ಯೋಗ ಪ್ರಯೋಗ...!

ಯೋಗ ಪ್ರಯೋಗ...!

ಬರಹ

ಅಜ್ಜೀ, ನಾನೂ ಯೋಗ ಮಾಡ್ತೀನಿ ಅಂದ್ಳು ಪುಟ್ಟಿ ! ಎಲ್ಲಿ ನೋಡೋಣ, ಏನು ಮಾಡ್ತೀಯ ಅಂತ ಕೇಳಿದೆ. ತಟಕ್ಕನೆ ಪದ್ಮಾಸನ ಹಾಕಿದ್ಳು. ಕಣ್ಣುಮುಚ್ಚಿ, ಮೂಗು ಹಿಡಿದು ಉಸಿರು ಎಳೆದು ಎಳೆದು ಬಿಟ್ಳು. ಆಮೇಲೆ ಎದ್ದು ನಿಂತು ಸೂರ್ಯನಮಸ್ಕಾರ, ಒಂದೈದಾರು ಆಸನಗಳನ್ನು ಮಾಡಿ ಕೊನೆಗೆ ಶವಾಸನ ಹಾಕಿದವಳಿಗೆ ಅಲ್ಲೇ ನಿದ್ದೆ ! ಹತ್ತು ನಿಮಿಷ ಬಿಟ್ಟು ಎದ್ದ ಮೇಲೆ ಕೇಳಿದೆ, "ಪುಟ್ಟೀ, ಸೂರ್ಯನಮಸ್ಕಾರಕ್ಕೆ ಮಂತ್ರ, ಪ್ರಾಣಾಯಾಮಕ್ಕೆ ಓಂಕಾರ ಎಲ್ಲ ಇದೆ. ನೀನು ಏನೂ ಹೇಳಲೇ ಇಲ್ಲ" ಎಂದೆ. ಅದಕ್ಕವಳು "ಮಂತ್ರ ಎಲ್ಲ ಹೇಳಬೇಕೆಂದಿಲ್ಲ, ದೈಹಿಕ ಆರೋಗ್ಯಕ್ಕಾಗಿ ’ಜಿಮ್’ ಗೆ ಹೋಗುವ ಬದಲು ಮನೆಯಲ್ಲೇ ಯೋಗ ಮಾಡಿದರಾಯ್ತು" ಎಂದಳು ! "ಆಯ್ತು, ಯೋಗಕ್ಕೆ ದುರ್ಗತಿ ಬಂತು" ಅಂದ್ಕೊಂಡೆ.
ಮೆತ್ತಗೆ ಹೇಳಿದೆ, "ಯೋಗ ಅಂದ್ರೆ ’ಅಷ್ಟಾಂಗ ಯೋಗ’ ಅಂತ ಪುಟ್ಟಿ. ಅದರಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಅಂತ ಹಂತಗಳಿವೆ. ಇವೆಲ್ಲ ಬರಿಯ ದೈಹಿಕ ಆರೋಗ್ಯಕ್ಕಾಗಿ ಇರುವ ಕಸರತ್ತುಗಳಲ್ಲ. ನಮ್ಮ ಮನಸ್ಸು, ಬುದ್ಧಿ ಮತ್ತು ದೇಹದ ಆರೋಗ್ಯ ಹಾಗೂ ಸಾಧನೆಗಳಿಗಾಗಿ ಇರುವಂತದ್ದು. ಓಂಕಾರವು ನಮ್ಮ ಶ್ವಾಸೋಚ್ಛ್ವಾಸದ ಕ್ರಿಯೆಗೆ, ಸ್ವರ ಶುದ್ಧಿಗೆ ಮತ್ತು ಏಕಾಗ್ರತೆಗೆ ತುಂಬಾ ಒಳ್ಳೆಯದು. ಸೂರ್ಯನಮಸ್ಕಾರ ಮಂತ್ರವೂ ಅಷ್ಟೆ. ಸೂರ್ಯನ ವಿವಿಧ ಹೆಸರುಗಳನ್ನು ಹೇಳಿ ನಮಗೆ ಬೆಳಕನ್ನೂ, ಆರೋಗ್ಯವನ್ನೂ ಕೊಡುವ ಸೂರ್ಯನಿಗೆ ನಮಸ್ಕರಿಸುವುದು. ಸೂರ್ಯ ಎಲ್ಲರಿಗೂ ಬೇಕಾದ ದೇವರು. ಸೂರ್ಯನಿಲ್ಲದಿದ್ದರೆ ಯಾವ ಜೀವಿಗಳೂ ಬದುಕಲು ಸಾಧ್ಯವಿಲ್ಲ. ಸೂರ್ಯನಿಂದ ಬೆಳಕು, ಶಕ್ತಿ, ವಿಟಮಿನ್ ಡಿ ಹೀಗೆ ಅಷ್ಟೆಲ್ಲ ಪಡೆಯುವಾಗ ಅವನ ಹೆಸರಿನಲ್ಲಿ ನಾಲ್ಕು ನಮಸ್ಕಾರ ಹಾಕಿದರೆ ನಮ್ಮ ಕೃತಜ್ಞತೆ ಅವನಿಗೆ ಸಲ್ಲುತ್ತದೆ ಅಷ್ಟೆ. ಅದನ್ನೇನು ಸೂರ್ಯ ಕೇಳುವುದಿಲ್ಲ. ನಮ್ಮ ಕರ್ತವ್ಯ ಅಷ್ಟೆ" ಎಂದೆ.

