ನೀರ ನಿಶ್ಚಿಂತೆಗೆ ಟ್ವಿಟರ್‌ಗಳ ಸಮ್ಮೇಳನ

ನೀರ ನಿಶ್ಚಿಂತೆಗೆ ಟ್ವಿಟರ್‌ಗಳ ಸಮ್ಮೇಳನ

ಬರಹ

ಟ್ವಿಟರ್ ಎನ್ನುವುದು ಮೈಕ್ರೋಬ್ಲಾಗಿಂಗ್ ಸೇವೆ. ಬ್ಲಾಗ್ ಬರವಣಿಗೆಯನ್ನು ನೂರ ನಲುವತ್ತು ಅಕ್ಷರಗಳಲ್ಲಿ ಸೀಮಿತಗೊಳಿಸಿ,ಅದನ್ನು ಟೆಲಿಗ್ರಾಫಿಕ್ಸ್ ಭಾಷೆಯಲ್ಲಿ ಬರೆಯಲು ಉತ್ತೇಜಿಸುವುದೇ ಟ್ವಿಟರ್ ವೈಷಿಷ್ಟ್ಯ. ಪುಟಗಟ್ಟಲೆ ಬರೆಯಲು ಪುರುಸೊತ್ತು ಇಲ್ಲದವರಿಗೆ ಮತ್ತು ಹಾಗೆ ಬರೆದುದ್ದನ್ನು ಓದುವ ಉತ್ಸಾಹ ಇಲ್ಲದವರನ್ನು ಒಟ್ಟಿಗೆ ತರುವುದು ಟ್ವಿಟರ್ ಪ್ರಯತ್ನಿಸುತ್ತದೆ.ನೀವೇನೀಗ ಮಾಡುತ್ತಿದ್ದೀರಿ ಎನ್ನುವುದನ್ನು ಇತರರ ಜತೆ ಹಂಚಿಕೊಳ್ಳಿ ಎನ್ನುವುದು ಈ ಸೇವೆಯ ಧ್ಯೇಯ ವಾಕ್ಯ.ಕಾರ್ಯಕ್ರಮದ ವರದಿಯನ್ನು ಅದು ನಡೆದಿರುವ ಹಾಗೆಯೇ ವರದಿ ಮಾಡಲು ಟ್ವಿಟರ್ ಸೇವೆಯನ್ನು ಬಳಸುವ ಉತ್ಸಾಹಿಗಳು ಇದೀಗ ಎಲ್ಲೆಡೆ ಕಾಣಸಿಗುತ್ತಾರೆ.ಟ್ವಿಟರ್ ಸೇವೆಯನ್ನು ಪಡೆಯಲು ಕಂಪ್ಯೂಟರ್ ಮೂಲಕ ಅಂತರ್ಜಾಲ ಪ್ರವೇಶ ಬೇಕಿಲ್ಲ-ಮೊಬೈಲ್ ಅಂತಹ ಸಾಧನದ ಮೂಲಕವೂ ಟ್ವಿಟರ್‌ಗೆ ಬ್ಲಾಗಿಸಬಹುದು.

