‘ಪ್ರತಿದಿನವೂ ಪ್ರೀತಿಸೋಣ’

‘ಪ್ರತಿದಿನವೂ ಪ್ರೀತಿಸೋಣ’

ಬರಹ

ಅವನು ಮಿರ ಮಿರ ಮಿಂಚುವ ಬಟ್ಟೆತೊಟ್ಟು ಓಡೋಡಿ ಬರುತ್ತಿದ್ದ. ಮುಖದಲ್ಲಿ ನಗುವಿನ ಚಿಲುಮೆ. ಆಕೆ ಕಾಲೆಳೆದುಕೊಂಡು, ತಲೆ ಬಗ್ಗಿಸಿಕೊಂಡು ವೇಗವಾಗಿ ನಡೆಯುತ್ತಿದ್ದಾಳೆ. ಅವನು ಅಕೆಗೆ ಪ್ರಪೋಸ್‌ ಮಾಡಿದ್ದ. ಅಂದು ಫೆಭ್ರವರಿ ೧೪ !

ಕಳೆದ ವರ್ಷ ಫೆಭ್ರವರಿ ೧೪ರಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ಗೆ ಹೋಗಿದ್ದಾಗ ಕಂಡ ದೃಶ್ಯವಿದು. ಅಲ್ಲೆಲ್ಲ ಕಾಲೇಜು ವಿದ್ಯಾರ್ಥಿನಿಯರ ಗುಂಪು. ಜೋಡಿಗಳಾಗಿ ಸುತ್ತಾಡಿ ಅನಂದವಾಗಿರುವವರು ಒಂದು ಕಡೆ. ನಾವೇನು ಕಡಿಮೆಯೆಂಬಂತೆ ಗುಂಪು ಗುಂಪಾಗಿ ಅಲೆದಾಡುವವರು ಇನ್ನೊಂದೆಡೆ. ಇಂತಹ ಗುಂಪಿನ ಹಿಂದೆ ನಮ್ಮ ಪಯಣ ಸಾಗಿತ್ತು.

ಅವರನ್ನೆಲ್ಲಾ ನೋಡುತ್ತಾ ನೋಡುತ್ತಾ ಪ್ರಶ್ನೆಗಳು ಮನದಲ್ಲಿ ಪುಟಿದೇಳಲಾರಂಭಿಸಿದವು. ಹರೆಯದ ಆರಂಭದ ದಿನಗಳಲ್ಲೇ ಇಂತಹ ಅಡ್ಡದಾರಿ ಸರಿಯೇ ಎಂದು ಒಬ್ಬ ಮಿತ್ರ ಕೇಳಿದ. ಅದಕ್ಕೆ ಒಬ್ಬ ಸರಿಯೆಂದರೆ ಇನ್ನೊಬ್ಬ ತಪ್ಪು ಎನ್ನುತ್ತಾ ವಾದಕ್ಕೆ ತೊಡಗಿದೆವು. ಇತ್ತೀಚಿನ ಚಲನಚಿತ್ರಗಳು, ಪ್ರಕೃತಿ ನಿಯಮ, ನಮ್ಮಲ್ಲಿನ ವಿಕೃತ ಮನಸ್ಸು ಹಾಗೂ ಮಾಧ್ಯಮ ಇದಕ್ಕೆ ಪೂರಕವೆನ್ನೋದು ಅವನ ವಾದವಾಗಿತ್ತು.

ಇಂದಿನ ಜಾಗತೀಕರಣ, ಆಧುನೀಕರಣ ಹಾಗೂ ನಗರೀಕರಣ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುದು ಒಪ್ಪಬಹುದೇನೋ ? ಸಂಸ್ಕೃತಿ ಪಾಶ್ಚಾತ್ಯೀಕರಣಗೊಂಡಿದೆ. ಪಾಶ್ಚಿಮಾತ್ಯರ ಈ ಅನುಕರಣೆ ನಮ್ಮ ಸ್ವಾವಲಂಬಿ ಬದುಕನ್ನು ಕಸಿದು ಪರಾವಲಂಬಿಗಳ ಸ್ಥಾನಕ್ಕೆ ದೂಡಿದೆ. ನಮ್ಮತನವನ್ನು ಕಳೆದುಕೊಂಡು ಬೆತ್ತಲಾಗಿದ್ದೇವೆ. ನಮ್ಮ ಸುಂದರವಾದ ಆಚರಣೆ, ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ. ಒಮ್ಮೆ ಹಾಗೆ ಸುಮ್ಮನೆ.. ಯೋಚಿಸಿ ನೋಡಿ, ಶಿಕ್ಷಣ ಪಡೆದಿರುವ ನಾವು ಅವಿವೇಕಿಗಳಾಗಿ ವರ್ತಿಸಲಾರಂಭಿದ್ದೇವೆ.

ಇಂದಿಗೂ ಹಳ್ಳಿಗಳಲ್ಲಿನ ಕುಟುಂಬಗಳಲ್ಲಿ ನಾವು ಸಹೃದಯತೆ ಕಾಣಬಹುದು. ನಗರ ವಾಸಿಗಳಿಗೆ ಪ್ರೇಮಿಗಳಿಗಾಗಿ ಒಂದು ದಿನ, ಸ್ನೇಹಿತರಿಗಾಗಿ ಮತ್ತೊಂದು ದಿನ, ಅಪ್ಪಂದಿರಿಗಾಗಿ ಮಗದೊಂದು ದಿನ - ಹೀಗೆ ಪ್ರತಿಯೊಂದಕ್ಕೂ ಒಂದೊಂದು ದಿನಾಚರಣೆ. ಇದೆಲ್ಲಾ ಹಿಂದೆ ಇತ್ತೆ ? ಆದರೆ, ಇದ್ಯಾವುದರ ಅರಿವೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಇರುವ ಹಳ್ಳಿ ಜನತೆಗೆ ಪ್ರತಿದಿನ ಪ್ರೀತಿಯ, ಸ್ನೇಹಮಯ ದಿನವಾಗಿರುತ್ತದೆ.

