ಶಾಲ್ಮಲೆಯ ತಟದ ಛೋಟಾ ಮಹಾಬಳೇಶ್ವರದಲ್ಲಿ ಹಸಿರು ಉಸಿರಾದದ್ದು..

ಶಾಲ್ಮಲೆಯ ತಟದ ಛೋಟಾ ಮಹಾಬಳೇಶ್ವರದಲ್ಲಿ ಹಸಿರು ಉಸಿರಾದದ್ದು..

ಬರಹ

ವಿಶ್ವ ವಿದ್ಯಾಲಯಗಳ ಪಠ್ಯಕ್ರಮ, ಅಲ್ಲಿನ ಪರೀಕ್ಷೆಗಳು, ಫಲಿತಾಂಶ, ಪ್ರಮಾಣಪತ್ರಗಳು, ಸಂಶೋಧನೆ, ಪ್ರಾಧ್ಯಾಪಕರು, ಹಾಗೆಯೇ ಪಿ.ಎಚ್.ಡಿ ಪದವಿ, ಕ್ಯಾಂಪಸ್ ಪಾವಿತ್ರ್ಯತೆ ಇವುಗಳ ಮೌಲ್ಯ, ಭ್ರಷ್ಟತೆ, ಸಮಸ್ಯೆ, ಪರಿಹಾರಗಳ ಬಗ್ಗೆ ಜನ ‘ವಿಶ್ವ ವಿದ್ಯಾಲಯ ತಮಗೆ ಸಂಬಂಧಿಸಿದ್ದಲ್ಲ’ ಎನ್ನುವ ಧೋರಣೆಯಿಂದ ಮಾತನಾಡುತ್ತಾರೆ. ಮಾತಿನಲ್ಲಿಯೇ ಕ್ಷಣದಲ್ಲಿ ಮೌಲ್ಯ ಕಟ್ಟುತ್ತಾರೆ. ಅದಕ್ಕಿಂತಲೂ ಸುಲಭವಾಗಿ ಆ ಅಭಿಪ್ರಾಯಗಳನ್ನು ಕೆಡುವುತ್ತಾರೆ! ಮಾಧ್ಯಮಗಳಿಗಂತೂ ಇದು ಭೂರಿ ಭೋಜನ.

ಆದರೆ ಡಾ. ಡಿ.ಸಿ.ಪಾವಟೆ, ಡಾ.ಎಚ್.ಎನ್., ಡಾ.ಸ.ಜ.ನಾ., ಡಾ.ಡಿ.ಎಂ.ನಂಜುಂಡಪ್ಪ ಮೊದಲಾದ ಪ್ರಾಧ್ಯಾಪಕರು ತಮ್ಮ ಮನೆಗಳಿಗಿಂತ ಹೆಚ್ಚಾಗಿ ವಿಶ್ವವಿದ್ಯಾಲಯಗಳನ್ನು ಪ್ರೀತಿಸಿದರು. ಅವರಿಂದಾಗಿ ಸಂಸ್ಥೆಗಳು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವು.

'Legends never do different things; they do the things differently.' Says, Osho Rajanish.

ಹಾಗೆಯೇ ೨೦೦೬ ರಿಂದ ೦೮ ಮೂರು ವರ್ಷಗಳ ವರೆಗೆ ಸತತವಾಗಿ ನೆಲ-ಜಲ ಹಾಗು ವೃಕ್ಷ ಸಂರಕ್ಷಣೆಯ ಒಂದು ಅನುಕರಣೀಯ ಪ್ರಯತ್ನ ನಮ್ಮ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸದ್ಯದ ಕುಲಪತಿ, ಆಗಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾಗಿದ್ದ ಡಾ.ಎ.ಮುರಿಗೆಪ್ಪನವರು ಈ ಕಾಯಕಕ್ಕೆ ನಮ್ಮ ಕ್ಯಾಂಪಸ್ಸಿನಲ್ಲಿ ಶೃದ್ಧೆಯಿಂದ ಪ್ರಯತ್ನಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು, ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಮುಂದಾಗಿದ್ದರು. ತಿಂಗಳುಗಳ ವರೆಗೆ ಶ್ರಮದಾನ ಮಾಡಿ ಹೆಮ್ಮೆಯಿಂದ ಬೀಗಿದ್ದರು. ಆ ಪ್ರಯೋಗದತ್ತ ಒಂದು ನೋಟ.
ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಬೆಟ್ಟಗಳ ಮೇಲೆ ಸುರಿದ ಮಳೆ ನೀರು ಎರಡು ಧಾರೆಯಾಗಿ ಒಂದು ಅರಬ್ಬೀ ಸಮುದ್ರಕ್ಕೂ ಮತ್ತೊಂದು ಬಂಗಾಳ ಕೊಲ್ಲಿಗೂ ಸೇರುತ್ತದೆ!