ಹಾಗೆಯೇ ಮೊಬೈಲ್ ಮೂಲಕವೇ ಇತರರು ಬರೆದುದ್ದನ್ನು ಕಿರು ಸಂದೇಶಗಳಾಗಿ ಪಡೆಯಬಹುದು.ಟ್ವಿಟರ್‌ನಲ್ಲಿ ಗೆಳೆಯರು ಎನ್ನುವ ಪರಿಕಲ್ಪನೆಯ ಬದಲಿಗೆ "ಹಿಂಬಾಲಕ"ರನ್ನು ಸೃಷ್ಟಿಸಲಾಗಿದೆ.ನೀವು ಇತರರನ್ನು ಹಿಂಬಾಲಿಸಿ,ಅವರೇನು ಬರೆಯುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.ಹಾಗೆಯೇ ನಿಮ್ಮನ್ನೂ ಇತರರು ಹಿಂಬಾಲಿಸಲು ಬಿಟ್ಟು,ನೀವು ಬರೆದುದನ್ನು ಇತರರು ತಿಳಿದುಕೊಳ್ಳಲು ಅನುವು ಮಾಡಿಕೊಡಬಹುದು. ಪ್ರೇಮಿಗಳ ದಿನದಂತಹ ದಿನಗಳಲ್ಲಿ,ಟ್ವಿಟರ್ ಸೇವೆ ಬಳಸುವವರ ಸಂಖ್ಯೆ ಮಿತಿ ಮೀರಿ, ಅದರ ಸರ್ವರ್ ಕುಸಿಯುವ ಅಪಾಯಕ್ಕೂ ಒಳಗಾಗುವುದಿದೆ ಎಂದರೆ ಅದರ ಸೇವೆ ಅದೆಷ್ಟು ಜನಪ್ರಿಯವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.ಮುಂಬೈಯಲ್ಲಿ ಉಗ್ರರ ದಾಳಿಯಂತಹ ಘಟನೆ ವೇಳೆ ಟ್ವಿಟರ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡವರು ಅನೇಕರಿದ್ದರು.blog
ಮೊನ್ನೆ ಗುರುವಾರ ಮುಂಬೈಯಲ್ಲಿ ಹನ್ನೆರಡು ಟ್ವಿಟರ್ ಸದಸ್ಯರು ಕಲೆತರು.ಇವರ ಸಭೆಗೆ ಆನ್‌ಲೈನ್ ಹಾಜರಿ ಸಹಸ್ರ ಸಂಖ್ಯೆಯಲ್ಲಿತ್ತು.ಇವರ ಸಮ್ಮೇಳನದ ಆಗುಹೋಗುಗಳು ಟ್ವಿಟರ್ ಸೇವೆಯ ಮೂಲಕವೇ ಜಗತ್ತಿನ ಮೂಲೆ ಮೂಲೆಗೆ ನೀರಿನ ನಿಶ್ಚಿಂತೆ ಮೂಡಿಸುವುದು ಹೇಗೆ ಎಂಬ ಮಾಹಿತಿಯನ್ನು ಹಬ್ಬಿಸಿತು.ಸಭೆ ಆಯೋಜಿಸಿದ ಮೊನಿಕ್ ಮತ್ತು ಮೋಹ್ನೀಶ್ ಹದಿಹರೆಯದ ಮೈಕ್ರೋಬ್ಲಾಗಿಗರು.ವಾಟರ್ ಎನ್ನುವ ಲಾಭರಹಿತ ಸಂಸ್ಥೆಗೆ ನಿಧಿ ಕೂಡಿಸುವ ಉದ್ದೇಶದಿಂದ ಸಮ್ಮೇಳನ ನಡೆಸುವ ಇರಾದೆಗೆ ಯಾರ ಬೆಂಬಲವೂ ಸಿಗದೆ, ಟ್ವಿಟರ್ ಮೂಲಕ ಸಮ್ಮೇಳನ ನಡೆಸುವ ಸಾಹಸಕ್ಕೆ ಕೈಹಾಕಿದರು.ಯಶಸ್ವಿಯೂ ಆದರು. ಲಕ್ನೋ,ಚೆನ್ನೈ,ಬೆಂಗಳೂರು,ಕೊಲ್ಕತ್ತ ಹೀಗೆ ವಿವಿಧ ಭಾರತೀಯ ನಗರಗಳಲ್ಲಿ ಕಲೆತಿದ್ದ ಇತರ ಉತ್ಸಾಹಿ ಸದಸ್ಯರುಗಳ ಮೂಲಕ ಇವರುಗಳು ಒಟ್ಟು ಮಾಡಿದ ನಿಧಿ ಇಪ್ಪತ್ತೈದು ಸಾವಿರ ದಾಟಿತು!
------------------------------------------------------------------
ಕಾರಿನ ಬಣ್ಣ ಬದಲಿಸಲು ಪೈಂಟ್ ಬೇಕಾಗಿಲ್ಲ!
