ಜೀವಾಮೃತ ಸಿದ್ಧಪಡಿಸುವ ವಿಧಾನ (ರೈತರೇ ಬದುಕಲು ಕಲಿಯಿರಿ-೧೨)

ಜೀವಾಮೃತ ಸಿದ್ಧಪಡಿಸುವ ವಿಧಾನ (ರೈತರೇ ಬದುಕಲು ಕಲಿಯಿರಿ-೧೨)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ಜೀವಾಮೃತ ತಯಾರಿಕೆ ತುಂಬಾ ಸುಲಭ

ಇದಕ್ಕೆ ಬೇಕಾದ ವಸ್ತುಗಳು

  • ೧೦ ಕೆ.ಜಿ. ಸಗಣಿ
  • ೫ರಿಂದ ೧೦ ಲೀಟರ್ ಗಂಜಲ (ಗೋಮೂತ್ರ)
  • ೨ ಕೆ.ಜಿ. ಕಪ್ಪು ಬೆಲ್ಲ ಅಥವಾ ೫ ಲೀಟರ್ ಕಬ್ಬಿನ ಹಾಲು
  • ೨ ಕೆ.ಜಿ. ಕಡಲೆ ಹಿಟ್ಟು ಅಥವಾ ಯಾವುದೇ ದ್ವಿದಳ ಧಾನ್ಯಗಳ ಹಿಟ್ಟು
  • ಯಾವ ಹೊಲದಲ್ಲಿ ಜೀವಾಮೃತ ಹಾಕಬೇಕಿದೆಯೋ ಆ ಹೊಲದ ಬದುವಿನ ಒಂದು ಹಿಡಿ ಮಣ್ಣು.
  • ೨೦೦ ಲೀಟರ್ ನೀರು.

ಈ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಕಲೆಸಿ, ಸರಿಯಾದ ಅವಧಿಯಲ್ಲಿ ಕೊಳೆಯಿಸಿ ನಂತರ ಸರಿಯಾದ ವಿಧಾನದಲ್ಲಿ ಭೂಮಿಗೆ ಸೇರಿಸುವುದೇ ಸುಭಾಷ ಪಾಳೇಕರ ವಿವರಿಸುವ ನೈಸರ್ಗಿಕ ಕೃಷಿಯ ರಹಸ್ಯ.

ಜೀವಾಮೃತ ಸಿದ್ಧಪಡಿಸುವ ವಿಧಾನ

  • ಒಂದು ಎಕರೆಗೆ ಬೇಕಾದ ಪ್ರಮಾಣದ ಜೀವಾಮೃತ ಸಿದ್ಧಪಡಿಸಲು ೨೫೦ ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಅಥವಾ ಸಿಮೆಂಟ್ ಡ್ರಮ್ (ತೊಟ್ಟಿ)ಯನ್ನು ಬಳಸಿ. ಯಾವ ಕಾರಣಕ್ಕೂ ಕಬ್ಬಿಣದ ತೊಟ್ಟಿ ಬೇಡ.
  • ಈ ತೊಟ್ಟಿಗೆ ೨೦೦ ಲೀಟರ್ ನೀರು ತುಂಬಿ.
  • ನಂತರ ಸಗಣಿ, ಗೋಮೂತ್ರದೊಂದಿಗೆ ಕಡಲೆ ಹಿಟ್ಟು, ಬೆಲ್ಲ ಹಾಗೂ ಹೊಲದ ಬದುವಿನ ಹಿಡಿ ಮಣ್ಣನ್ನು ಸೇರಿಸಿ.
  • ಈ ತೊಟ್ಟಿಯನ್ನು ತಂಪಾದ ಜಾಗದಲ್ಲಿ ಇಡಬೇಕು. ಅಂದರೆ ಮರದ ಕೆಳಗೆ ಅಥವಾ ನೆರಳು ಇರುವ ಕಡೆ ಇಡಬೇಕು. ಬಿಸಿಲು ಡ್ರಮ್ ಮೇಲೆ ಬೀಳುವಂತಿರಬಾರದು.
  • ನಂತರ ಅದರ ಮೇಲೆ ಒದ್ದೆ ಗೋಣಿಚೀಲವನ್ನು ಮುಚ್ಚಿಬಿಡಿ.