ಹೇಗೆ ಸಾಧ್ಯ? ಶಾಲ್ಮಲಾ ನದಿ ಧಾರವಾಡದಿಂದ ೫ ಕಿ.ಮೀ ದೂರದ ಕಲಘಟಗಿ ರಸ್ತೆ ಧವಳಗಿರಿಯ ಶ್ರೀಕ್ಷೇತ್ರ ಸೋಮೇಶ್ವರನ ಅಡಿಯಲ್ಲಿ ಹುಟ್ಟಿ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಗುಪ್ತಗಾಮಿನಿಯಾಗಿ ಹರಿದಿದ್ದು ತಮಗೆ ಗೊತ್ತು. ಹಾಗಾಗಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ನಿರತ ವಿದ್ಯಾರ್ಥಿಗಳ ಒಂದು ವಸತಿ ಗೃಹಕ್ಕೆ ನದಿಯ ಸ್ಮರಣಾರ್ಥ ‘ಶಾಲ್ಮಲಾ ಹಾಸ್ಟೆಲ್’ ಎಂದು ಸಹ ನಾಮಕರಣ ಮಾಡಲಾಗಿದೆ. ೭ ಗುಡ್ಡಗಳು ಹಾಗು ೭ ಕೆರೆಗಳ ಮಧ್ಯೆ ಭವ್ಯವಾಗಿ ಕಂಗೊಳಿಸುವ ವಿಶ್ವವಿದ್ಯಾಲಯ ಪ್ರಕೃತಿ ಸೌಂದರ್ಯದ ಖಣಿ. ನಮ್ಮ ಬೇಂದ್ರೆ, ಗೋಕಾಕ, ಕಣವಿ ಅವರು ಈ ಇಂದ್ರಛಾಪದ ಮೇಲೆ ಕುಳಿತು ಕವಿತೆ, ಕವನ ಹೊಸೆಯುತ್ತಿದ್ದರು!

ಪಶ್ಚಿಮ ಘಟ್ಟಗಳ ಯಾವುದೇ ಶಿಖರದ ನೆತ್ತಿಯ ಮೇಲೆ ನೀರು ಹರಿದು ಬಂದರೂ, ಅದು ಎರಡು ಭಾಗಗಳಾಗಿ ಒಂದು ಪಶ್ಚಿಮಕ್ಕೆ, ಇನ್ನೊಂದು ಪೂರ್ವಕ್ಕೆ ಸಾಗಿ ಹೋಗುತ್ತದೆ. ಆ ಎಲ್ಲ ಘಟ್ಟಗಳ ನೆತ್ತಿಯ ಬಿಂದುಗಳನ್ನು ನಕ್ಷೆಯಲ್ಲಿ ಗುರುತಿಸಿದರೆ ಅದೊಂದು ಅಂಕುಡೊಂಕಿನ ರೇಖೆಯಾಗುತ್ತದೆ. ಅದಕ್ಕೆ ‘ಜಲವಿಭಜಕ ರೇಖೆ’ ಎನ್ನುತ್ತಾರೆ. ಇದು ಪ್ರಕೃತಿ ಸಹಜವಾದದ್ದು. ಆದರೆ ಭೂಗೋಳ ಶಾಸ್ತ್ರಜ್ಞರಿಗೆ ವಿಶೇಷವಾದದ್ದು. ನನ್ನಂತಹವರಿಗೆ ಇದು ಅದ್ಭುತ ಸಂಗತಿ. ‘ಇದು ನಿಸರ್ಗದ ಕೌತುಕ’ ಎಂದು ಬಣ್ಣಿಸುತ್ತಾರೆ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಪಿ.ವಾಘಮೋರೆ.

