ಅಸಮರ್ಥರ ಕೈಯಲ್ಲಿ ಕರ್ನಾಟಕ

ಅಸಮರ್ಥರ ಕೈಯಲ್ಲಿ ಕರ್ನಾಟಕ

ಊರು ಸೂರೆ ಹೋದ ನಂತರ ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಮಾತಿಗೆ ಉದಾಹರಣೆ ಬೇಕಾದರೆ ಬೆಂಗಳೂರು ಪೊಲೀಸರನ್ನು ನೋಡಬಹುದು.

ಬೆಂಗಳೂರು ಸ್ಫೋಟ ಸಂಭವಿಸಿ ಆರು ತಿಂಗಳ ಮೇಲಾಯಿತು. ಜುಲೈ ಕೊನೆಯ ವಾರದಲ್ಲಿ, ಅಂದರೆ ೨೫ನೇ ತಾರೀಖು ಸಂಭವಿಸಿದ ಸರಣಿ ಸ್ಫೋಟಗಳಲ್ಲಿ ಒಬ್ಬ ಮಹಿಳೆ ಸತ್ತು ನಾಲ್ವರು ಗಾಯಗೊಂಡರು. ಅವರ ಪೈಕಿ ಇನ್ನೊಬ್ಬರು ನಂತರ ತೀರಿಕೊಂಡರು.

ಆಗ ಮಾಧ್ಯಮದಲ್ಲಿ ಹೇಳಿಕೆ ವೀರರದೇ ಪ್ರತಾಪ. ಇದು ಬಿಜೆಪಿ ಸರ್ಕಾರದ ವಿರುದ್ಧ ಹೂಡಿರುವ ಕುತಂತ್ರ ಎಂಬರ್ಥದ ಹೇಳಿಕೆಗಳು ಆಡಳಿತರೂಢ ಪಕ್ಷದಿಂದ ಬಂದವು. ಸವಾಲು ಎದುರಿಸಲು ಪೊಲೀಸ್‌ ವ್ಯವಸ್ಥೆ ಸಮರ್ಥವಾಗಿದೆ ಎಂದು ಪೇಷಂಟ್‌ನಂತಿರುವ ಗೃಹ ಸಚಿವ ಡಾ. ವಿ.ಎಸ್‌. ಆಚಾರ್ಯ ಹೇಳಿಕೆ ಕೊಟ್ಟರು. ಕೇಂದ್ರದ ತನಿಖಾ ತಂಡಗಳು ಧಾವಿಸಿ ಬಂದವು. 

ಆನಂತರ ರಾಜ್ಯಾದ್ಯಂತ ಸ್ಫೋಟಕಗಳು ಪತ್ತೆಯಾದವು. ಅದು ಗೊತ್ತಾಗುತ್ತಲೇ ಮತ್ತೆ ಕೇಂದ್ರದಿಂದ, ಪಕ್ಕದ ಮಹಾರಾಷ್ಟ್ರದಿಂದ ಬಂದ ತನಿಖಾ ತಂಡಗಳು ಹಿಂಡುಹಿಂಡು ಶಂಕಿತರನ್ನು ಹೆಡೆಮುರಿಗೆ ಕಟ್ಟಿ ಕರೆದೊಯ್ದರು. ಅವರನ್ನು ಗೌರವದಿಂದ ಗಡಿ ದಾಟಿಸಿ ಬಂದ ಬೆಂಗಳೂರು ಪೊಲೀಸರು ಯಥಾಪ್ರಕಾರ ತಮ್ಮ ಕೆಲಸಗಳಲ್ಲಿ ನಿರತರಾದರೇ ಹೊರತು, ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಈಗ ಬಂಧಿಸಲಾಗಿರುವ ವ್ಯಕ್ತಿಗಳಲ್ಲಿ ಏನಾದರೂ ಮಾಹಿತಿ ಇದೆಯಾ ಎಂದು ವಿಚಾರಿಸಲು ಹೋಗಲಿಲ್ಲ.

