ಎಲ್ಲೇ ಇರು, ಹೇಗೇ ಇರು...

ಎಲ್ಲೇ ಇರು, ಹೇಗೇ ಇರು...

ಪ್ರೀತಿಯ ಗೆಳತಿ,

ತುಂಬ ಸ್ವಸ್ಥ ಮನಸ್ಸಿನಿಂದ ಕೂತು ಇದನ್ನು ಬರೆಯುತ್ತಿದ್ದೇನೆ. ಕಣ್ಣೀರು ಒರೆಸಿಕೊಂಡು ಓದು, ಇಲ್ಲದಿದ್ದರೆ ಕಣ್ಣು ಮಂಜಾಗಿ ಅಕ್ಷರಗಳು ಕಾಣದೆ ಹೋದಾವು.

ಆ ವರ್ಷದ ವ್ಯಾಲೆಂಟೈನ್ಸ್ ಡೇ ಕಣ್ಣ ಮುಂದೆ ಸುಳಿಯುತ್ತಿದೆ. ಕಾಲೇಜಿನ ಕಾರಿಡಾರಿನ ಮೂಲೆಯಲ್ಲಿ ನೀನು ನಾಚುತ್ತ, ಕೆಂಪಾಗುತ್ತ ಕೊಟ್ಟ ಗ್ರೀಟಿಂಗ್ ಆ ಕಾರ್ಡ್‌ಗೆ ಈಗ ಎಷ್ಟು ವರ್ಷಗಳಾದವೋ! ಅದಿನ್ನೂ ಹಾಗೇ ಇದೆ. ಕೆಂಪಗೇ ಪಳಪಳ ಹೊಳೆಯುತ್ತ. ಜತೆಗೆ ಅದರೊಳಗಿನ ಆಶಯ ಕೂಡಾ ಅಕ್ಷರ ರೂಪದಲ್ಲಿ ಹಾಗೇ ಉಳಿದುಬಿಟ್ಟಿದೆ.

ಜನವರಿ ಬಂದ ಕೂಡಲೇ ಏನೋ ವೇದನೆ. ನಡುಗಿಸುವ ಚಳಿಯಲ್ಲಿ ಒಬ್ಬನೇ ಕೂತು, ಹೊಸ ವರ್ಷವನ್ನು ಸ್ವಾಗತಿಸುತ್ತೇನೆ. ಹಿಂದೆಯೇ ಬರುತ್ತದೆ ಸಂಕ್ರಾಂತಿ. ಊರಲ್ಲಿದ್ದಾಗ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಊಟ ಮಾಡುತ್ತಿದ್ದ ನೆನಪುಗಳನ್ನು ಹಿಂದಕ್ಕೆ ಸರಿಸುತ್ತ ದರ್ಶಿನಿಯಲ್ಲಿ ತುತ್ತು ಬಾಯಿಗಿಡುತ್ತೇನೆ. ಏರತೊಡಗಿದ ಬಿಸಿಲಿಗೆ ಬೆದರಿ ಚಳಿ ಹಿಮ್ಮೆಟ್ಟುತ್ತಿರುವಾಗ, ಗಣರಾಜ್ಯೋತ್ಸವದ ಪರೇಡ್ ವೈಭವ ಕಣ್ಣು ತುಂಬಿಕೊಳ್ಳುತ್ತಿರುವಾಗ, ಸದ್ದಿಲ್ಲದೇ ಫೆಬ್ರುವರಿ ಬಂದೇ ಬಿಡುತ್ತದೆ.

