ಕೇಸರೀಕರಣ-ಹಾಗೆಂದರೇನು?

ಕೇಸರೀಕರಣ-ಹಾಗೆಂದರೇನು?

ಮೊನ್ನೆಹಾಸನದಲ್ಲೊಂದು
ವಿಶಿಷ್ಟ ಕಾರ್ಯಕ್ರಮ.ಸಂಜೆ ಐದರ ವೇಳೆ.ಸೂರ್ಯನಿನ್ನೂ  ತಂಪಾಗಿಯೇ ಇಲ್ಲ. ಬಿಸಿಲಿನ
ಝಳ.  ಸುಮಾರು ಎರಡುಸಾವಿರ ಯುವಕರು ಕಣ್ಣು ಮಿಟುಕಿಸದೆ ಕುಳಿತು ಭಾಷಣ ಕೇಳುತ್ತಿದ್ದಾರೆ.ಕಂಚಿನಕಂಠದಿಂದ
ಹೊರಬರುತ್ತಿರುವ ಮಾತುಗಳನ್ನು ಆ ತರುಣರಷ್ಟೇ ಅಲ್ಲ ಹಾಸನದ ಜನತೆಕೂಡ  ಆ ಬಿಸಿಲಿನ ಝಳವನ್ನು   ಲೆಕ್ಕಿಸದೆ
ಕೇಳುತ್ತಾ ಕುಳಿತಿದ್ದಾರೆ.ಕಾರಣ ತಂಪಗಿನ ಮಾತು ಕೇಳಬರುತ್ತಿದೆ.ಮನಸ್ಸಿಗೆ ಹಿತವಾಗಿದ್ದ ಭರವಸೆಯ 
ಮಾತುಗಳು. ಬ್ರಷ್ಠ ರಾಜಕಾರಣಿಗಳ ಮಾತುಗಳೇ ಕೇಳಿಬರುತ್ತಿದ್ದ ಹಾಸನದ ಹೈಸ್ಕೂಲ್ ಮೈದಾನದಲ್ಲಿ 
ಒಬ್ಬ ಶಿಷ್ಟ ತಪಸ್ವಿಯ ಬಾಯಿಂದ ಬರುತ್ತಿದ್ದ ಮಾತುಗಳು ಅಲ್ಲಿದ್ದ  ಸಾವಿರಾರು ಮಂದಿಯನ್ನು ಕಟ್ಟಿಹಾಕಿತ್ತು.ಜಯಕಾರ ಮಾಡುವಂತಿಲ್ಲ.
ಕಾರ್ಯಕ್ರಮದ ಪ್ರಾರಂಭದಲ್ಲೇ ಸಂಘಟಕರು ಸೂಚನೆ ಬೇರೆ ಕೊಟ್ಟುಬಿಟ್ಟಿದ್ದರು. ಭಾಷಣಕಾರರು ಶ್ರೀ ಸು.ರಾಮಣ್ಣ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು.ಸಂಘ ಕಾರ್ಯಾಲಯದ ಕಟ್ಟಡ "ಪಾಂಚಜನ್ಯದ"
ಉದ್ಘಾಟನೆಯ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ತರುಣ ಸಮಾವೇಶದಲ್ಲಿ ಗುಡುಗಿದ ಎಪ್ಪತ್ತು ವರ್ಷದ ತರುಣ
ಸು.ರಾಮಣ್ಣನವರು ಇಂಜಿನಿಯರಿಂಗ್ ಪದವಿ ಮುಗಿಸಿ, ದುಡಿಮೆಗೆ ಮನಸ್ಸು ಮಾಡದೆ, ಮದುವೆಯಾಗದೆ 
ತಮ್ಮ ಇಡೀ ಜೀವನವನ್ನು ಸಂಘದ ಕಾರ್ಯಕ್ಕೆ ಸಮರ್ಪಿಸಿ ಕೊಂಡವರು. ಸಂಘದಲ್ಲಿ ಇಂತಹ ಸಹಸ್ರಾರು ಪ್ರಚಾರಕರು.ತಮ್ಮ
