ಕೆಳದಿ ಕವಿ ಮನೆತನ

ಕೆಳದಿ ಕವಿ ಮನೆತನ

ಕವಿ ಲಿಂಗಣ್ಣ (ಲಿಂಗಣ್ಣ ಕವಿ) ಕೆಳದಿ ಅರಸರ ಆಸ್ಥಾನ ಕವಿ. ಸುಮಾರು ಕ್ರಿ.ಪೂ. 1750 ಸಮಯದಲ್ಲಿದ್ದ ಈ ಕವಿಯ ಪೀಳಿಗೆಯವರಿಗೆ - ಕವಿ - ಎಂಬ ಉಪನಾಮ ಬಂದಿದೆ. ನಾನೂ ಕೂಡ ಇದೇ ವಂಶದ 9ನೇ ಪೀಳಿಗೆಯವನು! ಇದು ನನಗೆ ತಿಳಿದದ್ದು ಕೇವಲ 3 ವರುಷಗಳ ಹಿಂದೆ ಮಾತ್ರಾ! ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿದ ನಂತರ, ಅನಿರೀಕ್ಷಿತವಾಗಿ ದೊರೆತ ಜಾಡೊಂದನ್ನು ಅರಸಿ ಹೊರಟ ನನಗೆ ಸಿಕ್ಕ ಮೊದಲ ಮಾಹಿತಿ ನಾನು ಕೆಳದಿಯ ಕವಿ ವಂಶಜನೆಂಬುದು. ಅದೇ ಪ್ರಯತ್ನದಲ್ಲಿಯೇ ಸುಮಾರು 100 ವರುಷಗಳಿಂದಲೂ ಪರಸ್ಪರ ಯಾವುದೇ
ಸಂಪರ್ಕವಿಲ್ಲದೇ ಇದ್ದ ಮತ್ತು ಪರಸ್ಪರ ಪರಿಚಯವೂ ಇಲ್ಲದ ಸುಮಾರು 150-200 ರಷ್ಟು ಕವಿ ವಂಶದ ಬಂಧುಗಳನ್ನು ಗುರುತಿಸಿ, ಶಿವಮೊಗ್ಗದಲ್ಲಿ 2007 ರಲ್ಲಿ ಪ್ರಥಮವಾಗಿ "ನಾವು-ನಮ್ಮವರು" ಎಂಬ ಬಂಧುಗಳ ಪುನರ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅದೇ ಸಂದರ್ಭದಲ್ಲಿ, ಎಲ್ಲರ ಸಹಕಾರದಿಂದ ಮತ್ತು ಹಿರಿಯರ ಆಶೀರ್ವಾದದಿಂದ ನಾನು ಬರೆದ, "ಹಳೇ ಬೇರು-ಹೊಸಚಿಗುರು" ಎಂಬ ಕವಿ ಮನೆತನದ ವಂಶಾವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕುಟುಂಬದ 60 ವರುಷ ತುಂಬಿದ ಹಿರಿಯರೆಲ್ಲರಿಗೂ ಸನ್ಮಾನ ಕಾರ್ಯಕ್ರಮ ಕೂಡ ಏರ್ಪಾಟಾಗಿತ್ತು. ಕವಿ ಮನೆತನದ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್-ಸೀತಮ್ಮ ದಂಪತಿಗಳನ್ನು [ನನ್ನ ಮಾತಾ-ಪಿತೃಗಳು] ಕೂಡ ವಿಶೇಷವಾಗಿ ಗೌರವಿಸಲಾಯಿತು.

ಅದೇ ಸಂದಭಱದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮತ್ತು ನೂತನ ವಂಶಾವಳಿಯ ಪಟವನ್ನು ಕೆಳದಿ ಗುಂಡಾ ಜೊಯಿಸರು (ಅವರೂ ಕೂಡ ಕವಿ ಮನೆತನದ ಬಂಧುಗಳು) ಉದ್ಘಾಟನೆ ಮಾಡಿದರು. ಸುಮಾರು 10 ಪೀಳಿಗೆಯವರೆಗೆ ಮಾಹಿತಿ ಸಿಕ್ಕಿದೆಯಾದರೂ ಒಂದು ಕೊಂಬೆಯ ಮಾಹಿತಿ ಮಾತ್ರಾ ಅಪೂರ್ಣವಾಗಿದೆ. 4ನೇಯ ಪೀಳಿಗೆಗೆ ಸೇರಿದ್ದ ವೆಂಕಭಟ್ಟ (ವೆಂಕಣ್ಣ) ಎಂಬುವವರಿಗೆ ಅಪ್ಪಣ್ಣ ಭಟ್ಟ, ಕವಿ ಕೃಷ್ಣಪ್ಪ (ಕೃಷ್ಣ ಭಟ್ಟ) ಮತ್ತು ಶಿವಭಟ್ಟ (ಶಿವರಾಮಭಟ್ಟ) ಎಂಬ 3 ಮಕ್ಕಳು. ಇವರಲ್ಲಿ ಕೃಷ್ಣ ಭಟ್ಟ ಮತ್ತು ಶಿವಭಟ್ಟರ ವಂಶಾವಳಿಯ ಸಂಪೂರ್ಣ ವಿವರಗಳು ಸಿಕ್ಕಿವೆ. ಆದರೆ ಅಪ್ಪಣ್ಣ ಭಟ್ಟರಿಗೆ ವೆಂಕಭಟ್ಟನೆಂಬ ಒಬ್ಬ ಮಗನಿದ್ದು, ಅವನಿಗೆ ಸುಬ್ಬಾಭಟ್ಟ, ಕೃಷ್ಠ ಭಟ್ಟ ಮತ್ತು ಶಾಮಭಟ್ಟರೆಂಬ ಮೂವರು ಮಕ್ಕಳು ಇರುತ್ತಾರೆ. ನಂತರದ, ಅಂದರೆ ಈ ಕೊಂಬೆಯ 8ನೇಯ ಪೀಳಿಗೆ ಮತ್ತು ನಂತರದ ವಿವರಗಳು ಸಿಕ್ಕಿಲ್ಲ.

ಈ ವಂಶದ ಗೋತ್ರ: ಹರಿತಸ. ಕುಲದೇವತೆ: ಕೊಲ್ಲೂರು ಮೂಕಾಂಬಿಕೆ. ಕುಲದೇವರು: ವೆಂಕಟರಮಣಸ್ವಾಮಿ.

ಕೆಳದಿ ಮ್ಯೂಜಿಯಂನಲ್ಲಿ ಕೂಡ ಕೆಳದಿ ಕವಿ ಮನೆತನದ ಪರಿಷ್ಕೃತ ವಂಶಾವಳಿ ಪಟವನ್ನು ಮತ್ತು ಇತರೆ ವಿವರಗಳನ್ನು ಗಮನಿಸಬಹುದಾಗಿದೆ. ಈ ಮೇಲಿನ ವಿಚಾರದ ಬಗ್ಗೆ ಮಾಹಿತಿ ಇದ್ದಲ್ಲಿ, ಅಥವಾ ಯಾರಾದರೂ ಕವಿ ವಂಶಕ್ಕೆ ಸೇರಿದವರು ಇದ್ದಲ್ಲಿ, ಈ ಬಗ್ಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ವಿನಂತಿ.

Rating
Average: 5 (1 vote)