ನಮ್ಮ ಸಂಸ್ಕೃತಿ-ಪರಂಪರೆಗಳೇ ನಮಗೆ ಶ್ರೀರಕ್ಷೆ

ನಮ್ಮ ಸಂಸ್ಕೃತಿ-ಪರಂಪರೆಗಳೇ ನಮಗೆ ಶ್ರೀರಕ್ಷೆ

ಬರಹ

[ಹೊಳೇನರಸೀಪುರದಲ್ಲಿನ ಶ್ರೀ ಲಕ್ಷ್ಮೀನರಸಿಂಹ ವಿದ್ಯಾಮಂದಿರವು ಎರಡು ದಶಕಗಳ ಹಿಂದೆ ಆರಂಭವಾದ ಕೆಲವು ಗೆಳೆಯರ ಆಶಯದ ಕೂಸು. ನಾವು ಗೆಳೆಯರು ನೆಟ್ಟ ಸಸಿ ಫಲಕೊಡಲು ಆರಂಭಿಸಿದೆ. ಅದೇ ಸಂತಸದಲ್ಲಿ ಶಾಲೆಯ ಒಂದು ಸ್ಮರಣ ಸಂಚಿಕೆ ಹೊರ ಬರುತ್ತಿದೆ. ಶಾಲೆಯ ಆರಂಭದಲ್ಲಿದ್ದ ನಾನು ಸಸಿ ನೆಡುವಾಗಷ್ಟೇ ಇದ್ದೆ. ಆಮೇಲೆಲ್ಲಾ ಮರವಾಗಿ ಬೆಳೆಸಿದವರು ನೂರಾರು ಮಂದಿ ಸಹೃದಯಿಗಳು. ಆದರೂ ಸಂಚಿಕೆಗಾಗಿ ನನ್ನ ಎರಡು ಮಾತು ಬರೆದಿರುವೆ. ಸಂಪದಿಗರಲ್ಲೂ ಅದನ್ನೇ ಹಂಚಿಕೊಂಡಿರುವೆ]

ನನ್ನ ಮಗನ ಉಪನಯನದ ಸಂದರ್ಭ. ಆಮಂತ್ರಣಹಿಡಿದು ಪತ್ನಿಸಮೇತ ಹಾಸನ ನಗರದ ನನ್ನ ಬಂಧು-ಮಿತ್ರರನ್ನು ಕರೆಯಲು ಹೊರಟಿದ್ದೆ.ಒಂದು ಮನೆ ಬಾಗಿಲು ತಟ್ಟುತ್ತೇವೆ.ಐದು ನಿಮಿಷವಾದರೂ ಬಾಗಿಲು ತೆರೆಯಲಿಲ್ಲ.ಕರೆಗಂಟೆ ಒತ್ತುತ್ತೇವೆ. ಅದು ಶಬ್ಧಮಾಡಿತೋ ಇಲ್ಲವೋ ತಿಳಿಯಲಿಲ್ಲ. ಒಳಗಿನಿಂದ ಮಾತು ಕೇಳಿ ಬಂತು-“ ಗೀತಾ,ಯಾರೋ ಬಾಗಿಲು ತಟ್ಟುತ್ತಿದ್ದಾರೆ.ಬಾಗಿಲು ತೆಗೆ.” ಉಹೂ…ತೆರೆಯಲಿಲ್ಲ. ಇನ್ನೈದು ನಿಮಿಷದಲ್ಲಿ ಮನೆಯಾಕೆ ಬಂದು ಬಾಗಿಲು ತೆಗೆಯುತ್ತಾ-“ ಈ ಟಿ.ವಿ. ಗಲಾಟೆಯಲ್ಲಿ ಯಾರು ಬಂದರೂ ಗೊತ್ತಾಗುಲ್ಲಾ,ಊಟ ಮಾಡ್ತಾ ಇದ್ದೆ, ಬಾಗಿಲು ತೆಗೆದದ್ದು ತಡವಾಯ್ತೇನೋ, ತುಂಬಾಕಾಯಿಸಿದೆನೇನೋ!” ನಾನು ಉತ್ತರಿಸಿದೆ -“ಇಲ್ಲಾ ಬಿಡಿ ಒಂದು ಹತ್ತು ನಿಮಿಷ ಆಗಿರ ಬಹುದಷ್ಟೆ.
