ಸರಸ -ವಿರಸ

ಸರಸ -ವಿರಸ

ಬರಹ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳುತ್ತಿದ್ದೀರಾ ??... ಆಗಿದ್ದಿಷ್ಟೆ .....

ಮೊದಲನೆಯವಳು ಐಶ್ವರ್ಯ . ನನ್ನ ಪಂಚಪ್ರಾಣದಲ್ಲಿ ಆರನೇಯವಳಾಗಿದ್ದಳು. ಎರಡು ಜೀವ ಒಂದು ದೇಹ .. ಕ್ಷಮಿಸಿ .. ಎರಡು ದೇಹ ಒಂದು ಜೀವ ಅನ್ನೋ ಥರ ಇದ್ವಿ . ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೆ .ಒಂದು ಸುಂದರ ಸಂಜೆ ಭೇಟಿ ಮಾಡಿದಾಗ ಲೋ.. ಸುಮ್ಮು .. ನಂಗೆ ಕಬ್ಬನ್ ಪಾರ್ಕ್ ನಲ್ಲಿ ಕಬ್ಬಿನ್ ಜ್ಯೂಸ್ ಕುಡಿಸು ರಾತ್ರಿ " ಮುಂಗಾರು ಮಳೆ " ಕರೆದುಕೊಂಡು ಹೋಗು ಅಂದಳು . ಅವಳು ಕೇಳುವ ಮೊದಲೇ ಬೆಳಿಗ್ಗೆ ರಂಜಿತ್ ಹತ್ರ ಬೈಕ್ arrange ಮಾಡಿದ್ದೆ ಹಾಗೂ ನನ್ನ ಜೇಬಿನಲ್ಲಿ ಬ್ಲಾಕ್ ನಲ್ಲಿ 250/- ಕೊಟ್ಟು ತಂದ ಎರಡು ಟಿಕೆಟ್ ಇತ್ತು . ಸುಮ್ಮನೆ ಕಾಲೆಳೆಯೋಣ ಅಂಥ " ನೋಡೇ .. ಜ್ಯೂಸ್ ಎಲ್ಲ ಕುಡಿಸಲ್ಲ ನಾನು ಕಂಜೂಸು ,,,,, ಮತ್ತೆ ಏನು ?? ಮುಂಗಾರು ಮಳೆನಾ ?? ಈಗ ಆಷಾಡಿ ಮಳೆ ಕೆಟ್ಟದಾಗಿ ಬರ್ತಾ ಇದೆ 8 ಗಂಟೆ ಬೇರೆ ಆಗಿ ಹೋಗಿದೆ . ರಿಕ್ಷಾ ದವನು ಒಂದೂವರೆ ಮೀಟರ್ ಚಾರ್ಜ್ ಕೇಳುತ್ತಾನೆ ... ಯಾಕೆ ಸುಮ್ನೆ ?? ನೋಡು ಪ್ರೀತಿಯಲ್ಲಿ ತಾಳ್ಮೆ ಇರಬೇಕು . ಇನ್ನು ಒಂದೆರಡು ತಿಂಗಳಿನಲ್ಲೇ ಉದಯ ಟೀವಿ ಯಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿ ಬರುತ್ತೆ ಆಗ ಒಟ್ಟಿಗೆ ಕೂತು ನೋಡೋಣ ಎಂದೆ . ಅವಳು ಏನೂ ಹೇಳಲಿಲ್ಲ .....ಕೂಗಿದರೂ ತಿರುಗದೆ ನಾಗಮ್ಮನಂತೆ ಬುಸುಗುಡುತ್ತ ಓಡಿ ಹೋದಳು .. ಮರುದಿನ ನನ್ನ ಕಪಾಳಕ್ಕೆ ಹೊಡೆದಂತೆ ಕಣ್ಣ ಮುಂದೆ ಆ ಶೆಟ್ರ ಮಗ ಸುಪ್ರೀತ್ ಜೊತೆ ಬೈಕ್ ನಲ್ಲಿ ಕೂತು ಹೋಗ್ತಾ ಇದ್ದಳು . ನಾನೇನು ಮಾಡ್ಲಿ ನೀವೇ ಹೇಳಿ ??

