ಹಂಸಾನಂದಿಯವರ ಚಿತ್ರಕ್ಕೆ ಮಗದೊಂದು ಕಥೆ...

ಹಂಸಾನಂದಿಯವರ ಚಿತ್ರಕ್ಕೆ ಮಗದೊಂದು ಕಥೆ...

ಆಸ್ಪತ್ರೆಯ ಬೆಂಚು...
ಆಗ ತಾನೆ ರಾಜ ಬಂದು ಕುಳಿತಿದ್ದಾನೆ...ಕುಳಿತವನೇ ಹಳೆಯ ನೆನಪುಗಳನ್ನು ಮೆಲಕು ಹಾಕತೊಡಗಿದ...
"ಅರೇ! ಈ ಸಮಯ ಎಷ್ಟು ಬೇಗ ಓಡುತ್ತದೋ ತಿಳಿಯುವುದೇ ಇಲ್ಲ...
ಮೊನ್ನೆ ತಾನೆ ಪುಟ್ಟಿಯೊಡನೆ ಕುಂಟೋ-ಬಿಲ್ಲೇ ಆಡಿದಂತಿದೆ...
ಆಡುವಾಗ ಅವಳ ಗಮನ ಬೇರೆಡೆ ಇದ್ದರೆ, ಮೆಲ್ಲಗೆ ನಡೆದು ಹೋಗುತ್ತಿರಲಿಲ್ಲವೇ ನಾನು!
ಪಾಪ ಅವಳು ’ಮೋಸ, ಮೋಸ’ ಎಂದು ಅವಳು ಎಷ್ಟು ಕೂಗಿದರು, ಅತ್ತರೂ ಕಳ್ಳಾಟದಲ್ಲಿ ಗೆಲ್ಲುವುದೇ ನನಗೆ ಮಜಾ...
ಎಷ್ಟು ಗೋಳು ಹೊಯ್ದುಕೊಂಡಿದ್ದೇನೋ ಇವಳನ್ನ...
ನನಗೋ ಆಟಿಕೆಗಳನ್ನು ಅಣ್ಣನಲ್ಲಿ ಕೇಳಲು ಭಯ, ಇವಳಿಗೆ ಪೂಸಿ ಹೊಡೆದು ತೆಗೆಸಿಕೊಳ್ಳುತ್ತಿದ್ದೆ!
ನನಗಾಗಿ ಎಷ್ಟೆಲ್ಲಾ ಮಾಡಿರುವಳಿವಳು...ನನಗಾಗಿ ಸುಳ್ಳನ್ನು ಹೇಳಿ ಬಯ್ಸಿಕೊಂಡಿದ್ದೂ ಹೌದು...
ಕಾಲೇಜಿನಲ್ಲಿ ನನಗೆ ರಾಗಿಂಗ್ ಮಾಡಿದರೂ ಎಂದು ತಿಳಿದವಳೇ, ಕಾಲೇಜಿಗೆ ಬಂದು ನನ್ನ ಸೀನಿಯರ್‍ಗಳನ್ನೆಲ್ಲ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಳಲ್ಲ!
ತನ್ನ ಮೊದಲ ಸಂಬಳದಲ್ಲಿ ಹೊಸ ಶರ್ಟ್ ಕೊಡಿಸಿದ್ದಳು...
ಭಾವ ಮೊದಲ ಬಾರಿಗೆ ಇವಳನ್ನು ನೋಡಲು ಬಂದಾಗ ಕುತೂಹಲದಿಂದ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದಳಲ್ಲ...!
ಇವಳ ಆ ತುಂಟ ಮುಖ ಇನ್ನೂ ಮರೆತಿಲ್ಲ...ಮದುವೆ ಮಂಟಪದಲ್ಲಿ ಕುಳಿತ ಇವಳ ಮುಖದಲ್ಲಿ ಅದೇನೋ ನಾಚಿಕೆ...
ಅದೆಷ್ಟು ಚೆನ್ನಾಗಿ ಕಾಣುತ್ತಿದ್ದಳು ಅಂದು...ಎಷ್ಟಾದರೂ ನನ್ನ ಅಕ್ಕನಲ್ಲವೇ? ...ಅರೇ ಆಗಲೇ, ಮದುವೆಯಾಗಿ ಎರಡು ವರ್ಷವಾಯಿತಲ್ಲವೇ"
ಎಂದು ನೆನೆಯುತ್ತಿದ್ದಂತೆ, ಹೊಸ ಕಂದನ ಅಳುವ ಶಬ್ದ ಕೇಳಿತು...ಥಟ್ಟನೇ ಓಡಿದ ಪುಟ್ಟಿಯ ಪುಟ್ಟನ ಬರ ಮಾಡಿಕೊಳ್ಳಲು...

(ಚಿತ್ರಕ್ಕೊಂದು ಕಥೆ ಬರೆಯಲು ಆಹ್ವಾನಿಸಿದ ಹಂಸಾನಂದಿಯವರಿಗೆ, ಈ ಹಳೇ ಎಳೆಯನ್ನು ಮತ್ತೆ ತೆಗೆದ ಗುರುಬಾಳಿಗರಿಗೆ ಧನ್ಯವಾದಗಳು)
--ಶ್ರೀ

Rating
No votes yet