ಸರ್ಪಿತ ಜೀವನವೇ ತಮ್ಮ ನಾಲಿಗೆಗೆ ಶಕ್ತಿ. ಅದಕ್ಕಾಗಿಯೇ ತರುಣರಿಗೆ ಅಷ್ಟೊಂದು ಆಕರ್ಷಣೆ.ಅಲ್ಲಿದ್ದ
ಸಂಘದ ಕಾರ್ಯಕರ್ತರ ಪಡೆಯನ್ನು ನೋಡಿದಾಗ ರಾಮಣ್ಣನವರ ಬಾಯಿಂದ ಹೊರಟಿದ್ದು " ಸಾವಿರದ ಸ್ವಯಂಸೇವಕರು"
ಸಾವಿರ ಸಂಖ್ಯೆ ಎಂದು ಸಭಾಸದರು
ಭಾವಿಸಿಯಾರು ಎಂದು ಮತ್ತೊಮ್ಮೆ ಹೇಳಿದರು " ಸಾವ್ ಇರದ ಸ್ವಯಂ ಸೇವಕರು" ಮುಂದುವರೆದು
ಹೇಳಿದರು "ಯಾವುದೇ ಸಂಘಟನೆಗೆ ಬೇಕಾದವರು ಸಾವಿರಾರು ಕಾರ್ಯಕರ್ತರಲ್ಲ. ಸಾವು ಇರದ ಕಾರ್ಯಕರ್ತರು.ಇಂತಹ
ಸಂಟನೆಗಳು ದೇಶಕ್ಕೆ ಆಸ್ತಿಯಾಗುತ್ತವೆ. ಅನೇಕ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಆಸ್ತಿ ಕೂಡಿಡಬೇಕೆಂದು
ಅಪೇಕ್ಷಿಸುತ್ತಾರೆ. ಮಕ್ಕಳಿಂದಲೂ ಅದನ್ನೇ ಬಯಸುತ್ತಾರೆ. ಆದರೆ   ಆಸ್ತಿಮಾಡುವುದಲ್ಲ,
ಅವರೇ ಕುಟುಂಬಕ್ಕೆ  ಆಸ್ತಿಯಾಗಬೇಕು, ಅಂತಹ ಕುಟುಂಬಗಳು  ದೇಶಕ್ಕೆ ಆಸ್ತಿಯಾಗುತ್ತವೆ.
ಸಣ್ಣಪುಟ್ಟ ಆಸೆ ಇಟ್ಟುಕೊಳ್ಳುವುದು ಸಣ್ಣತನ.ಮಹತ್ವಾಕಾಂಕ್ಷೆ ನಮ್ಮದಾಗಬೇಕು.ಆಸ್ತಿಯನ್ನು ಗಳಿಸುವುದಲ್ಲ,
ನಾವೇ ದೇಶಕ್ಕೆಆಸ್ತಿಯಾಗಬೇಕು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಚ್ಛೆ ಯೆಂದರೆ ಸಾವ್ ಇರದ ಸ್ವಯಂಸೇವಕರು
ಸಂಘಕ್ಕೆಆಸ್ತಿ, ಇಂತಹ ಸಂಘಟನೆಗಳು ದೇಶಕ್ಕೆ ಆಸ್ತಿ. ಸಂಘದ ಕಾರ್ಯಾಲದ ಪ್ರರಂಭದಬಗ್ಗೆ ಹೇಳುತ್ತಾ,
- ಶಿವ ಇರುವಲ್ಲಿ ಶಿವಾಲಯ, ದೇವ ಇರುವಲ್ಲಿ ದೇವಾಲಯ,ಹಾಗೆಯೇ ಕಾರ್ಯ ಇರುವಲ್ಲಿ ಕಾರ್ಯಾಲಯವಾಗಬೇಕು
, ಪಾಂಚಜನ್ಯ ಕಾರ್ಯಾಲಯ ಕೇಂದ್ರವಾಗಿ ರಾಷ್ಟ್ರಕಾರ್ಯ ಇನ್ನೂಉತ್ಸಾಹದಿಂದ ನಡೆಯಬೇಕೆಂದು ಯುವಕರಲ್ಲಿ
ಉತ್ಸಾಹ ತುಂಬಿದರು.ಸಂಘದ ಕಾರ್ಯಾಲಯದ ಆವರಣವಂತೂ ಚೆನ್ನಾಗಿದೆ.
