ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

ನಾನು ಹೇಳ್ತಿರೋದು ಬಾಲಿವುಡ್, ಹಾಲಿವುಡ್ ಅಥ್ವಾ ಸ್ಯಾಂಡಲ್ವುಡ್ ನಕ್ಷತ್ರಗಳ ಬಗ್ಗೆ ಅಲ್ಲ ಸ್ವಾಮಿ. ಆದ್ರೂ ನಮ್ಗೆಂತಹ ಕಾಪೀಕ್ಯಾಟ್ ಮನೋಭಾವ ಅಲ್ವಾ? ಹಾಲಿವುಡ್ ನ ಕಾಪಿ ಮಾಡಿ ಬಾಂಬೇನವರು ಬಾಲಿವುಡ್ ಅಂದ್ರೆ, ನಮ್ಮೋರು ಅದನ್ನೂ ಕಾಪಿ ಮಾಡ್ಬೇಕಾ? ಈ ರೀತಿ ಕಾಪೀ ಮಾಡಿದ್ದನ್ನ ಕಾಪೀ ಮಾಡಿ, ಆಮೇಲೆ ನಮ್ಮ ಚಿತ್ರಗಳನ್ನ ಕನ್ನಡಿಗರು ಪ್ರೋತ್ಸಾಹಿಸಲ್ಲ ಅಂತಾರಲ್ಲ ಸಿನಿಮಾ ಮಂದಿ, ಅದಕ್ಕೇನು ಹೇಳೋಣ?

ಅದಿರ್ಲಿ. ಏನೋ ಹೇಳಕ್‍ಹೊರಟು ಇನ್ನೇನೋ ಹೇಳೋದು ನನಗೊಂದು ಚಟವೋ ಕಾಯಿಲೆನೋ  ಗೊತ್ತಾಗ್ತಿಲ್ಲ. ಬಿಟ್‍ಹಾಕಿ ಅದನ್ನ. ಈಗ ನಾನು ಮಾತಾಡ್ತಿರೋದು ನಿಜವಾಗಿ, ಅಂದ್ರೆ ಆಕಾಶ್ದಲ್ಲಿ ಹೊಳೆಯೋ ನಕ್ಷತ್ರಗಳ ಬಗ್ಗೆ. ಒಂದು ದಿನ ಚಂದ್ರ ಇಲ್ದೇ ಇರೋವಾಗ ಒಂದು ಕತ್ತಲಾಗಿರೋ ಜಾಗಕ್ಕೆ ಹೋಗಿ ತಲೆ ಎತ್ತಿ ನೋಡಿ. ಎಷ್ಟೋ ನಕ್ಷತ್ರಗಳು ಹೊಳೀತಾ ಇರುತ್ತವೆ. ಒಂದೊಂದೂ ಒಂದೊಂದು ಬಣ್ಣ! ಒಂದೊಂದು ವಿಧ. ಮುಖ್ಯವಾಗಿ ನೀವು, ನೀಲಿ (ಅಥವಾ ನೀಲಿಬಿಳಿ), ಬಿಳಿ, ಹಳದಿ (ಅಥವಾ ಮಾಸಲು ಹಳದಿ ಅನ್ನೋಣ), ಕೇಸರಿ, ತಿಳಿಗೆಂಪು ಮತ್ತೆ ಕಡುಗೆಂಪು ಬಣ್ಣದ ನಕ್ಷತ್ರಗಳನ್ನ ಸುಲಭವಾಗಿ ಗುರ್ತಿಸಬಹುದು. ಕೆಲವು ಹೆಚ್ಚು ಬೆಳಗ್ತಿದ್ರೆ ಕೆಲವು ಕಡಿಮೆ. ಆದ್ರೆ, ಎಲ್ಲಾ ತಾರೆಗಳಿಗೂ ಹೆಸರುಗಳಿವೆಯೇ ಅಂತ ನೀವು ಯಾವತ್ತಾದ್ರೂ ಯೋಚಿಸಿದ್ರಾ?