ಈ ದ್ರಾವಣವನ್ನು ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ (ಅಂದರೆ ದಿನಕ್ಕೆ ಮೂರು ಬಾರಿ) ಉದ್ದನೆಯ ಕೋಲಿನಿಂದ ವೃತ್ತಾಕಾರವಾಗಿ (ಒಂದೇ ದಿಕ್ಕಿನಲ್ಲಿ) ತಿರುಗಿಸಿ ರಾಡಿ ಮಾಡಿ. ಈ ರೀತಿ ಒಂದು ವಾರದವರೆಗೆ ಮಾಡಿದರೆ ಜೀವಾಮೃತ ಸಿದ್ಧವಾಗುತ್ತದೆ.

ನಂತರ ಈ ದ್ರಾವಣವನ್ನು ೨ರಿಂದ ೭ ದಿನದೊಳಗೆ ಭೂಮಿಗೆ ಸಿಂಪಡಿಸಬೇಕು. ಜೀವಾಮೃತವನ್ನು ಭೂಮಿಗೆ ನೀಡುವಾಗ ಮಣ್ಣಿನಲ್ಲಿ ತೇವ ಇರಬೇಕು. ಮಳೆ ಬಿದ್ದಾಗ, ನೆಲ ಒದ್ದೆಯಿದ್ದಾಗ, ಅಥವಾ ನೀರು ಹಾಯಿಸುವಾಗ, ಇಲ್ಲವೆ ಬೆಳಿಗ್ಗೆ ಇಬ್ಬನಿ ಬಿದ್ದಿರುವಾಗ ಜೀವಾಮೃತ ಕೊಡಬಹುದು. ನೀರು ಹಾಯಿಸುವಾಗ ಕಾಲುವೆ ಮೂಲಕವೂ ಜೀವಾಮೃತ ನೀಡಬಹುದು.

ಮಳೆ ಆಶ್ರಯದಲ್ಲಿ ಬೇಸಾಯ ಮಾಡುವವರು ಭೂಮಿ ಹಸಿಯಿರುವಾಗ ಅಥವಾ ಇಬ್ಬನಿ ಬಿದ್ದಿರುವಾಗ ನೀರಿನ ಛಳ ಹೊಡೆಯುವಂತೆ ಅಲ್ಲಲ್ಲಿ ಜೀವಾಮೃತ ಚೆಲ್ಲುತ್ತ ಬರಬಹುದು. ಅಥವಾ ಹಸಿರು ಸೊಪ್ಪಿನ ಪೊರಕೆ ಮಾಡಿಕೊಂಡು ಅದನ್ನು ಜೀವಾಮೃತದಲ್ಲಿ ಅದ್ದಿ ಸಿಂಪಡಿಸುತ್ತ ಹೋಗಬಹುದು. ಒಟ್ಟಿನಲ್ಲಿ ಜೀವಾಮೃತ ಭೂಮಿಗೆ ಸೇರುವಾಗ ನೆಲ ಒದ್ದೆಯಾಗಿರಬೇಕು.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಹೊಂದಿರುವವರು ಜೀವಾಮೃತ ಸೇರಿಸುವಾಗ ಅದನ್ನು ಶೋಧಿಸಿ ಸೇರಿಸಬೇಕಾಗುತ್ತದೆ. ಇದಕ್ಕಾಗಿ ೫೦ರಿಂದ ೧೦೦ ಲೀಟರ್‌ವರೆಗಿನ ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟ್ ತೊಟ್ಟಿಯನ್ನು ಸಿದ್ಧ ಮಾಡಿಕೊಳ್ಳಿ.

