ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

ಬರಹ

ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು.
ಬಹುತೇಕ ಭಾರತೀಯರೂ, ಸ್ಥಳ ಕಾಲಗಳ ಪರಿವಿಲ್ಲದೇ ಈ ಸಾಂಸ್ಕೃತಿಕ ಬಳುವಳಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಪ್ರಾಚೀನ ವೇದಗಳು , ಕಲಾಕೌಶಲ್ಯಗಳನ್ನು ಪ್ರಸ್ತಾಪಿಸುವುದನ್ನು ಕೇಳಿದ್ದೇನೆ.

ಮಾನವನ ಭಾವನೆಗಳನ್ನು, ಚಿಂತನೆಗಳನ್ನು ಹೊರಗೆಡಹುವ ಮಾಧ್ಯಮವಾದ ಕಲೆ ಹಾಗು ಅದೇ ಭಾವನೆಗಳನ್ನು ನೈತಿಕ ದೃಷ್ಟಿಯಿಂದ ಪರೀಕ್ಷೆಗೊಡ್ಡುವ ಅಧ್ಯಾತ್ಮಿಕತೆ, ವ್ಯತಿರಿಕ್ತ ವಿಚಾರಗಳಾದರೂ ಅವೆರಡನ್ನೂ ಒಟ್ಟಿಗೆ ಕೊಂಡೊಯ್ಯವ ಪ್ರಯತ್ನವನ್ನು ಪ್ರತಿಯೊಂದು ನಾಗರೀಕತೆಯಲ್ಲಿಯೂ ಕಾಣಬಹುದು.ಎಷ್ಟೊ ಬಾರಿ ಆಧ್ಯಾತ್ಮಿಕತೆಯ ಸೋಗಿನಲ್ಲಿ ಕಲೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ, ಅದನ್ನು ಸಮಾಜವು ಒಟ್ಟಾಗಿ ವಿರೋಧಿಸುವುದನ್ನೂ ನೋಡಬಹುದು. ( ಬಾಮಿಯಾನ್ ಬುದ್ಧ ಮೂರ್ತಿಗಳ ನಾಶ ಇದಕ್ಕೊಂದು ನಿದರ್ಶನ). ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಕಲಾ ಕೌಶಲ್ಯವನ್ನು ಆಳವಾಗಿ ಹಾಗು ಸರಳವಾಗಿ ಅಡಕಮಾಡಿಕೊಂಡ ನಾಗರೀಕತೆಗಳಲ್ಲಿ ನಮ್ಮ ದು ಪ್ರಮುಖವಾದುದು. ಕಲೆಗಳ ವಿವಿಧ ಪ್ರಕಾರಗಳಾದ ಸಂಗೀತ, ನಾಟ್ಯ, ಶಿಲ್ಪ ಹಾಗು ಚಿತ್ರ ಕಲೆಗಳಲ್ಲಿ ಸಾಧಿಸಿರುವ ಪ್ರಗತಿಯೇ ಇದಕ್ಕೆ ನಿದರ್ಶನ. ಆದರೂ ಇಂದು ಪ್ರೋತ್ಸಾಹದ ಕೊರತೆಯಿಂದ ಭಾರತೀಯ ಶಿಲ್ಪ ಹಾಗು ವರ್ಣಕಲೆಗಳು ಕುಂಠಿತಗೊಂಡಿವೆ. ಸಂಗೀತ ಹಾಗು ನಾಟ್ಯ ಕಲೆಗಳು ಅದೇ ಹಾದಿ ಹಿಡಿದಿವೆಯಾದರೂ ಇನ್ನೂ ಭಾರತೀಯರ ಜೀವನದ ಅಂಗವಾಗಿ ಉಳಿದಿವೆ.
ಈಗಲೂ ಪ್ರಸ್ತುತವಾಗಿ ಉಳಿದಿರುವ ಪ್ರಾಚೀನ ಕಲಾಪ್ರಕಾರಗಳಲ್ಲಿ ಪ್ರಮುಖವಾದ ಶಾಸ್ತ್ರೀಯ ಸಂಗೀತದ ಉಗಮ,ಬೆಳವಣಿಗೆ ಹಾಗು ಅದರ ಇಂದಿನ ಸ್ವರೂಪಕ್ಕೆ ಕಾರಣವಾದ ಘಟನೆಗಳ, ವ್ಯಕ್ತಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನ.

