಸ್ವಾದಿಸಲೂ ಅವನಿಗೆ ಅವಶ್ಯವಾಗಿ ಅವಕಾಶ ಕೊಡಿ.

ಮೋಸ ಮಾಡುವದಕ್ಕಿಂತ ಸಹಜವಾಗಿ ಸೋಲೊಪ್ಪುವದು ಒಂದು ಘನತೆವೆತ್ತ ನಡಾವಳಿಕೆ ಎಂದು ಅವನಿಗೆ ಕಲಿಸಿ.

ಪ್ರತಿಯೊಬ್ಬರೂ ಅವನ ಅಭಿಪ್ರಾಯಗಳು ತಪ್ಪೆಂದರೂ ತನ್ನ ಸ್ವಂತ ಅಭಿಪ್ರಾಯದಲ್ಲಿ ಶೃದ್ಧೆ ಉಳಿಸಿಕೊಳ್ಳುವದನ್ನೂ ಅವನಿಗೆ ಕಲಿಸಿ.

ಗುಂಪನ್ನು ಕುರುಡಾಗಿ ಅನುಕರಿಸದಂತೆಯೂ ಹತ್ತರಲ್ಲಿ ಹನ್ನೊಂದನೆಯವನಾಗದಂತೆಯೂ ಅವನಿಗೆ ಶಕ್ತಿ ನೀಡಲು ಪ್ರಯತ್ನಿಸಿ.

ದು:ಖಿತನಾಗಿದ್ದರೂ ಹೇಗೆ ನಗಬೇಕೆಂಬುದನ್ನು ಅವನಿಗೆ ಕಲಿಸಿ.

ಕಣ್ಣೀರಿಡುವದು ನಾಚಿಕೆಯ ವಿಷಯವಲ್ಲ ಎಂದು ಅವನಿಗೆ ಕಲಿಸಿ .

ಅರಚಿಕೊಳ್ಳುವ ಜನಜಂಗುಳಿಯ ಮಾತುಗಳಿಗೆ ಕಿವಿ ಮುಚ್ಚಿಕೊಂಡು ತನಗೆ ಸರಿ ಎನಿಸಿದ್ದಕ್ಕಾಗಿ ಹೋರ್‍ಆಡಲು ಅವನಿಗೆ ಕಲಿಸಿ.

ಅವನನ್ನು ಪ್ರೀತಿಯಿಂದ ನೋಡಿಕೊಳ್ಳಿ . ಆದರೆ ಅತಿಮುದ್ದು ಬೇಡ . ಏಕೆಂದರೆ ಕುಲುಮೆಯೊಳಗೆ ಬೆಂದ ಕಬ್ಬಿಣವೇ ಗಟ್ಟಿಯಾಗುವದು .

ಸೃಷ್ಟಿಕರ್ತನಲ್ಲಿ ಮತ್ತು ತನ್ನಲ್ಲಿ ಶೃದ್ಧೆಯಿಡುವಂತೆ ಅವನಿಗೆ ಕಲಿಸಿ . ಇದರಿಂದ ಇಡೀ ಮನುಕುಲದಲ್ಲಿ ಶೃದ್ಧೆ ಉಳಿಯುತ್ತದೆ .

ಇದೊಂದು ದೊಡ್ಡ ಪಟ್ಟಿ . ಆದರೆ ದಯವಿಟ್ಟು ನಿಮಗೇನು ಮಾಡಲಾದೀತು ನೋಡಿ.