ಬಹಳ ಪ್ರಕಾಶಮಾನವಾಗಿರೋ ನಕ್ಷತ್ರಗಳಿಗೆ ಸಾಧಾರಣವಾಗಿ ಹೆಸರುಗಳಿರುತ್ತವೆ. ನಮ್ಮ ಭಾರತೀಯ ಭಾಷೆಗಳಲ್ಲಿ, ಎಲ್ಲ ಕಡೆಯೂ ಸಂಸ್ಕೃತದಲ್ಲಿ ಇರುವ ಹೆಸರುಗಳೇ ರೂಢಿಯಲ್ಲಿವೆ. ಎಲ್ಲರಿಗೂ ಗೊತ್ತಿರೋ ಅಶ್ವಿನಿ, ಭರಣಿ ಮೊದಲಾದ ೨೭ ನಕ್ಷತ್ರಗಳಲ್ಲದೆ, ಇನ್ನು ಕೆಲವು ನಕ್ಷತ್ರಗಳಿಗೆ ಮಾತ್ರ ಸಂಸ್ಕೃತ ಹೆಸರುಗಳು ದೊರೆಯುತ್ತವೆ. ಧ್ರುವ, ಅಭಿಜಿತ್, ಸಪ್ತ ಋಷಿಗಳು, ಆರುಂಧತಿ, ಮತ್ತೆ ಅಗಸ್ತ್ಯ, ಲುಬ್ಧಕ ಮೊದಲಾದುವು ರಾಶಿ ಚಕ್ರದಿಂದ ಹೊರಗಿದ್ದರೂ ಹೆಸರಿರುವ ತಾರೆಗಳು. ಅದು ಬಿಟ್ಟು ಬೇರೆ ನಕ್ಷತ್ರಗಳಿಗೆ ನಮ್ಮದೇ ಆದ ಹೆಸರುಗಳಿಲ್ಲ. ಆದ್ದರಿಂದ ಇಂಗ್ಲಿಷ್ ಹೆಸರುಗಳನ್ನೇ ಬಳಸುವುದು ಇಂದಿನ ರೂಢಿ.ಇಂಗ್ಲಿಷ್ ನಲ್ಲಿ ಇರೋ ಹೆಸರುಗಳು ಹೆಚ್ಚಿನವು ಅರಬೀ ಭಾಷೆಯಿಂದ ಬಂದಿವೆ. ಇನ್ನೂ ಗ್ರೀಕ್, ಅಥವಾ ರೋಮನ್ ಮೂಲದವೂ ಕೆಲವು ಇವೆ.

ಅಂದಹಾಗೆ, ರಾಶಿಚಕ್ರದಲ್ಲಿರುವ ಅನೇಕ ನಕ್ಷತ್ರಗಳು, ಅಥವಾ ಹೆಸರಿರೋ ಕೆಲವು ನಕ್ಷತ್ರಗಳು ಅಂತಹ ಪ್ರಕಾಶಮಾನವಾದುವಲ್ಲ. ಇದರ ಅರಿವಿಲ್ಲದೇ ಕೆಲವರು ಧ್ರುವ ನಕ್ಷತ್ರ ಅತೀ ಪ್ರಕಾಶಮಾನವಾಗಿರುತ್ತೆ ಅಂದ್ಕೊಂಡಿರ್ತಾರೆ. ಆದ್ರೆ ಅದು ತಪ್ಪು ಅಭಿಪ್ರಾಯ.