ಇಂದು ಆತ್ಮವಂಚಕರಾಗಿ ಪರಸಂಸ್ಕೃತಿಯನ್ನು ನೀರೆರದು ಪೋಷಿಸುತ್ತಿರುವ ನಾವುಗಳು ಸಮಯ ಸಾಧಕರಲ್ಲವೇ.. ? ಅಥವಾ ಹುಚ್ಚುತನದ ಪರಮಾವಧಿ ಅನ್ನಿ. ಇಲ್ಲ ಸ್ವಹಿತಾಸಕ್ತಿಯ ಮೇಲಾಟವಲ್ಲವೇ ? ಯುಗಾದಿಯನ್ನು ಹೊಸವರ್ಷವಾಗಿ ಆಚರಿಸುತ್ತಿದ್ದ ನಮ್ಮ ಪೂರ್ವಿಕರು ಮಾಡಿದ ತಪ್ಪಾದ್ರೂ ಏನು. ಈ ಫೆಭ್ರವರಿ ೧೪ ನಮ್ಮ ಆಚರಣೆಗಳಿಗೆ ತಿಲಾಂಜಲಿ ಇಡುವ ಸೂಚನೆ ಇದ್ದಿರಬಹುದಲ್ವಾ ? ಪ್ರೇಮಿಗಳ ದಿನಾಚರಣೆ ಯಾವ ರೀತಿಯಲ್ಲಾದ್ರೂ ನಮ್ಮತನ ಉಳಿಸುವಲ್ಲಿ ಪಾತ್ರವಹಿಸಿಲ್ಲ. ಇಂತಹ ದಿನಕ್ಕೆ ಅನೇಕ ದಿನ ಕಾದು ನಾವೇನು ಸಾಧಿಸಿದ್ದೇವೆಂದರೆ ಹುಡುಕಲು ಮುಂದಾದರೆ ಅದು ನಮ್ಮ ಮುಠಾಳತನ.

ವಿದ್ಯಾವಂತರಾದ ನಾವು ಇದರಲ್ಲಿ ಪಾಲ್ಗೊಳ್ಳುತ್ತಿರೋದು ವಿಪರ್ಯಾಸ ಹಾಗೂ ವಿಷಾದ ಕೂಡ. ಇಷ್ಟಪಟ್ಟ ಹುಡುಗಿಯೆಂದು ಕೆಂಪು ಗುಲಾಬಿ ನೀಡುವುದಾಗಲಿ, ನಿರ್ದಿಷ್ಟ ಬಣ್ಣದ ಬಟ್ಟೆ ತೊಟ್ಟು ಖುಷಿಪಡುವುದು ಎಷ್ಟು ಸರಿಯೋ ! ಗುಲಾಬಿ ಪುರಸ್ಕರಿಸಿದರೆ ಉಬ್ಬುವುದಾಗಲೀ, ತಿರಸ್ಕರಿಸಿದಾಗ ಕುಗ್ಗುವುದು ಸಲ್ಲ. ಮನದನ್ನೆ ಎನ್ನುವ ಹುಡುಗಿ ನಿರಾಕರಿಸಿದಾಗ ಶತ್ರುವಾಗಿ ವರ್ತಿಸುವುದು ಹುಚ್ಚುತನ.

ನಿರ್ಮಲ ಮನಸ್ಸಿನಿಂದ ಜೀವನ ಸಂಗಾತಿಯಾಗಿ ಒಪ್ಪಿಕೊಳ್ಳುವವರು ತೀರಾ ಕಡಿಮೆ. ಅಲ್ಪ ಮನುಷ್ಯರಾಗುವುದಕ್ಕಿಂತ ಕುರುಡು ಆಚರಣೆಗಳನ್ನು ವರ್ಜಿಸುವುದು ಸರಿಯಲ್ಲವೇ ? ನಮಗೆ ಉಪಯುಕ್ತವೆನಿಸಿದ ಸರಿಯಾದ ರೂಢಿಗಳನ್ನು ಪಾಲಿಸಿ ಭಾರತೀಯರಾಗೋಣ.. (ಶ್ರೀರಾಮ ಸೇನೆಯವರಲ್ಲ)

ನಮ್ಮನ್ನು, ನಮ್ಮವರನ್ನು ಇಡೀ ಮನುಷ್ಯ ಜಾತಿಯನ್ನೂ, ಸಕಲ ಜೀವಿಗಳನ್ನು ಪ್ರತಿದಿನ ಜೀವಿಸೋಣ. ಅದಕ್ಕೆಂದೇ ಸೀಮಿತವಾದ ದಿನ, ಅದರ ಪರಿಧಿ ಎಂದು ಅಪರಿಮಿತವಾಗಿ ವರ್ತಿಸಲು ಅನುವು ಮಾಡಿಕೊಡುವ ದಿನ ನಮಗೆ ಬೇಡ ಅಲ್ಲವೇ ?

- ಬಾಲರಾಜ್‌. ಡಿ.ಕೆ