ಮತಾಂತರ ..... ಮತ್ತು ಯಕ್ಷಗಾನ ಸೇವೆ ಆಟ.... ...

ಮತಾಂತರ ..... ಮತ್ತು ಯಕ್ಷಗಾನ ಸೇವೆ ಆಟ.... ...

ಬರಹ

ಕೆಲವೇ ತಿಂಗಳ ಹಿಂದೆ ಪ್ರಸಿದ್ದ ದಿನ ಪತ್ರಿಕೆಯೊಂದು ಭೈರಪ್ಪನವರ ವಿಚಾರಧಾರೆಯೊಂದಿಗೆ " ಮತಾಂತರ " ಕುರಿತ ಚರ್ಚೆಯನ್ನು ನಡೆಸಿತ್ತು .
ಸಾಕಷ್ಟು ಹಿಗ್ಗಾಮುಗ್ಗಾ ಎಳೆದಾಡಿ ತಮ್ಮ ಅದ್ಬುತ ವಿಷಯ ಮಂಡನೆಯಿಂದ ಚುರುಕು ಮುಟ್ಟಿಸಿದ ಎಲ್ಲ ಬರಹಗಾರರೂ ತಮಗೆ ತೋಚಿದಂತೆ ಅಪ್ಪಣೆ ಕೊಡಿಸಿದರು.
ಕೆಲವರಂತೂ ಚರ್ಚೆ ಆರಂಭಿಸಿದವರನ್ನು ಟೀಕಿಸಿ ಸಂತ್ರುಪ್ತಿಪಟ್ಟರು!

ಕುತೂಹಲದಿಂದ ದಿನವೂ ಬಿಡದೆ ಓದುತ್ತಿದ್ದ ನನಗೆ ಇತ್ತೀಚೆಗೆ ಕೌತುಕವಾದ ವಿಚಾರವೊಂದು ನನ್ನ ಕಲಾವಿದ ಮಿತ್ರರೊಬ್ಬರಿಂದ ತಿಳಿದು ಬಂತು .
ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಮೊನ್ನೆ ಫೆಬ್ರವರಿ ಎರಡನೇ ತಾರೀಖಿನಂದು ಮಂಗಳೂರಿನ ಬಳಿ ಬಜಪೆಗೆ ಸಮೀಪ ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಆಡಿಸಿದರು.
ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಒಂದನೇ ಮೇಳದವರು ಆಡಿ ತೋರಿಸಿದರು. ಈ ಸೇವೆ ಆಟ ಆಡಿಸಲು ಕಾರಣ ಪರಿಹಾರವಾಗದೆ ಇದ್ದ ವ್ಯಾಜ್ಯವೊಂದು ಕಟೀಲು ಮಹಾತಾಯಿ ಪರಿಹರಿಸಿ ಕೊಟ್ಟದ್ದೇ ಆಗಿತ್ತು.
ಮಂಗಳೂರಿನ ಪರಿಸರದಲ್ಲಿ ಆಗಾಗ ಇಂಥ ಸಾಮರಸ್ಯದ ಘಟನೆಗಳು ನಡೆಯುತ್ತಲೇ ಇದ್ದರೂ ಯಾವ ಒಬ್ಬ ಮಾಧ್ಯಮದವರೂ ಇದನ್ನು ತೋರಿಸದೇ ಬರೀ "ಹೊಡಿ ಮಗಾ.. ಹೊಡಿ " ದೃಶ್ಯಗಳನ್ನು
ಮಾತ್ರ ವೈಭವೀಕರಿಸಿ ಯಾಕೆ ತೋರಿಸುತ್ತಾರೋ ? ಇನ್ನೂ ಅರ್ಥವಾಗದ ವಿಷಯ !

ಅನೇಕ ಹಿಂದೂ ಭಕ್ತರೂ ಚರ್ಚಗಳಿಗೆ ಹರಕೆ ,ಬೆಳೆ ಕಾಣಿಕೆ ಮತ್ತು ಹಸಿರುವಾಣಿ ಸಲ್ಲಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಹಸಿರುವಾಣಿ ಮೆರವಣಿಗೆಯಲ್ಲಿ "ಜೈ" ಕಾರ ಹಾಕುತ್ತ ಭಾಗವಹಿಸಿದ್ದೇನೆ.
ನಮ್ಮಲ್ಲಿ ಸಾಮರಸ್ಯ ಮೂಡಿಸುವುದಕ್ಕಿಂತ "ಒಡಕನ್ನು " ತರುವ ಕೆಲಸಗಳು ಹೆಚ್ಚಾಗುತ್ತಿರುವುದು ವಿಷಾದನೀಯ .

ಏನೇ ಇದ್ದರೂ ಎಲ್ಲೇ ಇದ್ದರೂ ಎಲ್ಲರೂ ಒಟ್ಟಿಗೆ ಈ ಭೂಮಿಯಲ್ಲೇ ಬಾಳಿ ಬದುಕಬೇಕೆಂಬ ಸಣ್ಣ ಸತ್ಯ ಯಾರ ಮನದಲ್ಲೂ ಮೂಡದೆ "ಬಿಸಿ ಬಿಸಿ " ಸುದ್ದಿ ಕೊಡುವುದೇ ನಮ್ಮ ಧ್ಯೇಯ ಎಂದು ವರ್ತಿಸುವುದು ಖಂಡನೀಯ .
ನಿಮಗೇನನಿಸುತ್ತದೆ ?