ಡ್ರಮ್‌ನ ಕೆಳ ಭಾಗದಲ್ಲಿ ನಲ್ಲಿ ಇರಲಿ. ಡ್ರಮ್ ಕೆಳ ಭಾಗದಲ್ಲಿ ಆರು ಇಂಚು ಎತ್ತರಕ್ಕೆ ದಪ್ಪ ಜಲ್ಲಿ ಕಲ್ಲುಗಳನ್ನು ಹಾಕಿ. ನಂತರ ಮೇಲಿನ ಐದು ಇಂಚು ಎತ್ತರಕ್ಕೆ ಸಣ್ಣ ಜಲ್ಲಿ ಕಲ್ಲುಗಳನ್ನು ತುಂಬಿಸಿ. ನಂತರದ ನಾಲ್ಕು ಇಂಚು ಎತ್ತರದಲ್ಲಿ ದಪ್ಪ ಮರಳು ತುಂಬಿಸಿ, ಇದರ ಮೇಲ್ಭಾಗದಲ್ಲಿ ಸೂಕ್ಷ್ಮ ರಂಧ್ರಗಳಿರುವ ನೈಲಾನ್ ಜಾಲರಿಯಿಂದ ಮುಚ್ಚಿ, ಡ್ರಮ್‌ನ ಬಾಯಿಯನ್ನು ತೆಳುವಾದ ಹತ್ತಿ ಬಟ್ಟೆಯಿಂದ ಬಿಗಿಯಾಗಿ ಕಟ್ಟಿಬಿಡಿ.
ನಂತರ ಬಟ್ಟೆಯಿಂದ ಸೋಸುವ ಹಾಗೆ ಡ್ರಮ್‌ನೊಳಗೆ ಜೀವಾಮೃತ ಸುರಿಯಿರಿ. ಕೆಳ ಭಾಗದಲ್ಲಿರುವ ನಲ್ಲಿಯನ್ನು ಪೈಪ್‌ಗೆ ಜೋಡಿಸಿ. ಈಗ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪೈಪ್‌ನ ಮೂಲಕ ನಿರ್ದಿಷ್ಟ ಪ್ರಮಾಣದ ಜೀವಾಮೃತ ಸಹಜವಾಗಿ ಭೂಮಿಗೆ ದಕ್ಕುತ್ತದೆ.

ಇಲ್ಲಿ ಕೆಲವೊಂದು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.ಜೀವಾಮೃತಕ್ಕೆ ಸಗಣಿ, ಗಂಜಲ, ನೀರು ಸರಿ. ಆದರೆ ಕಡಲೆ ಹಿಟ್ಟು ಅಥವಾ ದ್ವಿದಳ ಧಾನ್ಯದ ಹಿಟ್ಟು ಏಕೆ?

ಇಲ್ಲಿ ಒಂಚೂರು ವಿವರಣೆ ಅಗತ್ಯ.

ನೈಸರ್ಗಿಕ ಪರಿಸರದಲ್ಲಿ ಭೂಮಿಗೆ ಬೇಕಾದ ಎಲ್ಲ ಪೋಷಕಾಂಶಗಳೂ ಸಹಜ ವಿಧಾನದಲ್ಲಿಯೇ ದೊರೆಯುತ್ತಿರುತ್ತದೆ. ಯಾವುದೇ ಒಂದು ಮರದ ಕೆಳಗೆ ಏನಿಲ್ಲವೆಂದರೂ ೨೬೫ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳು ಬೆಳೆದಿರುತ್ತವೆ. ಇವುಗಳ ಪೈಕಿ ಶೇ.೨೫ ಏಕದಳ ಜಾತಿಗೆ ಸೇರಿದ್ದರೆ ಮಿಕ್ಕವೆಲ್ಲ ದ್ವಿದಳ ಸಸ್ಯಗಳು.

ಜತೆಗೆ ಅಲ್ಲಿ ಇರುವೆ ಸಾಲುಗಳಿರುತ್ತವೆ. ಸಾಮಾನ್ಯವಾಗಿ ಅವು ಒಯ್ಯುವ ವಸ್ತುಗಳ ಪೈಕಿ ಸಕ್ಕರೆ ಅಂಶವೂ ಇರುತ್ತದೆ.

ಹಾಗಾದರೆ, ಎಲ್ಲಿಂದ ಬಂತು ಈ ಸಕ್ಕರೆ?

ಯಾವುದೇ ಮರ-ಗಿಡ ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುವಾಗ ಬೇರು ಮತ್ತು ಕಾಂಡಗಳಲ್ಲಿ ಸಕ್ಕರೆಯನ್ನು ಸಂಗ್ರಹಿಸುತ್ತದೆ. ಈ ಸಂಗ್ರಹದ ಒಂದು ಪಾಲನ್ನು ತನಗೆ ಸೂಕ್ತ ಪರಿಸರ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಬೇರುಗಳ ಮೂಲಕ ಚಿಮ್ಮಿಸುತ್ತದೆ. ಸಕ್ಕರೆಯ ಈ ಪಾಲನ್ನು ಜೀವಾಣುಗಳೂ ಪಡೆದುಕೊಳ್ಳುತ್ತವೆ. ಜತೆಗೆ ಇರುವೆಯಂತಹ ಪ್ರಾಣಿ ಅದನ್ನು ಸಂಗ್ರಹಿಸಿ ತನ್ನ ಉಳಿವಿಗೆ ಬಳಸುತ್ತದೆ.

