ಹೀಗೊಂದು ದಂತಕಥೆ

ಹೀಗೊಂದು ದಂತಕಥೆ

ಬರಹ

ಗೋಕರ್ಣದ ಹತ್ತಿರ ಇರೋ ಭಾವನ ಊರು ಬಂಕಿಕೊಡ್ಲಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ನಡೆದ ’ಸತ್ಯ ಘಟನೆ’ ಇದು!!!!
ಸಕುಟುಂಬ ಸಪರಿವಾರ ಸಮೇತ ಹೋಗಿ ಪೂಜೆ, ಹೋಮ - ಹವನ ಇವುಗಳಲ್ಲಿ ಭಾಗವಹಿಸಿ ರಾತ್ರಿ ಐರಾವತದಲ್ಲಿ ಬೆಂಗಳೂರಿಗೆ ವಾಪಸ್ ಬರ್ತಿದ್ವಿ.
ಸಕುಟುಂಬ ಅಂದ್ಮೇಲೆ ನಮ್ಮಜ್ಜಿ ಕೂಡ ಜೊತೆಗಿದ್ದರು, ಅಜ್ಜಿ ಜೀವನದಲ್ಲಿ ಬಹಳಷ್ಟು ನೊಂದು ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು; ಚಿಮ್ಮುವಂತಹ ಜೀವನ ಪ್ರೀತಿ ಮತ್ತು ಜೀವನೋತ್ಸಾಹ ಹೊಂದಿರೋವ್ರು. ವಯಸ್ಸಾದ ಇವ್ರಿಗೆ ಈಗ ಕಾಣೋದು ಒಂದೇ ಕಣ್ಣು ಅದೂ ಮಸುಕು-ಮಸುಕಾಗಿ, ಕೇಳೋದು ಒಂದೇ ಕಿವಿ ಅದೂ ಅಲ್ವ ಸ್ವಲ್ಪ. ಇವರ ಜೀವನೋತ್ಸಾಹ ಎಷ್ಟರಮಟ್ಟಿಗೆ ಅಂದರೆ ನಮ್ಮಂಥಾ ದೈಹಿಕವಾಗಿ, ಮಾನಸಿಕವಾಗಿ ತೊಸಕಲು ಆಗಿರುವವರಿಗೆಲ್ಲ ಮಾದರಿ ಆಗೋಷ್ಟು. ನಾವೆಲ್ಲಾ ಎಲ್ಲಿಗಾದರೂ ಊರಿಗೆ ಹೊರತರೆ ಅವರೂ ಎವರ್ ರೆಡಿ. ಕೈಲಾಗದ (ನಮ್ಮ ಪ್ರಕಾರ) ಇವರು ಯಾಕಪ್ಪ ಒಪ್ಪಿಕೋತಾರೆ ಅಂತ ಬಹಳಷ್ಟು ಬಾರಿ ಕಿರಿ ಕಿರಿ ಆದರೂ, ಕರೆದೊಯ್ಯುವುದನ್ನ ನಾವೂ ಬಿಟ್ಟಿಲ್ಲ, ಅವರೂ ಬರೋಲ್ಲ ಅಂದಿಲ್ಲ.
ಹೀಗೆ ನಮ್ಮ ಜೊತೆ ಬರೋ ಅಜ್ಜಿ, ಎಷ್ಟೇ ಒಳ್ಳೇ ಬ್ಯಾಗ್, ಸೂಟ್ ಕೇಸ್ ಇದ್ರೂ ತಮ್ಮ ಬಟ್ಟೆ ಬರೆ ತುರುಕಿಕೊಳ್ಳೋದು ಮಾತ್ರ ಒಂದು ಪ್ಲಾಸ್ಟಿಕ್ ಕವರ್ ಅಥವಾ ಕ್ಲೋಸ್ ಮಾಡಲಾಗದ ವಿಚಿತ್ರ ಚೀಲಗಳಲ್ಲೇ!!

