ತ್ರಿಗುಣಾಕಾರ ಈರುಳ್ಳಿ

ತ್ರಿಗುಣಾಕಾರ ಈರುಳ್ಳಿ

ಬರಹ

ತ್ರಿಗುಣಾಕಾರ ಈರುಳ್ಳಿ.

ತರಕಾರಿಯ ರಾಜ್ಯದಲ್ಲಿ
ಈರುಳ್ಳಿಯು ರಾಜನಾಗಿ
ರಾಮನಂತೆ ನ್ಯಾಯವಾಗಿ
ಆಳುತಿದ್ದನು
ಮತ್ಸರದ ಕುಂಬಳನು
ಈರುಳ್ಳಿಯು ಚಿಕ್ಕದೆಂದು
ತನ್ನ ದೇಹ ದೊಡ್ಡದೆಂದು
ದೊಡ್ಡ ಹೊಟ್ಟೆ ಉರಿಯಿಂದ
ರಾಜ ಪದವಿಗಾಗಿ ತಾನು
ಮನವಿಯಿಟ್ಟನು.
ಪ್ರಜೆಗಳೆಲ್ಲ ಒಟ್ಟುಗೂಡಿ
ಈರುಳ್ಳಿಗೆ ಓಟು ಹಾಕಿ
ಕುಂಬಳದಾ ಬಾಲ ಮುರಿದು
ಕಳುಹಿಕೊಟ್ಟರು.
ಮತ್ತೆ ಬಂದ ಕುಂಬಳನು
ತಾನು ಮೋಸಹೋದೆನೆಂದು
ನ್ಯಾಯ ತನಗೆ ಬೇಕೆಂದು
ಧರ್ಮವಾದಿ ರಾಜನಲ್ಲಿ
ಮೊರೆಯನಿಟ್ಟಿತು
ಶುದ್ಧ ಮನದ ಈರುಳ್ಳಿಯು
ಕುಂಬಳನನು ಕರೆದುಕೊಂಡು
ದೇವೇಂದ್ರನ ಕೇಳಲೆಂದು
ದಿವಿಗೆ ಹೊರಟನು
ದಿವಿಯ ದೇವತೆಗಳೆಲ್ಲ
ಉಪವಾಸದ ಒಪ್ಪೊತ್ತಿನ
ದೈವಭಕ್ತ ಈರುಳ್ಳಿಯ
ರಹಿತವಾದ ಊಟವನ್ನು
ಭುಜಿಸುತಿದ್ದರು
ಪುಣ್ಯ ಕರ್ಮದಿಂದ ಮಾತ್ರ
ರಾಜ ಪದವಿ ಸಿಗುವುದೆಂದು
ಈರಿಳ್ಳಿಗೆ ಜಯವ ಹೇಳಿ
ಕುಂಬಳಕ್ಕೆ ಬುದ್ಧಿ ಹೇಳಿ
ಬೀಳುಕೊಟ್ಟರು.
ಅಲ್ಲಿಗೂ ತೃಪ್ತಿಯಿರದ
ಹಠವಾದಿ ಕುಂಬಳನು
ಈರುಳ್ಳಿಯ ಖ್ಯಾತಿಗಾಗಿ
ಕಾರಣವ ಬೇಕೆಂದು
ತ್ರಿಮೂರ್ತಿಗಳ ಲೋಕದಲ್ಲಿ
ತೀರ್ಮಾನವಾಗಲೆಂದು
ಮೊಂಡು ಹಿಡಿದನು.
ನಿಷ್ಕಲ್ಮಶ ಈರುಳ್ಳಿಯು
ಕುಂಬಳನ ತೃಪ್ತಿಗಾಗಿ
ಚತುರ್ಮುಖ ಬ್ರಹ್ಮನಲ್ಲೂ
ಮನವಿಯಿಟ್ಟಿತು.
ಸಕಲ ಜಗದ ಸೃಷ್ಟಿ ಕರ್ತ
ನಗುನಗುತಾಉತ್ತರಿಸಿ
ತನ್ನ ಹಾಗೆ ಗಡ್ಡ ಶಿಖೆಯ
ಮುಖಲಕ್ಷಣ ಹೊಂದಿರುವ
ಗಿಡದ ಸರ್ವ ಜೀವಾಳ
ತಾಯಿಬೇರು ಈರುಳ್ಳಿ
ಬಳ್ಳಿಯಲ್ಲಿ ಹುಟ್ಟಿರುವ
ಬೂದುಗುಂಬಳಕಿಂತಲೂ
ಉತ್ತಮೋತ್ತಮನೆಂದು
ತಿಳಿಯಹೇಳಿದ.
ಬ್ರಹ್ಮನನ್ನು ನಿಂದಿಸುತ
ಕ್ರೋದದಿಂದ ಕುಂಬಳನು
ವೈಕುಂಟಕೆ ಹೋಗುವಂತೆ
ಶಾಂತಿದೂತ ಈರುಳ್ಳಿಗೆ
ಆಗ್ರಹಿಸಿದನು
ಜಗದ ಹಿರಿಯ ಹರಿಯು ಕೂಡ
ಈರುಳ್ಳಿಯು ಸರಿಯೆನಲು
ಸೊಗಸಾದ ಕಾರಣವನು
ಕೊಡುತ ಹೇಳಿದ
ಈರುಳ್ಳಿಯ ದೇಹವನ್ನು
ಅಡ್ಡವಾಗಿ ಕತ್ತರಿಸಲು
ಸುದರ್ಶನ ಚಕ್ರವಿದೆ
ಉದ್ದವಾಗಿ ಕತ್ತರಿಸಲು
ಪಾಂಚಜನ್ಯ ಶಂಖವಿದೆ
ಜನ್ಮಾಂತರ ಕರ್ಮದಿಂದ
ಹೀಗಾಗಲು ಸಾಧ್ಯವೆಂದು
ಅಹಂಕಾರಿ ಕುಂಬಳಕೆ
ಸಲಹೆಯಿತ್ತನು
ಆಶೆಯೆಲ್ಲ ನೀರಾಗಲು
ವಿಧಿಯಿಲ್ಲದೆ ಕುಂಬಳನು
ಈರುಳ್ಳಿಯೆ ರಾಜನೆಂದು
ಬಲವಂತದಿ ಒಪ್ಪುತಿರಲು
ಸತ್ಭುದ್ಧಿಯ ಈರುಳ್ಳಿ
ಲಯಕರ್ತ ಶಿವನಲ್ಲಿ
ಕೇಳಲೆಂದು ಕೈಲಾಸಕೆ
ಹತ್ತಿ ಹೋದನು
ಉಮಾಮಹೇಶ್ವರನು
ಇವರ ನೋಡಿ ನಸುನಕ್ಕು
ಈರುಳ್ಳಿಯ ಎತ್ತಿಕೊಂಡು
ಕುಂಬಳದ ಮೇಲಿಡಲು
ಸಮಯಾಂತರದಲ್ಲಿ
ದಷ್ಟಪುಷ್ಟ ಕುಂಬಳನು
ಕೊಳೆತುಹೋದನು
ಲಯದ ಗುಣವ ಹೊಂದಿರುವ
ಈಶ್ವರಪ್ರಿಯ ಈರುಳ್ಳಿ
ಕಡಿಯುವವರ ಕಣ್ಣಲ್ಲಿ
ನೀರು ಬರಿಸೊ ಈರುಳ್ಳಿ
ತ್ರಿಮೂರ್ತಿಯ ಅಂಶವೆಂದು
ಹೆಸರು ಪಡೆದನು.

ಅಹೋರಾತ್ರ.