ಸುಟ್ಟ ನವಿಲುಗಳ ದುರ್ವಾಸನೆಯಿಂದ ಕಂಪಿಸಿದ ಏಲಕ್ಕಿ ಕಂಪಿನ ನಾಡು.

ಸುಟ್ಟ ನವಿಲುಗಳ ದುರ್ವಾಸನೆಯಿಂದ ಕಂಪಿಸಿದ ಏಲಕ್ಕಿ ಕಂಪಿನ ನಾಡು.

ಬರಹ

ಏಲಕ್ಕಿ ಕಂಪಿನ ಹಾಗು ಏಲಕ್ಕಿ ಹಾರಗಳ ಸೊಂಪಿನ ನಾಡು ಹಾವೇರಿ. ಈಗ ಆ ಕಂಪಿನ ಬದಲು ಸುಟ್ಟುಕೊಂಡು ಸತ್ತ ನವಿಲುಗಳ ದುರ್ವಾಸನೆ ಅಲ್ಲಿ ಮನೆಮಾಡಿದೆ. ಈ ದುರ್ಘಟನೆಯಿಂದ ನೇಗಿಲಯೋಗಿ ತೀವ್ರ ಮನನೊಂದಿದ್ದಾನೆ. ಅಪರೋಕ್ಷವಾಗಿ ಈ ಘಟನೆಗೆ ತಾನೇ ಕಾರಣ ಎಂದು ಆತ ಮನಗಂಡಿರಲೂ ಸಾಕು. ೨೩ ಎಕರೆಯಲ್ಲಿ ಬೆಳೆದು, ೩ ಬಣಿವೆಗಳಲ್ಲಿ ಒಟ್ಟಲಾಗಿದ್ದ ಸೋಯಾಬಿನ್ ಬೆಳೆಗೆ ರಾತ್ರಿಯ ವೇಳೆ ೮ ಕ್ಕೂ ಹೆಚ್ಚು ನವಿಲುಗಳು ಲಗ್ಗೆ ಇಟ್ಟಿವೆ. ಆಕಸ್ಮಿಕವಾಗಿ ಈ ಬಣಿವೆಗಳಿಗೆ ಆಗ ಬೆಂಕಿ ತಗುಲಿದೆ. ಕಾಳು ಹೆಕ್ಕುವ ಭರದಲ್ಲಿ ಅಪಾಯ ಲೆಕ್ಕಿಸದೇ ಝಳಕ್ಕೆ ಒಡ್ಡಿಕೊಂಡು ೩ ನವಿಲುಗಳು ಸಾವನ್ನಪ್ಪಿದರೆ, ಉಪಾಯಗಾಣದೇ ಬಣಿವೆಯ ಮಧ್ಯೆ ಸಿಕ್ಕಿಕೊಂಡ ೨ ನವಿಲುಗಳು ಹೃದಯ ವಿದ್ರಾವಕ ರೀತಿಯಲ್ಲಿ ಸುಟ್ಟು ಕರಕಲಾಗಿ ಅಸುನೀಗಿವೆ.

ಈ ಮನಕಲಕುವ ಘಟನೆ ಜರುಗಿದ್ದು ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ ಬನ್ನೂರು ಗ್ರಾಮದಲ್ಲಿ. ಕಳೆದ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಶನಿವಾರ ಮಾಧ್ಯಮಗಳ ಗಮನಕ್ಕೆ ಬಂದಿದೆ. ಕೆಲ ಪತ್ರಿಕೆಗಳು ಈ ಘಟನೆಯ ಕುರಿತು ವರದಿ ಮಾಡಿವೆ. ಆದರೆ ಆ ವರದಿ ಹಾವೇರಿ ಆವೃತ್ತಿಗೆ ಮಾತ್ರ ಸೀಮಿತಗೊಳಿಸಿ ‘ಹೈಲಿ ಲೋಕಲೈಸ್ಡ್’ ಪ್ರಾಮುಖ್ಯತೆ ನೀಡಿ ಪ್ರಕಟಿಸಿವೆ. ರಾಷ್ಟ್ರಪಕ್ಷಿಗಳು ಬೆಂಕಿ ಆಕಸ್ಮಿಕದಲ್ಲಿ ಅಸುನೀಗಿದ ಸುದ್ದಿ ರಾಜ್ಯದ ಉಳಿದ ಭಾಗದ ಜನರಿಗೆ ‘ಅಪತ್ರಿಕಾ ವಾರ್ತೆ’ ಎಂದು ‘ಇವರೇ’ ಓದುಗರ ಪರವಾಗಿ ನಿರ್ಧರಿಸಿಬಿಟ್ಟಿದ್ದಾರೆ! ಹಾಗಾಗಿ ಈ ಸುದ್ದಿಯ ‘ಫಾಲೋ ಅಪ್’ ನಾವಂತೂ ನಿರೀಕ್ಷಿಸುವಂತಿಲ್ಲ!

