ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

ಸಮ್ಮೇಳನ ಮುಂದೂಡುವುದು ಶೋಕಾಚರಣೆಯೆ?

ಬರಹ

ರಾಷ್ಟ್ರಪತಿಯೇ ಆಗಲಿ ಅಥವಾ ಯಾವ ಒಬ್ಬ ಸಾಮಾನ್ಯನೇ ಆಗಿರಲಿ, ಹುಟ್ಟಿದ ಮೇಲೆ ಸಾಯುವುದು ಸಹಜ ಧರ್ಮ. ಅಂದರೆ ಎಲ್ಲಾ ಸಜೀವ ವಸ್ತುಗಳಿಗೂ ಸಾವು ನಿಶ್ಚಿತ. ಸಾವು ಕೆಲವೊಮ್ಮೆ ಸಹಜ ಮತ್ತು ಕೆಲವೊಮ್ಮೆ ಅಸಹಜ. ಹಲವಾರು ಸಂಶೋಧನೆಗಳು ಈ ತಲೆಮಾರಿನಲ್ಲಿ ಮನುಷ್ಯನ ಸರಾಸರಿ ಆಯುಷ್ಯ ೭೫-೮೦ ಎನ್ನುತ್ತವೆ. ಅಂದರೆ ಮನುಷ್ಯ ಸುಮಾರು ೭೫ ರ ನಂತರ ಕಾಲವಾದರೆ (ಅನಾರೋಗ್ಯದಿಂದಾರೂ ಕೂಡ) ಅದನ್ನು ಸಹಜ ಸಾವೆಂದೇ ಪರಿಗಣಿಸಬಹುದು. ಕಾಲವಾದ ಮನುಷ್ಯನ ಪರಮ ಆಪ್ತರಿಗೆ (ಹತ್ತಿರದ ಕುಟುಂಬ ಸದಸ್ಯರು, ಗೆಳೆಯರು) ಸಾವಿನಿಂದಾಗುವ ನೋವೂ ಕೂಡ ಸಹಜ. ಆದರೆ ಪ್ರಕೃತಿ ನಿಯಮಕ್ಕೆ ಸವಾಲೆಸೆಯುವುದು ಸಾಧ್ಯವಿಲ್ಲ! ಪ್ರಕೃತಿ ನಿಯಮಕ್ಕೆ ವ್ಯತಿರಿಕ್ತವಾಗಿ ಸತ್ತಾಗ ಸಾವು ಅಸಹಜವಾಗುತ್ತದೆ. (ಉದಾ., ಕೊಲೆ, ವಾಹನ ಅಪಘಾತ ಮುಂತಾದ ದುರ್ಘಠನೆಗಳಿಂದೊದಗುವ ಸಾವು). ಇಂತಹ ಸಂದರ್ಭಗಳಲ್ಲಿ ನೋವಿನ ತೀವ್ರತೆ ಹೆಚ್ಚಾಗಿರುತ್ತದೆ. ಇಂತಹ ಅಕಾಲ ಮರಣಗಳಿಂದ, ಮರಣ ಹೊಂದಿದ ವ್ಯಕ್ತಿಯ ಜೀವನದ ಆಸೆಗಳು ಮಣ್ಣಾಗಿರುತ್ತವೆ. ಇಂತಹ ಸಂದರ್ಭದಲ್ಲಿ ನೋವಿನ ತೀವ್ರತೆ ಹೆಚ್ಚಾಗುವುದು ಕೂಡ ಸಹಜವೆ. ಈ ಎರಡೂ ಸನ್ನಿವೇಶಗಳಲ್ಲಿ, ಮರಣಹೊಂದದ ವ್ಯಕ್ತಿಗೆ, ವ್ಯಕ್ತಿಗತವಾಗಿ ತೀರ ಹತ್ತಿರವಲ್ಲದ ಮನುಷ್ಯರಲ್ಲಿ ಸತ್ತ ವ್ಯಕ್ತಿಯ ಬಗ್ಗೆ ಅನುಕಂಪದ ಭಾವನೆ ಮೂಡುತ್ತದೆ. ಕೆಲವೊಮ್ಮೆ ಮರಣ ಹೊಂದಿದ ವ್ಯಕ್ತಿ ದೇಶಕ್ಕೋಸ್ಕರ ತನ್ನನ್ನು ಸಮರ್ಪಿಸಿದ್ದರೆ ದೇಶದ ಜನತೆ, ಸತ್ತ ವ್ಯಕ್ತಿಯನ್ನು ನೆನೆಯುವುದು ವಾಡಿಕೆ. ಇದನ್ನೇ ಶೋಕಾಚರಣೆಯೆಂದು ಕರೆದಿರಬಹುದು. ಆದರೆ ಶೋಕಾಚರಣೆ ಹೆಸರಿನಲ್ಲಿ ರಜೆ ಘೋಶಿಸುವುದು, ನಡೆಯಬೇಕಾದ ಮಂಗಳ ಕಾರ್ಯಗಳನ್ನು ಮುಂದೂಡುವುದು ಅಸಹಜ ಅತಿರೇಕದ ಮೂರ್ಖತನದ ಆಚರಣೆಗಳು.