ಅದರಲ್ಲಿ ಹೂರಣ ತುಂಬುವ ಕೆಲಸ ತ್ವರಿತಗತಿಯಲ್ಲಿ ಆಗಬೇಕೆಂದುಆಶಿಸಿದರು.ಮಹಾಭಾರತದಲ್ಲಿ ಶ್ರೀ ಕೃಷ್ಣನು
ಪಾಂಚಜನ್ಯವನ್ನು ಮೊಳಗಿಸಿದಂತೆ ರಾಷ್ಟ್ರ ಜಾಗೃತಿಯ ಕೆಲಸವು ಹಾಸನದ ಪಾಂಚಜನ್ಯದಿಂದಾಗಬೇಕು. ಸಮಾರಂಭಕ್ಕೆ 
ಮುನ್ನ ನಗರದಲ್ಲಿ ನಡೆದಆಕರ್ಷಣೀಯ ಪಥಸಂಚಲನದ ಬಗ್ಗೆ  ತಮ್ಮದೇಆದ ರೀತಿಯಲ್ಲಿ ರಾಮಣ್ಣನವರು ವ್ಯಾಖ್ಯಾನಿಸಿದರು.-"
ಮಹಾಭಾರತದ ಒಂದು ಪ್ರಸಂಗ. ಪಾಂಡವರು ವನವಾಸದಲ್ಲಿದ್ದಾಗ ಅವರ ವನವಾಸದ ಸಂಕಟವನ್ನು ಕಂಡು ಸಂತೋಷ ಪಡಲು
ವಿಘ್ನಸಂತೋಷಿಗಳಾಗಿ ದುರ್ಯೋದನಾದಿಗಳು ಕಾಡಿಗೆ ಬಂದರು. ತಮ್ಮ ದುರಹಂಕಾರದ ಅವಿವೇಕದ ನಡೆಯಿಂದ ಯಕ್ಷರ
ಬಂಧಿಗಳಾದರು. ಈ ವಿಷಯ ಧರ್ಮರಾಯನಿಗೆ ತಿಳಿಯಿತು. ಆಗ ಧರ್ಮರಾಯನು  ತನ್ನ ಸೋದರರಿಗೆ ಹೇಳುತ್ತಾನೆ-"
ಹೋಗಿ ದುರ್ಯೋದನಾದಿಗಳನ್ನು ಬಂಧನದಿಂದ ಬಿಡಿಸಿಕೊಂಡು ಬನ್ನಿ. ನಾವು ಮತ್ತು ಕೌರವರು ಮಾತ್ರವಿದ್ದಾಗ
.ನಾವು ಐವರು ಹಾಗೂ ಅವರು ನೂರು ಮಂದಿ. ಆದರೆ ಹೊರಗಿನವರು ಆಕ್ರಮಣ ಮಾಡಿದಾಗ ನಾವು ನೂರೈದು ಮಂದಿ.
ವಯಂ ಪಂಚಾಧಿಕಂ ಶತಮ್ .ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆ ಇದೇಆಗಿದೆ. ಇಂದಿರಾ ಗಾಂಧಿಯವರು ಅಂದು
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಹಿಷ್ಕಾರ ಮಾಡಿದ್ದರೂ ಸಹ ಪಾಕೀಸ್ಥಾನದ ಯುದ್ಧದ ಸಂದರ್ಭದಲ್ಲಿ
ಬಾಂಗ್ಲಾ ನಿರಾಶ್ರಿತರ ಪಡೆಗೆ ಸಹಾಯಮಾಡಿ ಪಾಕೀಸ್ಥಾನದ ಸೊಂಟವನ್ನು ಮುರಿದ  ಇಂದಿರಾ ಗಾಂಧಿಯವರನ್ನು
ವಿರೋಧ ಪಕ್ಷದಲ್ಲಿದ್ದ ಶ್ರೀಆಟಲ್ ಬಿಹಾರಿ ವಾಜಪೇಯಿಯವರು "ದುರ್ಗಾ"ಎಂದು ಕರೆದರು. ದೇಶಕ್ಕೆಆಪತ್ತು
ಬಂದಾಗ ನಾವೆಲ್ಲಾ ಒಂದೇ.ದೇಶದ ನಮ್ಮೆಲ್ಲರ ಹೊಣೆ. ಯಾರಲ್ಲಿಯೂ ವಿರೋಧ ಕಾಣ ಬಾರದು.ಕಾರ್ಗಿಲ್ ನಲ್ಲಿ
ಹಿಂದಿನಿಂದ ಮೋಸದಿಂದ ಪಾಕ್ ಪಡೆ ನುಗ್ಗಿ ಯುದ್ಧವಾದಾಗ ಅಮೇರಿಕಾ ಅಧ್ಯಕ್ಷರುಭಾರತದ  ಪ್ರಧಾನಿ ವಾಜಪೇಯಿಯವರನ್ನೂ, ಹಾಗೂ ಪಾಕ್ ಅಧ್ಯಕ್ಷ
ನವಾಝ್ ಷರೀಫರನ್ನೂ ಸಂಧಾನಕ್ಕೆ ಕರೆದರು, ಕೂಡಲೇ ನವಾಝ್ ಷರೀಫ್ ಅಮೇರಿಕಾಕ್ಕೆ ಧಾವಿಸಿದರೆ,
ವಾಜಪೇಯಿಯವರು ಹೇಳಿದರು" ನಾನು ಭಾರತದ ಪ್ರಧಾನಿ. ಈ ದೇಶ ನನ್ನ ಮಾತೃಭೂಮಿ.ನನಗೊಂದು ಜವಾಬ್ದಾರಿ
ಇದೆ. ವಿದೇಶೀ ಆಕ್ರಮಣಕಾರರು ನಮ್ಮ ಮೇಲೆ ಆಕ್ರಮಣ ಮಾಡಿರುವಾಗ ಒಬ್ಬ ಶತ್ರು ಸೈನಿಕನು ನಮ್ಮ ಗಡಿಯೊಳಗಿದ್ದರೂ
ನಾನು ಭಾರತ ಬಿಟ್ಟು ಬರಲಾರೆ"  ಆದರೆ ಸ್ವಾತಂತ್ರ್ಯ ಬಂದದಿನದಿದಿಂದ ನಮ್ಮನ್ನಾಳಿದ ಕಾಂಗ್ರೆಸ್ಸಿಗರು
ಅಂದು ಹೇಳಿದ್ದೇನು- ಬಿ.ಜೆ.ಪಿ. ನಾಯಕರ ಅವಿವೇಕದಿಂದ ಕಾರ್ಗಿಲ್ ಯುದ್ಧದಲ್ಲಿ ನಾವು ನೂರಾರು ಸೈನಿಕರನ್ನು
ಕಳೆದುಕೊಂಡೆವು.
