ಗಜಲ್

ಗಜಲ್

ಬರಹ

ಪುಟ್ಟ ಮಲ್ಲಿಗೆಯ ಬಳ್ಳಿ ಇನ್ನೂ ಹೂ ಬಿಟ್ಟಿಲ್ಲ ಕನಸುಗಳೇ ಹೀಗೆ
ದುಡಿವ ಕಂದನ ಕೈಗೆ ಇನ್ನೂ ಪುಸ್ತಕ ಸಿಕ್ಕಿಲ್ಲ ಕನಸುಗಳೇ ಹೀಗೆ

ಇರುಳಿನ ದೀಪದಡಿಯಲಿ ಏನೇನೋ ಹುಡುಕಿ ಏನೋ ಬರೆಯಹೋದ
ನವಸಾಕ್ಷರರ ಕೈಗೆ ಇನ್ನೂ ಲೇಖನಿ ದೊರೆತಿಲ್ಲ ಕನಸುಗಳೇ ಹೀಗೆ

ಬುವಿಯ ಎದೆ ಹೊಟ್ಟೆ ಸೀಳಿ ನೂರಾರು ಅಡಿ ಆಳ ಕೊರೆದು ಹಿಂಸಿಸಿದರೂ
ಕಣ್ಣೀರಲ್ಲದೆ ಸವಿನೀರು ಇನ್ನೂ ಚಿಮ್ಮಿಲ್ಲ ಕನಸುಗಳೇ ಹೀಗೆ

ಬಂದೂಕಿನ ಬಾಯಲ್ಲಿ ಗುಂಡು ಸಿಡಿದರೂ ಗುಬ್ಬಿ ಗೂಡು ಕಟ್ಟಿದರೂ
ಬೆನ್ನು ಬಾಗಿಸಿ ಬೂಟು ಒರೆಸುವುದು ಇನ್ನೂ ತಪ್ಪಿಲ್ಲ ಕನಸುಗಳೇ ಹೀಗೆ

ಹುಡಿಮಣ್ಣಿನಲಿ ಹೊರಳಾಡಿ ಪದತಲದಿ ಮಲಗಿ ಮತ ಕೇಳುವವರಿದ್ದೂ
ಮಣ್ಣಿನ ಮಕ್ಕಳ ಕೊರಳ ಕುಣಿಕೆ ಇನ್ನೂ ಸಡಲಿಲ್ಲ ಕನಸುಗಳೇ ಹೀಗೆ

ಚಂದ್ರನ ಅಂಗಳದಲೆಲ್ಲ ಹೆಜ್ಜೆ ಮೂಡಿಸಿ ಮಂಗಳನೆಡೆ ಹಾರಿದರೂ
ನಿಂತ ನೆಲದ ನೋವಿನ ಹೆಜ್ಜೆಗಳ ಇನ್ನೂ ಗುರುತಿಸಿಲ್ಲ ಕನಸುಗಳೇ ಹೀಗೆ
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.