ಆವತ್ತು ರಾತ್ರಿ ಹೀಗೆ ಗೋಕರ್ಣದಿಂದ ಹಿಂದಿರುಗುತ್ತಿದ್ದಾಗ, ಅಂಥದ್ದೇ ಒಂದು ಕರ ಪರ ಶಬ್ದ ಮಾಡುವ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ತಮ್ಮ ದಂತಮಾಲೆ (ಡೆಂಚರ್ಸ್) ಒಂದು ಡಬ್ಬದಲ್ಲಿ ಹಾಕಿಟ್ಟಿದ್ದರು. ಅಂಥಾ ಘಾಟ್ ಸೆಕ್ಷನ್ ನಲ್ಲಿ ಬಸ್ಸಿನ ಆ ಕುಲುಕಾಟಕ್ಕೆ ಪ್ಲಾಸ್ಟಿಕ್ ಕವರ್ ಉರುಳಿ, ಡಬ್ಬಿ ಬಿದ್ದು, ಮುಚ್ಚಳ ಓಪನ್ ಆಗಿ, ಅಜ್ಜಿಯ ಹಲ್ಲಿನ ಸೆಟ್ ಕೆಳಗೆ ಬಿದ್ದೇ ಹೋಯಿತು. ಅಷ್ಟರಲ್ಲಿ ನಮ್ಮ ಗ್ರೇಟ್ ಅಜ್ಜಿ ಬೇಗ ಬೇಗ ಒಂದು ದಂತಮಾಲೆ ಪತ್ತೆ ಹಚ್ಚಿ ತೆಗೆದಿಟ್ಟುಕೊಂಡರೂ, ಇನ್ನೊಂದು ಮಾತ್ರ ಅವರ ಕೈಗೆ ಸಿಗದೆ ಎಲ್ಲಿಗೋ ಸರಿದು ನಾಪತ್ತೆಯಾಯಿತು. ಮನೆಯವರೆಲ್ಲರೂ ಬಹುಶ: ಮಲಗಿದ್ದರೋ ಅಥವಾ ಯರಿಗೂ ಬಸ್ಸಿನ ಶಬ್ದದ ಮಧ್ಯೆ ಕೇಳಿಸಲಿಲ್ಲವೋ ಗೊತ್ತಿಲ್ಲ. ಕಾಲ ಮೇಲೆ ಮಗಳು ಮಲಗಿದ್ದರಿಂದ extra carefull ಆಗಿದ್ದ ನನಗೆ ಸರಿಯಾಗಿ ನಿದ್ದೆ ಬಿದ್ದಿರಲಿಲ್ಲ, ಹಿಂದಿನ ಸೀಟ್ ನಲ್ಲಿದ್ದ ಅಜ್ಜಿಯ ಕವರ್ ಅಷ್ಟು ಹೊತ್ತು ನಿಲ್ಲದೇ ಶಬ್ದ ಮಾಡಿದಾಗ ಎದ್ದು ಕೇಳಿದರೆ, ಅಜ್ಜಿ ಆಗಿದ್ದೆಲ್ಲಾ ವಿವರಿಸಿ, ತಮ್ಮ ಹಲ್ಲನ್ನು ಕವರ್ ನಲ್ಲಿ ಹುಡುಕುತ್ತಿರುವುದಾಗಿ ಹೇಳಿದರು. ಒಳ್ಳೇ ಬ್ಯಾಗ್ ತನ್ನಿ ಅಂತ ಹೊಡ್ಕೊಂಡ್ರೂ ಕೇಳಲ್ಲ ನೀವು ಅಂತ ಅವರ ಮೇಲಿಷ್ಟು ರೇಗಿ, ಬಸ್ಸಿನ ನೆಲದ ಮೇಲೆ ಆ ಕತ್ತಲಲ್ಲಿ , ಕೈಯ್ಯಲ್ಲೇ ತಡಕಾಡತೊಡಗಿದೆ. ಘಟ್ಟ ಪ್ರದೇಶದ ಮೇಲಿದ್ದ ಬಸ್ ಬೇರೆ ನಿಲ್ಲಲೂ ಅಸಾಧ್ಯವಾಗುವಂತೆ ಪೂರಾ ಕುಡಿದವರಂತೆ ತೂರಾಡುತಿತ್ತು. ನಮ್ಮನ್ನೂ ತೂರಾಡಿಸುತಿತ್ತು. ನಮ್ಮ ಸೀಟ್ನ ಆಸುಪಾಸಿನ ಅವರಿವರ ಬ್ಯಾಗ್ ಗಳ ಕೆಳಗೆ ಕೈ ತೂರಿಸಿ ಎಷ್ತು ಹುಡುಕಿದರೂ ಹಲ್ಲು ಮಾತ್ರ ನಾಪತ್ತೆ.