ರಾಷ್ಟ್ರದ ಏಕೈಕ ನವಿಲುಧಾಮ ಬಂಕಾಪುರದಲ್ಲಿದೆ. ಇದು ನವಿಲುಗಳ ಅಭಯಾರಣ್ಯ. ಶಿಗ್ಗಾಂವಿಗೆ ಅತ್ಯಂತ ಹತ್ತಿರವಿದೆ. ಈ ತಾಲೂಕಿನ ಬನ್ನೂರು ಗ್ರಾಮದಲ್ಲಿ ೩ ಬಣಿವೆಗಳಿಗೆ ಬೆಂಕಿ ತಗುಲಿ ೫ ನವಿಲುಗಳು ದಾರುಣ ಸಾವು ಕಂಡಿವೆ ಎಂಬುದು ಇಲ್ಲಿ ಗಮನಾರ್ಹ. ಬನ್ನೂರು ಗ್ರಾಮದ ಪ್ರಗತಿಪರ ಕೃಷಿಕರಾದ ಮಾದೇಗೌಡ್ರು ಪೊಲೀಸ್ ಗೌಡ್ರ ಅವರಿಗೆ ಸೇರಿದ ೭ ಎಕರೆಗಳು, ವೀರಭದ್ರಗೌಡ್ರು ಹೊಸಗೌಡ್ರ ಅವರಿಗೆ ಸೇರಿದ ೧೦ ಎಕರೆಗಳು ಹಾಗು ಮರಿಗೌಡ್ರ ಪೊಲೀಸ್ ಗೌಡ್ರ ಅವರ ೭ ಎಕರೆಗಳಲ್ಲಿ ಬೆಳೆದ ಸೋಯಾಬಿನ್ ೩ ಬಣಿವೆಗಳಲ್ಲಿ ಸಾಲಾಗಿ ಒಟ್ಟಲಾಗಿತ್ತು. ಗುರುವಾರ ರಾತ್ರಿ ಬಹಿರ್ದೆಸೆಗೆ ತೆರಳಿದ್ದ ಕೆಲವರು ಗೌಡ್ರ ಬಣಿವೆಗೆ ಬೆಂಕಿ ಬಿದ್ದದ್ದು ಕಂಡು ಹಳ್ಳಿಗೆ ಸುದ್ದಿ ಮುಟ್ಟಿಸಿದರು. ಆಗಲೇ ಆಗಸದೆತ್ತರ ಬೆಂಕಿಯ ಕೆನ್ನಾಲಿಗೆಗಳು ವ್ಯಾಪಿಸಿದ್ದವು. ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಬೆಂಕಿ ನಂದಿಸಲು ಹರ ಸಾಹಸಪಟ್ಟರು. ಇತ್ತ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವುದನ್ನು ಗಮನಿಸಿದ ಹಿರಿಯರು, ಅಗ್ನಿಶಾಮಕ ದಳಕ್ಕೆ ಸುದ್ದಿ ರವಾನಿಸಿದರು.

