ವ್ಯವಸ್ಥೆ

ವ್ಯವಸ್ಥೆ

ಬರಹ

ಸಭೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ
ತಮ್ಮ ಹಿರಿಮೆಗಳ ಹೇಳಿಕೊಳಲೆಂದೇ
ಬೆಕ್ಕು ನಾಯಿಯ ಜರೆಯಿತು:

ಎಂಜಲು ತಿನ್ನುವ ಕೊಳಕ
ಮಾಡಿರುವೆಯಾ ಒಮ್ಮೆಯಾದರೂ ಜಳಕ?
ನನ್ನ ಮೈಬಣ್ಣ ನೋಡು ಎಷ್ಟು ಬಿಳಿ?
ನಾಡಿನ ನೇತಾರರೆಲ್ಲ ನನ್ನಂತೆಯೇ ತಿಳಿ

ನಾಯಿ ನಗುತ್ತ ಹೇಳಿತು:
ಹೆಂಡದ ಮಡಕೆಯ ಹೊರಗೆ ತೊಳೆದರೆ ಸಾಕೆ?
ಒಳಗಿನ ದುರ್ಗುಣಗಳ ತೊಳೆದಿರುವೆಯಾ ಸೊಕ್ಕೆ?
ಮೈಬಣ್ಣ ನೋಡಿ ಮಣೆ ಹಾಕುವುದರಿಂದಲೇ
ಹಾಲು ಮೊಸರು ಬೆಣ್ಣೆಗಳ ಕಳವು ಹಗಲಿನಲ್ಲೇ

ಮೈಸೆಟೆಸಿದ ಬೆಕ್ಕು ಅರಚಿತು:
ನಾನಿದ್ದ ಮನೆಗಳಲಿ ಇಲಿಗಳಿಲ್ಲ
ನನಗೆ ಕೈಯೆತ್ತಲು ಬ್ರಹ್ಮನಿಗೂ ಸಾಧ್ಯವಿಲ್ಲ
ನನ್ನ ಮೈತುಂಬ ದೇವತೆಗಳಂತೆ
ಕೊಂದರೆ ರೌರವ ನರಕ ತಪ್ಪದಂತೆ

ಕಿವಿಜಾಡಿಸಿ ನಾಯಿ ಉತರಿಸಿತು:
ಕುರಿಕಾಯಲು ತೋಳನ ಬಿಟ್ಟಿಹರು
ಕಡಿಮೆಯಾಗುವ ಕುರಿಗಳ ಲೆಕ್ಕವಿಡುವವರಾರು?
ದಿನಪೂರ್ತಿ ಮೈಮುರಿವ ದುಡಿತ, ಕರುಣೆ
ಪ್ರಾಮಾಣಿಕತೆಯ ತುಡಿತವಿರಲು
ಮೈತುಂಬ ದೇವತೆಗಳೇಕೆ ಬೇಕು?
ಉಂಡ ಅನ್ನಕೆ ದ್ರೋಹ ಬಗೆಯದಿದ್ದರಷ್ಟೆ ಸಾಕು
ಬೆಕ್ಕೇ, ಕಂಡವರ ಕಾಲು ಸುತ್ತುತ್ತಾ
ಕದಿಯುವುದು ಬಿಡು,
ಆಗ ಆಗುವುದು ಈ ಮನೆಯ ಏಳ್ಗೆ
ಸುಖ ಹೊಮ್ಮುವುದು ಒಡೆಯನ ಬಾಳ್ಗೆ

ನಾಯಿಯ ನುಡಿಯಿಂದ ಒಳಗೊಳಗೇ ನಕ್ಕ ಬೆಕ್ಕು
ಮೆಲ್ಲನೆ ಜಾರಿ, ಒಡೆಯಯ ಕಾಲ ಬಳಿ ಹೊಕ್ಕು
ಹುಯಿಲೆಬ್ಬಿಸಲು, ಒಡೆಯ ನಾಯಿಯ ಒದೆಯಲು
ಕುಂಯ್ಗುಡುತ ನಾಯಿ
ಬಾಗಿಲ ಬಳಿ ಕಾವಲು ಬಿತ್ತು
ಅಡಿಗೆ ಮನೆಯಲಿ
ಬೆಕ್ಕು ಮೊಸರಿನ ಬಟ್ಟಲಲ್ಲಿ ಮುಖ ಹುದುಗಿಸಿತ್ತು
ಒಳಗೊಳಗೇ ಮೀಸೆಯ ತಿರುವಿತ್ತು!

-ಸಿದ್ಧರಾಮ ಹಿರೇಮಠ