ಇನ್ನು ಎರಡನೆಯವಳು ಶಶಿಕಲ . ಇವಳ ಬಗ್ಗೆ ಏನು ಹೇಳಲಿ ..... ಪ್ರೀತಿಯಿಂದ ನನ್ನನ್ನು 'ಸು ' ಎನ್ನುತ್ತಿದ್ದಳು ನಾನೂ ಕೂಡ ಪ್ರೀತಿಯಿಂದ 'ಶ್ಶ...' ಎಂದು ಕರೆಯುತ್ತಿದ್ದೆ . ಒಂದು ದಿನ " ಏನೋ ಸು ... ರೈಲು , ಹೋಟ್ಲು ಅಂಥ ಏನೇನೋ ಲೇಖನ ಬರೀತೀಯ . ನನ್ನ ಮೇಲೆ ಒಂದು ಕವನ ಬರೀಬಾರ್ದ ?? ಅಂದಳು . ಸರಿ ತೊಂಡೆ ಬೆಂಡೆ ಎಂದು ಒಂದು ನಾಲ್ಕು ತರಕಾರಿ ಹಾಕಿ ಕವನ ಬರೆದ್ರೆ ಆಯಿತು ಅಂದುಕೊಂಡೆ .ನೋಡು .. ಬರೆದ್ರೆ ಒಂದು ಥರಾ Different ಆಗಿ ಇರಬೇಕು ಇಲ್ಲಿವರ್ಗೂ ಯಾರೂ ಯಾರಿಗೂ ಬರೆದಿರಬಾರದು ಅಂಥ Condition ಹಾಕಿದಳು .ಸರಿ 'ಶ್ಶ...' ನಾಳೆ ಕೊಡ್ತೀನಿ ಎಂದೆ . ರಾತ್ರಿಯಿಡೀ ಯೋಚಿಸಿ ಈ ಕವನ ಬರೆದೆ

ಓ ನನ್ನ ಶನೀ.... ( ಅದು 'ಶ್ಶ.. + Honey = ಶನಿ ----> ಕಪಾಳಮೋಕ್ಷ ಸಂಧಿ )
ನಾನು ನಿನ್ನ ಪ್ರೇಮದ ಅಭಿಮಾನಿ
ಹಗಲಿರುಳೂ ಇರಲಿ ನಿನ್ನ ಒಲುಮೆ
ಅದೇ ನನ್ನ ಪಾಲಿನ ಜೀವ ವಿಮೆ ||

ನಿನ್ನ ನಡೆಯೋ ದಸರಾದ ಆನೆ |
ಕುಣಿತ ಮಂಗನಿಂದ ಕಲಿತಿದ್ದು ತಾನೆ ??
ಹಾಡಿದರೆ ಸತ್ತೆ ಓಡುವುದು ಕತ್ತೆ
ಹಾಡಿದಾ ಸಭೆಯೊಳಗೆ ಜನರು ನಾಪತ್ತೆ ||

ನಿನ್ನ ತುಟಿಯು ಮಟ್ಟಿಗುಳ್ಳ
ನಿನ್ನ ನಡುವೋ ಬೂದು ಗುಂಬ್ಳ ||
ಕಪ್ಪೆಯಂತೆ ನಿನ್ನ ಕಣ್ಣು
ನಿನ್ನ ಮುಖವೋ ಹಲಸಿನ ಹಣ್ಣು ||

ಮತ್ತೆ ನೋಡಿ ಆ ದಿನ ಮಾರ್ಕೆಟ್ ನಲ್ಲಿ ತೊಂಡೆಕಾಯಿ 5/- Kg ಮಟ್ಟಿಗುಳ್ಳ 30/- Kg . ಯಾಕೆ ನನ್ನವಳನ್ನು Cheap ತರಕಾರಿಗೆ ಯಾಕೆ ಹೋಲಿಸಲೆಂದು ತಮಾಷೆಗೆ ಮಟ್ಟಿಗುಳ್ಳಕ್ಕೆ ಹೋಲಿಸಿದೆನು .ಮತ್ತೆ ಮೀನಾಕ್ಷಿ ಎಂದು ಎಲ್ಲ ಕಡೆ ಕರೀತಾರೆ ಮೀನು ಮತ್ತು ಕಪ್ಪೆ ನೀರಿನಲ್ಲಿ ಅಕ್ಕ -ತಂಗಿ ಅಲ್ವಾ ?? ಅದಕ್ಕೆ ಹೀಗೆ ಬರೆದೆ .ನೀವು ಯಾರದ್ರೂ ಇಂಥ ಕವನ ಬರೆದಿದ್ರಾ ?? ಹೇಗೆ different ಆಗಿಲ್ವಾ ?? ಆದರೆ ಇಲ್ಲ .. ಮುಖ ಅರ್ಧ ಸುಟ್ಟ ಬದನೇಕಾಯಿ ಥರ ಮಾಡಿಕೊಂಡು ಅಡ್ರೆಸ್ ಕೂಡ ಕೊಡದೆ ಓಡಿ ಹೋದಳು . ನಾನೇನು ಮಾಡಲಿ ನೀವೇ ಹೇಳಿ?? .....