ಈ ಪ್ರಕ್ರಿಯೆಯಲ್ಲಿ ಅದು ಬೇರಿನ ತನಕ ಭೂಮಿಯಲ್ಲಿ ರಂಧ್ರ ಕೊರೆಯುತ್ತದೆ. ಇದರಿಂದ ಬೇರಿಗೆ ಬೇಕಾದ ನೀರು ಮತ್ತು ಇತರ ಪೋಷಕಾಂಶಗಳು ಸುಲಭವಾಗಿ ದೊರೆತು ಮರ ಸಮೃದ್ಧವಾಗಿ ಬೆಳೆಯುತ್ತದೆ. ಜತೆಗೆ ಮರದ ಕೆಳಗೆ ಬೆಳೆದಿರುವ ದ್ವಿದಳ ಸಸ್ಯಗಳಿಂದ ಬ್ಯಾಕ್ಟೀರಿಯಾಗಳಿಗೆ ಅವಶ್ಯಕವಾದ ಪ್ರೋಟೀನ್ ಸಹಜವಾಗಿ ದೊರೆಯುತ್ತದೆ. ಇದರಿಂದ ಜೀವಾಣುಗಳ ಸಂಖ್ಯೆ ವೃದ್ಧಿಯಾಗಿ ಅಂತಿಮವಾಗಿ ಅದರ ಪ್ರಯೋಜನ ಎಲ್ಲ ರೀತಿಯ ಸಸ್ಯಗಳು ಮತ್ತು ಮರ-ಗಿಡಗಳಿಗೂ ದಕ್ಕುತ್ತದೆ. ಈ ಹಿನ್ನೆಲೆಯಲ್ಲಿ ಜೀವಾಮೃತದಲ್ಲಿ ಕಡಲೆ ಹಿಟ್ಟು ಮತ್ತು ಬೆಲ್ಲವನ್ನು ಸೇರಿಸಲಾಗಿದೆ.

ಆದರೆ ಕಪ್ಪು ಬೆಲ್ಲವೇ ಏಕೆ?

ಇದಕ್ಕೂ ಸುಲಭ ವಿವರಣೆ ಇದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ದೊರೆಯುವ ಬೆಲ್ಲದಲ್ಲಿ ಡೆಕೊಲೈಟ್ ಚಿಪ್ಸ್, ಸೂಪರ್ ಹೈಡ್ರೋ (ಸೋಡಿಯಂ ಹೈಡ್ರೋ ಸಲ್ಫೇಟ್), ಮಡ್ಡಿ ನಿವಾರಕ ರಾಸಾಯನಿಕ ಪುಡಿ, ಯೂರಿಯಾ ಮುಂತಾದ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರ ಮಾಡಿರುತ್ತಾರೆ. ಬೆಲ್ಲಕ್ಕೆ ಬಣ್ಣ ಬರಿಸಲು ಇವನ್ನು ಸೇರಿಸುತ್ತಾರೆ. ಆದರೆ ಇವನ್ನು ಹಾಕದೇ ಬೆಲ್ಲ ಸಿದ್ಧ ಮಾಡಿದರೆ ಅದರ ಬಣ್ಣ ನಸುಕಪ್ಪು ಇರುತ್ತದೆ.

ಇನ್ನು, ಕಡಲೆ ಹಿಟ್ಟು ಪ್ರೋಟೀನ್ ಭರಿತವಾಗಿರುವುದರಿಂದ ಜೀವಾಣುಗಳ ಬೆಳವಣಿಗೆಗೆ ಪೂರಕ ಎಂದು ಅದನ್ನು ಸೇರಿಸಲಾಗಿದೆ.

ಹೊಲದ ಬದುವಿನಲ್ಲಿರುವ ಹಿಡಿ ಮಣ್ಣನ್ನು ಏಕೆ ಸೇರಿಸಲಾಗುತ್ತದೆ? ಬೇರೆ ಮಣ್ಣು ಏಕೆ ಬೇಡ?