ಸಣ್ಣ ತಿಂಗಳಿದು. ತಡ ಮಾಡಿದರೆ ಮುಗಿದೇ ಹೋದೀತು ಎಂಬ ಆತುರದಲ್ಲಿ ಜನ ಗ್ರೀಟಿಂಗ್ ಕಾರ್ಡ್‌ಗಳನ್ನು ಕೊಳ್ಳಲು ನುಗ್ಗುತ್ತಿರುವುದನ್ನು ನೋಡಿದಾಗ ಮನಸ್ಸು ಹಿಂದಕ್ಕೆ ಜಾರುತ್ತದೆ. ಲಜ್ಜೆಗೇಡಿ ಮನಸ್ಸಿದು. ಯಾವುದನ್ನು ಮರೆಯಲು ವರ್ಷಗಳಿಂದ ಪ್ರಯತ್ನಿಸುತ್ತಿರುವೆನೋ ಮತ್ತೆ ಅತ್ತಲೇ ಹೊರಳುತ್ತದೆ. ಸಾಕಿದ ನಾಯಿಯಂತೆ ಮನದ ಅಂಗಳದಲ್ಲಿ ನಿಂತುಕೊಂಡು ಒರಲುತ್ತದೆ. ಮೊಂಡ ಮಗುವಿನಂತೆ ಚಂಡಿ ಹಿಡಿಯುತ್ತದೆ. ನಾನು ಸೋಲುತ್ತೇನೆ ಕಣೆ. ಇಷ್ಟು ವರ್ಷಗಳಾದರೂ ಸೋಲುತ್ತಲೇ ಬಂದಿದ್ದೇನೆ.

ನನಗೆ ಗೊತ್ತಿಲ್ಲದಂತೆ ನನ್ನ ಕೈಗಳು ಅಟ್ಟದ ಮೇಲಿಟ್ಟಿರುವ ಸೂಟ್‌ಕೇಸಿನತ್ತ ಚಾಚುತ್ತವೆ. ಅದಕ್ಕಾಗಿಯೇ ಕಾಯುತ್ತಿದೆಯೇನೋ ಎಂಬಂತೆ ಅದರೊಳಗಿರುವ ಪತ್ರಗಳ ಕಂತೆ ಇರುವ ಬ್ಯಾಗ್ ಎದ್ದು ಕುಣಿಯುತ್ತದೆ. ಅಲ್ಲಿರುವುದು ಬರೀ ಪತ್ರಗಳಲ್ಲ ಕಣೆ, ಅವು ನನ್ನ ಮನಸ್ಸಿನ ಪದರುಗಳು. ನನ್ನ ಹೃದಯದ ಮಿಡಿತಗಳು. ನಾನು ಸೋಲುತ್ತೇನೆ. ಇನ್ನಿಲ್ಲದ ಕಕ್ಕುಲತೆಯಿಂದ ಪತ್ರಗಳ ಕಂತೆಯನ್ನು ಕೈಗೆತ್ತಿಕೊಳ್ಳುತ್ತೇನೆ. ಹೃದಯ ‘ಹಾಯ್’ ಎಂದು ವೇದನೆಯಿಂದ ನರಳುತ್ತದೆ.

ಬದುಕಿನ ಸುಂದರ ಕ್ಷಣಗಳೆಲ್ಲ ಅಲ್ಲಿ ಎಷ್ಟೊಂದು ಅದ್ಭುತವಾಗಿ ದಾಖಲಾಗಿವೆ ಗೊತ್ತೆ? ನಿನ್ನ ಹೆಳಲಿಂದ ಉದುರಿ ಬಿದ್ದ ಮಲ್ಲಿಗೆಯ ಬಾಡಿದ ಪಕಳೆಗಳಿಂದ ಹಿಡಿದು, ಕಳಚಿದ ಬಿಂದಿಗಳು, ಕದ್ದ ಬಳೆಗಳು, ನೀನು ಹೃದಯದಾಳದಿಂದ ಬರೆದ ಪತ್ರಗಳು, ಕೊಟ್ಟ ಅಸಂಖ್ಯಾತ ಗ್ರೀಟಿಂಗ್ ಕಾರ್ಡ್‌ಗಳು, ಸಣ್ಣಪುಟ್ಟ ಕಾಣಿಕೆಗಳು, ಅಮಾಯಕ ಮುಖದಲ್ಲಿ ಇಷ್ಟಗಲ ನಗು ಬೀರುತ್ತ ಜೊತೆಯಾಗಿ ತೆಗೆಸಿಕೊಂಡ ಪೋಟೋಗಳು... ಒಂದೆ ಎರಡೆ, ಸುಂದರ ಬದುಕಿನ ಸಾವಿರ ಚಿತ್ರಗಳು ಅಲ್ಲಿ ಪ್ರೇಮ ಹಂಪಿಯಾಗಿ ಚದುರಿಬಿದ್ದಿವೆ