ಕಾರಿನ ಬಣ್ಣ ಬದಲಿಸಲು ಬಣ್ಣವನ್ನು ಚಿಮುಕಿಸಲು ಜರ್ಮನಿಯಲ್ಲಾದರೆ ಒಂದು ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ.ಅದರ ಅರ್ಧ ಖರ್ಚು ಮಾಡಿ, ಎರಡೇ ದಿವಸಗಳಲ್ಲಿ ಕಾರನ್ನು ಹೊಸತರಂತೆ ಕಾಣಿಸುವ ವಿಧಾನವೊಂದಿದೆ.ಅದುವೇ ಬಣ್ಣದ ಪಿವಿಸಿ ಹಾಳೆಯನ್ನು ಕಾರಿನ ಮೇಲ್ಮೈಗೆ ಅಂಟಿಸುವುದು. ಇದಕ್ಕೆ ಉತ್ತಮ ಗುಣಮಟ್ಟದ ಅಂಟನ್ನು ಬಳಸುವುದರಿಂದ, ಹಾಳೆಯು ಭದ್ರವಾಗಿ ಅಂಟಿ,ಪೈಂಟಿನ ಪದರದಂತೇ ಕಾಣಿಸುತ್ತದೆ. ಈ ಹಾಳೆಯನ್ನು ಹಚ್ಚುವುದು ಹೇಳಿದಷ್ಟು ಸುಲಭವಲ್ಲ.ಅನುಭವವಿಲ್ಲದವರು ಹಚ್ಚಿದರೆ,ಹಾಳೆ ಮತ್ತು ಕಾರಿನ ಮೇಲ್ಮೈಯ ಮೇಲೆ ಗಾಳಿಯ ಗುಳ್ಳೆಗಳು ಉಳಿದುಕೊಂಡುಬಿಡಬಹುದು.ಪರಿಣತರಿಗೂ ಕಾರಿಗಿಡೀ ಹಾಳೆಯನ್ನು ಅಂಟಿಸಲು ಇಬ್ಬರಿಗೆ ಎರಡು ದಿನಗಳು ಬೇಕಾಗುತ್ತದೆ.ಜರ್ಮನಿಯಲ್ಲಿ ಹಳೆಯ ಕಾರುಗಳ ಮುಖಬೆಲೆ ಹೆಚ್ಚಿಸಲು ಈ ರೀತಿ ಮಾಡುವ ಕ್ರಮ ಜನಪ್ರಿಯವಾಗುತ್ತಿದೆ.ಒಮ್ಮೆ ಹಚ್ಚಿದರೆ, ಏಳೆಂಟು ವರ್ಷಗಳ ಬಾಳಿಕೆಯನ್ನು ನಿರೀಕ್ಷಿಸಬಹುದು. ಕಾರನ್ನು ತೊಳೆಯಲು ತೊಂದರೆಯಿಲ್ಲ.ಆದರೆ ಕಾರಿಗೆ ಬಿಸಿ ಮೇಣವನ್ನು ಹಚ್ಚಿ ಹೊಳಪು ನೀಡಲು ಪ್ರಯತ್ನಿಸಬಾರದು.ಕಾರನ್ನು ಲೀಸಿಗೆ ನೀಡಿ,ಅದು ಮರಳಿ ಬರುವಾಗ ಕಾರಿನ ತುಂಬಾ ಗೀರುಗಳು,ಸಣ್ಣ ಅಪಘಾತಗಳು ಉಂಟು ಮಾಡಿದ ಕೊರಕಲುಗಳು ಇದ್ದರೆ,ಅವನ್ನು ಅಡಗಿಸಲು ಪಿವಿಸಿ ಹಾಳೆಯನ್ನು ಹಚ್ಚುವುದು ಉತ್ತಮ ಉಪಾಯವಾಗುತ್ತದೆ.ಕೆಲವು ಕಾರು ತಯಾರಕರು ಪಾರದರ್ಶಕ ಹಾಳೆಯನ್ನು ಹೊಸ ಕಾರುಗಳ ಕೆಲವು ಆಯ್ದ ಜಾಗಗಳಿಗೆ ಹಚ್ಚಿ,ಅದನ್ನು ರಕ್ಷಣಾ ಪದರದಂತೆ ಬಳಸುವುದೂ ಇದೆ.