"ನಕ್ಷೆಯಲ್ಲಿ ತೋರಿಸಿದರ ವಿಶೇಷ ಇರಲಿಕ್ಕಿಲ್ಲ. ಆದರೆ ಈ ಜಲವಿಭಜಕ ರೇಖೆ ‘ಛೋಟಾ ಮಹಾಬಳೇಶ್ವರ’ ಧಾರವಾಡದಲ್ಲಿ, ಅದರಲ್ಲೂ ನಮ್ಮ ಕ್ಯಾಂಪಸ್ಸಿನಲ್ಲಿ ಹಾಯ್ದು ಹೋಗುತ್ತದೆ ಎನ್ನುವುದು ನಮಗೆ ವಿಶೇಷ. ಕರ್ನಾಟಕದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಬಿದ್ದ ನೀರು ಮಾತ್ರ ಅರಬ್ಬಿ ಸಮುದ್ರಕ್ಕೆ ಹೋಗುತ್ತದೆ. ಇತರ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸಿನಲ್ಲಿ ಬಿದ್ದ ಮಳೆಯ ನೀರು ಆಂಧ್ರ, ತಮಿಳುನಾಡು ರಾಜ್ಯಗಳ ಮೂಲಕ ಹಾಯ್ದು ಬಂಗಾಳ ಕೊಲ್ಲಿಗೆ ಸೇರುತ್ತದೆ. ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ಈ ಎರಡೂ ಸಮುದ್ರಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಎರಡಕ್ಕೂ ಅಷ್ಟಷ್ಟು ನೀರನ್ನು ಹಂಚಿಕೊಡುತ್ತದೆ" ಎನ್ನುತ್ತಾರೆ ಡಾ. ವಾಘಮೋರೆ.

ಮಳೆ ನೀರನ್ನು ಹಂಚುವ ಈ ಭಾರಿ ಧಾರಾಳ ಗುಣದಿಂದಾಗಿಯೇ ಇರಬೇಕು, ಕವಿವಿ ಕ್ಯಾಂಪಸ್ಸಿನ ಭೂ ಗರ್ಭ ಖಾಲಿ! ಪ್ರಖರ ಬಿಸಿಲಿನಿಂದಾಗಿ ಎಲ್ಲವೂ ಒಣಗಿ ಮರಭೂಮಿ ನೆನಪಿಸುವ ದೃಶ್ಯಗಳು. ಅಷ್ಟೇ ಅಲ್ಲ. ಬೆಂಕಿಗೆ ತುಪ್ಪ ಸುರಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ೭೫೦ ಎಕರೆ ಆವರಣ, ಜಿಲ್ಲಾಧಿಕಾರಿಗಳ ಕಚೇರಿ ಪ್ರದೇಶ, ಪೊಲೀಸ್ ಹೆಡ್ ಕ್ವಾಟರ್ಸ್, ದಾಸನಕೊಪ್ಪ ವೃತ್ತ, ಆಕಾಶವಾಣಿ ಆವರಣ, ದೂರದರ್ಶನ ಟಾವರ್ ಪ್ರದೇಶ...ಈ ಎಲ್ಲ ಏರಿಯಾಗಳು ಅಕೇಷಿಯಾ ಮತ್ತು ನೀಲಗಿರಿ ಗಿಡಗಳ ಅರಣ್ಯಕ್ಕೆ ಮೂಲಸ್ಥಾನ. ಸದ್ಯ ಧಾರವಾಡದ ಸಸ್ಯ ಸಂಪತ್ತು ಅಥವಾ ಅರಣ್ಯವೆಂದರೆ ‘ಅಕೇಷಿಯಾ’ ಹಾಗು ‘ನೀಲಗಿರಿ’ (ಯುಕೆಲಿಪ್ಟಸ್) ಗಿಡಗಳದ್ದು ಮಾತ್ರ!