ನಾನು ಒಂದೊಂದಾಗಿ ನೋಡುತ್ತ ಹೋಗುತ್ತೇನೆ. ಪ್ರತಿಯೊಂದು ಪತ್ರದಲ್ಲಿಯೂ ನಿನ್ನ ಅಮಾಯಕ ಸುಂದರ ಮುಖ ಎದ್ದು ನಿಲ್ಲುತ್ತದೆ. ನಾನು ಪತ್ರವನ್ನು ಓದುವುದಿಲ್ಲ, ಅವನ್ನು ನೀನೇ, ನಿನ್ನ ದ್ವನಿಯಲ್ಲೇ ಓದುತ್ತ ಹೋಗುತ್ತೀ. ನಾನು ಬರಿದೇ ಕೇಳುತ್ತೇನೆ. ಕೆಲವೊಮ್ಮೆ ಕಣ್ಣೀರು ಸುರಿಸುತ್ತೇನೆ. ಕಣ್ಣು ಮಂಜಾಗಿದ್ದರೂ ಅಕ್ಷರಗಳು ತಪ್ಪಿಲ್ಲದೇ ಮನಸ್ಸಿಗೆ ತಾಕುತ್ತಲೇ ಇರುತ್ತವೆ. ನಿನ್ನ ಧ್ವನಿ ಕಿವಿಗೆ ಬೀಳುತ್ತಲೇ ಇರುತ್ತದೆ. ಸಾವಿರಾರು ಬಾರಿ ಓದಿದ ಪತ್ರಗಳ ಸಾಲುಗಳು, ಸಾಲುಗಟ್ಟಿ ಮೊರೆವ ಭಾವನೆಗಳು ಮರೆತಾವಾದರೂ ಹೇಗೆ?

ಎಲ್ಲಕ್ಕಿಂತ ಕೆಳಗೆ ನಿನ್ನ ಕೊನೆಯ ಪತ್ರವಿಟ್ಟಿದ್ದೇನೆ.

ಅದನ್ನು ಎತ್ತಿಕೊಳ್ಳುವಾಗ ಕೈ ನಡುಗುತ್ತದೆ. ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಇಲ್ಲ, ಇದನ್ನು ಓದಬಾರದು ಎಂದು ಅಂದುಕೊಳ್ಳುತ್ತೇನೆ. ಸುಂದರ ಪುಸ್ತಕದ ಈ ಕೊನೆಯ ಕಪ್ಪು ಹಾಳೆಯನ್ನು ಹರಿದು ಹಾಕಿ ಬರೀ ಚೆಂದದ ನೆನಪುಗಳನ್ನಷ್ಟೇ ಉಳಿಸಿಕೊಳ್ಳಬೇಕು ಎಂದು ಹಿಂದೆ ಎಷ್ಟೋ ಸಾರಿ ಅಂದುಕೊಂಡಂತೆ ಈಗ ಕೂಡ ಅಂದುಕೊಳ್ಳುತ್ತೇನೆ.

ಆದರೂ ನಾನದನ್ನು ಹರಿಯಲಾರೆ. ಏಕೆಂದರೆ ಅದರಲ್ಲಿ ನಿನ್ನ ಕಣ್ಣೀರಿದೆ.