ಮುಂಬೈ ದಾಳಿ ಮುಕ್ತಾಯವಾಗುತ್ತಿದ್ದಂತೆ ದಾಳಿಗೆ ಕಾರಣರಾರು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿತ್ತು. ಉತ್ತರ ಪ್ರದೇಶ, ಅಸ್ಸಾಂನ ಗುವಾಹಟಿ ಮುಂತಾದೆಡೆ ಸಂಭವಿಸಿದ ಬಾಂಬ್‌ ಸ್ಫೋಟಗಳನ್ನು ನಡೆಸಿದವರ ಮಾಹಿತಿಯೂ ತಕ್ಕಮಟ್ಟಿಗೆ ಲಭ್ಯವಾಗಿತ್ತು. ಆದರೆ, ಬೆಂಗಳೂರು ಸ್ಫೋಟದ ರೂವಾರಿಗಳಾರು, ಅವರ ಉದ್ದೇಶ ಏನು ಎಂಬುದು ಆರು ತಿಂಗಳಾದರೂ ಗೊತ್ತಾಗಲಿಲ್ಲ. ಸ್ಫೋಟದ ಮುನ್ಸೂಚನೆಯನ್ನು ಕೂಡಾ ನಮ್ಮ ಗುಪ್ತಚರ ತಂಡಗಳು ನೀಡಿರಲಿಲ್ಲ. ಸ್ಫೋಟದ ನಂತರವಾದರೂ ಇವರೆಲ್ಲ ಸಕ್ರಿಯರಾದರೆ ಎಂದು ನೋಡಿದರೆ ಅದೂ ಇಲ್ಲ. 

ಏಕೆ ಇಷ್ಟೊಂದು ಉದಾಸೀನತೆ?

ನಮ್ಮ ಪೊಲೀಸರು ಅಸಮರ್ಥರಾ? ಅಥವಾ ಅವರನ್ನು ನಿಯಂತ್ರಿಸುತ್ತಿರುವ ರಾಜಕೀಯ ವ್ಯವಸ್ಥೆಯ ಭ್ರಷ್ಟತೆಯಾ? 

ಪೊಲೀಸರು ಅಸಮರ್ಥರು ಎಂಬುದಕ್ಕಿಂತ, ರಾಜಕೀಯ ಭ್ರಷ್ಟತೆಯೇ ಈ ಪರಿಯ ನಿಷ್ಕ್ರಿಯತೆಗೆ ಕಾರಣ ಅನಿಸುತ್ತದೆ. ಯಾವೊಂದು ವ್ಯವಸ್ಥೆಯೂ ಹುಟ್ಟಾ ಅಸಮರ್ಥವಾಗಿರುವುದಿಲ್ಲ. ಅದನ್ನು ನಿಯಂತ್ರಿಸುವ ವ್ಯವಸ್ಥೆ ಅದಕ್ಕೆ ಕಾರಣವಾಗಿರುತ್ತದೆ. ಕಾನ್ಸಟೇಬಲ್‌ಗಳಿಂದ ಹಿಡಿದು ಐಪಿಎಸ್‌ ಅಧಿಕಾರಿಗಳವರೆಗೆ ಸಾವಿರಾರು ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಸರ್ಕಾರ ವರ್ಗಾ ಮಾಡಿತು. ಇದೇ ಕೊನೆ, ಇದೇ ಕೊನೆ ಎನ್ನುತ್ತಲೇ ಮತ್ತೆ ಮತ್ತೆ ವರ್ಗಾವಣೆ ನಡೆಸಿತು. ಪ್ರತಿಯೊಂದು ವರ್ಗಾವಣೆ ಹಿಂದೆಯೂ ಹಣದ ಸದ್ದು ಕೇಳಿ ಬಂತು. ಅಸಮಾಧಾನ, ಅಸಹಾಯಕತೆ ಸ್ಪಷ್ಟವಾಗಿ ಗೋಚರಿಸಿದವು. ಇಂತಹ ಹಲವಾರು ಕಾರಣಗಳಿಂದ ನಿರುತ್ಸಾಹಿಯಾದ ಪೊಲೀಸ್‌ ವ್ಯವಸ್ಥೆ, ಅದಕ್ಕೆ ಬಲ ತುಂಬಬೇಕಿದ್ದ ಗೃಹ ಸಚಿವ ಆಚಾರ್ಯರಂಥವರ ಅಸಮರ್ಥತೆಯಿಂದಾಗಿ ಬೆಂಗಳೂರು ಸ್ಫೋಟದ ತನಿಖೆ ತೀವ್ರವಾಗಲಿಲ್ಲ. 

