ಅಂತರ್ಜಾಲ ಮೂಲಕವೂ ಡಬ್ಬಾವಾಲರ ಸೇವೆ

ಅಂತರ್ಜಾಲ ಮೂಲಕವೂ ಡಬ್ಬಾವಾಲರ ಸೇವೆ

ಬರಹ

ಅಂತರ್ಜಾಲ ಮೂಲಕವೂ ಡಬ್ಬಾವಾಲರ ಸೇವೆ
ಮುಂಬೈ ಡಬ್ಬಾವಾಲರ ಸೇವೆಯಿಂದ ಪ್ರೇರಿತವಾಗಿರುವ "ಡಬ್ಬಾ" ಸೇವೆಯನ್ನು ಈಗ ಅಮೆರಿಕಾದಲ್ಲೂ ಆರಂಭಿಸಲಾಗಿದೆ.ಟಿಫಿನ್ ಮೀಲ್ಸ್ ಎಂದು ಹೆಸರಿಡಲಾದ ಈ ಸೇವೆಯನ್ನು ಬೋಸ್ಟನ್ ಸುತ್ತಲಿನ ಹೋಟೆಲ್‍ಗಳು ಜತೆಯಾಗಿ ಒದಗಿಸುತ್ತಿವೆ.ಶುಚಿ-ರುಚಿಯಾಗಿ ಸಿದ್ಧಪಡಿಸಿದ ಆಹಾರವನ್ನು ಡಬ್ಬಗಲಲ್ಲಿ ತುಂಬಿ ಬೇಡಿಕೆ ಸಲ್ಲಿಸಿದ ಗ್ರಾಹಕರ ಕಚೇರಿ-ಅಂಗಡಿಯ ಬಾಗಿಲಿಗೆ ತಲುಪಿಸುವ ಸೇವೆಯನ್ನಿಲ್ಲಿ ಒದಗಿಸಲಾಗುತ್ತಿದೆ.ಈ ಸೇವೆಯನ್ನು ಪಡೆಯಲು ಗ್ರಾಹಕರು ಅಂತರ್ಜಾಲ ಮೂಲಕವೂ ಬೇಡಿಕೆ ಸಲ್ಲಿಸಬಹುದು. ಡಬ್ಬಗಳು ಲೋಹದ್ದಲ್ಲವಾದ ಕಾರಣ ಇವನ್ನು ವಾಪಸ್ಸು ಮಾಡುವ ಅವಶ್ಯಕತೆಯಿಲ್ಲ ಎನ್ನುವುದನ್ನು ಗಮನಿಸಿ.ಸೂಪ್,ನಾನ್,ಪಲ್ಯ,ದಾಲ್,ಅನ್ನ,ಚಟ್ನಿ ಈ ವೈವಿಧ್ಯಮಯ ಅಡುಗೆ ಡಬ್ಬದಲ್ಲಿ ಲಭ್ಯ.ಸಮೋಸ,ಪಕೋಡ,ಐಸ್‌ಕ್ರೀಮ್ ಬೇಕಿದ್ದರೆ,ಪ್ರತ್ಯೇಕ ಬೆಲೆ ತೆತ್ತು ಪಡೆಯಬಹುದು.
----------------------------------------------------------
ಅಂತರ್ಜಾಲ ಜಾಲಾಡಲು ಕಿರು ಸಾಧನintbus
ಒಂದೂವರೆ ಸಾವಿರ ರುಪಾಯಿಗೆ ಅಂತರ್ಜಾಲ ಜಾಲಾಡಲು ಅವಕಾಶ ನೀಡುವ ಸಾಧನವನ್ನು ಮಾನವ ಸಂಪನ್ಮೂಲ ಖಾತೆಯು ಬಿಡುಗಡೆ ಮಾಡಿದೆ.ಕೈಯಲ್ಲಿ ಹಿಡಿದು ಬಳಸಬಹುದಾದ ಈ ಸಾಧನ ಹತ್ತಿಂಚು ಉದ್ದ,ಐದಡಿ ಅಗಲವಾಗಿದೆ.ಜನಸಾಮಾನ್ಯರು ಅಂತರ್ಜಾಲ ಸೇವೆಯನ್ನು ಪಡೆಯಲು ಅವಕಾಶ ನೀಡುವುದು ಈ ಸಾಧನವನ್ನು ಹೊರತರುವುದರ ಹಿಂದಿನ ಉದ್ದೇಶವಾಗಿದೆ. ಡಿಜಿಟಲ್ ಡಿವೈಡನ್ನು ಹೋಗಲಾಡಿಸಿ,ಸಾಮಾನ್ಯ ಜನರೂ ಅಂತರ್ಜಾಲದ ಪ್ರಯೋಜನಗಳನ್ನು ತಮ್ಮದಾಗಿಸಲು ಇಂತಹ ಸಾಧನಗಳು ಅವಶ್ಯಕ.
