ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ
ಸೂಚನೆ:
ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನು ನೋಡಲು ಅನುಕೂಲವಾಗುತ್ತದೆ. ಆದ್ದರಿಂದ ಇಗೋ ಇಲ್ಲಿದೆ, ಅರ್ಧ ಬೆಂದ ಅಂತರಾಳದ ಮಾತುಗಳು.
ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ
"ಪರದೇಶಗಳ ಮೇಲಿನ ವೈರ ಸರಿ, ಆದರೆ ಶಾಂತಿಯುತ ದೇಶಪ್ರೇಮ, ಸ್ವಾವಲಂಬನೆ ಖಂಡನಾರ್ಹ"
ಜಾಗತಿಕ ಮಟ್ಟದಲ್ಲಿ ದೇಶಪ್ರೇಮ ಅಥವ nationalism ಅನ್ನು ತಿರುಚಿ ಅಪ್ರಗತಿಪರವೆಂಬ ಹೊಸ ಮುಖ ಕೊಡಲಾಗುತ್ತಿದೆ. ಮಾತೆತ್ತಿದರೆ ವಿಶ್ವಮಾನವ, global citizen ಎನ್ನುವ abstract ಪದಗಳು ನಮ್ಮ ಮುಖದ ಮೇಲೆರೆಚಲಾಗುತ್ತಿದೆ. ಭಾರತವೆಂದರೆ ಕೇವಲ ಅದರ ಸಾಂಸ್ಕೃತಿಕ ವಿವಿಧತೆ ಕೂಡಿಕೆ ಎಂದು ತಿಳಿದರೆ ಮಾತ್ರ ಈ identity ಸಾಧ್ಯ. ಭಾರತದಂತ ವೈವಿಧ್ಯಮಯ ದೇಶವನ್ನು ಒಂದಾಗಿ ಹಿಡಿದಿರುವುದೇ ಈ ರಾಷ್ಟ್ರೀಯತೆ. ನಮ್ಮನ್ನು ಸಾಂಸ್ಕೃತಿಕ ಅಭ್ಯಾಸಗಳ ಆಧಾರದಿಂದ ಒಡೆಯುವುದು ಬಹು ಸುಲಭ. ಹಿಂದಿ ಏಕೆ? ನಮ್ಮ ಒಡೆಯರ ಭಾಷೆಯಾದ ಇಂಗ್ಲೀಷಿಲ್ಲವೇ, ಭಾರತವೆಂಬ ದೇಶ ಐವತ್ತು ವರ್ಷಗಳ ಹಿಂದೆಲ್ಲಿತ್ತು ಹೀಗೆ ಕೆಲವು ಅಸಂಬದ್ಧ ಪ್ರಶ್ನೆಗಳನ್ನೆತ್ತಿದರೆ ಸಾಕು. ವಿಭಜನೆಯ ಬೀಜವನ್ನು ಮನಸ್ಸಿನಲ್ಲಿ ಬಿತ್ತಿದಂತೆಯೇ..
ಈ ವಿಚಾರದಲ್ಲಿ global gujju ಅಥವ ಜಾಗತಿಕ ತಮಿಳರು ಮೊದಲು ಎಂದು ದೇಶವನ್ನೊಡೆಯುವ ವಾದ ಮಾಡಾಬಹುದಾದರೂ ವಾಸ್ತವದಲ್ಲಿ ನಮ್ಮ ದೇಶದ ಮಿಕ್ಕಾವುದೇ ಜನಾಂಗವೂ ಹಿಂದೇನು ಬಿದ್ದಿಲ್ಲ. ಇಂದು 'ಕನ್ನಡಪ್ರೇಮಿ ಜಾಗತಿಕ ಪ್ರಜೆಗಳ ದೊಡ್ಡ ದಂಡೇ ಇದೆ. ಬರ್ತಾ ಬರ್ತ ಭಾರತೀಯರೂ ಇದನ್ನು ಒಪ್ಪಿಕೊಂಡಿರುವುದು ಕಂಡು ಬರುತ್ತದೆ. ಇವ ಭಾರತಕ್ಕೆ ಏನು ಮಾಡದಿದ್ದರೂ ಪರವಾಗಿಲ್ಲ. ಅಮೇರಿಕೆಗೆ ಹೋಗಿಯೂ ಕನ್ನಡ ಮರೆತಿಲ್ಲವಲ್ಲ; ಕನ್ನಡದಲ್ಲೇ ಬ್ಲಾಗ್ ಮಾಡ್ತಾನೆ, ಕನ್ನಡ ಯುವತಿಯೇ ಬೇಕಂತೆ ಪಾಪ, ಎನ್ನುವ ಹೊಗಳಿಕೆಯ ಮಾತುಗಳು ಹೆಚ್ಚಾಗುತ್ತಿವೆ. ಇಂದು ಕನ್ನಡಿಗನಾಗಿರುವುದಕ್ಕೆ ಮೊದಲು ಭಾರತೀಯನಾಗಿರಬೇಕೆಂಬ ನಿಯಮವಿಲ್ಲ. ರಾಷ್ಟ್ರೀಯತೆಗಿಂತ ನಮ್ಮ (pseudo?) ಸಂಸ್ಕೃತಿಯನ್ನು ಮಾರಾಟ ಮಾಡುವುದು ಸುಲಭ. ಇವನು ಅಮೇರಿಕದಲ್ಲಿದ್ದರೇನಂತೆ? ಅದಕ್ಕೂ ದೆಹಲಿಗೂ ಅಂತರವೇನು? ಅಲ್ಲೇ ಸಂಗೀತ ಕಲೀತಾನಂತೆ, ಅಲ್ಲಿಯೂ ಕೂಡ ಉದಯ ಟೀವಿ ಬರತ್ತಂತೆ, ಅವರ ಮನೆಯ ಹತ್ತಿರವೇ ದೋಸ ಕ್ಯಾಂಪ್ ಇದೆ ಅಂದರೆ ಸಾಕು ಮುಗಿದುಹೋಯಿತು. ಪರದೇಶಿ ಕನ್ನಡಿಗನಿಗೆ ತಾಯ್ನಾಡು ನೆನಪಾದಲ್ಲಿ ತಾಯ್ನಾಡಿನ ಸುಖವನ್ನೊದಗಿಸುವ ಐಷಾರಾಮುಗಳು ಸಿಕ್ಕರೆ ಮುಗಿಯಿತು, ಆ ಪ್ರಜೆಯ ಭಾರತೀಯತೆಯ ಪೂರೈಕೆಯಾಯಿತು, ಮಿಕ್ಕಂತೆ ಅವ ವಿಶ್ವಮಾನವನೇ.
'ದೇಶ' ಎಂಬ ಒಂದು ಯೋಚನೆಯನ್ನು ಒಡೆದರೆ ಏನೇನಾಗಬಹುದು ನೋಡಿ. ನಮ್ಮ ದೇಶದ ಸಾಮಾನು ಸರಂಜಾಮುಗಳನ್ನು ಕೊಳ್ಳಲೇಬೇಕಾಗಿಲ್ಲ. ನಮ್ಮ ದೇಶದಲ್ಲಿರಬೇಕಾಗಿಲ್ಲ, ದೇಶಕ್ಕಾಗಿ ಏನೂ ಮಾಡಬೇಕಿಲ್ಲ, ಆದರೂ ಬೇಕಾದಾಗ ಭಾರತೀಯತೆಯನ್ನು ನಮ್ಮ ಶಕ್ತ್ಯಾನುಸಾರ ಅನುಭವಿಸಬಹುದು. ಆಗ ನಮ್ಮ ದೇಶದ ಉನ್ನತಿಗಿಂತ ವೈಯುಕ್ತಿಕ ತೃಪ್ತಿ ಮುಖ್ಯವಾಗುತ್ತದೆ. 'ನನಗೆ ನಿಮ್ಮ ಪಾನಕ ಹಿಡಿಸುವುದಿಲ್ಲವಪ್ಪ, ನಾನು ಪರದೇಶೀ ಪಾನೀಯವನ್ನೇ ಕುಡಿಯುವುದು', ಅಲ್ಲಿನ ದನವನ್ನೇ ತಿನ್ನುವುದು, ಎಂದರಾಯಿತು. "ಒಂದು ಒಳ್ಳೆಯ product ಅನ್ನು ಅನುಭವಿಸುವ ಹಕ್ಕನ್ನೂ ಕೊಡದ ದೇಶಕ್ಕೋಸ್ಕರ ಇವನು ಯಾಕೆ ಹೊಡೆದಾಡಬೇಕು.. ತನ್ನ ಹೆಂಡತಿ ಮಕ್ಕಳನ್ನು ಸುಖವಾಗಿರುಸುವುದೇ ತಪ್ಪೇ ಹಾಗಾದರೆ" ಎಂದೆನ್ನುವ ವ್ಯಾಪಾರಿ ಇವನ ಹಿಂದೆಯೇ ವಾದ ಮಾಡುತ್ತಾನೆ. ರಾಷ್ಟ್ರೀಯತೆಯೆಂಬ ಒಂದು ಸಮಗ್ರ ವಿಚಾರವನ್ನು ವೈಯುಕ್ತಿಕ ಸ್ವಾತಂತ್ರ್ಯವೆಂಬ ಒಂದು