ಇದು ಒಂದು ಕಾರಣವಾದರೆ, ಈ ಪರಿಯ ಉಗ್ರವಾದ ಕರ್ನಾಟಕದ ಮಟ್ಟಿಗೆ ಹೊಸತಾಗಿದ್ದೂ ಇನ್ನೊಂದು ಕಾರಣ. ನಮ್ಮಲ್ಲೂ ಉಗ್ರ ನಿಗ್ರಹ ಪಡೆ (ಆಂಟಿ ಟೆರರ್‌ ಸ್ಕ್ವಾಡ್‌) ಎಟಿಎಸ್‌ ರಚನೆಯಾಯಿತು. ಆದರೆ, ಅದು ರಚನೆಯಾಗಿದೆ ಎಂಬುದು ಸಾಮಾನ್ಯ ಪೊಲೀಸರಿಗೆ ಬಿಡಿ ಹಿರಿಯ ಪೊಲೀಸ್‌ ಅಧಿಕಾರಿಗಳಿಗೇ ಗೊತ್ತಿಲ್ಲ. ಅದಕ್ಕೊಂದು ವ್ಯವಸ್ಥಿತ ಕಚೇರಿ ಇಲ್ಲ. ಸೂಕ್ತ ಸಿಬ್ಬಂದಿ ನೇಮಕವಿಲ್ಲ. ಅದರ ಕಾರ್ಯವೈಖರಿ, ವ್ಯಾಪ್ತಿ ನಿಶ್ಚಿತವಾಗಿಲ್ಲ. ಇಂಥದೊಂದು ಅಸಮರ್ಪಕ ಅಸ್ತ್ರವಿಟ್ಟುಕೊಂಡು ಯಾವ ಉಗ್ರರ ವಿವರ ಕಲೆ ಹಾಕಲು ಸಾಧ್ಯ?

ಪಕ್ಕದ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಉಗ್ರರು ಬಾಯ್ಬಿಟ್ಟ ಮಾಹಿತಿಯ ಎಳೆ ಹಿಡಿದು ಕೊನೆಗೂ ಒಂಬತ್ತು ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿ, ಸ್ಫೋಟದ ರೂವಾರಿಗಳು ಇವರೇ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಇಳಿ ವಯಸ್ಸಿನಲ್ಲಿ ಎಳೆ ಮಗುವಿನ ತಂದೆಯಾಗುವ ಮೂಲಕ ಪುರುಷತ್ವ ಸಾಬೀತು ಮಾಡಿದ ವ್ಯಕ್ತಿಯಂತೆ ಸಂತಸದಲ್ಲಿ ಓಲಾಡುತ್ತಿದ್ದಾರೆ. ನಮ್ಮ ಗೃಹ ಇಲಾಖೆ, ಪೊಲೀಸರಿಂದ ಸಾಧ್ಯವಾಗುವುದು ಇಷ್ಟೇನಾ?