ಭೂಮಿಯ ಮೇಲೆ ಅತ್ಯಂತ ಎತ್ತರವಾಗಿ ಬೆಳೆಯುವ ನೀಲಗಿರಿ ಭೂಮಿಯ ಅಡಿಯಲ್ಲೂ ತನ್ನ ಬೇರುಗಳನ್ನು ಅಷ್ಟೇ ಆಳಕ್ಕೆ ಹಾಗು ಅಗಲಕ್ಕೆ ಹರಡಿಸಿಕೊಂಡು ನೀರಿನ ಪಾತ್ರವನ್ನು ಜಾಲಾಡಿ ಹುಡುಕಿಕೊಳ್ಳುತ್ತದೆ. ಪ್ರತಿ ದಿನ ೬ ರಿಂದ ೮ ಲೀಟರ್ ನೀರು ಒಂದು ನೀಲಗಿರಿ ಗಿಡ ಹೀರಿಕೊಳ್ಳಬಲ್ಲುದು! ಈ ಗಿಡಗಳು ಯಾವುದೇ ಕೊಳವೇ ಬಾವಿ, ಕೆರೆಗಳ ಸಮೀಪದಲ್ಲಿದ್ದರೆ ಕೆಲವೇ ತಿಂಗಳುಗಳಲ್ಲಿ ಈ ಪಾತ್ರವನ್ನು ಬರಿದು ಮಾಡಬಲ್ಲವು ಈ ತೋಪು!

ಈ ಗಿಡಗಳ ಬೆಳವಣಿಗೆಯಿಂದಾಗಿ ಕವಿವಿ ಆವರಣದ ಅಂತರ್ಜಲ ಮಟ್ಟ ಹಾಗು ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ದಿನೇ ದಿನೆ ಕುಸಿಯುತ್ತ ಬಂದಿತು. ದಿನವೊಂದಕ್ಕೆ ೨ ರಿಂದ ೩ ಬೋರ್ ವೆಲ್ ಗಳನ್ನು ಇಲ್ಲಿನ ‘ಪ್ರಜ್ಞಾವಂತರು’ ಕೊರೆಯಿಸುತ್ತಾರೆ. ಸದ್ಯ ನಗರದ ಎಲ್ಲ ಹೊರವಲಯಗಳಲ್ಲಿ ೧೦೦ಕ್ಕೂ ಹೆಚ್ಚು ಜನ ನೀರಿನ ವ್ಯಾಪಾರದ ಮೇಲೆಯೇ ಜೀವನ ನಡೆಸುತ್ತಿದ್ದಾರೆ ಎಂಬುದು ಆಘಾತಕಾರಿ. ಏತನ್ಮಧ್ಯೆ ಕೆಲವು ‘ಸಧ್ಯದ ಪರಿಸ್ಥಿತಿಯಲ್ಲಿ ಪರಿಸ್ಥಿತಿ ಅಸ್ನೇಹಿ’ ಆಗಿ ಪರಿಣಮಿಸಿರುವ ಗಿಡಗಳು ಈ ಸಮಸ್ಯೆ ಎಂಬ ಉರಿಗೆ ಅಗೋಚರವಾಗಿ ತುಪ್ಪ ಸುರಿಯುತ್ತಿವೆ.