------------------------------------------------------------
ಐಫೋನಿನಲ್ಲಿ ಪುಸ್ತಕ ಶೋಧ ಸಾಧ್ಯ
ಇ-ಪುಸ್ತಕಗಳನ್ನು ಹುಡುಕಾಡಲು ಮೊಬೈಲ್ ಹ್ಯಾಂಡ್‍ಸೆಟ್ಟಿನಲ್ಲಿ ಸಾಧ್ಯವಾಗಿಸುವ ಸೇವೆಯನ್ನು ಗೂಗಲ್ ಆರಂಭಿಸಿದೆ.ಐಫೋನ್,ಗೂಗಲ್ ಆಂಡ್ರಾಯ್ಡ್ ತಂತ್ರಾಂಶ ಬಳಸುವ ಜಿ1 ಎನ್ನುವ ಹ್ಯಾಂಡ್‌ಸೆಟ್ಟುಗಳಲ್ಲಿ ಸದ್ಯ ಈ ಅನುಕೂಲತೆ ಲಭಿಸಲಿದೆ.ಹಕ್ಕುಸ್ವಾಮ್ಯ ಇಲ್ಲದ ಎರಡು ದಶಲಕ್ಷ ಪುಸ್ತಕಗಳು ಈ ಸೇವೆಯ ಮೂಲಕ ಲಭ್ಯವಾಗಲಿವೆ.ಅತ್ತ ಅಮೆಜಾನ್ ಎನ್ನುವ ಅಂತರ್ಜಾಲ ಪುಸ್ತಕದಂಗಡಿಯೂ ಇ-ಪುಸ್ತಕಗಳನ್ನು ಓದಲು ಇ-ಬುಕ್ ರೀಡರ್ ಸಾಧನವನ್ನು ಬಿಡುಗಡೆ ಮಾಡಲಿದೆ.ಕಿಂಡಲ್ ಎಂಬ ಹೆಸರಿನ್ ಇ-ಬುಕ್ ಸಾಧನದ ಹೊಸ ಆವೃತ್ತಿ ಬಿಡುಗಡೆಯ ಕ್ಷಣ ಹತ್ತಿರವಾಗುತ್ತಿದೆ.ಮೊಬೈಲ್ ಸಾಧನಗಳಲ್ಲೂ ಕಿಂಡಲ್ ಅನ್ನು ಅಳವಡಿಸುವ ನಿರ್ಧಾರವನ್ನು ಅಮೆಜಾನ್ ತೆಗೆದುಕೊಂಡಿದೆ. ಅಮೆಜಾನ್ ಕಂಪೆನಿಯು ತನ್ನ ಇ-ಬುಕ್ ಸಾಧನದಲ್ಲಿ ಓದಲು ಎರಡೂವರೆ ಲಕ್ಷ ಇ-ಬುಕ್‌ಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇವುಗಳ ಪೈಕಿ ನೂರು ಪುಸ್ತಕಗಳು ಜನಪ್ರಿಯ ಪುಸ್ತಕಗಳಾಗಿವೆ.
----------------------------------------------------------------------
ನೀವೆಲ್ಲಿದೀರಿ ಎನ್ನುವುದನ್ನು ಇತರರಿಗೂ ತಿಳಿಸಿ!