ದೇಶಕ್ಕೆಲ್ಲ ಸ್ಫೋಟಕಗಳನ್ನು ಸರಬರಾಜು ಮಾಡಿದ, ವಿಧ್ವಂಸಕ ಯೋಜನೆಗಳನ್ನು ರೂಪಿಸಿದ ವ್ಯಕ್ತಿಗಳು ರಾಜ್ಯದ ಕರಾವಳಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವುದು ಗೊತ್ತಿದ್ದೂ ನಮ್ಮ ಪೊಲೀಸ್‌ ವ್ಯವಸ್ಥೆ ಸುಮ್ಮನಿದೆ. ಅಧಿಕಾರಸ್ಥ ರಾಜಕಾರಣಿಗಳು ಸುಮ್ಮನಿದ್ದಾರೆ. ಇಲ್ಲಿ ಶಾಸಕರ ಪತ್ನಿಯ ಸಾವಿನ ಕಾರಣ ಹೊರಬರುವುದಿಲ್ಲ, ಶಾಸಕ ಲಂಚ ಹೊಡೆದರೆ ಅದನ್ನು ಖಂಡಿಸುವುದಿಲ್ಲ. ಹಾಡಹಗಲೇ ಸಾರ್ವಜನಿಕ ಸ್ಥಳಕ್ಕೆ ನುಗ್ಗಿ ಮಹಿಳೆಯರನ್ನು ಥಳಿಸಿದವರಿಗೆ ಏನೂ ಆಗುವುದಿಲ್ಲ. ಅದಕ್ಕೆ ಕಾರಣಕರ್ತನಾದ ವ್ಯಕ್ತಿ, ’ವ್ಯಾಲೆಂಟೈನ್ಸ್‌ ಡೇ ಆಚರಿಸಿದರೆ ಹುಷಾರ್‌, ರಾಖಿ ಕಟ್ಟುತ್ತೇವೆ ಇಲ್ಲದಿದ್ದರೆ ತಾಳಿ ಕಟ್ಟಿಸುತ್ತೇವೆ’ ಎಂದು ಬೆಂಗಳೂರು ಪ್ರೆಸ್‌ ಕ್ಲಬ್‌ನಿಂದ ಎಚ್ಚರಿಕೆ ಕೊಡುತ್ತಾನೆ. ಸರ್ಕಾರ ಅದನ್ನು ಕೇಳಿಕೊಂಡೂ ಸುಮ್ಮನಿರುತ್ತದೆ. ಗೃಹ ಸಚಿವರು ಏಟು ಬಿದ್ದ ಮೂಕಪ್ರಾಣಿಯಂತೆ ಮುಲುಗುತ್ತಾರೆ. 

ಸುಭದ್ರ ಸರ್ಕಾರ ಅಂದರೆ ಇದೇನಾ?

ಜಂಕ್ಷನ್‌ಗಳಲ್ಲಿ ನಿಂತು ದ್ವಿಚಕ್ರವಾಹನ ಸವಾರರಿಂದ, ಲಾರಿ ಚಾಲಕರಿಂದ ದುಡ್ಡು ಕಿತ್ತುಕೊಳ್ಳುವ ಉತ್ಸಾಹದ ಕಾಲು ಭಾಗವನ್ನು ನಮ್ಮ ಪೊಲೀಸರು ಉಗ್ರರ ನಿಗ್ರಹದಲ್ಲಿ ತೋರಿದರೆ ಇಡೀ ಕರ್ನಾಟಕ ನೆಮ್ಮದಿಯಿಂದ ನಿದ್ದೆ ಮಾಡೀತು. ಸಿಬ್ಬಂದಿ ವರ್ಗಾವಣೆಯಲ್ಲಿ ರಾಜಕಾರಣಿಗಳು ತೋರುವ ಉಮೇದಿನ ಕಾಲು ಭಾಗವನ್ನು ಭದ್ರತೆಯತ್ತ ಹರಿಸಿದರೆ ಕರ್ನಾಟಕ ಇಡೀ ದೇಶದಲ್ಲೇ ಸುಭದ್ರ ರಾಜ್ಯ ಅನಿಸೀತು. ಇಲ್ಲದಿದ್ದರೆ, ಈ ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು. ಮಾಡಿ ದಕ್ಕಿಸಿಕೊಳ್ಳಬಹುದು ಎಂಬಂತಾಗುತ್ತದೆ.

ಹಾಗಾಗದಿರಲಿ.

- ಚಾಮರಾಜ ಸವಡಿ

Rating
No votes yet