ನೀಲಗಿರಿ ‘ಮೆರಿಟಸ್ಸಿ’ ಕುಟುಂಬಕ್ಕೆ ಸೇರಿದೆ. ತನ್ನ ಬೇರುಗಳಲ್ಲಿ ‘ಡೈಕೋಟ್’ ಹಾಗು ‘ಟ್ಯಾಪ್ ರೂಟ್’ ವ್ಯವಸ್ಥೆ ಹೊಂದಿದ್ದು, ಸುಮಾರು ೪೦೦ ರಿಂದ ೫೦೦ ಫೂಟ್ ಎತ್ತರದ ವರೆಗೆ ಈ ಗಿಡಗಳು ಬೆಳೆಯುತ್ತವೆ. ೯೦ ಫೂಟ್ ನಷ್ಟು ಅಗಲವಾದ ಕಾಂಡವನ್ನು ಈ ಗಿಡ ಹೊಂದಬಲ್ಲುದು. ಉಷ್ಣವಲಯದ ಆಸ್ಟ್ರೇಲಿಯಾ ಹಾಗು ಅಮೇರಿಕಾದಲ್ಲಿ ಹೇರಳವಾಗಿ ಬೆಳೆಯುವ ಈ ಗಿಡವನ್ನು ಅರಣ್ಯ ವೃದ್ಧಿಸುವ ದೃಷ್ಠಿಯಿಂದ, ಪೇಪರ್ ಪಲ್ಪ್ ಗಾಗಿ ಕಚ್ಚಾವಸ್ತು ಪಡೆಯಲು ಹಾಗು ಮಲೇರಿಯಾ ನಾಶಕವಾಗಿ ಬೆಳೆಸಲಾಗುತ್ತದೆ. ಆದರೆ ಧಾರವಾಡದ ಅಂತರ್ಜಲ ಪ್ರಮಾಣ ಕುಸಿಯಲು ಈ ಗಿಡಗಳು ಸಹ ಕಾರಣವಾಗಿವೆ ಎಂಬ ಆಘಾತಕಾರಿ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕ್ಯಾಂಪಸ್ಸಿನಲ್ಲಿ ಹೇರಳ ಸಂಖ್ಯೆಯಲ್ಲಿ ಗಿಡಗಳು ಇರುವುದರಿಂದ ಡಾ.ಮುರಿಗೆಪ್ಪನವರು ಈ ವಿಷಯ ತುಸು ಗಂಭೀರವಾಗಿ ಪರಿಗಣಿಸಿದರು.

ಇಲ್ಲಿಗೆ ಸಮಸ್ಯೆ ಬಗೆಹರಿಯಲಿಲ್ಲ. ಯುಕೆಲಿಪ್ಟಸ್ ಗಿಡದ ಅರ್ಧಾಂಗಿ ‘ಅಕೇಷಿಯಾ’! ಸಹ ಇಲ್ಲಿ ಮನೆ ಮಾಡಿದೆ. ನೀಲಗಿರಿ ಇದ್ದಲ್ಲಿ ಇದು ಇರಲೇಬೇಕು! ಈ ಗಿಡಗಳ ಅಡ್ಡ ಪರಿಣಾಮ ಎಷ್ಟೆಂದರೆ, ಇಡೀ ಧಾರವಾಡದಲ್ಲಿ ಅಂತರ್ಜಲ ಪ್ರಮಾಣ ಕುಸಿಯ ತೊಡಗಿದೆ. ನೀಲಗಿರಿಯೊಂದಿಗೆ ಹೇರಳವಾಗಿ ಬೆಳೆಸಲ್ಪಟ್ಟಿರುವ ಈ ಗಿಡ ಪ್ರತಿಶತ ೨೫ ರಷ್ಟು ಗಾಳಿ, ೨೫% ನೀರು, ೧೦% ಸೇಂದ್ರೀಯ ಲವಣಾಂಶ ಹಾಗು ೪೦% ಖನಿಜಾಂಶಗಳನ್ನು ಬಳಸಿಕೊಂಡು ಈ ಗಿಡಗಳು ಬದುಕುವಂಥವು.

ಇವುಗಳ ಬೇರುಗಳಲ್ಲಿರುವ ನೈಸರ್ಗಿಕವಾದ ‘ಆಕ್ಟಿವ್ ಟಿಪ್’ ತಂತ್ರಜ್ಞಾನ ಹೆಚ್ಚಿನ ನೀರನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ. ಉತ್ತರ ಅಫ್ರಿಕಾ ಮತ್ತು ಸಿನೇಗಲ್ ನಲ್ಲಿ ಈ ಗಿಡಗಳನ್ನು ಮಣ್ಣಿನ ಸವಕಳಿ ತಡೆಗಟ್ಟಲು, ಮರಭೂಮಿ ಬೆಳೆಯುವುದನ್ನು ತಪ್ಪಿಸಲು ಹಾಗು ಆ ಪ್ರದೇಶದಲ್ಲಿ ಸಾರಜನಕದ ಪ್ರಮಾಣ ಹೆಚ್ಚಿಸಲು ಬೆಳೆಸಲಾಗುತ್ತದೆ. ಭೂಮಿಯ ಮಣ್ಣಿಗೆ ವಾತಾವರಣದ ಸಾರಜನಕ ಸಾಗಿಸುವಲ್ಲಿ ಅಕೇಷಿಯಾದ ಪಾತ್ರ ಮಹತ್ವದ್ದು.

ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಜಿ.ಪಾಟೀಲ ಅವರ ಪ್ರಕಾರ- "ನೀಲಗಿರಿ ಬೆಳೆಸುವುದರಿಂದ ಮಣ್ಣಿನ ಸಾರವತ್ತತೆ ಕುಂಠಿತಗೊಳ್ಳುತ್ತದೆ. ಜೊತೆಗೆ ಸಂವರ್ಧನಾ ಶಕ್ತಿ ಇಂಗಿ ಹೋಗುತ್ತದೆ. ಫಲವತ್ತತೆಯ ಪ್ರಶ್ನೆಯಂತೂ ಉದ್ಭವಿಸುವುದೇ ಇಲ್ಲ. ಈ ಗಿಡಗಳನ್ನು ಕಡಿದ ಮೇಲೆ ಆ ಜಾಗೆಯಲ್ಲಿ ಬೇರೆ ಗಿಡ ಬೆಳೆಯಲಿಕ್ಕೆ ಅಂದಾಜು ೧೦ ವರ್ಷದ ಅವಧಿ ಬೇಕಾಗುತ್ತದೆ. ನೀಲಗಿರಿ ಗಿಡದ ಎಲೆಗಳು ‘ಡ್ವಾರ್ಸಿ ವೆಂಡ್ರಲ್’ ನಮೂನೆಯವು ಇರುವುದರಿಂದ ನೀರು ಆವಿರ್ಭವಿಸುವುದು ಕಡಿಮೆ ಇದ್ದರೂ ಈ ಗಿಡ ಹೆಚ್ಚು ನೀರನ್ನು ಆಕಾಶ ಮಾರ್ಗವಾಗಿ ದಾಟಿ ಹೋಗುವ ಮೋಡಗಳಿಂದ, ಜೊತೆಗೆ ಭೂಮಿಯ ಅಡಿಯಲ್ಲಿ ಅತ್ಯಂತ ಆಳವಾಗಿ ಹರಿಯುವ ಅಂತರ್ಜಲದಿಂದಲೂ ಏಕಕಾಲದಲ್ಲಿ ಹೀರುತ್ತಿದೆ. ಎಂದರೆ ಎರಡು ರೀತಿಯ ನಷ್ಟ ಈ ಗಿಡದಿಂದ" ಎಂದು ಅಭಿಪ್ರಾಯ ಪಡುತ್ತಾರೆ.

ಈ ಮಾತಿಗೆ ಪುರಾವೆ ಬೇಕೆ? ನಮ್ಮ ಇದೇ ಶಾಲ್ಮಲಾ ವಿದ್ಯಾರ್ಥಿನಿಲಯದ ಹಿಂಭಾಗದಲ್ಲಿ ಪ್ರಯೋಗಾರ್ಥವಾಗಿ ಕೊರೆದ ಕೊಳವೆ ಬಾವಿಗಳು ವಿಫಲವಾಗಿವೆ!