ಮೊಬೈಲ್ ಸಾಧನದಲ್ಲಿ ಜಿಪಿಎಸ್ ಸೌಕರ್ಯ ಇದ್ದರೆ, ನೀವಿರುವ ಸ್ಥಾನ ಯಾವುದು ಎನ್ನುವುದು ಗೊತ್ತಾಗುತ್ತದೆ. ಈ ಮಾಹಿತಿಯನ್ನು ಅಂತರ್ಜಾಲದಲ್ಲೂ ಪ್ರಕಟ ಪಡಿಸಿ, ಸದ್ಯ ನೀವೆಲ್ಲಿದ್ದೀರಿ ಎನ್ನುವುದನ್ನು ಇತರರಿಗೆ ತಿಳಿಸಲು ಸಾಧ್ಯವಾಗುವ ವಿನೂತನ ಸೇವೆಯನ್ನು ಗೂಗಲ್ ಕಂಪೆನಿಯು ಲ್ಯಾಟಿಟ್ಯೂಡ್ ಎನ್ನುವ ಹೆಸರಿನಲ್ಲಿ ಆರಂಭಿಸಿದೆ.ಗೂಗಲ್ ಮ್ಯಾಪಿನ ಮೇಲೆ, ವ್ಯಕ್ತಿಯಿರುವ ಸ್ಥಾನ ಗೊತ್ತಾಗುತ್ತದೆ. ನಿಮ್ಮ ಜಿಮೇಲ್ ವಿಳಾಸ ಪುಸ್ತಕದಲ್ಲಿ ಇರುವ ಇತರ ವ್ಯಕ್ತಿಗಳ ಜತೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು. ನಿಮ್ಮ ಮೊಬೈಲ್ ಮೂಲಕ ಗೂಗಲ್ ಈ ಮಾಹಿತಿಯನ್ನು ಪಡೆದು,ಸ್ಥಾನವನ್ನು ಗೂಗಲ್ ನಕ್ಷೆಯಲ್ಲಿ ಪ್ರದರ್ಶಿಸುವಂತೆ ಮಾಡಲು ಸಾಧ್ಯ. ಒಂದು ಈ ಮಾಹಿತಿಯನ್ನು ಇತರರ ಜತೆ ಹಂಚಿಕೊಳ್ಳಲು ನಿಮಗೆ ಇಷ್ಟವಾಗದಿದ್ದ ಪಕ್ಷ, ಈ ಸೇವೆಯನ್ನು ನಿಷ್ಕ್ರಿಯವಾಗಿಸುವುದೂ ಸುಲಭ.ಹಾಗೆಯೇ ನಿಮ್ಮ ಸ್ಥಾನವನ್ನು ನೀವೇ ನಿಗದಿಪಡಿಸಿ,ಅದನ್ನೇ ಇತರರ ಜತೆ ಹಂಚಿಕೊಳ್ಳಲು ಬಯಸಿದಲ್ಲಿ ಅದೂ ಕೂಡಾ ಸಾಧ್ಯವಾಗುತ್ತದೆ.ನೀವು ನಿಮ್ಮ ಸ್ಥಾನವನ್ನು ಇತರರ ಜತೆ ಹಂಚಿಕೊಂಡಂತೆ, ನಿಮ್ಮ ಗೆಳೆಯರೂ ಹಂಚಿಕೊಂಡರೆ,ಅವರಿರುವ ಸ್ಥಾನವು ನಿಮಗೆ ಗೊತ್ತಾಗುತ್ತದೆ.
ಇಂತಹ ಸೇವೆ ನಿಮಗೆ ಹೇಗೆ ಅನುಕೂಲ ಎನುವುದು ಗೊತ್ತಾಯಿತೇ?ನಿಮ್ಮ ಗೆಳೆಯನ ಜತೆ ನಿಮ್ಮ ಭೇಟಿ ನಿಗದಿಯಾಗಿದ್ದರೆ, ಆತ ಈಗೆಲ್ಲಿದ್ದಾನೆ,ಆತ ಪ್ರಯಾಣಿಸುತ್ತಿದ್ದರೆ,ಯಾವ ಸ್ಥಳ ಮುಟ್ಟಿದ್ದಾನೆ ಎನ್ನುವುದು ನಿಮಗೆ ಗೊತ್ತಾಗುತ್ತದೆ.ಅವರು ಎಲ್ಲಾದರೂ ವಾಹನ ಸಂದಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೋ ಎನ್ನುವುದನ್ನು ಗಮನಿಸಿ,ಅವರ ಆಗಮನ ಎಷ್ಟು ತಡವಾಗಬಹುದು ಎನ್ನುವುದನ್ನು ಗೊತ್ತು ಮಾಡಿಕೊಳ್ಳಬಹುದು.
