ಬ್ರಹ್ಮಾನಂದ

ಬ್ರಹ್ಮಾನಂದ

ಬರಹ

ಪ್ರ:ಹೇ! ಗುರುವೇ
ತಿಳಿವೆನಗೆ ತಿಳಿಸಿರಿ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ:ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಪ್ರ: ನಾನು,ನೀನು
ಅದು, ಇದು
ಬದುಕಿಹೆವು ಹೇಗೆ?
ಉದರದೊಳಗನ್ನವೇ
ಶಕ್ತಿ , ಮತ್ತೆನ್ನರಿವೆಂಬೆ
ಅನ್ನವು ದೇಹಕೆ ಶಕ್ತಿ ಮಾತ್ರ,
ಇದು ಅರಿವಲ್ಲವೈ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ: ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಪ್ರ: ನಾನು,ನೀನು
ಅದು,ಇದು
ಬದುಕಿಹೆವು ಹೇಗೆ?
ಎದೆಯೊಳಗಿನ ಪ್ರಾಣವೇ
ಸತ್ಯ,ಮತ್ತೆನ್ನರಿವೆಂಬೆ
ಕಾಯವಿರುವವರೆಗೂ ಪ್ರಾಣ,
ಇದೂ ತಿಳಿವಲ್ಲವೈ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ: ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಪ್ರ: ನಾನು,ನೀನು
ಅದು,ಇದು
ಬದುಕಿಹೆವು ಹೇಗೆ?
ನಮ್ಮೊಳಗಿನ ಮನವೇ
ನಿಜವು, ಮತ್ತೆನ್ನರಿವೆಂಬೆ
ಮನವೂ ನೀರಿನಲೆಯಂತೆ
ಇದೆನ್ನ ಗೆಲುವಲ್ಲವೈ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ: ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಉ: ನಾನು, ನೀನು
ಅದು, ಇದು
ಬದುಕಿಹೆವು ಹೇಗೆ?
ಮನದೊಳಗಿನ ಜೀವಾತ್ಮನೆ
ಜ್ಞಾನ, ಮತ್ತೆನ್ನರಿವೆಂಬೆ
ಜೀವಾತ್ಮ ಜಂಗಮವಯ್ಯಾ
ಇದೂ ಅರಿವಲ್ಲವೈ
ಸುಳಿಯಾಯ್ತು ಮನವು
ಒಳಿತೆನಗೆ ಕರುಣಿಸಿ

ಉ: ಮಥಿಸು ನೀನು
ನಿನ್ನೊಳಗನು
ಕಾಣುವುದನು ತಿಳಿ
ತಿಳಿವುದನು ಕಾಣು

ಉ: ನಾನು, ನೀನು
ಅದು ಇದು
ಬದುಕಿಹೆವು ಹೇಗೆ?
ಅನ್ನವು ಶಕ್ತಿಯನೀವುದು
ಶಕ್ತಿಯು ಪ್ರಾಣವನೀವುದು
ಪ್ರಾಣವು ಮನವನೀವುದು
ಮನವು ಜ್ಞಾನವನೀವುದು
ಜ್ಞಾನದಿಂದುದ್ಭವಿಸುವುದೇ
ನಾನು ನೀನು ಅದು ಇದು
ಮೀರಿ ನಿಂತ ಬ್ರಹ್ಮಾನಂದವೈ
ತಿಳಿಯಾಯ್ತು ಮನವು
ಶ್ರೀಗುರು ಶಂಕರನ ಒಲವಿಂದೆ
ಚಿಂತನಾನುಭವವೇ
ಬೆಳಕೆಂಬುದ ಕಂಡೆ