ಇದಕ್ಕೂ ಉತ್ತರ ಸರಳ.
ಹೊಲದ ಬದುವಿನಲ್ಲಿ ಸಾಮಾನ್ಯವಾಗಿ ಉಳುಮೆ ಮಾಡುವುದಿಲ್ಲ. ಬದುವಿಗೆ ಯಾರೂ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುವುದಿಲ್ಲ. ಹೀಗಾಗಿ ಅಲ್ಲಿ ನಿಸರ್ಗದ ಉಳುಮೆ ಇರುತ್ತದೆ. ಅತ್ಯಂತ ಶುದ್ಧ ಭೂಮಿಯಾದ ಬದುವಿನಲ್ಲಿ ಹಲವಾರು ರೀತಿಯ ಸಸ್ಯಗಳು ಸಮೃದ್ಧವಾಗಿ ಬೆಳೆದಿರುತ್ತವೆ. ಇಲ್ಲಿಯ ಮಣ್ಣಿನಲ್ಲಿ ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಜೀವಾಣುಗಳು ಹೇರಳವಾಗಿರುತ್ತವೆ. ಆ ನೆಲದ ಎಲ್ಲ ಸೊಗಡನ್ನೂ ಇವು ಮೈಗೂಡಿಸಿಕೊಂಡಿರುವುದರಿಂದ ಇವುಗಳ ಸಂತತಿ ಕೋಟ್ಯಂತರ ಸಂಖ್ಯೆಯಲ್ಲಿ ವೃದ್ಧಿಯಾಗಲಿ ಎಂದು ಜೀವಾಮೃತ ತಯಾರಿಯಲ್ಲಿ ಬದುವಿನ ಮಣ್ಣನ್ನೇ ಮಿಶ್ರ ಮಾಡಲಾಗುತ್ತದೆ. ಒಂದು ಹಿಡಿ ಮಣ್ಣಿನಲ್ಲಿರುವ ಜೀವಾಣುಗಳು ಜೀವಾಮೃತದ ದ್ರಾವಣದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ.

ಒಂದು ವೇಳೆ ಹೊಲದಲ್ಲಿ ಬದುವೇ ಇಲ್ಲದಿದ್ದರೆ?

ಆಗ, ನಿಮ್ಮ ಹೊಲದಲ್ಲಿ ಬೆಳೆದ ಮರದ ಕೆಳಗಿನ, ಅಥವಾ ಬೇಲಿಯ ಕೆಳಗಿನ ಮಣ್ಣನ್ನು ತನ್ನಿ. ಆಗ ಸಗಣಿ-ಗಂಜಲದಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಹೊಲದ ಮಣ್ಣಿನ ಗುಣ-ಸ್ವಭಾವವನ್ನು ಸುಲಭವಾಗಿ ಗ್ರಹಿಸುತ್ತವೆ. ಕೈತೋಟ ಮಾಡಿಕೊಂಡಿರುವವರು ತಮ್ಮ ಮನೆಯ ಆವರಣದಲ್ಲಿರುವ ಮಣ್ಣನ್ನೇ ಜೀವಾಮೃತ ತಯಾರಿಯಲ್ಲಿ ಸೇರಿಸಿ. ಆಗ ನಿಮ್ಮ ಹೊಲದ ಮಣ್ಣಿನ ಅವಶ್ಯಕತೆಗೆ ತಕ್ಕಂತೆ ಜೀವಾಮೃತ ಸಿದ್ಧವಾಗುತ್ತದೆ.

ಇದರ ಉದ್ದೇಶ ಇಷ್ಟೇ: ಈಗ ಸಾವಯವ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವಂಥ ಮಹಾತ್ಮರು ಮುಂದೆ ಒಂದು ವೇಳೆ ಜೀವಾಮೃತವನ್ನೂ ಸಿದ್ಧಪಡಿಸಿ ಮಾರಲು ಹೊರಟರೆ ಅವರಿಗೆ ನಿಮ್ಮ ಹೊಲದ ಬದುವಿನ ಮಣ್ಣೇ ಅಡ್ಡಿಯಾಗುತ್ತದೆ ಎಂಬುದು ನೆನಪಿರಲಿ. ಏಕೆಂದರೆ, ಅಂಥ ರೆಡಿಮೇಡ್‌ ಜೀವಾಮೃತ ನಿಮ್ಮ ಮಣ್ಣಿನ ಗುಣಲಕ್ಷಣಗಳಿಗೆ ಪೂರಕವಾದ ಅಂಶಗಳನ್ನು ಹೊಂದಿರುವುದಿಲ್ಲ. ರೈತ ಎಲ್ಲ ರೀತಿಯಿಂದ ಸ್ವಾವಲಂಬಿಯಾಗಬೇಕು ಎಂಬುದೇ ಪಾಳೇಕರ್‌ ಸಿದ್ಧಾಂತದ ಮೂಲ ಲಕ್ಷಣ.

(ಮುಂದುವರಿಯುವುದು)

- ಚಾಮರಾಜ ಸವಡಿ