ಅಲ್ಲೇ ಪಕ್ಕದ ಸಿಂಗಲ್ ಸೀಟ್ ನ ಕೆಳಗೆ ದೊಡ್ಡ ದೊಡ್ಡ ಕಬ್ಬಿಣದ ಜಂತೆಯಂಥದ್ದೇನೋ ಕಂಬಗಳನ್ನು ಕೆ.ಎಸ್.ಆರ್.ಟಿ.ಸಿ ಯವರು ಇಟ್ಟಿದ್ದರು, ಅದರ ಅಡಿಗೇನಾದರೂ ಹಲ್ಲು ನುಸುಳಿರಬಹುದೇನೋ ಅಂತ ಅನುಮಾನ ಬಂತು. ಆ ಕತ್ತಲಲ್ಲಿ ಟಾರ್ಚ್ ಕೂಡಾ ಇಲ್ಲದೇ ಎಲ್ಲೀಂತ ಹುಡುಕೋದು? ಪ್ರಯಾಣಕ್ಕೆ ಹೊರಡ್ವಾಗ ಟಾರ್ಚ್ ಮುಂತಾದ ವಸ್ತುಗಳು ಬಹಳ ಅಗತ್ಯ, ಅವನ್ನೆಲ್ಲ ತರದ ನನ್ನನ್ನು ನಾನೇ ಇಷ್ಟು ಶಪಿಸಿಕೊಂಡು ಮತ್ತೆ ಹುಡುಕಿದೆ, ಆದರೂ ಸಿಗಲೇ ಇಲ್ಲ ಆ ಪಾಕಡ ಹಲ್ಲುಗಳು. ಕಬ್ಬಿಣದ ಆ ಕಂಬಗಳ ಕೆಳಗೇ ಹೋಗಿರಬೇಕು ಅನ್ನಿಸಿದರೂ ಅವನ್ನು ಜರುಗಿಸುವುದು ನನ್ನಿಂದ ಅಸಾಧ್ಯವಾಗಿತ್ತು. ಅಜ್ಜೀದು ಭಾಳ ಪಾಪ ಅನ್ನಿಸಿ, ಮನೆಯವ್ರನ್ನ ಎಬ್ಬಿಸಿ ಹುಡುಕೋಕ್ಕೆ ಸಹಾಯ ಕೋರಿದೆ, ಸರಿ ರಾತ್ರಿ ೨-೩ ಆಗಿದ್ದ ಆ ಸಮಯದಲ್ಲಿ, ಗೊಣಗಿಕೊಂಡ್ರೂ ಅವರೂ ಎದ್ದು ಬಂದರು ಹುಡುಕಲು, ಆದರೆ ಆ ಪ್ರಯತ್ನವೂ ನಿಷ್ಫಲ. ಅಷ್ಟರಲ್ಲೇ ಮಗಳು ಮಿಸುಕಾಡತೊಡಗಿದ್ದರಿಂದ, ಇವಳು ಎದ್ದರೆ ಇನ್ನೂ ರಂಪವಾದೀತೆಂದು, ವಿಧಿಯಿಲ್ಲದೇ ಸೀಟಿಗೆ ಬಂದು ಕುಳಿತೆವು.
