ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

ಬರಹ

ಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು. ನೀಡಿ ಇಸ್ಕಾನ್ ಅವರು ನೀಡುತ್ತಿರುವ ಪುಳಿಯೋಗರೆ, ಬಿಸಿಬೇಳೆ ಬಾತ್, ಕೇಸರಿಬಾತ್ ಖಾಲಿ ಮಾಡಲು ಜನಸಂದಣಿ ಹೆಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಡಕ್ಕಿ, ಖಾರ ರೊಟ್ಟಿ, ಹಪ್ಪಳ, ಉಪ್ಪೇರಿ, ಸಂಡಿಗೆ, ಉಪ್ಪಿನಕಾಯಿ, ಚಟ್ನಿ ಪುಡಿ ಇಟ್ಟುಕೊಂಡ ಸ್ಟಾಲ್ ಗಳತ್ತ ಜನ ಪ್ರವಾಹದಂತೆ ನುಗ್ಗಿದರೂ ಖರೀದಿಸಿದವರು ವಿರಳ. ಇದು ಅಲ್ಲಿದ್ದ ಎಲ್ಲಾ ಸ್ಟಾಲ್ ಗಳವರ ಅಂಬೋಣ. ಸಾಹಿತಿ ವಸುಧೇಂದ್ರ, ಆರ್ ಜೆ ಹಳ್ಳಿ ನಾಗರಾಜ್ ಸೇರಿದಂತೆ ಪುಸ್ತಕ ಮಳಿಗೆಯಲ್ಲಿದ್ದ ಅನೇಕರು ನಾಲ್ಕು ದಿನ ಕೆಂಧೂಳಿನಲ್ಲಿ ಮಿಂದೆದ್ದದ್ದು ಸುಳ್ಳಲ್ಲ. ಇದು ಜಾತ್ರೆಯಾಗಿದೆ, ಪುಸ್ತಕ ಖರೀದಿಯ ವರ್ಗ ಇಲ್ಲಿಲ್ಲ, ಲಾಭದ ಮಾತಿರಲಿ ಸರಿಯಾಗಿ ವ್ಯಾಪಾರವೇ ಆಗಿಲ್ಲ ಎನ್ನುತ್ತಿದ್ದರು ವಸುಧೇಂದ್ರ. ಎಲ್ಲಾ ಮಳಿಗೆಗಳಲ್ಲೂ ರಿಯಾಯಿತಿ ಇದ್ದರೂ ವ್ಯಾಪಾರ ದಿನೇದಿನೇ ಕುಗ್ಗಿ ಹೋಗಿತ್ತು.

***
ತರಾಸು ವೇದಿಕೆಯಲ್ಲಿ ನಿನ್ನೆಯ ಕವಿಗೋಷ್ಠಿ ಇಂದು ಮುಂದುವರೆದಿದ್ದು ಜಂಬೋ ಕವಿಗೋಷ್ಠಿ ಎನ್ನಬಹುದು. ಸುಮಾರು 30-35 ಕವಿ, ಕವಿಯತ್ರಿಯರು ತಮ್ಮ ಕವನದ ಬಾಣಗಳನ್ನು ಪ್ರೇಕ್ಷಕರತ್ತ ಬಿಡುತ್ತಿದ್ದರು. ಆದರೆ ಅದು ತಾಗಿದ್ದು ಬಹಳ ಕಮ್ಮಿ. ಇಂದಿನ ಗೋಷ್ಠಿಯಲ್ಲಿ ಜನರಿದ್ದಷ್ಟೇ ಸಂಖ್ಯೆಯಲ್ಲಿ ಖಾಲಿ ಆಸನಗಳು ರಾರಾಜಿಸುತ್ತಿದ್ದವು. ಸಮ್ಮೇಳನಾಧ್ಯಕ್ಷ ಎಲ್ ಬಸವರಾಜು ಅವರೊಂದಿಗೆ ಸಂವಾದ ನಡೆಸಲು ಕೆಲ ಹಿರಿಯರು ಕಾದು ಕುಳಿತ್ತಿದ್ದರು.