ದೇಶವು ಆಪತ್ತು ಎದುರಿಸುತ್ತಿದ್ದಾಗ ಸರ್ಕಾರಕ್ಕೆ ಬೆಂಬಲಕೊಡುವುದರ ಬದಲು ಆಗಲೂ ಕ್ಷುದ್ರರಾಜಕಾರಣ
ನಡೆಯಬೇಕೆ? ೧೯೨೫ ರಲ್ಲಿ ಆರಂಭವಾದ ಸಂಘವು ಇಂದಿನವರಗೆ ಹಾಗೂ ಮುಂದೂ ಕೂಡ ಕ್ಷುದ್ರ ರಾಜಕಾರಣದಿಂದ 
ಗಾವುದದಷ್ಟು ದೂರ.ಅಧಿಕಾರಕ್ಕಾಗಿ ಪಕ್ಷ ರಾಜಕಾರಣದಿಂದ ದೂರ. ನಮ್ಮದು ಶುದ್ಧ ರಾಷ್ಟ್ರಕಾರಣ.ಯಾರನ್ನೂ
ವಿರೋಧ ಮಾಡುವುದು ನಮ್ಮ ನೀತಿಯಲ್ಲ. “ಸರ್ವೇಶಾಂ ಅವಿರೋಧೇನಾ”-ಯಾರನ್ನೂ ವಿರೋಧ ಮಾಡುವ ಮಾತೇ ಇಲ್ಲ.ಹಾಸನದಲ್ಲಿ
ನಡೆದ ಪಥಸಂಚಲನವನ್ನು ಸಂತೋಷದಿಂದ ನೋಡುತ್ತಿದ್ದ ನೂರಾರು ಮುಸಲ್ನಾನ ಬಂಧುಗಳನ್ನೂ ನಾ ಕಂಡೆ.ಅವರಲ್ಲಿ
ಆತಂಕದ ಲವಲೇಶವೂ ಇರಲಿಲ್ಲ.  ಆದರೆ ವಿಚಾರ ವಾದಿಗಳೆಂದು ಕರೆದುಕೊಳ್ಳುವರು ಹೇಳುವುದೇನು? ಆರ್.ಎಸ್.ಎಸ್.
ರೂಟ್ ಮಾರ್ಚ್ ಮಾಡುವುದು  ಮುಸಲ್ಮಾನರನ್ನು ಬೆದರಿಸುವುದಕ್ಕೆ. ಒಂದು ವಿಚಾರವು ಸಮಾಜಕ್ಕೆ ಗೊತ್ತಿದೆ.
ಆರ್.ಎಸ್.ಎಸ್. ಯಾರಲ್ಲೂ ಭಯವನ್ನು ಉಂಟುಮಾಡಲು  ತನ್ನ ಕಾರ್ಯಕ್ರಮಗಳನ್ನು ಮಾಡುವುದಿಲ್ಲ, ಬದಲಿಗೆ
“ ಜನರಲ್ಲಿ ಭರವಸೆಯನ್ನು ಉಂಟುಮಾಡಲು ತನ್ನೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತೆ. ಪಥಸಂಚಲನದಲ್ಲಿ
ಭಾಗವಹಿಸುವಂತಹ ವೃದ್ಧರು ತಮ್ಮ ಮುಪ್ಪನ್ನು ಮರೆತುಬಿಡುತ್ತಾರೆ. ಪಥಸಂಚಲನದಲ್ಲಿಪಾಲ್ಗೊಳ್ಳುವ ತರುಣರು
ಜೀವನವಿಡೀ ತಮ್ಮ ತಾರುಣ್ಯವನ್ನು ಕಾಪಾಡಿಕೊಳ್ಳುವ ಸಂಕಲ್ಪವನ್ನು ಮಾಡುತ್ತಾರೆ. ತಮ್ಮಲ್ಲಿ ಹಾಗೂ ಸುತ್ತಲ
ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಇಂತಹ ಕಾರ್ಯಕ್ರಮಗಳನ್ನು ಸಂಘವು ಆಯೋಜಿಸುತ್ತೆ. ನಮ್ಮದು
ಅಪಮಾನದ ಇತಿಹಾಸವಲ್ಲ.ಹಲವಾರು ಆಕ್ರಮಣಗಳು ನಮ್ಮ ದೇಶದ ಮೇಲೆ ಆಗಿದೆ.ಆದರೆ ಎಲ್ಲಾ ಕಾಲದಲ್ಲೂ 
ಸಂಘರ್ಷವನ್ನು ಮಾಡುತ್ತಾ ಬಂದಿದ್ದೇವೆ.ನಮ್ಮದು ಸೋಲಿನ ಇತಿಹಾಸವಲ್ಲ. ಸಂಘರ್ಷದ ಇತಿಹಾಸ. ಶಕ್ತಿಯ
ಆರಾಧನೆ ಈ ದೇಶದ ಗುಣಸ್ವಭಾವ. “ಅಹಿಂಸಾ ಪರಮೋಧರ್ಮ:”-ಎಂಬುದು ಒಳ್ಳೆಯ ತತ್ವ. ಇದನ್ನು ಯಾರು ಹೇಳಬೇಕು?  ಭಲಹೀನರೇ? ದುರ್ಬಲರಿಗೆ ಇದನ್ನು ಹೇಳುವ ಯೋಗ್ಯತೆ ಇಲ್ಲ.
