ಸ್ವಿಸ್ ಬ್ಯಾಂಕ್ - ಗೌಪ್ಯತೆಗೆ ಪೂರ್ಣವಿರಾಮ ?

ಸ್ವಿಸ್ ಬ್ಯಾಂಕ್ - ಗೌಪ್ಯತೆಗೆ ಪೂರ್ಣವಿರಾಮ ?

ಬರಹ

ಸ್ವಿಟ್ಜರಲ್ಯಾಂಡಿನ ಅತಿ ದೊಡ್ಡ ಬ್ಯಾಂಕಾದ ಯುಬಿಎಸ್ ಬುಧವಾರ ತನ್ನ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿರುವ ಶ್ರೀಮಂತ ಅಮೇರಿಕನ್ನರ ಪಟ್ಟಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ಜನರು ಕರಗಳನ್ನು ತಪ್ಪಿಸಿಕೊಳ್ಳಲು ಈ ಖಾತೆಗಳನ್ನು ಉಪಯೋಗಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಇಷ್ಟೇ ಅಲ್ಲದೇ ಇಂಥ ಜನರ ಖಾತೆಗಳನ್ನು ಹೊಂದಿದ ತಪ್ಪಿಗಾಗಿ ಅಮೇರಿಕದ ಕೇಂದ್ರೀಯ ಆಂತರಿಕ ವಿಚಕ್ಷಣ ದಳಕ್ಕೆ ೭೮೦ ಮಿಲಿಯನ್ ಡಾಲರ್ ದಂಡವನ್ನು ತೆರುವದಾಗಿ ಒಪ್ಪಿಕೊಂಡಿದೆ. ಸಧ್ಯಕ್ಕೆ ಕೇಂದ್ರೀಯ ಆಂತರಿಕ ವಿಚಕ್ಷಣ ದಳ ೧೯,೦೦೦ ಖಾತೆಗಳನ್ನು ಪರಿಶೀಲಿಸುತ್ತಿದೆ, ಇದರಲ್ಲಿ ಕೆಲವು ನೂರು ಜನರ ಹೆಸರುಗಳ ಹೆಸರನ್ನು ಯುಬಿಎಸ್ ಬಹಿರಂಗ ಮಾಡುವದೆಂದು ಅಂದಾಜಿಸಲಾಗಿದೆ.

ಅಮೇರಿಕದ ಕೆಲ ಕರ ಸಲಹೆಗಾರರ ಪ್ರಕಾರ ಇದು ಸ್ವಿಸ್ ಬ್ಯಾಂಕಿಂಗ್ ಎಂಬುದರ ಕೊನೆಯಾಗಬಹುದು ಎಂದು ಅಂದಾಜಿಸುತ್ತಿದ್ದಾರೆ. ೨೦೦೨-೨೦೦೭ ರ ಸಮಯದಲ್ಲಿ ಅಮೇರಿಕನ್ ಶ್ರೀಮಂತರ ೨೦ ಬಿಲಿಯನ್ ಡಾಲರ್ ಮೌಲ್ಯದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಾನೂನುಬಾಹಿರವಾಗಿ ಗೌಪ್ಯ ಖಾತೆಗಳಲ್ಲಿ ಬಚ್ಚಿಟ್ಟು ೩೦೦ ಮಿಲಿಯನ್ ಡಾಲರ ಕರವನ್ನು ಉಳಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಭಾರತದ ಕೇಂದ್ರೀಯ ವಿಚಕ್ಷಣ ದಳ(ಸಿಬಿಐ) ಕೂಡ ಇಂತಹ ಒಂದು ಕಾರ್ಯಾಚರಣೆ ಮಾಡಿ ಭಾರತದ ಬೊಕ್ಕಸಕ್ಕೆ ಹಲವು ಕೋಟಿಗಳನ್ನು ಕೂಡಿ ಹಾಕಬಹುದು ಮತ್ತು ಕಾನೂನುಬಾಹಿರ ಖಾತೆಗಳನ್ನು ಹೊಂದಿರುವ ತಿಮಿಂಗಲುಗಳ ಹೆಸರನ್ನು ಬಹಿರಂಗಪಡಿಸಿ ಸ್ವಲ್ಪ ಮಟ್ಟಿಗಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.