ಸಣ್ಣ ಬೇಜವಾಬ್ದಾರಿ ಪದ ಹೇಗೆ ಸಮರ್ಪಕವಾಗಿ ಕೆಡುಹುತ್ತಿದೆ ನೋಡಿ. ಸ್ವಾವಲಂಬನೆ ಮತ್ತು ರಾಷ್ಟ್ರೀಯತೆ ಸಮ ಸಮವಲ್ಲ ನಿಜ. ಆದರೆ ಸ್ವಾವಲಂಬನೆ ದೇಶಪ್ರೇಮದ ಕನಿಷ್ಠ ಪ್ರಯೋಗ. ಇದೊಂದೇ ದೇಶವನ್ನು ಉದ್ಧಾರ ಮಾಡೀತು ಎನ್ನುವ ಸಂಕುಚಿತ ವಾದವಲ್ಲ ನನ್ನದು. ಆದರೆ ಸ್ವಾವಲಂಬನೆ ದೇಶಪ್ರೇಮಕ್ಕೆ ಅವಶ್ಯವಲ್ಲವೇ.
ಮನುಷ್ಯ ತಾನು ಭಾರತೀಯ ಅಥವ ಕನ್ನಡಿಗ ಎಂದಿನಿಸಿಕೊಳ್ಳಲು ಅವನು ಭೌತಿಕವಾಗಿ ಭಾರತದಲ್ಲಿರಲೇಬೇಕು. ಭಾರತೀಯತೆ ಎಂದರೆ ಜುಬ್ಬಾ ಪೈಜಾಮ ಹಾಕಿ ಅನಿವಾಸಿ ಭಾರತೀಯರೊಂದಿಗೆ ಪಾಟ್-ಲಕ್ ಮಾಡುವುದಲ್ಲ, ಅಥವ ಇಲ್ಲಿಂದ ತಿಂಗಳಿಗೈನೂರು ಡಾಲರ್ ಮನೆಗೆ ಕಳಿಸಿ ಕೈಕಟ್ಟಿ ಕೂರುವುದಲ್ಲ. ಭಾರತ ಎಂಬ 'ಹೊಸದೇಶ'ದ ಬಗ್ಗೆ ಹೆಮ್ಮೆಯಿದ್ದರೆ, ಭಾರತೀಯತೆಯನ್ನು ಆಹ್ಲಾದಿಸಿದಂತೆಯೇ ಅಲ್ಲಿಗೆ ವಾಪಾಸ್ಸಾಗಿ ಅದರ ಸೇವೆಯನ್ನೂ ಮಾಡಬೇಕು. ಭಾರತೀಯತೆಗೆ ಬೆಲೆ ಕಟ್ಟಲಾಗದು, ಕಟ್ಟಲೂಕೂಡದು.
ಎಂದು ಜಾಗತೀಕರಣದ ಪ್ರಗತಿಗೆ ರಾಷ್ಟ್ರೀಯತೆ ಕಂಟಕವೆಂದು ತೋರಿತೋ ಅಂದೇ ದೇಶವನ್ನು ಅದರ ಸಾಂಸ್ಕೃತಿಕ ಆಧಾರದ ಮೇಲೆ ಒಡೆಯಲಾರಂಭಿಸಲಾಗಿದೆ ಎಂದು ನನ್ನ ನಂಬಿಕೆ. ರಾಷ್ಟ್ರಗಳನ್ನು ಮತಗಳಾಧಾರದ ಮೇಲೆ ಒಡೆದಿರುವ ಪರಿಣಾಮವಿಂದು ನಮ್ಮ ಕಣ್ಮುಂದೆಯೇ ಇದೆ. ಇದೇನು ತಾನಾಗಿಯೇ ಆದದ್ದಲ್ಲ. ಇದರ ಹಿಂದೆ ಜಾಗತಿಕ ಮಾರುಕಟ್ಟೆಯನ್ನು ಕಬಳಿಸಲೆತ್ನಿಸಿದ ಹಲವು ಬಲಗಳ ಒಗ್ಗೂಡಿದ ಕೈಯಿದೆ. ವಂದನ ಶಿವ ತಮ್ಮ ಇತ್ತೀಚಿನ ಪುಸ್ತಕದಲ್ಲಿ (India divided) ಹೇಳಿದ್ದಾರೆ, ಗುಜರಾಥಿನ ನರಮೇಧಕ್ಕೂ ಜಾಗತೀಕರಣಕ್ಕೂ ಸಂಬಂಧವಿದೆ, ಜಾಗತೀಕರಣದ ಮೊದಲ ಸಾಂಸ್ಕೃತಿಕ ಹಾವಳಿ fundamentalism ಅಂತ.. ಇಂದಿನ ವಿಶ್ವಮಾನವರಿಗೆ ಇದು ಬಹಳ ಸಂಕುಚಿತ ನೋಟವೆನಿಸಬಹುದು. ಆದರೆ ಯೋಚಿಸಿದಷ್ಟೂ, ಇದೇನಂತಹ absurd ವಿಚಾರಧಾರೆಯೇನಲ್ಲ ಎಂದೆನಿಸುತ್ತಿದೆ.
