ಮೀಸಲಾತಿಯ ಆಚೆಗೆ ನೋಡೋಣ

ಮೀಸಲಾತಿಯ ಆಚೆಗೆ ನೋಡೋಣ

ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ ಎಂಬಂತೆ ವಾದಿಸುತ್ತಾರೆ. ಈ ಮೂಲಕ ತಾವು ದಡ್ಡರು ಎಂದು ಒಪ್ಪಿಕೊಳ್ಳುತ್ತಾರೆ.

ವಾಸ್ತವದಲ್ಲಿ ನಾವು ಚರ್ಚಿಸಬೇಕಿರುವುದು ಮೀಸಲಾತಿಯ ಬಗೆಗೆ ಅಲ್ಲ. ಮೀಸಲಾತಿಯನ್ನು ಅಗತ್ಯ ಎನ್ನುವಂತೆ ಮಾಡಿರುವ ಇತರ ಅಂಶಗಳ ಬಗ್ಗೆ. ಅನಂತಮೂರ್ತಿಯವರು ತಮ್ಮ ಇತ್ತೀಚಿನ ಲೇಖನ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಜ್ಞಾನ ಯಜ್ಞದಲ್ಲಿ ಮೀಸಲಾತಿಯ ಅಗತ್ಯವೇ ಇಲ್ಲದಂತೆ ಮಾಡಲು ಸಾಧ್ಯವಿರುವ ಶಿಕ್ಷಣ ವ್ಯವಸ್ಥೆಯೊಂದರ ಬಗ್ಗೆ ಬರೆದಿದ್ದಾರೆ. ಇದು ಅತಿ ಆದರ್ಶದ ಮಾತೇನೂ ಅಲ್ಲ. ತೀರಾ ಇತ್ತೀಚಿನವರೆಗೂ ಇದ್ದ ಈಗ ನಗರಗಳಲ್ಲಿ ಪೂರ್ಣ ಇಲ್ಲದಂತಾಗಿರುವ ವ್ಯವಸ್ಥೆಯೊಂದರ ಪುನರುಜ್ಜೀವನದ ಬಗ್ಗೆ ಅವರು ಹೇಳುತ್ತಿದ್ದಾರೆ. ಮೀಸಲಾತಿಯ ಬೇಕು ಬೇಡಗಳ ಕುರಿತು ಸಂವೇದನಾ ರಹಿತರಾಗಿ ಮಾತನಾಡುವುದಕ್ಕಿಂತ ಈ ಬಗೆಯ ವ್ಯವಸ್ಥೆಯೊಂದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನಾದರೂ ಇಡುವುದು ಸೂಕ್ತ ಎನಿಸುತ್ತದೆ.

ಇದಕ್ಕಾಗಿ ಸರಕಾರ ಏನೂ ಮಾಡಬೇಕಿಲ್ಲ. ನಾವು ನಮ್ಮ ಮಕ್ಕಳನ್ನು ಸರಕಾರೀ ಶಾಲೆಗಳಿಗೆ ಕಳುಹಿಸುವ ಮೂಲಕವೇ ಇದನ್ನು ಆರಂಭಿಸಬಹುದು. ಈಗಂತೂ ಸಮುದಾಯವನ್ನು ಶಾಲೆಯ ಆಗು ಹೋಗುಗಳಲ್ಲಿ ಪಾಲುದಾರರನ್ನಾಗಿಸುವುದು ಕಡ್ಡಾಯವೂ ಆಗಿರುವುದರಿಂದ ಹೊಸ ಶಿಕ್ಷಣ ಸಂಸ್ಕೃತಿಯೊಂದನ್ನು ಬೆಳೆಸುವುದು ಖಂಡಿತಾ ಸಾಧ್ಯ ಎಂಬುದು ನನ್ನ ಭಾವನೆ.

Rating
No votes yet

Comments