ಅಷ್ಟರಲ್ಲಾಗಲೇ ನಿದ್ದೆ ಹಾರಿಹೋಗಿತ್ತು, ಬಸ್ ಆಕಡೆ, ಈಕಡೆ ತೊನೆದಾಡುವಾಗ, ಹಲ್ಲು ಮತ್ತೆ ಸರಿದು ಬರಲೂ ಬಹುದು ಎಂದು ನನ್ನ ಕಣ್ಣು, ಮನಸ್ಸು ಜಾಗೃತವಾಗಿ ಗಮನಿಸುತ್ತಲೇ ಇತ್ತು, ಅದೂ ಕೂಡ ನಿಷ್ಪ್ರಯೋಜಕ. ಮನೆಯವರು ಇನ್ನು ಅದು ಸಿಗಲ್ಲ, ಅಜ್ಜಿಗೆ ಹೊಸ ಹಲ್ಲಿನ ಯೋಗ ಬಂದಿರಬೇಕು ಬಿಡು ಅಂದರು. ಯಾರಿಗೆ ಸಿಗತ್ತೋ ಆ ಹಲ್ಲು ನೋಡಿ ಹೆದರದೇ ಇದ್ದರೆ ಅವರ ಪುಣ್ಯ ಅಂತ ಬೇರೆ ಒಗ್ಗರಣೆ ಹಾಕಿದ್ರು. ನನಗೆ ಬುದ್ದಿ ಬಂದಾಗಿನಿಂದ (ಅದು ಬೇರೆ ಬಂದಿದೆಯಾ ಅಂತ ಕೇಳಬೇಡಿ) ಅಜ್ಜಿ ಉಪಯೋಗಿಸುತ್ತಿದ್ದ ಆ ಹಲ್ಲುಗಳು ನಾಪತ್ತೆಯಾದವಲ್ಲ ಅಂತ ನಾನು ’ಹಲ್ಲು’ಬುತ್ತಿದ್ದೆ. ಬಸ್ ಖಾಲಿ ಆಗೋವರೆಗೂ ಹಲ್ಲನ್ನ ಸರಿಯಾಗಿ ಹುಡುಕೋಕ್ಕೆ ಆಗಲ್ಲ ಅಂತ ಖಾತ್ರಿ ಆಯ್ತು.
ಇದೇ ಆತಂಕದಲ್ಲಿ ಬೆಳಗೂ ಹರಿಯಿತು, ನಾವಿಳಿಯುವುದು ನವರಂಗ್ ಬಳಿ, ಬಸ್ ಖಾಲಿಯಾಗೋದು ಮೆಜೆಸ್ಟಿಕ್ ನಲ್ಲೇ, ಅದಕ್ಕೇ ಮನೆಯವ್ರನ್ನ ಮೆಜೆಸ್ಟಿಕ್ನಲ್ಲೇ ನಾವೂ ಇಳಿಯುವ, ಹಲ್ಲು ಹುಡುಕುವ ಅಂತ ಒಪ್ಪಿಸೋ ವ್ಯರ್ಥ ಪ್ರಯತ್ನ ಮಾಡಿದೆ, ಆದರೆ ನಮಗೆಲ್ಲರಿಗೂ ಕಛೇರಿಗೆ ಹೊರಡೋ ಧಾವಂತ ಇರೋದ್ರಿಂದ ಅದು ಅಸಾಧ್ಯ ಅಂತ ಅರಿವಾಯಿತು.
ಹೊಸಾ ಹಲ್ಲು (ofcourse artificial) ಬರಕ್ಕೆ order ಕೊಟ್ಮೇಲೆ ಕಡಿಮೆ ಅಂದ್ರೆ ೧ ವಾರ ಆದ್ರೂ ಹಿಡಿಯತ್ತೆ, ಅಲ್ಲೀವರೆಗೂ ಅಜ್ಜಿ ಊಟ ತಿಂಡಿ ಹೇಗೆ ಮಾದ್ತಾರೋ, ಮನೆಯವ್ರೆಲ್ಲ ಖಂಡಿತ ಅವ್ರನ್ನ ತರಾಟೆಗೆ ತೊಗೋತಾರೆ ಕವರ್ ತಂದಿದ್ದಕ್ಕೆ. ಇರಲಿ ಇನ್ಮೇಲಾದ್ರೂ ಅಜ್ಜಿ ಹೀಗೆ ಕೆಟ್ಟ ಕೆಟ್ಟ ಬ್ಯಾಗ್ ತರೋದು ನಿಲ್ಲಿಸ್ತಾರೆ ಅಂತ ಮನಸ್ಸಲ್ಲೇ ಗುಣಾಕಾರ-ಭಾಗಾಕಾರ ಹಾಕ್ತಿದ್ದೆ. ಅಷ್ಟರಲ್ಲೇ ನವರಂಗ್ ಬಂತು, ನಮ್ಮ ದೊಡ್ಡ ತಂಡ ಇಳಿಯಿತು. ಇಳಿಯುವಾಗ್ಲೂ ಆಸೆಯಿಂದ ಬೆಳಕಿನಲ್ಲೊಮ್ಮೆ ಬಸ್ನಲ್ಲಿ ಹುಡುಕಿದೆ. ಹಿಂದೆ ಇಳಿಯಲು ಬರುತ್ತಿದ್ದ ಜನರಿಂದ ಉಗಿಸಿಕೊಂಡು-"ಬೇಗ ಇಳೀರಿ, ಬಸ್ ಇಲ್ಲಿ ತುಂಬಾ ಹೊತ್ತು ನಿಲ್ಸಲ್ಲ" ಅಂತ. ಇಳಿದ ತಕ್ಷಣ ಅಕ್ಕನ ಕಿವಿಗೆ ಹಲ್ಲು (ಕಳೆದ ವಿಷ್ಯ) ಹಾಕಿ, ಆಗಲೇ ಸಮಯ ಮೀರಿದ್ದರಿಂದ ದಡ ಬಡನೆ ಸಿಕ್ಕ ಆಟೋನಲ್ಲಿ ನಮ್ಮ ನಮ್ಮ ಮನೆ ತಲುಪಿದೆವು..... ಹಾಗೇ ಬೇಗ ಬೇಗ ಫ್ರೆಶ್ ಆಗೆ ಕಛೇರಿಯನ್ನೂ ತಲುಪಿದೆವು.