ಒಳಗೆ ಕಾಲಿಡುತ್ತೇವೆ. ಇರುವ ಒಂದೇ ಒಂದು ದಿವಾನ್ ಮೇಲೆ ಮನೆಯಾತ ಕುಳಿತು ಟಿ.ವಿ.ನೋಡುತ್ತಿದ್ದಾರೆ. ಪಿ.ಯು.ಸಿ. ಓದುವ ಮಗಳು ಅಪ್ಪನ ತೊಡೆಯ ಮೇಲೆ ಮಲಗಿ ಟಿ.ವಿ.ನೋಡುತ್ತಿದ್ದಾಳೆ. ಮನೆಯಾತ ನಮಗೆ ದಿವಾನದ ಕಡೆಗೆ ತೋರಿಸುತ್ತಾ ಹೇಳುತ್ತಾರೆ “ ಕುಳಿತುಕೊಳ್ಳಿ”. ದಿವಾನದ ಪೂರ್ತಿ ಮಗಳು ಮಲಗಿರುವಾಗ ನಮಗೆ ತೋರಿಸಿದ ಜಾಗ ಮಗಳ ಕಾಲ ಬಳಿ. ನಾನು ಹೇಳಿದೆ- “ ಪರವಾಗಿಲ್ಲ” ಮಾತು ಪ್ರಾರಂಭವಾಗಿಯೇ ಇಲ್ಲ ಟಿ.ವಿ. ವಾಲ್ಯೂಮ್ ಜೋರಾಗುತ್ತದೆ. ಇನ್ನು ನಿಂತಿರುವುದೂ ಸೂಕ್ತವಲ್ಲವೆಂದರಿತ ನಾವು ಆಮಂತ್ರಣ ಕೈಗೆ ಕೊಟ್ಟು ಹೊರಟು ಬಿಟ್ಟೆವು. ನಮ್ಮ ಇಂದಿನ ಶಿಕ್ಷಣ-ಸಂಸ್ಕಾರಗಳ ಪರಿಣಾಮದ ಒಂದು ಪುಟ್ಟ ನಿದರ್ಶನವಿದು.
ಎರಡು ದಶಕಗಳ ಹಿಂದಿನಮಾತು. ಅಂದು ಕಾನ್ವೆಂಟ್ ಗೀಳು ಉತ್ತುಂಗದಲ್ಲೇ ಇತ್ತು. ನನ್ನ ಮಕ್ಕಳೂ ಶಾಲೆಗೆ ಸೇರಬೇಕಾದ ಸಂದರ್ಭ.ಆದರೆ ಮನದೊಳಗೇ ಚಿಂತೆ.ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕೊರತೆ. ಕಾನ್ವೆಂಟ್ ಗಳಲ್ಲಿ ನಮ್ಮ ಸಂಸ್ಕೃತಿಗೆ ತಿಲಾಂಜಲಿ.ಅಲ್ಲಿ ಕಲಿಸುವ ಮಮ್ಮಿ-ಡ್ಯಾಡಿ ಪದಗಳು ನಮ್ಮ ಚಿಂತನೆಗೆ ಒಗ್ಗುವಂತಹುದಲ್ಲ.ಸಹಸ್ರಾರು ವರ್ಷಗಳ ನಮ್ಮ ಋಷಿಮುನಿಗಳ ತಪಸ್ಸಿನಿಂದ ಮೂಡಿಬಂದ ಸಂಸ್ಕೃತಿಯೊಂದು ಕಾನ್ವೆಂಟ್ ಕಲ್ಚರ್ನ ಹೊಡೆತಕ್ಕೆ ಸಿಲುಕಿದೆಯಲ್ಲಾ! ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ನನ್ನ ಮನದೊಳಗೆ ಚಿಂತೆ ಕಾಡಿತ್ತು. ನಾವೇ ಏಕೆ ಒಂದು ಶಾಲೆ ಪ್ರಾರಂಭಮಾಡಬಾರದು? ಅಲ್ಲಿ ಮುಂದುವರೆದ ಶಿಕ್ಷಣದಜೊತೆಗೆ ನಮ್ಮ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಿಕೊಡಬಹುದಲ್ಲಾ! ನಾಲ್ಕಾರು ಮಿತ್ರರು ಕುಳಿತು ಚರ್ಚಿಸಿದೆವು. ಆ ಹೊತ್ತಿಗೆ ಮಿತ್ರ ರಮೇಶ್ ಸಂಘದ ಪ್ರಚಾರಕನಾಗಿ, ನಂತರ ಸ್ವಂತ ಉದ್ಯೋಗ ನಿಮಿತ್ತ ದೇಶ ಸುತ್ತಿ ಸಾಕಾಗಿ ಊರಿಗೆ ಹಿಂದಿರುಗಿದ್ದ. ರಮೇಶನ ತಲೆಯಲ್ಲಿ ಈ ಚಿಂತನೆಯನ್ನು ಬಲವಾಗಿಯೇ ಬಿತ್ತಿದೆವು. ನಮ್ಮ ನೈತಿಕ ಬೆಂಬಲ ನಿಮಗಿರುತ್ತದೆ, ನೀವು ಒಂದು ಶಿಶು ವಿಹಾರ ಆರಂಭಿಸಿ ಬಿಡಿ. ಹಿರಿಯಣ್ಣ ಲಕ್ಷ್ಮಿನರಸಿಂಹಶಾಸ್ತ್ರಿಗಳೊಡನೆ ಸಮಾಲೋಚಿಸಿ ಒಂದು ಶುಭ ಮಹೂರ್ತದಲ್ಲಿ ಆರಂಭವಾಗಿಯೇ ಬಿಟ್ಟಿತು “ ಶ್ರೀ ಲಕ್ಷ್ಮೀ ನರಸಿಂಹವಿದ್ಯಾಮಂದಿರ” ದ ಹೆಸರಿನಲ್ಲಿ ಶಿಶುವಿಹಾರ. ನಂತರ ವರ್ಷ ವರ್ಷಕ್ಕೆ ಒಂದನೇ ತರಗತಿಯಿಂದ ಶುರುವಾಗಿ ಇದೀಗ ಪ್ರೌಢ ಶಾಲೆ ಯ ವರಗೆ ನಿರಂತರ ವಿಸ್ತಾರಗೊಂಡು ನಮ್ಮೆದುರು ಒಂದು “ ವಿದ್ಯಾ ಸಂಸ್ಥೆ” ಎದ್ದು ನಿಂತಿರುವುದು ಅದರ ನಿರಂತರ ಬೆಳವಣಿಗೆಯ ದ್ಯೋತಕವಾಗಿದೆ. ನಮ್ಮ ಈ ವಿದ್ಯಾಸಂಸ್ಥೆಯಿಂದ ಹೊಳೇನರಸೀಪುರದ ಮಕ್ಕಳು ಆದರ್ಶವಾಗಿ ಬೆಳೆದು ಹೆತ್ತ ತಂದೆ-ತಾಯಿಯರಿಗೆ, ಹೊತ್ತ ನೆಲಕ್ಕೆ ಋಣಿಯಾಗಿ, ನಮ್ಮ ದೇಶಕ್ಕೆ ಆಸ್ತಿಯಾಗಲೀ ಎಂದು ಆಶಿಸುವೆ.
-ಹರಿಹರಪುರ ಶ್ರೀಧರ್
ಹಾಸನ