ಬರಿಗಣ್ಣಿಗೆ ಕಾಣೋ ಸಾವಿರಾರು ನಕ್ಷತ್ರಗಳಿಗೆಲ್ಲ ಹೆಸರು ಕೊಡೋದು ಒಂದು ಕಷ್ಟದ ಕೆಲಸವೇ. ಅದಕ್ಕೇ ಸುಲಭದ ವ್ಯವಸ್ಥೆಗಳಿವೆ. ಆಕಾಶವನ್ನ ತಾರಾಪುಂಜ (constellations) ಗಳಲ್ಲಿ ವಿಂಗಡಿಸಿ, ಪ್ರತಿ ತಾರಾಪುಂಜದಲ್ಲಿ ನಕ್ಷತ್ರಗಳನ್ನು ಗ್ರೀಕ್ ಅಕ್ಷರಗಳಿಂದ ಗುರುತಿಸುವುದು ಒಂದು  ವಿಧ. ಉದಾಹರಣೆಗೆ ಸೆಂಟಾರಸ್ ಅನ್ನೋದೊಂದು ತಾರಾಪುಂಜ. ಅದರಲ್ಲಿ ಅತೀ ಪ್ರಕಾಶಮಾನವಾಗಿ ಕಾಣೋ ನಕ್ಷತ್ರಕ್ಕೆ ಆಲ್ಫಾ ಸೆಂಟಾರಸ್ ಅಂತಲೂ, ಎರಡನೇ ಪ್ರಕಾಶಮಾನವಾದ ತಾರೆಗೆ ಬೀಟಾ ಸೆಂಟಾರಸ್ ಅಂತ ಹೇಳೋದೂ, ಮತ್ತೆ ನಂತರ ಬರೋ ನಕ್ಷತ್ರಗಳಿಗೆ ಗಾಮಾ, ಡೆಲ್ಟಾ ಇತ್ಯಾದಿ ಸೂಚಿಸೋದೂ ಸಾಮಾನ್ಯವಾಗಿ ಬಳಸೋ ವಿಧಾನ. ಆದರೆ ದೂರದರ್ಶಕಗಳಲ್ಲಿ ನೋಡಿದಾಗ ಬರಿಗಣ್ಣಿಗೆ ಕಾಣುವ ಹತ್ತರಷ್ಟು, ನೂರರಷ್ಟು, ಸಾವಿರದಷ್ಟು ನಕ್ಷತ್ರಗಳಿ ಕಾಣುವುದರಿಂದ, ಅದಕ್ಕೆ ಇನ್ನೊಂದು ಹೊಸ ದಾರಿ ಇದೆ. ಭೂಮಿಗೆ ರೇಖಾಂಶವನ್ನು ಹೇಳೋ ರೀತಿ, ಆಕಾಶದಲ್ಲಿ ರೈಟ್ ಅಸೆನ್ಶನ್ - ಅಂದರೆ, ಮೇಷಾದಿ ಬಿಂದುವಿನಿಂದ ಒಂದು ನಕ್ಷತ್ರ ಎಷ್ಟು ದೂರವಿದೆ ಅಂತಹೇಳೋ ಕಾಲ್ಪನಿಕ ಗೆರೆಗಳನ್ನು ಎಳೆದು, ಒಂದು ಪುಂಜದ್ಲಲಿರೋ ನಕ್ಷತ್ರಗಳನ್ನೆಲ್ಲ, ಅವುಗಳ RA ಮೇಲೆ ಪಟ್ಟಿ ಮಾಡಿ, ೧,೨,೩, .. ಅನ್ನೋ ಅಂಕೆ ಕೊಡೋದೇ ಈ ವಿಧಾನ. ಅಂದ್ರೆ ನಕ್ಷತ್ರಗಳಿಗೆ ೧ ಸೆಂಟಾರಸ್, ೨ ಸೆಂಟಾರಸ್, ೨ ಸೆಂಟಾರಸ್ ಎಂದು ಇರುತ್ತವೆ. ಇಲ್ಲಿರೋ ಅಂಕೆಗೂ ನಕ್ಷತ್ರದ ಪ್ರಖರತೆಗೂ ಯಾವುದೇ ಸಂಬಂಧ ಇರೋದಿಲ್ಲ.

ಜನವರಿ ಫೆಬ್ರವರಿ ತಂಗಳುಗಳು ಆಕಾಶ ನೋಡೋರ್ಗೆ ಒಂದು ಒಳ್ಳೇ ಸಮಯ. ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು, ರೈಗೆಲ್, ಸಿರಿಯಸ್ ಮೊದಲಾದ ನಕ್ಷತ್ರಗಳು, ವೃಷಭ, ಮಿಥುನ, ಮಹಾವ್ಯಾಧ, ಆರಿಗ, ಪರ್ಸಿಯಸ್ ಮೊದಲಾದ ಪುಂಜಗಳು - ಒಟ್ಟಲ್ಲಿ ಬಹಳ ಒಳ್ಳೇ ತಾರೆಗಳು, ಪುಂಜಗಳು ಸಂಜೆ ಆಕಾಶದಲ್ಲಿ ಕಾಣತ್ವೆ - ಹಾಗಿದ್ರೆ ತಡ ಯಾಕೆ? ಹೊರಗೆ ಹೋಗಿ ತಲೆ ಎತ್ತಿ ನೋಡಿ ಮತ್ತೆ!

-ಹಂಸಾನಂದಿ

ಹಾಕಿರುವ ಚಿತ್ರ: ಮಹಾವ್ಯಾಧ (ಒರೈಯನ್) ತಾರಾಪುಂಜ. ಇದಕ್ಕೆ ಅಜ್ಜಿ ಮಂಚದಡೀಲಿ ಮೂರು ಜನ ಕಳ್ಳರು ಅಂತಲೂ ನಮ್ಮ ಹಳ್ಳೀ ಕಡೆ ಹೇಳ್ತಾರಂತೆ.

 

 

Rating
No votes yet

Comments