ರಾತ್ರಿ ನಿದ್ದೆ ರಹಿತ ಪ್ರಯಾಣದ ದಣಿವು ಜೊತೆಗೆ ಅಜ್ಜಿಯ ಹಲ್ಲಿನ ಚಿಂತೆಯಿಂದ ಮನಸ್ಸು ಹೆಚ್ಚೇ ದಣಿದಿತ್ತು. ಆಗಲೇ ಅಕ್ಕನ ಫೋನ್ ಕರೆ ಆಗಮಿಸಿತು........ ನೀನು ತಲೆ ಕೆಡಿಸಿಕೊಂಡಿದ್ದೆಲ್ಲಾ ವ್ಯರ್ಥ; ಅಜ್ಜಿಗೆ ನಿನ್ನೆ ರಾತ್ರಿನೇ ಹಲ್ಲು ಸಿಕ್ಕಿತಂತೆ, ನಿನಗೆ ನಿದ್ದೆ ಬಿದ್ದಿರಬಹುದು ಅಂತ ಎಬ್ಬಿಸಿ ಹೇಳಲಿಲ್ಲವಂತೆ, ಮತ್ತೆ ಡಬ್ಬಿಯಲ್ಲಿ ಆಗಲೇ ಜೋಪಾನವಾಗಿಟ್ಟುಕೊಂಡರಂತೆ. ನೀನು ಪಟ್ಟ ಕಷ್ಟ ಎಲ್ಲಾ ಹೇಳಿದೆ, ಅದಕ್ಕೆ sorry ಕೇಳ್ತಿದ್ದಾರೆ ಅಂದಳು. ನನಗಂತೂ ಆಗ ಮೈ ಪರಚಿಕೊಳ್ಳುವಂತಾಯ್ತು. ಸಂಜೆ ಮನೆಗೆ ಹೋದಾಗ ಅಜ್ಜಿ ಎಂದೂ ಇಲ್ಲದಂತೆ ತಮ್ಮ ಹಲ್ಲುಗಳನ್ನ ತೋರಿಸಿ ಫಳ ಫಳ ನಗು ನಗ್ತಿದ್ದಾರೆ ಅನ್ನಿಸಿ, ದಂತಮಾಲೆ ನನ್ನ ಅಣಕಿಸಿತಾ! ಅಂತ ಯೋಚಿಸಿದೆ.
ಈಗಲೂ ಮನೇಲಿ (ಅಜ್ಜಿ ಸಮೇತ) ಎಲ್ರೂ ಈ ದಂತಕತೆ ನೆನಪಿಸಿಕೊಂಡು ನಗ್ತಾರೆ; ಆದ್ರೆ ಖಂಡಿತಾ ಅಜ್ಜಿಯನ್ನ ಲೇವಡಿ/ಗೇಲಿ ಮಾಡಿ ಬರೆದದ್ದಲ್ಲ ಇದು... ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸಿ ಗೀಚಿದ್ದು ಈಗ ನಿಮ್ಮ ಮುಂದಿದೆ.