ಸತ್ತವರ ಮಾನ ಸತ್ತ ಮೇಲೂ ಕಳೆಯಬೇಡಿ...

ಸತ್ತವರ ಮಾನ ಸತ್ತ ಮೇಲೂ ಕಳೆಯಬೇಡಿ...

ಈ ಕವಿತೆ ಚಂದ್ರಶೇಖರ್‍ ಪಾಟೀಲ್‌ (ಚಂಪಾ) ಅವರ ಸಂಕ್ರಮಣ ಮಾಸಿಕದ ಸೆಪ್ಟೆಂಬರ್‌-ಅಕ್ಟೋಬರ್‌ ೨೦೦೮ರ ಸಂಚಿಕೆಯಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಸಂಪದಿಗರ ಅವಗಾಹನೆಗೆಂದು ಕೊಡುತ್ತಿದ್ದೇನೆ. ಲೇಖಕರ ವಿವರ ಅಲ್ಲಿ ಅಚ್ಚಾಗಿಲ್ಲ. ನಿಮಗೆ ಈ ಕವಿಯ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

ರಜೆ

ಬಾಲ್ಯದಲ್ಲಿ ಶಾಲೆಯಲ್ಲಿ
ಅಮ್ಮನನ್ನು ನೆನೆಯುತ್ತ
ಕಣ್ಣೀರು ಹಾಕುತ್ತ
ಅಆಇಈ ತಿದ್ದುತ್ತಿದ್ದ
ನರಕದಂತಹ ದಿನಗಳಲ್ಲಿ
ದೇಶದ ಪ್ರಮುಖನೊಬ್ಬ ಸತ್ತರೆ
ನಮಗೋ ರಜೆ....ಹಾಲು ಸಕ್ಕರೆ !
ಅಷ್ಟು ಖುಷಿಯಾಗಲಿಕ್ಕಿಲ್ಲ
ನೊಬೆಲ್‌ ಬಹುಮಾನ ಸಿಕ್ಕರೆ !

ಸತ್ತ ಮಹಾತ್ಮ ಯಾರು ಎತ್ತ?
ಅತ್ತ ಹೋಗುತ್ತಿರಲಿಲ್ಲ ಚಿತ್ತ.
ಕುಣಿಯುತ್ತ ಕೇಕೆ ಹಾಕುತ್ತ
ದೌಡಾಯಿಸುತ್ತಿದ್ದೆ ಮನೆಯತ್ತ.

ಮುಖ್ಯಮಂತ್ರಿ ರಾಜ್ಯಪಾಲ ರಾಷ್ಟ್ರಪತಿ ಪ್ರಧಾನಿ
ಮಹಾನಟ ಜ್ಞಾನಪೀಠಿ ವಿಜ್ಞಾನಿ
ಎಲ್ಲರ ವಯಸ್ಸು ಕಾಯಿಲೆಗಳ
ದೊಡ್ಡ ಪಟ್ಟಿ ಸಿದ್ಧಮಾಡಿ
ಸಾವಿಗೆ ಹತ್ತಿರವಿದ್ದವರ ಕಂಡು ಖುಷಿಪಡುತ್ತಿದ್ದೆ

ಎಷ್ಟು ಬೇಗ ಸಾಯಬಹುದು? ತಿಂಗಳಿಗೊಬ್ಬ? ವಾರಕ್ಕೊಬ್ಬ?
ಬರಲಿ ಎಡಬಿಡದೆ ರಜೆಯ ಹಬ್ಬ.
ರಾತ್ರಿ ಸತ್ತರೆ ಇಡೀ ಮರುದಿನ ರಜೆ.
ದಿನದಲ್ಲಿ ಸತ್ತರೆ ಅರ್ಧಂಬರ್ಧ ರಜೆ.
ರಾತ್ರಿ ಹೊತ್ತು ಸತ್ತವನೆ ಉತ್ತಮನು
ಎಂದು ಲೆಕ್ಕ ಹಾಕುತ್ತಿದ್ದೆ.

ಹುಚ್ಚು ತಾರಕಕ್ಕೇರಿ
ಮುದಿಬಿದ್ದ ಪ್ರಮುಖರು
ರಜೆ ಬಿಡಿಸುವ ಪುಣ್ಯಾತ್ಮರಂತೆ
ಆದರೂ ಸುಳ್ಳೇ ಬದುಕಿರುವ ದುರಾತ್ಮರಂತೆ
ಸತ್ತವರು ಉದಾರಿಯಂತೆ
ಇದ್ದವರು ಜಿಪುಣರಂತೆ ಕಾಣುತ್ತಿದ್ದರು.

”ಎರಡು ನಿಮಿಷ ಮೌನಮಾಡಿ
ಸತ್ತವರಾತ್ಮಕ್ಕೆ ಶಾಂತಿ ಕೋರಿ”
ಉಪಾಧ್ಯಾಯರ ಕಿರಿರಿ.
ಸಾಲಿನಲ್ಲಿ ನೇರನಿಂತು ಶಾಲೆಯಲ್ಲ ಮೌನವಾಗಿ
ನಿಮಿಷವೊಂದು ವರ್ಷವಾಗಿ
ಮೌನವೇ ಕಚಗುಳಿಯಾಗಿ
’ಆತ್ಮ’ ’ಶಾಂತಿ’ ಶಬ್ದಗಳು
ಅರ್ಥವಿರದ ಸದ್ದು ಮಾಡಿ
ಪಟಾಕಿ ಸಿಡಿದಂತೆ ನಕ್ಕು
ತಲೆಗೆ ಇಕ್ಕಿಸಿಕೊಳ್ಳುತ್ತಿದ್ದೆ.

ಈಗಿದೆಲ್ಲ ನನ್ನನ್ನು ವಿಷಾದದಲ್ಲಿ ಅದ್ದುತ್ತದೆ.
ಮನಸ್ಸಿನಲ್ಲಿ ಕೂಗೊಂದು ಏಳುತ್ತದೆ:
”ಯಾರ ಸಾವಿಗೂ ರಜೆಯ ಘೋಷಿಸಬೇಡಿ
ಆತ್ಮಶಾಂತಿಯ ಮೌನಕ್ಕೆ ಮಕ್ಕಳ ಪೀಡಿಸಬೇಡಿ
ಸತ್ತವರ ಮಾನ ಸತ್ತ ಮೇಲೂ ಕಳೆಯಬೇಡಿ’

- ಮಿರ್ಜಾ ಬಷೀರ್‌

Rating
No votes yet

Comments