ಇದೊಂದು ಪತ್ರಕ್ಕೆ ಮಾತ್ರ ನನ್ನ ಕಣ್ಣೀರ ಕಟ್ಟೆಯನ್ನು ಒಡೆದುಹಾಕಬಲ್ಲ ಶಕ್ತಿ ಇರುವುದು. ಈ ಪತ್ರವನ್ನು ಓದುತ್ತಿದ್ದರೆ ಜಗತ್ತಿನ ಎಲ್ಲ ಸಿದ್ಧಾಂತಗಳು ಸುಳ್ಳು ಅನಿಸುತ್ತವೆ. ಎಲ್ಲ ಭಾಷಣಗಳು ಜೊಳ್ಳು ಅನಿಸುತ್ತವೆ. ಎಲ್ಲ ನಯ, ನಾಜೂಕು, ನಾಗರಿಕತೆ, ಸುಂದರ ಕಲ್ಪನೆಗಳು, ನಿಯಮಗಳು, ಕನಸುಗಳು ಮತ್ತು ಪ್ರಯತ್ನಗಳು ವ್ಯರ್ಥವೆನಿಸುತ್ತವೆ. ಈ ಪತ್ರ ನನ್ನ ಹೃದಯವನ್ನೇ ಅಲ್ಲಾಡಿಸಿ ಬಿಡುತ್ತದೆ.

ಆದರೂ ನಾನದನ್ನು ಓದದೇ ಇರಲಾರೆ.

ಓದಿದಾಗ ಕಣ್ಣೀರಿಡದೇ ಇರಲಾರೆ. ನೀನಾದರೂ ಇದನ್ನು ಕಣ್ಣೀರಿಟ್ಟುಕೊಂಡೇ ಬರೆದಿದ್ದೀ. ಒಂದು ಸುಂದರ ಸಂಬಂಧ ಇಲ್ಲಿಗೆ ಮುಗಿಯಿತು ಎಂಬ ದುರಂತ ಪ್ರಜ್ಞೆಯಿಟ್ಟುಕೊಂಡೇ ಬರೆದಿದ್ದೀ. ಇದೆಲ್ಲ ಸುಳ್ಳಾಗಬಾರದೇ ಎಂದು ಹಂಬಲಿಸುತ್ತಲೇ ಸತ್ಯವನ್ನು ಹೇಳುತ್ತ ಹೋಗಿದ್ದೀ. ಎಲ್ಲವನ್ನೂ ಧಿಕ್ಕರಿಸಿ ಬದುಕುವುದು ಇಬ್ಬರಿಗೂ ಸಾಧ್ಯವಿತ್ತು ಎಂದು ನನ್ನ ತರ್ಕ ಹೇಳುತ್ತಿದ್ದರೂ, ನಿನ್ನ ಕಣ್ಣೀರು ಅದನ್ನು ಕರಗಿಸುತ್ತದೆ ಕಣೇ. ಪ್ರತಿ ಬಾರಿ ಈ ಪತ್ರವನ್ನು ಹೊಸದಾಗಿ ಎಂಬಂತೆ ಓದಿದ್ದೇನೆ. ಮೊದಲ ಬಾರಿ ಏನೋ ಎಂಬಂತೆ ಕಣ್ಣೀರಿಟ್ಟಿದ್ದೇನೆ. ಅದೊಂದು ಶಾಶ್ವತ ನೋವಿನ ಈಟಿ ಮೊನೆ.