--------------------------------------------------------------------
ಎಸ್ ಎಂ ಎಸ್ ಮೂಲಕ ಗ್ಯಾಸ್ ಸಿಲಿಂಡರ್
ಇಂಡೇನ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೇಕೆಂಬ ಬೇಡಿಕೆಯನ್ನು ಗ್ಯಾಸ್ ಸರಬರಾಜು ಮಾಡುವ ಅಂಗಡಿಯವನಿಗೆ ತಲುಪಿಸಬೇಕೇ? ಇದುವರೆಗೆ ದೂರವಾಣಿ ಕರೆ ಮಾಡುವ ಮೂಲಕ ಬೇಡಿಕೆ ಸಲ್ಲಿಸಬೇಕಿತ್ತು.ಆದರೆ ಕೆಲವೊಮ್ಮೆ ಹಲವಾರು ಸಲ ಕರೆ ಮಾಡಿದರೂ,ದೂರವಾಣಿ ಸಂಪರ್ಕ ಸಿಗದಿರುತ್ತದೆ.ಮಧುರೆಯಲ್ಲಿ ಇಂಡಿಯನ್ ಆಯಿಲ್ ಕಂಪೆನಿಯು ತನ್ನ ಇಂಡೇನ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್‌ಗಾಗಿ ಮೊಬೈಲ್ ಫೋನ್ ಮೂಲಕ ಕಿರು ಸಂದೇಶ ಕಳುಹಿಸುವ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾರಂಭಿಸಿದೆ.ಈ ಸೇವೆ ನೀಡಲು ಅಂಗಡಿಯವರು ಪ್ರತ್ಯೇಕ ಮೊಬೈಲ್ ಸೆಟ್ಟನ್ನು ಹೊಂದಿರುತ್ತಾರೆ.ಇದರ ದೂರವಾಣಿ ಸಂಖ್ಯೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ. ಯಾವುದೇ ಹೊತ್ತಿನಲ್ಲೂ ಎಸ್ ಎಂ ಎಸ್ ಕಳುಹಿಸಿ,ಗ್ಯಾಸ್ ಬುಕ್ ಮಾಡುವ ಅನುಕೂಲತೆ ಈ ಸೇವೆಯ ವಿಶೇಷ. ಮಧ್ಯರಾತ್ರಿಯಲ್ಲಿ ಗ್ಯಾಸ್ ಬುಕ್ ಮಾಡಲು ದೂರವಾಣಿ ಕರೆ ಮಾಡಿ ಸಿಲಿಂಡರ್‌ಗಾಗಿ ಬೇಡಿಕೆ ಸಲ್ಲಿಸಲು ಸಾಧ್ಯವಿರಲಿಲ್ಲವಾದರೂ, ಎಸ್ ಎಂ ಎಸ್ ಸೇವೆಯಲ್ಲಿ ಆ ತೊಂದರೆಯಿಲ್ಲ!
---------------------------------------------------------------------
ಅಂತರ್ಜಾಲ ಬಸ್ಸುbus
ಅಂತರ್ಜಾಲ ಜಾಲಾಡುವ ಸೌಲಭ್ಯ ಇರುವ ಗೂಗಲ್ ಅಂತರ್ಜಾಲ ಬಸ್ ತಮಿಳ್ನಾಡಿನಲ್ಲಿ ಆರಂಭವಾಗಿದೆ.ಇದು ರಾಜ್ಯದ ಬೇರೆ ಬೇರೆ ನಗರ ಪಟ್ಟಣಗಳಿಗೆ ಸಾಗುತ್ತಾ,ಅಂತರ್ಜಾಲದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ,ಕೆಲಸ ಮಾಡಲಿದೆ.ಅಂತರ್ಜಾಲದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ,ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದನ್ನು ಅವರಿಗೆ ತಿಳಿಸಲು ಈ ಬಸ್ಸಿನಲ್ಲಿ ವ್ಯವಸ್ಥೆಯಿದೆ.ಹಾಗೆಯೇ ಅಂತರ್ಜಾಲ ಜಾಲಾಡಲೂ ಇದರಲ್ಲಿ ವ್ಯವಸ್ಥೆಯಿದೆ.
---------------------------------------------------------------
ನಕ್ಷೆಯಲ್ಲಿ ಮಾಹಿತಿ ಸೇರಿಸಲು ನೆರವಾಗಿ
http://www.openstreetmap.org/ ಎನ್ನುವ ಸೇವೆಯಲ್ಲಿ ಯಾರು ಬೇಕಾದರೂ ನಕ್ಷೆಯಲ್ಲಿ ರಸ್ತೆಯ ಹೆಸರು,ಜಾಗಗಳ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಸೇರಿಸಲು ಸಾಧ್ಯವಿದೆ.ವಿಕಿಪೀಡಿಯದಂತೆ ಜನರಿಂದಲೇ ರಚಿತವಾದ ನಕ್ಷೆಯ ವಿವರಗಳನ್ನು ಕಲೆಹಾಕುವ ವಿನೂತನ ಪ್ರಯೋಗ ಇದಾಗಿದೆ. ಈ ಸೆವೆಯ ಮೂಲಕ ಗಾಜಾ ಪ್ರದೇಶದಂತಹ,ಸರಿಯಾದ ವಿವರಗಳು ಸಿಗದಿರುವ ಪ್ರದೇಶಗಳ ನಕ್ಷೆಗಳನ್ನೂ ಹೊಸತಾಗಿ ರಚಿಸಲು ಸಾಧ್ಯವಾಗಿದೆ.


udayavani

ashokworld

*ಅಶೋಕ್‌ಕುಮಾರ್ ಎ