ಪುಟ್ಟಿ ಕಣ್ಣರಳಿಸಿ ಕೇಳುತ್ತಿದ್ದವಳು "ಮತ್ತೆ, ಮಂತ್ರ ಎಲ್ಲ ಪುರಾಣ ಕಾಲದ್ದು, ಗೊಡ್ಡು ನಂಬಿಕೆಗಳು, ಅದನ್ನೆಲ್ಲ ಹೇಳಬೇಕೆಂದಿಲ್ಲ ಎನ್ನುತ್ತಾರೆ" ಎಂದಳು. ನನಗೆ ರೇಗಿತು. "ನೋಡು, ಯೋಗವೂ ಪುರಾಣ ಕಾಲದ್ದೇ. ಸರಿಯಾಗಿ ಮಾಡಿದರೆ ಅದರಿಂದ ಬೇಕಾದ್ದನ್ನು ಸಾಧಿಸಬಹುದು. ದೇಹಾರೋಗ್ಯಕ್ಕೆ ಈಗ ಬೇಕಾದಷ್ಟು ಬಂದಿವೆಯಲ್ಲ, ಸಾಮಾಗ್ರಿಗಳು. ಅದನ್ನು ಬಿಟ್ಟು ಯೋಗವೇ ಯಾಕೆ ಬೇಕು? ಯೋಗದಿಂದ ಬೇರೆಯೂ ಅನೇಕ ಒಳ್ಳೆಯ ಪರಿಣಾಮಗಳು ಇವೆ ಎಂದು ತಾನೆ? ಹಾಗಿದ್ದ ಮೇಲೆ ಮಂತ್ರ ಮಾತ್ರ ಯಾಕೆ ಗೊಡ್ಡಾಗುತ್ತದೆ? ಅದರಲ್ಲೂ ಶಕ್ತಿಯಿದೆ. ನಿಮಗೆ ಬೇಕಾದರೆ ಸರಿಯಾದ ಕ್ರಮದಲ್ಲಿ ಯೋಗಾಭ್ಯಾಸ ಮಾಡಿ. ಇಲ್ಲವಾದರೆ ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ. ನೀವು ಮಾಡಲಿಲ್ಲವೆಂದು ಯೋಗವೇನೂ ಅಳುವುದಿಲ್ಲ, ಅಥವಾ ಅಳಿಯುವುದೂ ಇಲ್ಲ. ಹಾಗಿದ್ದಲ್ಲಿ ’ಗೊಡ್ಡು’ ಪುರಾಣ ಕಾಲದಿಂದ ಇಲ್ಲಿಯವರೆಗೆ ಅದು ಬರುತ್ತಲೂ ಇರಲಿಲ್ಲ. 'ಈಗಿನವರ ಪ್ರೀತಿಯ ಅಮೆರಿಕ' ದವರೂ ಕೂಡ ಅದನ್ನು ಶ್ರದ್ಧೆಯಿಂದ ಮಾಡುತ್ತಾರೆ ಗೊತ್ತಾ" ಅಂದೆ.
ಪುಟ್ಟಿಗೆ ನನ್ನ ಮಾತು ಅರ್ಥವಾದಂತೆ ಕಂಡಿತು. ತಲೆಯಾಡಿಸುತ್ತ ಶಾಲೆಗೆ ಹೊರಟಳು.
(ಇದು ಪ್ರಜಾವಾಣಿಯಲ್ಲಿ ಇತ್ತೀಚೆಗೆ ಬಂದ ಸುದ್ದಿಗೆ ನನ್ನಮ್ಮನ ಪ್ರತಿಕ್ರಿಯೆ! ಯೋಗವು ಒಂದು ಧರ್ಮಕ್ಕೆ ಮಾತ್ರ ಎಂಬ ಚರ್ಚೆ, ಅದಕ್ಕಾಗಿ ಅದನ್ನು ತಿರುಚುವ ಪ್ರಯತ್ನಗಳು, ಜೊತೆಗೆ, ಇತ್ತೀಚಿಗೆ ಯೋಗವು ಮಾರಾಟದ ಸರಕಾಗಿ, ಕೇವಲ ದೈಹಿಕ ಕಸರತ್ತಾಗಿ ಬಿಂಬಿತಗೊಳ್ಳುತ್ತಿರುವುದು ಮತ್ತು ಹಲವು ಪ್ರಸಿದ್ಧರೆನಿಸಿಕೊಂಡವರೂ ಯೋಗದ ಮೂಲ ಉದ್ದೇಶ, ಆಚರಣಾ ವಿಧಾನಗಳನ್ನು ತಿರುಚುತ್ತಿರುವುದು ಚಿಂತನಾರ್ಹ ಮತ್ತು ಚಿಂತೆಗೂ ಅರ್ಹ ಎಂದು ನನ್ನ ಭಾವನೆ)
(ನನ್ನಮ್ಮ ರತ್ನಕುಮಾರಿ. ಈ ಕಥೆಯ ಪುಟ್ಟಿ, ನನ್ನಕ್ಕನ ಮಗಳು ೧೩ ವರ್ಷದ ಮಂದಾರ)