ಇದನ್ನು ಬರೆಯುತ್ತಿರುವಾಗ ಬೆದರಿದ ಮಗುವಿನಂತೆ ಚಳಿ ಅಂಜುತ್ತ ಅಂಜುತ್ತ ಹಿಂದೆ ಸರಿಯುತ್ತಿದೆ. ಮುಂದೆ ಬರಲಿರುವುದು ಬೇಸಿಗೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್‌ನ ಗಿಡಗಳೆಲ್ಲ ಚಿಗುರಿ, ಕೆಂಬಣ್ಣದ ಎಲೆಗಳಿಂದ ಶೃಂಗರಿಸಿಕೊಂಡು, ಧ್ವನಿ ಮರೆತ ಕೋಗಿಲೆ ಗಂಟಲು ಸರಿಪಡಿಸಿಕೊಳ್ಳುವ ಹೊತ್ತಿಗೆ ಯುಗಾದಿ ಬಂದಿರುತ್ತದೆ. ಕೊಡಲಿ ಪೆಟ್ಟು ಬೀಳದಿದ್ದರೆ, ಫ್ಲೈಓವರ್ ನಿರ್ಮಾಣವಾಗಲಿರುವ ದಾರಿಯಲ್ಲಿನ ಗಿಡಗಳು ತಮ್ಮ ಕೊನೆಯ ವಸಂತವನ್ನು ಕಾಣಬಹುದು. ನಾವು ಇದ್ದ ಮನೆಗಳ ನಡುವೆ ಎದ್ದು, ನಿಂತಿರುವ ಫ್ಲೈ ಓವರ್ ಮೇಲೆ ಓಡುವ ಬಸ್ಸಿನಲ್ಲಿ, ನಮ್ಮಂಥ ಪ್ರೇಮಿಗಳು ಕೂತು ಕನಸು ಹಂಚಿಕೊಳ್ಳಬಹುದು. ಅವರ ಪಾಲಿಗೆ ವ್ಯಾಲೆಂಟೈನ್ಸ್ ಡೇ ಖಂಡಿತ ಅದ್ಭುತವಾಗಿರಲು ಸಾಕು... ನಮಗಾಗಿದ್ದಂತೆ!

ದಯವಿಟ್ಟು, ನನ್ನಂತೆ ನೀನು ಕೂಡ ಅಳುತ್ತ ಕೂಡಬೇಡ ಕಣೆ. ನಗಬೇಕೆಂದು ತಾನೆ ನಾವು ದೂರವಾಗಿದ್ದು? ಹಿಂದಿನ ನಮ್ಮ ಎಲ್ಲ ಸುಮಧುರ ನೆನಪುಗಳಿಗಿಂತ ನಿನ್ನ ಗಂಡನ ಮಡಿಲು ಬೆಚ್ಚಗಿರುತ್ತದೆ. ಅಲ್ಲಿ ಹಾಯಾಗಿರು. ವ್ಯಾಲೆಂಟೈನ್ಸ್ ಡೇಯನ್ನು ಗಂಡನೊಂದಿಗೆ ಸಂಭ್ರಮದಿಂದ ಆಚರಿಸು. ಧರೆಗುರುಳುವುದಕ್ಕೆ ಮುಂಚೆಯೇ ಆ ಮರಗಳ ಕೆಳಗೆ ಐಸ್‌ಕ್ರೀಂ ಸವಿ. ಪಾನಿ ಪೂರಿ ತಿನ್ನು. ಗಂಡನ ಕೈ ಹಿಡಿದುಕೊಂಡು ವಾಕ್ ಮಾಡು. ತೀರ ಕಣ್ಣುಕ್ಕಿದರೆ ‘ದೂಳು ಬಿತ್ತು’ ಎಂದು ನೆವ ಹೇಳಿ ಎರಡು ಹನಿ ಕಣ್ಣೀರು ಹಾಕು, ಸಾಕು. ಇಲ್ಲಿ ಉರಿಯುತ್ತಿರುವ ನನ್ನೆದೆ ತಂಪಾಗುತ್ತದೆ.

ಇಂಥ ಸಾವಿರ ನೆನಪುಗಳನ್ನು ಬದುಕು ನಿನಗೆ ಕಟ್ಟಿಕೊಡಲಿ, ಜಗತ್ತಿನ ಎಲ್ಲ ನಗು ನಿನ್ನದಾಗಲಿ. ಹ್ಯಾಪಿ ವ್ಯಾಲೆಂಟೈನ್ಸ್ ಡೇ!

(ಐದು ವರ್ಷಗಳ ಹಿಂದೆ ಬರೆದ ಪತ್ರ. ವ್ಯಾಲೆಂಟೈನ್ಸ್‌ ದಿನಕ್ಕೂ ಮುಂಚೆಯೇ ಹಾಕುತ್ತಿದ್ದೇನೆ)

- ಚಾಮರಾಜ ಸವಡಿ

Rating
No votes yet

Comments