ನಿರೀಕ್ಷೆ

ನಿರೀಕ್ಷೆ

ಬಾನಿನಂಗಳದಲ್ಲಿ ಜಾರಿಹ
ಚಿತ್ರ ಶೇಖರ ತರಣಿಯು
ಅವನೊಲವ ರಾಗದಿ ಮಿಂದಳು
ಲಜ್ಜೆಯಿಂದಲಿ ತರುಣಿಯು||

ಮುಗಿಲ ಹಕ್ಕಿಗಳೆಲ್ಲ ಹಾರಿವೆ
ಗೂಡು ಸೇರುವ ತವಕದಿ
ಅದಿಗೋ ಜೋಡಿಯ ರಾಸುಗಳೋಡಿವೆ
ಮನೆಯ ಸೇರುವ ಹರುಷದಿ||

ಬಾನಿನೆಲ್ಲೆಡೆ ಕೆಂಪು ಏರಿದೆ
ದಿನಪ ನಡೆದಿಹ ತವರಿಗೆ
ಹಗಲವರೆಗೂ ಕಾಯಬೇಕಿದೆ
ಮತ್ತೆ ಮೂಡುವ ಕಿರಣಗೆ||

ಇತ್ತ ತರುಣಿಯು ಕಾಯ್ದು ನಿಂದಳು
ಸಂಜೆಯಾಗುತ ಮೆಲ್ಲಗೆ
ಹಗಲ ಸೂರ್ಯನು ಮೂಡೋ ಮುನ್ನವೆ
ಹೊರಗೆ ಹೋಗಿಹ ನಲ್ಲಗೆ||

ಏಕೋ ಏನೋ ಇನ್ನೂ ಬಾರದ
ನಲ್ಲಗೆಂದೇ ಕಾಯ್ದಳು
ಎನಿತೋ ಏನೋ? ಏನು ಶಕುನವೋ
ಮನದಲೇ ನಿಡುಸುಯ್ದಳು||

Rating
No votes yet

Comments