ಇನ್ನು ಮೂರನೆಯವಳು orkut ನಲ್ಲಿ ಸಿಕ್ಕಿದಳು . ಲತಾ ..... ಮೊದಲು ಸ್ವಲ್ಪ tragedy ಅನ್ನಿಸಿತು . ಎರಡನೇ ವಾರಕ್ಕೆ ಆಕೆಯಿಂದ "Dear" "Honey" ಸಂಬೋಧನೆ ಶುರುವಾಯಿತು . ಆಮೇಲೆ ಲವ್ ಅಂಥಾ ಏನೂ ಇಲ್ಲದಿದ್ದರೂ ಮಾತಿನಲ್ಲಿ ಸ್ವಲ್ಪ ಸಲುಗೆ ಬೆಳೆಯಿತು . ಒಮ್ಮೆ ಹೀಗೆ ಭೇಟಿ ಮಾಡೋಣ ಎಂದು ಅವಳ ಮನೆಗೆ ಹೋದೆನು . ಲತಾ .. ಬಂದಳು .... ಉಡುಪಿಯಲ್ಲಿ ರಥಬೀದಿ ತುಂಬಾ ರಂಪಾಟ ಮಾಡಿದ "ಲಕ್ಷ್ಮೀಶ " ನ ( ಆನೆ ) ಅಪರಾವತಾರದಂತಿದ್ದಳು. ಮನೆಯ ಗೋಡೆ ತುಂಬ ಇವಳ solo photo ಇತ್ತು . ಯಾಕೆ ಸರ್ ಎಲ್ಲ ಫೋಟೋ ದಲ್ಲಿ ಒಬ್ಳೇ ಇದ್ದಾಳೆ ಎಂದು ಅವಳ ಅಪ್ಪನನ್ನು ಕೇಳಿದೆ . ಇಲ್ಲಪ್ಪ ಅದು ಗ್ರೂಪ್ ಫೋಟೋ ನೆ ಆದ್ರೆ ಒಂದೇ ಫ್ರೇಮ್ ನಲ್ಲಿ ಎಲ್ಲರು ಬಂದಿಲ್ಲ , ಎಂಟು ಮಂದಿ ಅವಳ ಹಿಂದೆ ನಿಂತಿದ್ದಾರೆ ಅಂದರು . Corner ನಲ್ಲಿ ಅವಳ ಮತ್ತು ಅವಳ ತಾಯಿಯ ಫೋಟೋ ನೋಡಿ ಅದು ಹೇಗೆ ಸರ್ ... ಕೇಳಿದೆ.... ಅದಾ ?? adobe Photoshop ನಲ್ಲಿ edit ಮಾಡಿ ಪ್ರಿಂಟ್ ಹೊಡೆಸಿದ್ದು ಅಂದರು . ಇವಳ ತಾಯಿ ಗರ್ಭಿಣಿ ಇರಬೇಕಾದರೆ ಬಸ್ಸಿನಲ್ಲಿ ಒಂದೂವರೆ ಟಿಕೆಟ್ ತೆಗೊತಿದ್ರಂತೆ . ಸರಿ ಎಂದು ಅವಳ ಅಪ್ಪನಿಗೆ ಕಿಟ್ಟೆಲ್ ಡಿಕ್ಷನರಿ ಗಿಫ್ಟ್ ಕೊಟ್ಟು (ಕೂಷ್ಮಾಂಡ ಅಂಥ ಹೆಸರಿಡೋದು ಬಿಟ್ಟು ಲತಾ ಅಂಥ ಹೆಸರು ಇಟ್ಟಿದ್ದಾನೆ ) ಅವಳಿಗೆ ಮನದಲ್ಲೇ ಒಂದು ಸೌತೆಕಾಯಿ ಬೆಲ್ಲದ ಅಚ್ಚು ಮತ್ತು ಐದು ರುಪಾಯಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರಡಲನುವಾದೆ . ಕೂರಪ್ಪ ..... ಮೊದಲನೆ ಬಾರಿ ಬಂದಿದ್ದೀಯಾ ಮನೆಗೆ.... ಏನು ತೆಗೊತೀಯಾ ?? ಎಂದರು . ಸರ್ ನಿಮ್ಮ ಮಗಳನ್ನ ಬಿಟ್ಟು ಬೇರೆ ಏನು ಕೊಟ್ರು ತೆಗೊತೀನಿ ಎಂದು ಹೇಳಿ ಕಹಿ ಕಾಪಿ ಕುಡಿದು ಗೂಡು ಸೇರಿಕೊಂಡೆ . ನಾನೇನು ಮಾಡಲಿ ನೀವೇ ಹೇಳಿ .....

ಇರಲಿ ಈಗ ಫೆಬ್ರವರಿ ೧೪ ಹತ್ರ ಬರುತ್ತಿದೆ . ನನ್ನ ಜಾತಕ ನೋಡಿದ ಪುರೋಹಿತರು " ಈ ವರ್ಷ ಚಾನ್ಸ್ ಇದೆ " ಎಂದಿದ್ದಾರೆ.ಮನಸ್ಸು ಕನಸಿನ ಗೋಪುರ ಕಟ್ಟಲು ಆರಂಭಿಸಿದೆ . ಕಾತರ ಕಳವಳಗಳೊಂದಿಗೆ ಫೆಬ್ರವರಿ 14 ನ್ನು ಎದುರು ನೋಡುತ್ತಿದ್ದೇನೆ .
======================ವಿಕಟಕವಿ =======================