ಸಕಾಲಿಕವಾಗಿ ಆಗ ಜಲ ವಿಭಜಕ ರೇಖೆ ಬೆನ್ನು ಹತ್ತಿ ಹೊರಟಿತು ಹಸಿರು ಪಡೆ. ಈ 'Water Deviding Line' ಧಾರವಾಡದ ರೈಲು ನಿಲ್ದಾಣ ಪ್ರದೇಶ, ಟೈವಾಕ್ ಕಾರ್ಖಾನೆ, ಕಲ್ಯಾಣ ನಗರ, ‘ನಿಸರ್ಗ’ ಹೌಸಿಂಗ್ ಲೇಔಟ್, ಕವಿವಿ ಆವರಣದಲ್ಲಿಯ ‘ಮಾನಸೋಲ್ಲಾಸ ಅತಿಥಿ ಗೃಹ’ ಮತ್ತು ಶಾಲ್ಮಲಾ ವಿದ್ಯಾರ್ಥಿ ನಿಲಯದ ಹಿಂಭಾಗದ ಮೂಲಕ ಹಾಯ್ದು ಹೋಗಿದೆ. ಪಶ್ಚಿಮದ ಕಡೆ ಜಾರಿದ ಮಳೆ ನೀರು ಶಾಲ್ಮಲಾ ನದಿಯೊಂದಿಗೆ ಬೇಡ್ತಿ ಹಳ್ಳ ಸೇರುತ್ತದೆ. ಅದೇ ಹಳ್ಳ ಮಾಗೋಡು ಜಲಪಾತದಲ್ಲಿ ಧುಮುಕಿ ತನ್ನ ಹೆಸರನ್ನು ಬದಲಿಸಿಕೊಂಡು ‘ಗಂಗಾವಳಿ’ ನದಿಯಾಗಿ ಅಂಕೋಲಾ ಸಮೀಪ ಅರಬ್ಬಿ ಸಮುದ್ರ ಸೇರುತ್ತದೆ. ಕ್ಯಾಂಪಸ್ಸಿನಿಂದ ಪೂರ್ವಕ್ಕೆ ಹೊರಳಿದ ಮಳೆ ನೀರು ಧಾರವಾಡದ ಬೆಣ್ಣಿ ಹಳ್ಳದ ಮೂಲಕ, ನವಿಲು ತೀರ್ಥ, ಮಲಪ್ರಭಾ ನದಿಯ ಮೂಲಕ ಕೃಷ್ಣಾ ನದಿ ಸೇರಿ ಮುಂದೆ ಬಂಗಾಳ ಉಪಸಾಗರದ ಒಡಲು ಸೇರುತ್ತದೆ.

ಜಲ ರೇಖೆಯಿಂದ ನೇರಪ್ರಯೋಜನ ಏನು ಇಲ್ಲ. ಎರಡು ಸಾಗರಗಳ ಮಧ್ಯೆ ಅಷ್ಟೇ ಅಲ್ಲ, ಎರಡು ನದಿಗಳ ಮಧ್ಯೆ, ಎರಡು ಹಳ್ಳಗಳ ಮಧ್ಯೆ ಕೂಡ ಅಂತಹ ಅಗೋಚರ ರೇಖೆಗಳು ಇರುತ್ತವೆ. ಅವು ಆಯಾ ಜಲಾನಯನ ಪ್ರದೇಶದ ಗಡಿಯನ್ನು ನಿರ್ಧರಿಸುತ್ತವೆ. ಆ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯ ನೀರನ್ನು ಅಲ್ಲಲ್ಲೇ ನೆಲದೊಳಕ್ಕೆ ಇಂಗಿಸುವಂತಾದರೆ, ವರ್ಷವಿಡಿ ಹಳ್ಳಗಳು ಬತ್ತದಂತೆ ಮಾಡಬಹುದು. ಹೀಗೆ ನಿಮ್ಮ ನಿಮ್ಮ ಊರುಗಳ ಜಲರೇಖೆಗಳನ್ನು ಗುರುತಿಸಿ ಅಲ್ಲಿಂದ ಈಚೆಗೆ ಹರಿದು ಬರಬಹುದಾದ ಹಳ್ಳ-ಕೊಳ್ಳಗಳಿಗೆ ಬೇಸಿಗೆಯಲ್ಲಿ ಕಟ್ಟ, ಒಡ್ಡು, ನಾಲೆ, ಇಂಗು ಗುಂಡಿಗಳನ್ನು ನಿರ್ಮಿಸಿದರೆ, ಮಳೆ ಬಂದಾಗ ನೀರು ನಿಧನವಾಗಿ ಭೂಮಿಯ ಒಡಲು ಸೇರುತ್ತದೆ; ಅಂತರ್ಜಲ ಸಮೃದ್ಧವಾಗುತ್ತದೆ.

ಆಗಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎ.ಮುರಿಗೆಪ್ಪನವರು ಈ ಕಾಯಕಕ್ಕೆ ನಮ್ಮ ಕ್ಯಾಂಪಸ್ಸಿನಲ್ಲಿ ಶೃದ್ಧೆಯಿಂದ ಪ್ರಯತ್ನಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು, ಸ್ವಯಂ ಸೇವಕರು ಸ್ವಯಂ ಪ್ರೇರಿತರಾಗಿ ತಿಂಗಳುಗಳ ವರೆಗೆ ಶ್ರಮದಾನ ಮಾಡಿದ್ದರು. ನೂರಾರು ಇಂಗು ಗುಂಡಿಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಸಂಖ್ಯೆಯಲ್ಲಿ ಕವಿವಿ ಆವರಣದಲ್ಲಿಯೂ ಮಳೆ ನೀರು ಇಂಗು ಗುಂಡಿಗಳನ್ನು ತೋಡಲಾಗಿತ್ತು. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವೃಕ್ಷಾರೋಪಣ ವಿಭಾಗದಿಂದ ೪೦೦ ಕ್ಕೂ ಹೆಚ್ಚು ಗಿಡಗಳನ್ನು ವಿಭಾಗೀಯ ಅರಣ್ಯ ಅಧಿಕಾರಿಯಾಗಿದ್ದ ಶ್ರೀಮತಿ ಸ್ಮೀತಾ ಬಿಜ್ಜೂರ್ ಸಹಕಾರದಲ್ಲಿ ಡಾ.ಮುರಿಗೆಪ್ಪ ಗಿಡ ನೆಡಿಸಿ, ಹಸುರು ಕಂಗೊಳಿಸುವಂತೆ ಮಾಡಿದ್ದರು. ಒಂದು ರಭಸದ ಮಳೆ ಬೀಳುತ್ತಲೇ ಇಂಗು ಗುಂಡಿಗಳಿಂದ ಕ್ಯಾಂಪಸ್ ಅಂತರ್ಜಲ ರಿಚಾರ್ಜ್ ಆಗಿ, ಒಡ್ಡುಗಳೆಲ್ಲ ಒಡೆದು ಹರಿದಿದ್ದವು!

ಬೆಳ್ಳಗೆ ಬೆಳಗಾಗಿ ಬೆಳ್ಳಿ ಮೂಡಲವಾಗಿ/
ಒಳ್ಳೊಳ್ಳೆ ಮೀನು ಗರಿ ತೆಗೆದು/ ಆಡ್ಯಾವ
ಗರತಿ ಶಾಲ್ಮಲೆಯ ಉಡಿಯಾಗ//

ಸ್ವತ: ಡಾ. ಮುರಿಗೆಪ್ಪನವರು ಆಸ್ಥೆವಹಿಸಿ ಮತ್ತೆ ಸ್ವಯಂ ಸೇವಕರ ನೆರವು ಪಡೆದು ಮಳೆಯಲ್ಲಿಯೂ ಒಡ್ಡುಗಳನ್ನು ಭದ್ರಪಡಿಸಿದ್ದರು. ಈ ಪ್ರಯೋಗ ವ್ಯಾಪಕ ಚರ್ಚೆಗೂ ಕೂಡ ಒಳಗಾಗಿತ್ತು. ಅನುಕರಣೀಯ ಕಾರ್ಯಕ್ರಮ ಎಂದು ರಾಜಭವನ ಶ್ಲಾಘಿಸಿ, ಎನ್.ಎಸ್.ಎಸ್ ಸ್ವಯಂಸೇವಕರನ್ನು, ಪ್ರಾಧ್ಯಾಪಕ ಅಧಿಕಾರಿಗಳನ್ನು ಪುರಸ್ಕರಿಸಿತ್ತು. ಸದ್ಯ ೨೦೦೯. ಈ ಪ್ರಯೋಗ ಮತ್ತೆ ಮುಂದುವರೆಯಬೇಕಾದ ಅವಶ್ಯಕತೆ ಇದೆ. ಪಡೆದ ಲಾಭಕ್ಕೆ ಮತ್ತೆ ಬಂಡವಾಳ ತೊಡಗಿಸಬೇಕಿದೆ.

*************************************************************
*ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಗಾಗಿ ಹೆಣೆದ ಲೇಖನವನ್ನು ಸಂಪದಿಗರಿಗಾಗಿ ಇಲ್ಲಿ ಜೋಡಿಸಿದ್ದೇನೆ.