ಒಬ್ಬ ಚರಿತ್ರಕಾರನಂತೆ ಶಾಸ್ತ್ರೀಯ ಸಂಗೀತವು ನಡೆದು ಬಂದ ಹಾದಿಯನ್ನು ಸಾಕ್ಷಿ ಪುರಾವೆಗಳಿಂದ ಅಚ್ಚುಕಟ್ಟಾಗಿ ಹಾಗು ನಿಖರವಾಗಿ ವಿವರಿಸುವ ಗೋಜಿಗೆ ಹೋಗದೆ,ಬರೆ ಸಂಗೀತಾಸಕ್ತನ ಉತ್ಸಾಹ ಮತ್ತು ಅಪಕ್ವತೆಯೊಂದಿಗೆ ಶಾಸ್ತ್ರೀಯ ಸಂಗೀತವನ್ನು ನೋಡುವ ಪ್ರಯತ್ನವಿದು.

ಶಾಸ್ತ್ರಿಯ ಸಂಗೀತದ ಇರುವಿಕೆಯ ಉಲ್ಲೇಖಗಳು ವೇದ ಕಾಲದಲ್ಲೇ ಕಾಣಬಹುದು. ಋಷಿಗಳ ತಮ್ಮ ಧ್ಯಾನ ಶ್ಲೋಕಗಳನ್ನು, ಮಂತ್ರಗಳನ್ನು ಉಚ್ಛರಿಸುವಾಗ ಹೊರಟ ಮಂದ್ರ ಶೃತಿಯೇ,ಮುಂದೆ ಹಲವಾರು ಅಯಾಮಗಳನ್ನು ಪಡೆದುಕೊಂಡು ಬೆಳೆದು ಹೆಮ್ಮರವಾಗಿ ಇಂದು ಅಧ್ಯಯನ/ಸಂಶೋಧನ ವಸ್ತುವಾಗಿದೆ.ಸಂಗೀತಕ್ಕು ಅಧ್ಯಾತ್ಮಕ್ಕು ಇರುವ ಸಂಬಂಧವನ್ನು ಸಾಮವೇದದಲ್ಲಿರುವ ಮಂತ್ರಗಳನ್ನು ರಾಗವಾಗಿ ಹಾಡುವ ಪದ್ಧತಿ ಇರುವುದನ್ನು ಗಮನಿಸಿದರೆ ತಿಳಿಯುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಹಂತದ ಬೆಳವಣಿಗೆಯಾದದ್ದು ಅಧ್ಯಾತ್ಮಿಕ ಆಯಾಮದಲ್ಲಿ ಮಾತ್ರ. ಭಾರತೀಯ ಸಂಸ್ಕೃತಿಯ ವಿಶಿಷ್ಟ ಶಿಕ್ಷಣ ಪದ್ಧತಿಯಾದ ಗುರುಕುಲ ಶಿಕ್ಷಣದ ಆಶ್ರಯದಲ್ಲಿ ಬೆಳೆಯುತ್ತಾ ಮುಂದುವರಿದಾಗ ಸಂಗೀತದ ಕುರಿತು ಹಲವಾರು ಶಾಸ್ತ್ರಗಳು ರಚಿಸಲ್ಪಟ್ಟವು. ಸಂಗೀತದ ನಿಯಮ, ಸ್ವರೂಪ, ಹಾಗು ಬಳಕೆಯ ಬಗ್ಗೆ ಹಲವಾರು ಶಾಸ್ತ್ರಗಳು ಬರೆಯಲ್ಪಟ್ಟರಿಂದಲೇ ಸಂಗೀತಕ್ಕೆ “ಶಾಸ್ತ್ರೀಯ ಸಂಗೀತ”ವೆನ್ನುವರು.ಇವುಗಳಲ್ಲಿ ದತ್ತಿಲನ "ದತ್ತಿಲಂ", ನಾರದನ "ನಾರದೀಯ ಶಿಕ್ಷಾ" ಪ್ರಮುಖವಾದವು. ಸಂಗೀತ ಶಾಸ್ತ್ರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ರಚಿತವಾಗದೇ ತಮಿಳು ಮಹಾಕಾವ್ಯವಾದ "ಶಿಲಪ್ಪಡಿಕಾರಮ್" ನಲ್ಲಿಯೂ ಉಲ್ಲೇಖಗಳನ್ನು ಕಾಣಬಹುದು.
ಮುಂದೆ ಅರಮನೆಗಳ ಪ್ರತಿಷ್ಟೆಯ ಸಂಕೇತವಾದಗಲೂ ಶಾಸ್ತ್ರರಚನೆಯು ಕುಂದಲಿಲ್ಲ.ಜಯದೇವನ "ಗೀತಗೋವಿಂದ" , ಸಾರಂಗದೇವನ "ಸಂಗೀತ ರತ್ನಾಕರ" ಹೀಗೆ ಸಾಕಷ್ಟು ರಚನೆಗಳಾದವು. ೧೦ನೇ ಶತಮಾನದಲ್ಲಿ ಸ್ವರಗಳನ್ನು ಪ್ರಾಣಿಗಳ ಕೂಗಿಗೆ ಹೋಲಿಸುವ ಸಿದ್ಧಾಂತಗಳು, ರಾಗಗಳ ಸಮಯವನ್ನು ನಿರ್ಧರಿಸುವ ಸಿದ್ಧಾಂತಗಳ, ಮುಂತಾದುವುಗಳ ಪ್ರಸ್ತಾಪ ಶಾಸ್ತ್ರಗಳಲ್ಲಿ ಗಮನಿಸಿದರೆ ಇದು ಸಂಗೀತಕ್ಕೆ ಒಳ್ಳೆಯ ಕಾಲವೇನ್ನಿಸುತ್ತದೆ.
ಈ ಕಾಲದಲ್ಲಿ ರೂಪುಗೊಂಡ ಸಂಗೀತದ ಶೈಲಿಗೆಗೆ "ಪ್ರಭಂದ"ವೆಂದು ಹೆಸರು.

ಅರಮನೆಗಳಲ್ಲಿ ಸಂಗೀತಕ್ಕೆ ಸಿಕ್ಕ ವಿಶೇಷ ಸ್ಥಾನವು ಎರಡಲುಗಿನ ಕತ್ತಿಯೇ ಆಯಿತು.ಸಂಗೀತ ಬಲ್ಲವರ ಪಾಂಡಿತ್ಯ ಪ್ರದರ್ಶನ ವೇದಿಕೆಯಾಗುವ ಜೊತೆಗೆ, ಅವರ ಜಂಭ,ಅಹಂಕಾರಗಳ ಪ್ರದರ್ಶನ ವೇದಿಕೆಯಾದದ್ದು ನನಗೆ ವಿಚಿತ್ರವಾಗಿ ತೋರುತ್ತದೆ. ಎಲ್ಲ ಸಫಲ ವ್ಯವಸ್ಥೆಗಳಂತೆ ಸತ್ವವನ್ನು ಗುರುತಿಸಿ ಗೌರವಿಸುವವರು ಹಾಗು ಜಳ್ಳನ್ನು ಗುರುತಿಸಿ ಹೊರಗಟ್ಟುವವರು ಇದ್ದರಿಂದ ಸಂಗೀತವು ಹಾದಿತಪ್ಪದೆ ಉಳಿಯಿತೆನ್ನಬಹುದು.