ಅಹಿಂಸಾ ಪರಮೋಧರ್ಮ ಎಂದು ಹೇಳಲು ಯೋಗ್ಯತೆ ಬೇಕು. ಅವನಲ್ಲಿ ಸಾಮರ್ಥ್ಯ ಬೇಕು. ಎಲ್ಲಿ ಶಕ್ತಿಯ ಚಮತ್ಕಾರವಿದೆ,
ಅಲ್ಲಿ ಭಕ್ತಿಯ  ಪುರಸ್ಕಾರವಿದೆ.ಇಲ್ಲದಿದ್ದರೆ ಕೇವಲ
ತಿರಸ್ಕಾರ. ಮುಂಬೈನಲ್ಲಿ ಬಾಂಬ್ ಸ್ಪೋಟ ವಾದನಂತರ ಭಾರತಸರ್ಕಾರವು ಪಾಕೀಸ್ಥಾನಕ್ಕೆ ಎಚ್ಛರಿಕೆ ಕೊಟ್ಟಿತು.
ಭಯೋತ್ಪಾದಕರ ಒಂದು ಪಟ್ಟಿಯನ್ನು ಪಾಕ್ ಗೆ ಕೊಟ್ಟು ಇಷ್ಟು ಜನರನ್ನು ಭಾರತದ ವಶಕ್ಕೆ ಕೂಡಲೆ ಕೊಡಿ-ಇಲ್ಲ
ಪರಿಣಾಮ ಎದುರಿಸಿ” ಎಂದು ಗುಡುಗಿತು.ನಮಗೆಲ್ಲಾ ನಮ್ಮ ಸರ್ಕಾರದ ಬಗ್ಗೆ ಅಭಿಮಾನವೆನಿಸಿತು. ಆದರೆ ಪಾಕ್
ನಮ್ಮ ಸರ್ಕಾರದ ಮಾತಿಗೆ ಕಿವಿಗೊಟ್ಟಿತೇ?ಇಲ್ಲ. ಶಕ್ತಿಯ ಚಮತ್ಕಾರ ವಿಲ್ಲದಿದ್ದರೆ ಪುರರ್ಸ್ಕಾರವಿಲ್ಲ.ಕೇವಲ
ತಿರಸ್ಕಾರ. ಒಂದು ಪುಟ್ಟ ಇಸ್ರೇಲ್ ದೇಶವು ನಮಗೆ ಉಧಾಹರಣೆ ಯಾಗಬೇಡವೇ?ಇಸ್ರೇಲ್ ದೇಶವು  ಹನ್ನೊಂದು
ಅರಬ್ ದೇಶಗಳಿಂದ ಆವರಿಸಲ್ಪಟ್ಟಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಅಪಾಯದ ಗಂಟೆಗಳೇ! ಆದರೆ ಇಸ್ರೇಲ್
ಹೆದರಲಿಲ್ಲ.ಅದರಮೇಲೆ ಪಕ್ಕದ ದೇಶದಿಂದ ಆಕ್ರಮಣ ವಾದಾಗಲೆಲ್ಲಾ ಸಮರ್ಥವಾಗಿ ಎದುರಿಸಿತು. ಭಾರತವೂ ಅಷ್ಟೇ.