ಗ್ರಾಮಸ್ಥರು ಬಣವಿಯಲ್ಲಿ ಸಿಕ್ಕಿ ಹಾಕಿಕೊಂಡ ತಮ್ಮ ಮಿತ್ರನನ್ನು ರಕ್ಷಿಸಲು ಜೀವದಹಂಗು ತೊರೆದು ಯತ್ನಿಸಿದರು. ಬೆಂಕಿಯ ಝಳಕ್ಕೆ ತೀವ್ರ ನಲುಗಿದ್ದ ೩ ನವಿಲುಗಳಿಗೆ ನೇಗಿಲಯೋಗಿ ಮಮ್ಮಲಮರುಗುತ್ತ ಪ್ರಾಥಮಿಕ ಚಿಕಿತ್ಸೆ ನೀಡಲು ಅಣಿಯಾದರು. ಗಿಡದ ಬುಡದ ತಂಪಿಗೆ ಹೊತ್ತೊಯ್ದರು. ಮೈಮೇಲೆ ನೀರು ಚಿಮುಕಿಸಿದರು. ಸಾಂತ್ವನವೆಂಬಂತೆ ಬಾಯಲ್ಲಿ ನೀರು ಬಿಟ್ಟು, ಮೈ ನೇವರಿಸಿದರು. ಆದರೆ ಆಘಾತಗೊಂಡಿದ್ದ ನವಿಲುಗಳು ಯಾವುದೇ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ನಿಸ್ತೇಜಗೊಂಡು ಪ್ರಾಣಪಕ್ಷಿ ಹಾರಿ, ತಟಸ್ಥವಾದವು. ಇದೇ ಸಂದರ್ಭದಲ್ಲಿ ಬಣವಿಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ೨ ನವಿಲುಗಳು ಅಕ್ಷರಶ: ಸುಟ್ಟು ಕರಕಲಾಗಿದ್ದವು. ನೆರೆದವರ ಕಣ್ಣು ಮಂಜಾಗಿದ್ದವು. ‘ಪಾಪ..ಮೂಕ ಪ್ರಾಣಿ, ಹೊಲದಾಗಿನ ಕ್ರಿಮಿ, ಕೀಟ, ಕೀಡಿ ತಿಂದು ಹೊಲ ಹಸನ ಮಾಡ್ತಿದ್ವು. ಪಾಲಾ ತೊಗೊಳ್ಳೋ ಹೊತ್ತಿನ್ಯಾಗ ಜೀವ ಕಳಕೊಂಡ್ವು’ ಎಂದು ಗ್ರಾಮಸ್ಥರು ವಿಷಾದ ವ್ಯಕ್ತ ಪಡಿಸುತ್ತಿದ್ದರು.

ಇಷ್ಟೆಲ್ಲ ಸರ್ಕಸ್ ಸಂಪನ್ನಗೊಳ್ಳುವ ಹೊತ್ತಿಗೆ ಹೊಲದ ಬದುವುಗಳನ್ನು ಸೀಳಿಕೊಂಡು ಅಗ್ನಿಶಾಮಕ ದಳದ ಹೆಡ್ ಲೈಟ್ ಇಲ್ಲದ ಟ್ಯಾಂಕರ್ ಗಳು ದಾರಿ ಹುಡುಕುತ್ತ ಬಂದವು. ೮ ಲಕ್ಷ ರುಪಾಯಿ ಮೌಲ್ಯದ ಸೋಯಾಬಿನ್ ಹಾಗು ೫ ನವಿಲುಗಳು ಇನ್ನಿಲ್ಲವಾಗಿದ್ದವು. ಸುಟ್ಟ ಸೋಯಾಬಿನ್ ಪೀಕಿನ ಬೂದಿ ಆಗಲೇ ಹೊಲದ ತುಂಬೆಲ್ಲ ಚೆಲ್ಲಿತ್ತು. ಎಲ್ಲರೂ ಆ ‘ಫೈರ್ ಫಾಯಟರ್’ ಗಳೊಂದಿಗೆ ಅಕ್ಷರಶ: ‘ಫಾಯಿಟಿಂಗ್’ ಇಳಿದರು. ಅತ್ತ ಅಗ್ನಿಯ ಜ್ವಾಲೆಗಳು ಕಡಿಮೆಯಾಗುತ್ತಿದ್ದಂತೆ ಜನರ ಆಕ್ರೋಷದ ಕಿಡಿ ವ್ಯಾಪಿಸತೊಡಗಿತು. ಎಲ್ಲರೂ ಅಗ್ನಿಶಾಮಕದಳದವರನ್ನು ತಮ್ಮ ಶಕ್ತ್ಯಾನುಸಾರ ತರಾಟೆಗೆ ತೆಗೆದುಕೊಂಡರು. ಅವರೂ ಕೂಡ ಹರಸಾಹಸ ಪಟ್ಟು ಊರಿಂದ ನಿರ್ಗಮಿಸಿದರು.

ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬೆಂಕಿ ಆಕಸ್ಮಿಕದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಥಾ ಪ್ರಕಾರ ಮಾಧ್ಯಮ ಸತ್ಯಾನ್ವೇಷಣ ವರದಿ ಪ್ರಕಟಿಸದೇ ಪೊಲೀಸರ ವರದಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದೆ. ಸಕಾಲದಲ್ಲಿ ಆಗಮಿಸದ ಅಗ್ನಿಶಾಮಕ ದಳದ ವಿರುದ್ಧ, ಅವರ ಪೂರ್ವ ತಯಾರಿಯ ಕೊರತೆಯ ವಿರುದ್ಧ (ಹಗಲಿನಲ್ಲಿ ಮಾತ್ರ ಬೆಂಕಿ ತಗಲುತ್ತದೆ ಎಂದು ಅವರು ಭಾವಿಸಿದಂತಿದೆ! ಹಾಗಾಗಿ ಟ್ಯಾಂಕರ್ ಹೆಡ್ ಲೈಟ್ ದುರಸ್ಥಿಗೊಳಿಸುವ ಕಾರ್ಯಕ್ಕೆ ಅವರು ಮುಂದಾಗಿಲ್ಲ.) ಹಾಗೆಯೇ..ಬೆಳೆ ಹಾನಿ ಮಾಡಿಕೊಂಡ ರೈತರಿಗೆ ಸರಕಾರ ೮ ಲಕ್ಷ ರುಪಾಯಿ ಪರಿಹಾರ ಘೋಷಿಸಬೇಕು ಎಂದು ಈಗಾಗಲೇ ಹೋರಾಟ ಆರಂಭವಾಗಿದೆ. ಆದರೆ ನಮ್ಮ ಕೃತ್ಯಕ್ಕೆ ನಿರ್ದಯವಾಗಿ ಪ್ರಾಣತೆತ್ತ ೫ ನವಿಲುಗಳ ಬದುಕಿನ ಹಕ್ಕಿನ ಬಗ್ಗೆ ಹಾಗು ಸಾವು, ಪರಿಹಾರೋಪಾಯಗಳ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ! ಓದುಗರಿಗೆ ‘ಶಾರ್ಟ ಟರ್ಮ್ ಮೆಮರಿ ಲಾಸ್’ ರೋಗ ಅಂಟಿರುವುದರಿಂದ ಅದನ್ನೇ ಬಂಡವಾಳವಾಗಿಸಿಕೊಂಡು ನಮ್ಮ ಸುದ್ದಿ ಯೋಧರು ‘ಫಾಲೋ ಅಪ್’ ವರದಿ ಪ್ರಕಟಿಸದೇ ಹೋಗಬಹುದು. ಅಥವಾ ಹಾವೇರಿ ಆವೃತ್ತಿಗೆ ಮಾತ್ರ ವರದಿ ಮೀಸಲಾಗಿರಿಸಿ, ಅಲ್ಲಿ ಪುಟದಲ್ಲಿ ಮಾತ್ರ ಪ್ರಕಟಿಸಿ ಕೈ ತೊಳೆದುಕೊಳ್ಳಬಹುದು.