-------------------------------------------------------------------------------------    
ಮೂರು ಸಾವಿರ ವರ್ಷದ ಹಳೆಯ ಮಮ್ಮಿಗಳ ದರ್ಶನblog
ಈಜಿಪ್ಟಿನ ಮಮ್ಮಿಗಳ ಬಗ್ಗೆ ಕೇಳಿದ್ದೀರಲ್ಲಾ?ಈ ಮಮ್ಮಿಗಳ ಒಳಗೆ ಹೆಣಗಳಿವೆ ಎನ್ನುವುದು ಗೊತ್ತಿರುವ ವಿಷಯ.ಇವುಗಳು ಯಾವ ಸ್ಥಿತಿಯಲ್ಲಿವೆ, ಹೆಣ ಮಹಿಳೆಯದ್ದೋ ಅಥವ ಪುರುಷನದ್ದೋ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಂಶೋಧಕರ ಆಸಕ್ತಿಯನ್ನು ತಣಿಸಲು,ಚಿಕಾಗೋದ ವಿಶ್ವವಿದ್ಯಾಲಯದ ಸಂಶೋಧಕರು ಅತ್ಯುತ್ತಮ ಗುಣಮಟ್ಟದ ಸಿ.ಟಿ. ಸ್ಕ್ಯಾನರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.ಸ್ಕ್ಯಾನಿನ ಮೂಲಕ ಮಮ್ಮಿಯೊಳಗೆ ಇರುವ ಹೆಣ ಹೆಣ್ಣುಮಗಳದ್ದು.ಆಕೆಯ ಪ್ರಾಯ ಮೂವತ್ತು ವರ್ಷ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.ಸ್ಕ್ಯಾನಿಂಗಿನ ಮೂಲಕ ಹೆಣದ ಮುಖ ಎಷ್ಟು ಸ್ಪಷ್ಟವಾಗಿದೆಯೆಂದರೆ,ಈಗೇನಾದರೂ ಆಕೆ ತನ್ನೆದುರು ಬಂದರೆ,ಆಕೆಯನ್ನು ತಾನು ಗುರುತಿಸಬಲ್ಲೆ ಎಂದು ಸಂಶೋಧಕರು ಧೈರ್ಯವಾಗಿ ಹೇಳುತ್ತಾರೆ.
--------------------------------------------------------------------------------
ಉಪಗ್ರಹ ಡಿಕ್ಕಿ:ತರಲಿದೆಯೇ ಆಕಾಶಕಾಯಗಳಿಗೆ ಅಪಾಯ?blog
ಬಾಹ್ಯಾಕಾಶದಲ್ಲಿ ಇರಿಡಿಯಮ್ ಜಾಲದ ಒಂದು ಉಪಗ್ರಹ ಮತ್ತು ರಶ್ಯದ ಕೃತಕ ಉಪ್ಗ್ರಹಗಳು ಪರಸ್ಪರ ಡಿಕ್ಕಿಯಾಗಿವೆ. ಈ ಡಿಕ್ಕಿಯಿಂದ ಉಪಗ್ರಹಗಳು ಸಿಡಿದು ಹೋಗಿ ಸಾವಿರಾರು ತುಣುಕುಗಳು ಹಾರಿಹೋಗಿ,ಚದರಿಕೊಂಡಿವೆ.ಈ ತುಣುಕುಗಳು ಎರಡರಿಂದು ಐದು ಇಂಚು ಅಳತೆಯವು.ಈ ಸಣ್ಣ ತುಣುಕುಗಳು ಅತಿವೇಗದಲ್ಲಿ ಭೂಮಿಯನ್ನು ಪ್ರದಕ್ಷಿಣೆ ಬರುತ್ತಿರುವುದರಿಂದ,ಇವು ಇತರ ಉಪಗ್ರಹಗಳಿಗೆ ಡಿಕ್ಕಿ ಹೊಡೆಯುವ ಅಪಾಯವಿದೆ. ವಿಜ್ಞಾನಿಗಳು ಬಾಹ್ಯಾಕಾಶ ಕೇಂದ್ರದ ಬಗ್ಗೆ ಹೆಚ್ಚು ಕಳವಳ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸದ್ಯ ಯಾವ ಅಪಾಯ ಸಂಭವಿಸದು, ಯಾಕೆಂದರೆ,ಅದು ಸಾಕಷ್ಟು ಕೆಳಗಿನ ಕಕ್ಷೆಯಲ್ಲಿ ಭೂಮಿಗೆ ಪ್ರದಕ್ಷಿಣೆ ಬರುತ್ತಿದೆ.ಉಪಗ್ರಹ ತುಣುಕುಗಳು ಮುಂದಿನ ಹತ್ತು ವರ್ಷಗಳವರೆಗೂ ಅಪಾಯ ತರಬಲ್ಲವು ಎಂದು ವಿಜ್ಞಾನಿಗಳ ಅಂಬೋಣ.ಹತ್ತು ಸಾವಿರ ತುಣುಕುಗಳ ಜಾಡನ್ನು ಅಮೆರಿಕಾದ ನಾಸಾವು ಅನುಸರಿಸಿ,ಅವುಗಳಿಂದ ಉಂಟಾಗಬಹುದಾದ ಅಪಾಯಗಳನ್ನು ನಿವಾರಿಸಲು ಸಹಾಯ ಮಾಡಲಿದೆ.