ಅದೊಂದು ಶಕ್ತಿಶಾಲಿ ದೇಶವಾಗಬೇಕು.ಶಕ್ತಿ ಇರುವುದು ಸಂಘಟನೆಯಲ್ಲಿ. ಇಂಗ್ಳೀಶಿನಲ್ಲಿ ಒಂದು
ಮಾತಿದೆ. “ ಕಾಳಗ ಮಾಡುವುದು ಬಂದೂಕಲ್ಲ, ಅದನ್ನು ಹಿಡಿದಿರುವ ಕೈ, ಕಾಳಗ ಮಾಡುವುದು ಕೈ ಅಲ್ಲ, ಅದರಹಿಂದಿರುವ
ಗುಂಡಿಗೆ.ಅವನ ಹೃದಯ.ವ್ಯಕ್ತಿಯ ಒಳಗಿರುವ ತಾಕತ್ತು.ಒಳಗಿನಶಕ್ತಿ ಇದ್ದಾಗ ಬಾಂಬಾಗಲೀ, ಬಂದೂಕಾಗಲೀ
ಅಗತ್ಯಬೀಳುವುದಿಲ್ಲ.ಆದ್ದರಿಂದ ಒಳಗಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕೆಲಸವಾಗಬೇಕು. ಆ ಕೆಲಸವನ್ನು
ಸಂಘವು ಮಾಡುತ್ತಿದೆ. ಪಥಸಂಚಲನವೆಂದರೆ ಒಂದು ಸಂಘಟಿತ ಶಕ್ತಿಯ ಒಂದು ವ್ಯಕ್ತರೂಪ. ಸರಿಯಾದ ಸಮಯಕ್ಕೆ
ಹೊರಟು, ನಿಷ್ಚಿತ ಮಾರ್ಗದಲ್ಲಿ ಕ್ರಮಿಸಿ, ಸರಿಯಾದ ಸಮಯಕ್ಕೆ ನಿಷ್ಚಿತ ಸ್ಥಳವನ್ನು ಸೇರುತ್ತೆ. ಮಾರ್ಗದಲ್ಲಿ
ಯಾವುದೇ ಉತ್ತೇಜನಕ್ಕೆ ಒಳಗಾಗುವುದಿಲ್ಲ.ಯಾರು ಹೂವು ಎರಚಿದರೂ ದೃಷ್ಟಿಯನ್ನು ಅಕ್ಕಪಕ್ಕಕ್ಕೆ ಹೊರಳಿಸುವುದಿಲ್ಲ,
ಕಲ್ಲು ಎಸೆದರೂ ಕೆರಳುವುದಿಲ್ಲ.ಶಿಸ್ತುಬದ್ಧವಾಗಿ ಗುರಿಯನ್ನು ತಲಪುತ್ತೆ. ಘೋಷಣೆಗಳನ್ನು ಕೂಗಿ ಶಕ್ತಿಯನ್ನು
ವ್ಯರ್ಥ ಮಾಡಿಕೊಳ್ಳುವುದಿಲ್ಲ, ಬದಲಿಗೆ ಶಕ್ತಿಯ ಸಂಚಯಮಾಡಿಕೊಳ್ಳಲಾಗುತ್ತದೆ.ನೋಡುವವರಿಗೆ ಭಯವಾಗುವುದಿಲ್ಲ.
ಬದಲಿಗೆ ಭರವಸೆ ಮೂಡುತ್ತದೆ.ಪಥಸಂಚಲ ವೆಂದರೆ ಸಕ್ರಿಯ, ಸಚೇತ, ಜಾಗೃತ ದೇಶಭಕ್ತಿಯ ಒಂದು ವ್ಯಕ್ತರೂಪ.ಸಂಘಟನೆ
ಬಲವಾಗಲು ಹಾಗೂ ಸಜ್ಜನರಲ್ಲಿ ಭರವಸೆಯನ್ನು  ಮೂಡಿಸಲು ಆಗಾಗ ಪಥಸಂಚಲನವಾಗುತ್ತದೆ.ನಮ್ಮದೇಶದಲ್ಲಿರುವ
ಬುದ್ಧಿಜೀವಿಗಳೆಂದು ಕರೆದುಕೊಳ್ಳುವವರು, ಸುಕ್ಯುಲರಿಸ್ಟರು ಮತ್ತು ಕಮ್ಯುನಿಸ್ಟರ ಬಾಯಲ್ಲಿ ಒಂದೇ
ಮಾತು “ ಕೇಸರೀಕರಣ”. ಹಾಗೆಂದರೇನು? ಕೇಸರಿಯ ಮಹತ್ವವನ್ನು ಈ ದೇಶದ ಜನರಿಗೆ ತಿಳಿಸಿಕೊಡಬೇಕಾಗಿದೆ.ಕೇಸರೀ
ಬಣ್ಣ ಎಂದಾದರೂ ಯಾರಿಗಾದರೂ ಆತಂಕ ಉಂಟುಮಾಡಿದೆಯೇ? ಕೇಸರಿ ಬಣ್ಣವು ಮೂರು ಮಹಾನ್ ಗುಣಗಳ ಪ್ರತೀಕವಾಗಿದೆ.ಮೂರು
ಭಾರತೀಯ ಜೀವನ ಮೌಲ್ಯಗಳು.ಮೊದಲನೆಯದು ಜೀವನವು ಪಾವನವಾಗುವುದು ಸಂಗ್ರಹ ಮಾಡುವುದರಿಂದಲ್ಲ, ದಾನಮಾಡುವುದರಿಂದ.ದೇಶವು
ನಿನಗೆ ಏನು ಕೊಡುತ್ತದೆ, ಎಂದು ಅಪೇಕ್ಷಿಸುವುದಲ್ಲ, ನೀನು ದೇಶಕ್ಕೆ ಏನು ಕೊಡುತ್ತೀಯಾ? ಎಲ್ಲವನ್ನೂ
ಕೊಟ್ಟಿರುವ ದೇಶಕ್ಕೆ ನಿನ್ನ ಕೊಡುಗೆ ಏನು? ದೇಶವು ಶಕ್ತಿಯುತವಾದರೆ ನೀನು ಸಹಜವಾಗಿ ಶಕ್ತಿಯುತನಾಗುವೆ.