ಹೀಗೇಕೆ ಮಾಡಬಾರದು? :ಕೊಡಗಿನಲ್ಲಿ ಪೀಕಿನ ವೇಳೆ ಹಾಗು ಬೆಳೆ ಕಟಾವಿನ ಸಂದರ್ಭದಲ್ಲಿ ಕಾಡಾನೆಗಳ ಉಪಟಳ ವಿಪರೀತ. ಜನ-ಜಾನುವಾರು, ಪೀಕು ಯಾವುದೂ ಅವುಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೆಲ ರೈತರು ತಮ್ಮ ಹೊಲ, ಎಸ್ಟೇಟ್, ಬದುವುಗಳು, ಪೀಕು ಮೊದಲಾದವುಗಳ ರಕ್ಷಣೆಗೆ ವಿದ್ಯುತ್ ಬೇಲಿಗೆ ಮೊರೆ ಹೋದರೆ, ಇನ್ನು ಕೆಲವರು ಸೋಲಾರ್ ಬೇಲಿಗೆ ಒಗ್ಗಿಕೊಂಡಿದ್ದಾರೆ. ಗಮನಿಸಬೇಕಾದ ವಿಷಯವೆಂದರೆ ಈ ಪ್ರಯೋಗಗಳು ತಾತ್ಕಾಲಿಕ. ಕೆಲ ಸಂದರ್ಭದಲ್ಲಿ ಆನೆಗಳಿಗೆ ಹಾಗು ಮನುಷ್ಯರಿಗೆ ಈ ಬೇಲಿ ಮಾರಣಾಂತಿಕವಾಗಿ ಪರಿಣಮಿಸಿವೆ. ಶಾಶ್ವತ ಪರಿಹಾರವೇನು? ಅರಣ್ಯ ಇಲಾಖೆ ತಾನೇ ಮುತುವರ್ಜಿ ವಹಿಸಿ, ‘ಎಲಿಫಂಟ್ ಕಾರಿಡಾರ್’ - ಅನೆಗಳು ಅಡ್ಡಾಡುವ ರಾಜಮಾರ್ಗ ಗುರುತಿಸಿದೆ. ಆ ಮಾರ್ಗಗಳಗುಂಟ ಅರಣ್ಯ ಒತ್ತುವರಿ ತೆರವುಗೊಳಿಸಿ, ಆನೆಗಳು ಇಷ್ಟ ಪಡುವ ಬೆಳೆಗಳನ್ನು ಬೆಳೆಸಿದೆ. ಜೊತೆಗೆ ನೀರಿನ ಗುಂಡಿಗಳನ್ನು ಅಲ್ಲಲ್ಲಿ ನಿರ್ಮಿಸಲಾಗಿದೆ. ಹಾಗಾಗಿ ಅನ್ನ-ನೀರು ಅರಸಿ ಕಾಡಾನೆಗಳು ನಾಡಿಗೆ, ರೈತರ ಹೊಲಗಳಿಗೆ ಲಗ್ಗೆ ಹಾಕುವುದನ್ನು ತಕ್ಕ ಮಟ್ಟಿಗೆ ತಡೆ ಹಿಡಿಯಲಾಗಿದೆ.

ಇನ್ನು ಪೀಕು ಕಟಾವು, ಸುಗ್ಗಿಯ ಸಂದರ್ಭದಲ್ಲಿ ಹೊಲಗಳಲ್ಲಿ ಬೆಳೆಯ ಬಣವಿ ಒಟ್ಟದೇ ನೇರವಾಗಿ ಉಗ್ರಾಣಗಳಿಗೆ ಸಾಗಿಸುವಂತೆ ಸಹ ಇಲಾಖೆ ರೈತರ ಮನವೊಲಿಸಿದೆ. ಆದರೂ ಕೆಲವೊಮ್ಮೆ ಅಹಿತಕರ ಘಟನೆ ಘಟಿಸಿ ಆನೆಗಳು ಸಾವನ್ನಪ್ಪುವ ಸುದ್ದಿ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಆದರೆ ಈ ಪ್ರಯತ್ನದಿಂದಾಗಿ ಅವುಗಳ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂಬುದು ಸಮಾಧಾನದ ಸಂಗತಿ.

ಬಂಕಾಪುರವನ್ನು ರಾಷ್ಟ್ರೀಯ ನವಿಲುಧಾಮವನ್ನಾಗಿ ಘೋಷಿಸಲಾಗಿದೆ. ಹಾಗಂತ ಮನುಷ್ಯರು ಹಾಕಿದ ಬೇಲಿಯ ಮಧ್ಯೆ ಆ ನವಿಲುಗಳು ಬದುಕಬೇಕು ಎಂದಿಲ್ಲ! ಸ್ವಚ್ಛಂದವಾಗಿ ವಿಹರಿಸಬಯಸುವ ನವಿಲುಗಳು ಹಾವೇರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ತಂಡೋಪತಂಡವಾಗಿ ಹೊಲಗಳಲ್ಲಿ ವಿಹರಿಸುತ್ತ ಕೀಟಗಳನ್ನು ಹೆಕ್ಕುವ ಪರಿ ಮನೋಹರ. ರೈತರು ಸಹ ಅವುಗಳು ನಮ್ಮ ಮಿತ್ರ ಎಂದು ಪರಿಗಣಿಸಿರುವುದರಿಂದ ಅವು ಒಂದರ್ಥದಲ್ಲಿ ಈ ಭಾಗದಲ್ಲಿ ಸಹಬಾಳ್ವೆ ನಡೆಸಿವೆ ಎನ್ನಲು ಅಡ್ಡಿಇಲ್ಲ. ಆದರೆ ಮಾನವ ದುರಾಸೆಗೆ ಮಿತಿ ಇಲ್ಲ. ನಾವು ಅನುಕೂಲಕ್ಕಿಂತ ಅನಾನುಕೂಲ ಸೃಷ್ಟಿಸುವುದರಲ್ಲಿ ಹೆಸರು ವಾಸಿ. ನಾವು ಕಾಲಿಟ್ಟಲ್ಲೆಲ್ಲ ಅಧ್ವಾನವೇ!