ಮೊನ್ನೆ ಆದದ್ದೂ ಇದೆ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ತಮ್ಮ ೯೮ ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ರಾಷ್ಟ್ರಪತಿ ಹುದ್ದೆಗಿರುವ (ಅ)ಗೌರವ ಎಲ್ಲರಿಗೂ ತಿಳಿದದ್ದೆ. ಅದೇನೆ ಇರಲಿ ಸತ್ತ ವ್ಯಕ್ತಿಗೆ ಸಂತಾಪ ಸೂಚಿಸಲು ಸರ್ಕಾರದ ಹಲವಾರು ವಿಧಿ ವಿಧಾನಗಳಿವೆ. ಉದಾಹರಣೆಗೆ ಧ್ವಜವನ್ನು ಅರ್ಧ ಕೆಳಗಿಳಿಸುವುದು.(ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಾರಿ ರಜೆ ಘೋಷಿಸದೆ ಇದ್ದದ್ದು ಶ್ಲಾಘನೀಯ. ದೇಶದ ಪ್ರಗತಿಗೆ ಪೂರಕವಲ್ಲದ ಶೋಕ ಸಂತಾಪ ವಿಧಿ ವಿಧಾನ ಇದು). ನಮ್ಮ ರಾಜ್ಯ ಸರ್ಕಾರ ೭ ದಿನಗಳ ಶೋಕಾಚರಣೆಯೆಂದಿತು.

ಶೋಕಾಚರಣೆಯಯೆಂದರೇನು? ಶಾಲೆಗಳಲ್ಲಿ, ಕಚೇರಿಗಳಲ್ಲಿ, ಸಮಾರಂಭಗಳಲ್ಲಿ ವೆಂಕಟರಾಮನ್ ರವರ ಭಾವಚಿತ್ರವಿಟ್ಟು, ಅವರ ಸಾಧನೆಗಳನ್ನು ನೆನೆಯಬಹುದು. ಬೇಕಾದರೆ ಅವರ ಒಳ್ಳೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬಹುದು. ಚಿತ್ರದುರ್ಗದಲ್ಲಿ ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೊ ಇದನ್ನೆ ಮಾಡಬಹುದಿತ್ತು! ಅದನ್ನು ಬಿಟ್ಟು ಸಮ್ಮೇಳನವನ್ನು ಮುಂದೂಡಿದ್ದು ಉಚಿತವಲ್ಲ. ಏಷ್ಟೋ ಜನ ತಮ್ಮ ವ್ಯಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಸಾಹಿತ್ಯ ಸಮ್ಮೇಳನಕ್ಕೆ ಹೊರಟು ಸಿದ್ದತೆಗಳನ್ನು ಮಾಡಿಕೊಂಡವರಿಗೆ ನಿರಾಶೆ, ನಷ್ಟ! ಕೆಲವರ ಮನೆಯ ಮಟ್ಟಿಗಿದ್ದ ಈ ಸೂತಕದ ಮೂಢನಂಬಿಕೆಗಳು, ರಾಜ್ಯ ಮಟ್ಟಕ್ಕೆ ಬೆಳೆದು ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಮುಂದೂಡಲ್ಪಡುತ್ತಿರುವುದು ವಿಷಾದಕರ/ದುರುದೃಷ್ಟಕರ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತಿನವರು ಇನ್ನು ಮುಂದೆಯಾದರೂ ಇಂತಹ ಮೂರ್ಖ ಆಚರಣೆಗಳಿಗೆ ಮೊರೆ ಹೋಗದೆ ಅರ್ಥಪೂರ್ಣ ನಿರ್ಣಯಗಳನ್ನು ತೆಗೆದುಕೊಳ್ಳಲಿ.ಮತ್ತು ನಾಳೆ ಪೆಬ್ರವರಿ ನಾಲ್ಕರಂದು ಮತ್ತೆ ಯಾರೂ ಗಣ್ಯ ವ್ಯಕ್ತಿಗಳು ನಿಧನ ಹೊಂದದೆ ಇರಲಿ ಎಂದು ಪ್ರಾರ್ಥಿಸಿಕೊಳ್ಳೋಣ!