ಈದೇಶದ ಸಾದುಸಂತರೆಲ್ಲಾ ತಮ್ಮ ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ಸರ್ವಸ್ವವನ್ನೂ ಕೊಟ್ಟರು. ಸಿದ್ದಗಂಗಾ
ಮಠಾದೀಶರು ಇದಕ್ಕೊಂದು ಉದಾಹರಣೆಯಲ್ಲವೇ? ಅವರ ಸ್ವಂತಕ್ಕೆಂದು ಏನಿದೆ? ಎಲ್ಲವೂ ಸಮಾಜಕ್ಕಾಗಿ.ಅದರಿಂದಲೇ
ಜನರು ಅವರಿಗೆ ನಡೆದಾಡುವ ದೇವರೆಂದು ಹೇಳಿದರು. ಕೇಸರಿಯ ಸಂದೇಶವೇ ದೇಶಕ್ಕಾಗಿ ಬದುಕುವುದು.ಕೇಶವ ಬಲಿರಾಮ
ಹೆಡಗೇವಾರರು ನಮಗೆ ಕಲಿಸಿಕೊಟ್ಟ ಪಾಠವೇ ದೇಶಕ್ಕಾಗಿ ಬದುಕು.ದೇಶದ ಉನ್ನತಿಯೇ ನಿನ್ನ ಉನ್ನತಿ. ದೇಶ
ದುರ್ಬಲವಾದರೆ ನೀನು ಸತ್ತಂತೆ. ಇದು ನಾವು ಕಲಿಯುತ್ತಿರುವ ಪಾಠ. ದೇಶಕ್ಕಾಗಿ ಕೊಟ್ಟವನು ಸತ್ತಮೇಲೂ
ಅಮರನಾಗುತ್ತಾನೆ.ಅವನ ಹೆಸರು ಚಿರಸ್ಥಾಯಿ. ಲಕ್ಷ-ಲಕ್ಷ ಸಂಪಾದಿಸಲು ಯೋಗ್ಯತೆ ಇರುವ ಸಹಸ್ರಾರು ಯುವಕರು
ತಮ್ಮ ಸಂಪಾದನೆಯನ್ನು ಎಡಗಾಲಲ್ಲಿ ಒದ್ದು ಇಂದಿಗೂ ಸಂಘಕಾರ್ಯದಲ್ಲಿ ಧುಮುಕಿ ರಾಷ್ಟ್ರಕಾರ್ಯದಲ್ಲಿ
ಮಗ್ನರಾಗಿದ್ದಾರೆ.ಇಂಥಹ ಉಧಾಹರಣೆ ಪ್ರಪಂಚದಲ್ಲಿ ಮತ್ತೊಂದು ಸಿಗುವುದಿಲ್ಲ.ಕೇಸರೀ ಕರಣವೆಂದರೆ ಇದು.