ಸುಮಾರು ಹನ್ನೊಂದನೇ ಶತಮಾನದ ಅಂತ್ಯದಲ್ಲಿ ಪಶ್ಚಿಮದಿಂದ ಅರಬ್ ಸೈನ್ಯಗಳ ಧಾಳಿ ಪ್ರಾರಂಭವಾದಾಗ ಎಲ್ಲ ಕಲೆಗಳಂತೆ ಸಂಗೀತವನ್ನು ಅನಿಶ್ಚಿತತೆ ಕಾಡುತ್ತಿತ್ತು.ರಾಜಾಶ್ರಯದ ಜೊತೆಗೆ ಮಠ,ದೇವಸ್ಥಾನಗಳು ಸಂಗೀತಗಾರರ ಆರ್ಥಿಕ ಹಾಗು ಸಾಮಾಜಿಕ ಪ್ರೋತ್ಸಾಹಕರಾಗಿದ್ದವು.ಹಿಂದೂ ರಾಜ್ಯಗಳ ಸೋಲು, ದೇವಸ್ಥಾನಗಳ,ಪ್ರಮುಖ ಸಾಂಸ್ಕೃತಿಕ ಕೇಂದ್ರಗಳ ನಾಶವನ್ನು ಪರಿಗಣಿಸಿದರೆ ಇದು ಸಂಗೀತಕ್ಕೆ ಸಂದಿಗ್ಧಕಾಲವೇ ಸರಿ.ಆದರೆ ಆದ್ದದ್ದೇ ಬೇರೆ.ಭಾರತ ಉಪಖಂಡದವು ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾಗ ತೊಡಗಿದಾಗ ಎಲ್ಲ ಕಲೆಗಳಲ್ಲಿಯು ಮಾರ್ಪಾಟ್ಟುಗಳು ಆಗತೊಡಗಿದವು.
ಪ್ರಧಾನವಾಗಿ ಭಕ್ತಿಯ ಮಾಧ್ಯಮವಗತೊಡಗಿದ್ದ ಸಂಗೀತಕ್ಕೆ ಈಗ ಎಲ್ಲ ಆಯಾಮಗಳಲ್ಲಿ ವಿಸ್ತಾರಗೊಳ್ಳಬೇಕಾದ ಅಗತ್ಯವು ಬಂದೊದಗಿತು.ಜೊತೆಗೆ ಪರ್ಶಿಯನ್ ಸಂಸ್ಕೃತಿಯು ಅಂಶಗಳು ಭಾರತೀಯ ಕಲೆಗಳಲ್ಲಿ, ಹಾಗು ಭಾರತೀಯ ಸಂಸ್ಕೃತಿಯ ಅಂಶಗಳು ಪರ್ಶಿಯನ್ ಸಂಸ್ಕೃತಿಯಲ್ಲಿ ಅಡಕವಾಗತೊಡಗಿದವು.ಈ ಸಾಂಸ್ಕೃತಿಕ ವಿನಿಮಯದ ಫಲವಾಗಿ ಸಿತಾರ್ ಸರೋದ್, ತಬಲ ಮುಂತಾದ ವಾದ್ಯಗಳ ಭಾರತೀಯ ಸಂಗೀತಕ್ಕೆ ಪರಿಚಯವಾದರೆ ಕೊಳಲು, ವೀಣೆಗಳು ಪರ್ಶಿಯನ್ ಸಂಗೀತಕ್ಕೆ ಪರಿಚಯವಾದವು.

ಒಂದು ವ್ಯವಸ್ಥೆಯಲ್ಲಿ ಬದಲಾವಣೆಗಳ ಗಾಳಿ ಬೀಸತೊಡಗಿದಾಗ ಕೆಲವರು ಹೊಂದಿಕೊಂಡು ಪ್ರತ್ಯೇಕ ವ್ಯವಸ್ಥೆಯನ್ನು ಸ್ಥಾಪಿಸುವುದು ಸಾಮಾನ್ಯ. ಈ ಮಾತು ಹಿಂದುಸ್ಥಾನಿ ಸಂಗೀತದ ಮಟ್ಟಿಗಂತೂ ನಿಜವೆನ್ನಬಹುದು. ಇದು ಶಾಸ್ತ್ರೀಯ ಸಂಗೀತದ ಸಂಕ್ರಮಣಕಾಲವೆಂದರೆ ತಪ್ಪಾಗುವುದಿಲ್ಲ. ಇಸ್ಲಾಂ ಧರ್ಮದ ಪ್ರಭಾವ ಉತ್ತರ ಭಾರತಕ್ಕೆ ಸೀಮಿತವಾದುದರಿಂದ ದಕ್ಷಿಣ ಭರತದ ಸಂಗೀತ ಪದ್ಧತಿಯು ಇಂತಹ ಬದಲಾವಣೆಗಳಿಂದ ಪ್ರಭಾವಿತವಾಗದೇ ಮೂಲ ಸ್ವರೂಪದಲ್ಲೇ (ಅಂದರೆ ಪ್ರಬಂಧ ಶೈಲಿಯಲ್ಲಿ) ಉಳಿಯಿತು.ಉತ್ತರ ಹಾಗು ದಕ್ಷಿಣ ಭಾರತೀಯ ಸಂಗೀತ ಪದ್ಧತಿಗಳು ಕವಲೊಡೆದು ಬೇರೆ ಬೇರೆ ಹಾದಿ ಹಿಡಿದವು.ದಕ್ಷಿಣ ಭಾರತೀಯ ಪದ್ಧತಿಯು ಈಗಿನ ಕರ್ನಾಟಕ ಸಂಗೀತ ಪದ್ಧತಿಯಾಗಿ ಭಕ್ತಿ ಪ್ರಧಾನವಾದರೆ ಉತ್ತರ ಭಾರತದ ಸಂಗೀತವು ಈಗಿನ ಹಿಂದುಸ್ಥಾನಿ ಸಂಗೀತವಾಯಿತು.ಪ್ರಬಂಧ ಸ್ವರೂಪದಲ್ಲಿದ್ದ ಪ್ರಾಚೀನ ಸಂಗೀತವು ಉತ್ತರ ಭಾರತದಲ್ಲಿ ಅವಸಾನಗೊಂಡು "ಧ್ರುಪದ್" ಶೈಲಿಯ ಉಗಮವಾಗತೊಡಗಿತು.