------------------------------------------------------------------------------

ಡಿಜಿಟಲ್ ಮಾಹಿತಿಯನ್ನುಳಿಸುವ ಯೋಜನೆ
ಡಿಜಿಟಲ್ ಮಾಹಿತಿಯು ಅಳಿಯದು ಎನ್ನುವ ವಿಶ್ವಾಸ ನಿಮಗಿದ್ದರೆ ಯೋಚಿಸುವುದೊಳಿತು.ಎಪ್ಪತ್ತು,ಎಂಭತ್ತು ಮತ್ತು ತೊಂಭತ್ತರ ದಶಕಗಳ ಕಂಪ್ಯೂಟರ್ ಮಾಹಿತಿಯನ್ನು ಈಗ ಓದಲು ಪ್ರಯತ್ನಿಸಿದರೆ  ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಕಂಪ್ಯೂಟರುಗಳಲ್ಲಿ ನೀವು ಉಳಿಸಿದ ಕಡತಗಳು ವಿವಿಧ ಮಾದರಿಗಳಲ್ಲಿ ಉಳಿಸಲ್ಪಟ್ಟಿರುತ್ತವೆ. ಅವುಗಳೀಗ ಚಲಾವಣೆಯಲ್ಲಿಲ್ಲದ ಮಾದರಿಗಳಾಗಿರಬಹುದು. ವರ್ಡ್ ಅಂತಹ ಪದಸಂಸ್ಕರಣ ತಂತ್ರಾಂಶವೂ ಒಂದು ಆವೃತ್ತಿಯಿಂದ ಇನ್ನೊಂದಕ್ಕೆ ಬದಲಾಗುತ್ತಿರುತ್ತದೆ. ಹಳೆಯ ಶೈಲಿಯ ಕಡತಗಳನ್ನು ಕೈಬಿಟ್ಟಿದ್ದರೆ,ಅಂತಹ ಶೈಲಿಯಲ್ಲಿ ಉಳಿಸಿದ ಕಡತಗಳನ್ನು ಹೊಸ ತಂತ್ರಾಂಶ ತೆರೆಯಲು ವಿಫಲವಾಗುತ್ತದೆ.ಯುರೋಪಿನಲ್ಲಿ ಕೀಪ್ ಎನ್ನುವ ಒಂದು ಯೋಜನೆ ಹಳೆಯ ಕಂಪ್ಯೂಟರ್ ಕಡತಗಳನ್ನು ತೆರೆಯಬಲ್ಲ ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಯೋಜನೆಯಾಗಿದೆ. ನಾಲ್ಕು ದಶಲಕ್ಷ ಯುರೋ ಖರ್ಚಿನ ಈ ಯೋಜನೆ ಸಫಲವಾದರೆ, ಹಳೆಯ ಕಡತಗಳನ್ನು ತೆರೆದು ಓದಲು ಸಹಾಯ ಸಿಗಲಿದೆ.

udayavani

ashokworld

*ಅಶೋಕ್‌ಕುಮಾರ್ ಎ