ಕೇಸರಿಯ ಇನ್ನೊಂದು ಸಂದೇಶವಿದೆ. ನಮ್ಮ ದೇಶದ ಎಲ್ಲಾ ವೀರಪುರುಷರು ಆಕ್ರಮಣಕಾರರ ಹುಟ್ಟಡಗಿಸುವುದಕ್ಕಾಗಿ,
ಧರ್ಮದ ಸಂರಕ್ಷಣೆಗಾಗಿ, ಸಜ್ಜನರ ಸಂರಕ್ಷಣೆಗಾಗಿ ಕ್ಷಾತ್ರತೇಜದಿಂದ ಹೋರಾಟವನ್ನು ಕೇಸರಿ ಬಣ್ಣದ ಭಗವಾಧ್ವಜದಡಿಯಲ್ಲೇ
ಮಾಡಿದರು.ಧರ್ಮವನ್ನು ಎತ್ತಿಹಿಡಿಯಲು ಅವರೆಲ್ಲರಿಗೂ ಪ್ರೇರಣೆಯ ಸ್ರೋತ ಭಗವಾಧ್ವಜವೇ ಆಗಿತ್ತು.ಕೇಸರೀ
ಬಣ್ಣವು ಸಜ್ಜನ ಶಕ್ತಿಯ ಪ್ರತೀಕ.ಕೇಸರೀಕರಣ ವಾಗುತ್ತಿದೆ ಎಂದರೆ ಈ ದೇಶದಲ್ಲಿ ದೈವೀಶಕ್ತಿಯ ನಿರ್ಮಾಣವಾಗುತ್ತಿದೆ
ಎಂದೇ ಅರ್ಥ.ಭಗವಾಧ್ವಜದ ಮತ್ತೊಂದು ಗುಣ ವೆಂದರೆ ಸಾಮರಸ್ಯ.  ಭಗವಾಧ್ವಜದ ಪ್ರಭಾವವಿರುವಲ್ಲಿ
ಧನಿಕ-ಬಡವ, ಉಚ್ಛ-ನೀಚ, ಸ್ಪೃಶ್ಯ-ಅಸ್ಪೃಶ್ಯವೆಂಬ ಭೇಧಕ್ಕೆ ಆಸ್ಪದವಿರುವುದಿಲ್ಲ. ಸಂಘದಲ್ಲಿ ಧನಿಕರು,
ಬಡವರು, ಎಲ್ಲಾಜಾತಿಯವರೂ ಇದ್ದಾರೆ. ಅವರಲ್ಲಿ ಸಂಘರ್ಶವಿಲ್ಲ.ಬದಲಿಗೆ ಸಾಮರಸ್ಯವಿದೆ.ಇಲ್ಲಿ ಒಂದು
ಸುಂದರವಾದ ಕೌಟುಂಬಿಕ ಭಾವವಿದೆ.ಅದಕ್ಕೇ ಇರಬೇಕು ನಮ್ಮನ್ನು ಎಲ್ಲರೂ ಸಂಘ ಪರಿವಾರವೆಂದು ಗುರುತಿಸಿದ್ದಾರೆ.
ಇಂತಹಾ ಕೇಸರೀ ಕರಣವಾಗಬೇಕು. ಭಾರತವು ಕೇಸರೀಕರಣವನ್ನು ಮಾನ್ಯಮಾಡಿದಾಗ ಜಗತ್ತೂ ಕೇಸರೀ ಕರಣವನ್ನು
ಒಪ್ಪುತ್ತದೆ.ಭಾರತದ ಆತ್ಮ ವೆಂದರೆ ಧರ್ಮ.ಈ ಧರ್ಮವನ್ನು ನಂಬಿರುವವರು ನಾವು. ಧರ್ಮವೆಂದರೆ ಜಾತಿ,
ಪಂಥ, ಸಂಪ್ರದಾಯಗಳಲ್ಲ.ಜೀವನದಲ್ಲಿ ಮಾಡಲೇ ಬೇಕಾದ ಕರ್ತವ್ಯವನ್ನು ಧರ್ಮವೆಂದು ಕರೆದಿದ್ದೇವೆ.ನಮ್ಮದು
ರಾಷ್ಟ್ರವಾದ. ಅದರ ಆವಾಹನೆಮಾಡಿರುವ ನಾವು ಅದಕ್ಕಾಗಿ ಕಂಕಣಬದ್ಧರಾಗಿದ್ದೇವೆ. ದೇವನೊಬ್ಬ ನಾಮ ಹಲವು,
ಜಾತಿಗಳು ನೂರಾರಿದ್ದರೂ ನೀತಿಯೊಂದೇ.ಭಾಷೆಗಳು ಹಲವಾದರೂ ಭಾವ ವೊಂದೇ.ಪ್ರಾಂತಗಳು ಹಲವಿದ್ದರೂ
ದೇಶ ಒಂದೇ.ದೇಶಗಳು ಹಲವಾರಿದ್ದರೂ ಜಗತ್ತು ಒಂದೇ.ಇಂತಹಾ ಒಂದು ಸಮನ್ವಯವೇ ನಮ್ಮ ದೇಶದ ವಿಚಾರರಲಹರಿ.
ಜಾತಿಗಳ ಹೆಸರಲ್ಲಿ,ಭಾಷೆಗಳಹೆಸರಲ್ಲಿ, ಪ್ರಾಂತಗಳ ಹೆಸರಲ್ಲಿ ಹೊಡೆದಾಡಿ ರಕ್ತ ಹರಿಸುವುದು ನಮ್ಮ ದೇಶದ
ಸಂಸ್ಕೃತಿಯಲ್ಲ. ರಾಷ್ಟ್ರೀಯತೆಯ ಜಾಗೃತಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

 

Rating
No votes yet

Comments