ಧ್ರುಪದ್ ಶೈಲಿಯ ಉಗಮ ಕಾಲವು ಸ್ಪಷ್ಟವಾಗಿಲ್ಲ. ಸಾರಂಗದೇವನ "ಸಂಗೀತ ರತ್ನಾಕರ" ದಲ್ಲಿ ಅದರ ಉಲ್ಲೇಖಗಳು ಕಾಣದಿದ್ದರೂ, ಆಮಿರ್ ಖುಸ್ರೋ ಕಾಲಕ್ಕೆ ಅದು ಬಹು ಪ್ರಖ್ಯಾತವಾಗಿತ್ತು.ಕೆಲವರು ೨೦೦೦ ವರ್ಷ ಹಳೆಯದೆಂದು ಹೇಳುತ್ತಾರಾದರೂ, ಸಂಗೀತದ ಪ್ರಧಾನ ಶೈಲಿಯ ಸ್ಥಾನಮಾನ ದೊರೆತದ್ದು ಕ್ರಿ ಶ ೧೩-೧೫ ಶತಮಾನದಲ್ಲಿಯೇ.ಮೊಘಲರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿದ ಈ ಶೈಲಿಯ ವಿಶೇಷ ಗುಣವೆಂದರೆ,ಅದರ ಧ್ಯಾನ ಪ್ರಧಾನ ಗುಣ. ಇದು ದೇವರ ಸಾನಿಧ್ಯದಲ್ಲಿ ಹಾಡುವ ಸಂಗೀತವಾಗುವುದರ ಜೊತೆಗೆ ಅರಮನೆಗಳ ಅಸಹಜ ಗಾಂಭೀರ್ಯ ತುಂಬಿದ ವಾತಾವರಣದಲ್ಲಿ,ಉಲ್ಲಾಸವನ್ನು ಉಂಟು ಮಾಡುವ ಸಂಗೀತವೆನ್ನಿಸುತ್ತದೆ.ನಾನು ಮೊದಲ ಬಾರಿ ಧ್ರುಪದ್ ಕೇಳಿದಾಗ ದೇವರ ಮುಂದೆ ಕುಳಿತ ಭಕ್ತಿಪರವಶವಾಗಿ ಹಾಡುವ ಕಲಾವಿದನ ಚಿತ್ರ ಮನಸ್ಸಿಗೆ ಬಂದಿತು.ಈ ಶೈಲಿಯ ಒಂದು ಸಣ್ಣ ನಮೂನೆ [:http://www.musicalnirvana.com/li3zab37xyfr4vj7/gundecha%20brothers%20-%20raag%20gaoti.asf|ಈ ಕೊಂಡಿಯಲ್ಲಿದೆ].