ನಮ್ಮ ದೇಶ ಸ್ವರ್ಗವೆಂದು ನಾನೂ ಹೇಳುವುದಿಲ್ಲ. ದೇಶಪ್ರೇಮ, ರಾಷ್ಟ್ರೀಯತೆ ಪ್ರತಿಯೊಬ್ಬ ಪ್ರಜೆಯ ಮೇಲೆ ಹೆಚ್ಚಿನ ಜವಾಬ್ದಾರಿ ತರುತ್ತದೆ. ಆ ಜವಾಬ್ದಾರಿ ಕಠಿಣ. ಹಲವು ಹೊಸ ತೊಂದರೆಗಳನ್ನೆದುರಿಸಬೇಕಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ. ಇವೆಲ್ಲಕ್ಕಿಂತ ಸುಲಭ ದಾರಿ ಜಾಗತೀಕರಣ. ಕೈಯಲ್ಲಿ ದುಡ್ಡಿದ್ದರೆ, ತಲೆಯಲ್ಲಿ ಬುದ್ಧಿಯಿದ್ದರೆ ಅತ್ಯಂತ ಐಷಾರಾಮಿನ ಜೀವನವನ್ನು ಇಷ್ಟಬಂದಂತಹ ದೇಶದಲ್ಲಿ ಕಳೆಯಬಹುದು. ಆ ದೇಶದ ಚರಿತ್ರೆ, ಅಲ್ಲಿಯ ಜನತೆಯ ಬಗ್ಗೆ ಆಸಕ್ತಿ, ಆ ದೇಶಕ್ಕಾಗಿ ಪ್ರೇಮ.. ಇದ್ಯಾವುದೂ ಬೇಕಾಗಿಲ್ಲ.
ಆದರೆ ರಾಷ್ಟ್ರೀಯತೆ ಎಂತಹ ಸುಂದರ ವಿಚಾರ, ಮೈಜುಮ್ಮಿಸುವ ಸವಾಲದು. ದಿನಾ ಮನೆಯಲ್ಲಿ home theater ನಲ್ಲಿ american football ನೋಡುವುದರಲ್ಲಿ ತೃಪ್ತಿಯಿರಬಹುದು, ಹಾಗೆಯೆ ಭಾರತದ ಹೊಲಸು ರಾಜಕೀಯವನ್ನು ಪ್ರತಿನಿತ್ಯ ಎದುರಿಸುವುದೂ ಆಹ್ಲಾದಕಾರಿಯೇನಲ್ಲ.. ಆದರೆ ದಿನದಂತ್ಯದಲ್ಲಿ, ಜೀವನದ ಸಂಜೆಯಲ್ಲಿ ಜೀವದ ಆಗುಹೋಗುಗಳನ್ನು ಮೆಲುಕು ಹಾಕಿ.. ನೆಮ್ಮದಿಯ ನಿಟ್ಟುಸಿರು ಬಿಡಲಾಗುವುದು ಸಮಾಜದ ಸೇವೆಯ ಕಾರ್ಯಗಳಿಗೆ ಮಾತ್ರ. ಜೀವನದಲ್ಲಿ ಎಲ್ಲರಿಗೂ ಗೊಂದಲವಿರುತ್ತದೆ ನಿಜ. ಆದರೆ ಈ ಗೊಂದಲಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯತೆ ಮಿಕ್ಕೆಲ್ಲ ಭಾವಗಳಿಗಿಂತ ಮುಂದೆ.