ಈ ಹಿನ್ನೆಲೆಯಲ್ಲಿ, ನವಿಲುಗಳ ಹಿತಾಸಕ್ತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಅವುಗಳಿಗೆ ಇಷ್ಟವಾಗುವ ಬೆಳೆಗಳನ್ನು ಈ ನವಿಲುಗಳ ರಕ್ಷಿತ ಅಭಯಾರಣ್ಯ ಧಾಮದ ಸುತ್ತ ಅರಣ್ಯ ಇಲಾಖೆ ಬೆಳೆಸಬೇಕು. ಅಲ್ಲಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ನಿರ್ಮಾಣಗೊಂಡರೆ ಉತ್ತಮ. ರಾಷ್ಟ್ರೀಯ ನವಿಲು ಧಾಮದ ಸಮೀಪದಲ್ಲಿ ಒತ್ತುವರಿ ಎಂದು ಕಂಡು ಬರುವ ಜಮೀನುಗಳನ್ನು ತೆರವುಗೊಳಿಸಿ, ಅರಣ್ಯ ಇಲಾಖೆ ತಾನೇ ಮುಂದಾಗಿ ಅಲ್ಲಿ ಸಾಗುವಳಿ ಕೈಗೊಳ್ಳಬೇಕು. ಜೊತೆಗೆ ನವಿಲುಗಳ ಹೆಚ್ಚಾಗಿ ವಿಹರಿಸುವ ‘ಪಿಕಾಕ್ ಕಾರಿಡಾರ್’ ಗುರುತಿಸಿ, ರೈತರಿಗೆ ಸೂಕ್ತ ತಿಳಿವಳಿಕೆ, ಅರಿವು ಹಾಗು ಮಾರ್ಗದರ್ಶನ ನೀಡಿ ಅವುಗಳನ್ನು ಸಂರಕ್ಷಿಸುವಂತೆ ಮನವೊಲಿಸಬೇಕು. ಅವರನ್ನೇ ನವಿಲುಗಳ ರಕ್ಷಕರನ್ನಾಗಿ ನಿಯೋಜಿಸುವುದು ಇನ್ನೂ ಉತ್ತಮ. ನವಿಲುಗಳ ಬಯಸುವ ವಾತಾವರಣ ನವಿಲು ಧಾಮದಲ್ಲಿ ನಿರ್ಮಾಣಗೊಳ್ಳದ ಹೊರತು ಅವು ನಾಡಿಗೆ ಅನ್ನ-ಆಹಾರ ಅರಸಿ ಲಗ್ಗೆ ಹಾಕುವುದನ್ನು ನಿಲ್ಲಿಸಲಾಗದು. ಈ ಪ್ರಕ್ರಿಯೆಯಲ್ಲಿ ಗ್ರಾಮ ರಕ್ಷಣಾ ಪಡೆ, ಸಾಮಾಜಿಕ ಅರಣ್ಯ ರಕ್ಷಣಾ ಪಡೆಗಳ ಸ್ವಯಂ ಸೇವಕರ ಸಹಾಯ ಇಲಾಖೆ ಪಡೆದುಕೊಳ್ಳಬಹುದು. ತನ್ಮೂಲಕ ಆಕಸ್ಮಿಕವೋ..ಮಾನವ ಪ್ರೇರಿತವೋ..ಇಂತಹ ಅವಘಡಗಳಿಗೆ ಮೂಕ ಪ್ರಾಣಿಗಳು ಅನಾಯಾಸವಾಗಿ ಪ್ರಾಣ ಕಳೆದುಕೊಳ್ಳುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ.

ಮತ್ತೆ ಇನ್ನೆಂದಿಗೂ ಏಲಕ್ಕಿ ಕಂಪಿನ ನಾಡು ಹೀಗೆ ಸುಟ್ಟಕೊಂಡ ನವಿಲುಗಳು ದುರ್ನಾತದಿಂದ ಕಂಪಿಸದಿರಲಿ.