"ಮಲ್ಹರ್" ರಾಗ ಸಮೂಹಗಳ ಜನಕ ತಾನ್ಸೇನ್ ಧ್ರುಪದ್ ಶೈಲಿಯಲ್ಲೇ ಹಾಡುತ್ತಿದ್ದು. ಮೊಘಲ್ ಚಕ್ರವರ್ತಿಯ ಗೌರವಕ್ಕೆ ಪಾತ್ರನಾದ ತಾನ್ಸೇನ್ ನ ಗುರು ಸ್ವಾಮಿ ಹರಿದಾಸ್, ಅಕ್ಬರ್ನ ಅಸ್ಥಾನದಲ್ಲಿ ಬೈಜು ಬಾವರ ಮುಂತಾದ "ಧ್ರುಪದಿಯಾ"ಗಳು(ಧ್ರುಪದ್ ಸಂಗೀತಗಾರರು) ಧ್ರುಪದ್ ಶೈಲಿಯ ಪ್ರಮುಖ ಗಾಯಕರು.
ಶಾಸ್ತ್ರಗಳಲ್ಲಿ, ಸಂಗೀತವನ್ನು "ನಾದಬ್ರಹ್ಮ"ನೆಂದು ಸಂಭೋದಿಸಿ, ಮೋಕ್ಷ ಪಡೆಯುವ ದಾರಿಗಳಲ್ಲಿ ಒಂದೆಂದು ಹೇಳಿರುವುದನ್ನು ಈ ಕಾಲದ ಜನ ಬಲವಾಗಿ ನಂಬಿದ್ದರೆಂದು ತೋರುತ್ತದೆ.ಸಂಗೀತವನ್ನು ದೈವೀಕತೆಯನ್ನು ಸಮಾನವಾಗಿ ಕಂಡ ಕಾಲವಿದು. ಅದ್ದರಿಂದಲೇ ಏನೋ, ಸಂಗೀತದಿಂದ ಮಳೆಗರೆಸುವ,ದೀಪಗಳನ್ನು ಬೆಳಗಿಸುವ,ಸತ್ತ ಮನುಷ್ಯನನು ಬದುಕಿಸುವ ಘಟನೆಗಳು ಈ ಕಾಲದಲ್ಲಿ ಹೇರಳವಾಗಿದ್ದು ಹಿಂದೂಸ್ಥಾನೀ ಸಂಗೀತದ ದಂತಕಥೆಗಳಾಗಿ ಉಳಿದಿವೆ.
ಹೀಗೆ ಮೆರೆದ ಧ್ರುಪದ್ ಶೈಲಿಯು ೧೮ನೆ ಶತಮಾನದಿಂದ ಅವಸಾನವಾಗತೊಡಗಿತು.ಧ್ರುಪದ್ ಸಂಗೀತವನ್ನು ಪುನರುಜ್ಜೀವಗೊಳಿಸುವ ಪ್ರಯತ್ನವನ್ನು ಒಂದು ಕುಟುಂಬವು ತನ್ನ ತಲೆಯ ಮೇಲೆ ಹಾಕಿಕೊಂಡಿರುವುದು ಕುತೂಹಲದ ವಿಷಯ. ಡಾಗರ್ ಕುಟುಂಬವು ೨೧ ತಲೆಮಾರುಗಳಿಂದ ಈ ಧ್ರುಪದ್ ಶೈಲಿಯನ್ನು ಕಾಪಾಡಿಕೊಂಡು ಬರುತ್ತಿದೆ.ಇವರ ಗಾಯನ ಶೈಲಿಗೆ ಡಾಗರ್ ವಾಣಿ ಎಂದು ಹೆಸರು.
ಡಾಗರ್ ಕುಟುಂಬದವರು ಮೂಲತಃ ಬ್ರಾಹ್ಮಣ ಕುಲದವರು. ಅವರ ವಂಶಜ ಬಾಬ ಗೋಪಾಲ್ ದಾಸ್ ಪಾಂಡೆ ಮೊಘಲ್ ರಾಜನಾದ ಅಹ್ಮದ್ ಶಾಹ್ "ರಂಗಿಲೆ" ಕೊಟ್ಟ ಪಾನ್(ಎಲೆ ಅಡಿಕೆ) ಸ್ವೀಕರಿಸಿದನೆಂದು ಅವನ ಕುಲದವರು ಬಹಿಷ್ಕಾರ ಹಾಕಿದಾಗ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಇಮಾಂ ಭಕ್ಷ್ ಡಾಗರ್ ಎಂಬ ಹೆಸರಿಟ್ಟುಕೊಂಡು ಡಾಗರ್ ಮನೆತನದ ಸ್ಥಾಪಕನಾದನು.
ಶ್ರದ್ಧಾಳು ಮುಸಲ್ಮಾನರಾದರೂ, ಯಾವುದೇ ಹಿಂಜರಿತವಿಲ್ಲದೇ ದರ್ಬಾರಿ ಕಾನಡ ರಾಗದಲ್ಲಿ ಸರಸ್ವತಿಯನ್ನು ಹಾಡಿ ಹೊಗಳುವು ಡಾಗರ್ ಸಹೋದರರ ಸಂಗೀತವನ್ನು ಕೇಳುವಾಗ,ಜಾತಿ-ಮತಗಳ ಕಟ್ಟಳೆಗಳನ್ನು ಬದಿಗೊತ್ತಿದ ಸಂಗೀತವು "ನಾದಬ್ರಹ್ಮ" ಎಂದು ಒಮ್ಮೆ ನನಗೆ ಅನಿಸಿದ್ದುಂಟು.ಆದರೂ ವಾಸ್ತವವಾಗಿ ಯೋಚಿಸಿದಾಗ, ಇದು ಅವರು ತಾವಾಗಿಯೇ ಆರಿಸಿಕೊಂಡ ಕುಲಕಸುಬು/ಜೀವನೋಪಾಯ,ಜಾತಿ ಕುಲಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಅವರ ಕಲೆಗೆ ಬೆಲೆಕೊಡುವವರಾದರೂ ಯಾರು ? ಅನ್ನಿಸಿತು.ಆದ್ದರಿಂದ ಕಾಂಗ್ರೆಸ್ ರಾಜಕಾರಣಿಗಳಂತೆ ಜಾತ್ಯಾತೀತತೆಯ ಉದಾಹರಣೆಯಾಗಿ ಕೊಂಡಾಡದೇ,ಅವರು ಮಾಡುತ್ತಿರುವ ಕೆಲಸಕ್ಕೆ ಗೌರವದಿಂದ ಕಾಣುವುದೇ ನನಗೆ ಸರಿಯೆನ್ನಿಸುತ್ತದೆ.

ಸಂಗೀತಕಾರರಲ್ಲಿ ಧರ್ಮ ಬದಲಾಯಿಸಿಕೊಂಡ ಉದಾಹರಣೆಗಳು ವಿರಳವೇನಲ್ಲ,ತಾನ್ಸೇನ್ ಕೂಡ ವೃದ್ಧಾಪ್ಯದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದುಂಟು.ಆದರೂ ಅವನ ವಂಶದವರು ತಮ್ಮನ್ನು "ಸೇನಿಯ" ಘರಾನ ದವರೆಂದು ಸಂಭೋದಿಸಿಕೊಳ್ಳುತ್ತಾರೆ. ಸಂಗೀತಗಾರರ ಕುಲ-ಗೋತ್ರಗಳ ವಿಷಯದ ಚರ್ಚೆ ಇಲ್ಲಿ ಅನಗತ್ಯವಾಗಿತ್ತೆಂದು ಓದುಗರಿಗೆ ಅನ್ನಿಸಿದರೆ,ಮನ್ನಿಸಬೇಕು.ಭಾರತದ ಚರಿತ್ರೆಯಲ್ಲಿ ಮತ-ಧರ್ಮಗಳು ಎಲ್ಲ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ, ಅವುಗಳ ಇಂದಿನ ಸ್ವರೂಪಕ್ಕೆ ಕಾರಣವಾಗಿವೆ.ಆದ್ದರಿಂದ ಈ ಮತ-ಧರ್ಮಗಳ ಉಲ್ಲೇಖ ನನಗೆ ಅಗತ್ಯವೆನ್ನಿಸಿತು. ಸರಿ,ಕುಲ-ಗೋತ್ರಗಳ ಚರ್ಚೆಯನ್ನು ಸದ್ಯಕ್ಕೆ ಬದಿಗೊತ್ತಿ ಸ್ವಲ್ಪ ದಕ್ಷಿಣದ ಕಡೆ ಗಮನ ಹರಿಸೋಣ.

(ಸಶೇಷ)