ಬಾಪೂ ನೇತಾಜಿಯನ್ನು ತುಳಿದರೆ ?

ಬಾಪೂ ನೇತಾಜಿಯನ್ನು ತುಳಿದರೆ ?

ಸುಭಾಷ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಕಂಡ ಅತ್ಯಂತ ಚಾರ್ಮಿಂಗ್ ವ್ಯಕ್ತಿ. ಅವರು ಹುಟ್ಟಾ ಜಿನಿಯಸ್. ಕೇವಲ ಎಂಟು ತಿಂಗಳ ಅವಧಿಯ ಸಿದ್ಧತೆಯಲ್ಲಿ ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೆಯ ರ್‍ಯಾಂಕ್ ಪಡೆದ ಮೇಧಾವಿ. ಸುಭಾಷ್ ರ ಚರಿಷ್ಮಾ ಹಿಟ್ಲರ್‌ನಂತಹವನನ್ನೇ ಬೆರಗುಗೊಳಿಸಿತ್ತು. ದೇಶಬಂಧು ಚಿತ್ತರಂಜನ್ ದಾಸ್ ರ ಗರಡಿಯಲ್ಲಿ ಪಳಗಿದ ನೇತಾಜಿ ಕ್ರಿಯಾಶಿಲತೆಯಲ್ಲೂ ಎಲ್ಲರಿಗಿಂತ ಒಂದು ಕೈ ಮೇಲು. ದೇಶಸೇವೆಯ ಕೈಂಕರ್ಯಕ್ಕೆ ಓಗೊಟ್ಟು ಐ.ಸಿ.ಎಸ್ ನಂತಹ ಹುದ್ದೆಯನ್ನು ಬಿಟ್ಟು ಮರಳಿದವರು. ನೇತಾಜಿಯ ದೇಶಭಕ್ತಿಯ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ; ಇಂದಿಗೂ ಇಲ್ಲ!

ಸುಭಾಷರಿಗೂ ಬಾಪೂರಿಗೂ ತಾತ್ವಿಕವಾದ ಅಭಿಪ್ರಾಯಬೇಧಗಳಿದ್ದವು. ಅದನ್ನು ವೈಯಕ್ತಿಕ ಮಟ್ಟದ ಬೇಧಗಳು ಎಂಬಂತೆ ಚಿತ್ರಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕಸ್ತುರ್ ಬಾ ಹೇಳುತ್ತಾರೆ "ಗಾಂಧೀಜಿ ಮತ್ತು ಸುಭಾಷರು ಚರ್ಚೆಗೆ ಕುಳಿತರೆ ಇಬ್ಬರು ದೈವಿಪುರುಷರು ಸಂಭಾಷಣೆಗೆ ತೊಡಗಿದಂತೆ ತೋರುತ್ತಿತ್ತು." ಅಭಿಪ್ರಾಯಗಳಲ್ಲಿ ಬಲವಾದ ಬೇಧಗಳಿದ್ದರೂ ನೇತಾಜಿ ಮತ್ತು ಬಾಪೂಜಿಯವರಲ್ಲಿ ವಯಕ್ತಿಕ ಮಟ್ಟದ ದ್ವೇಷಗಳಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ವಿದೇಶಿ ತಾಕತ್ತು ಹಾಗೂ ಸೈನ್ಯದ ನೆರವು ಪಡೆಯಬೇಕು ಎಂಬ ಅಭಿಪ್ರಾಯ ನೇತಾಜಿಯವರಾಗಿತ್ತು. ಸಂಪೂರ್ಣ ಸ್ವದೇಶಿ ಮಾರ್ಗದಲ್ಲೇ ಸ್ವಾತಂತ್ರ್ಯ ಪಡೆಯಬೇಕೆಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಯುದ್ಧಾಸ್ತ್ರಗಳು, ಬಾಂಬುಗಳ ಸಹಾಯದಿಂದ ನೆತ್ತರು ಹರಿಸಿ ಸ್ವಾಯತ್ತೆ ಪಡೆಯಬೇಕೆಂಬುದು ನೇತಾಜಿ ಚಿಂತನೆಯಾಗಿದ್ದರೆ ಸತ್ಯ ಮತ್ತು ಅಹಿಂಸೆ ಗಾಂಧೀಜಿಯ ಮಂತ್ರವಾಗಿತ್ತು. ಇದು ಅವರ ನಡುವೆ ಸಾಕಷ್ಟು ಜಿಜ್ಞಾಸೆ, ಚರ್ಚೆಗಳಿಗೆ ದಾರಿ ಮಾಡಿಕೊಂಡಿತ್ತು. ಹಾಗಂತ ಇಬ್ಬರೂ ಪರಸ್ಪರ ದ್ವೇಷಿಸುತ್ತಿರಲಿಲ್ಲ.

ಸುಭಾಷರು ಜೈಲಿನಿಂದ ತಪ್ಪಿಸಿಕೊಂಡು ಸೈನ್ಯ ಕಟ್ಟಲು ಹೋದಾಗ ಗಾಂಧಿಜಿಯ ಪ್ರತಿಕ್ರಿಯೆ ಅತ್ಯಂತ ಮಾರ್ಮಿಕವಾಗಿತ್ತು. ಈ ಸಂದರ್ಭದಲ್ಲಿ ಅವರು ಉದ್ಗರಿಸಿದ್ದಿಷ್ಟು " he is a mad chap. he thinks there are better weapons than satya and ahimsa"!!

ನೇತಾಜಿ ಸೈನ್ಯವನ್ನು ಕಟ್ಟಿದ್ದೇನೋ ನಿಜ. ಆದರೆ ಸೈನ್ಯವನ್ನು ಮುನ್ನಡೆಸುವ ಅನುಭವವಾಗಲೀ ಮಿಲಿಟರಿ ಹಿನ್ನೆಲೆಯಾಗಲೀ ಅವರಲ್ಲಿರಲಿಲ್ಲ. ಇದರಿಂದಾಗಿ ನೇತಾಜಿಯ ಅಜ್ಞೆ ಪಡೆದು ಭಾರತದೆ ಮೇಲೆ ಮುನ್ನುಗ್ಗಿದ ಐ.ಎನ್.ಎ ಸರಿಯಾದ ಮಿಲಿಟರಿ ಬ್ಯಾಕ್ ಅಪ್ ಮತ್ತು ಪ್ಲಾನ್ ಇಲ್ಲದೇ ಸೋಲುಣ್ಣುವಂತಾಯಿತು. ಬ್ರಿಟಿಷರ ಗುಂಡೇಟು ತಿಂದು ಸತ್ತವರಿಗಿಂತ ಹಸಿವು ಬಾಯಾರಿಕೆ ಹಾಗೂ ಸಾಂಕ್ರಾಮಿಕ ರೋಗಗಳಿಂದ ಸತ್ತವರ ಸಂಖ್ಯೆಯೆ ಹೆಚ್ಚು. ಸೈನಿಕರಿಗೆ ಬೆಂಬಲವಾಗಿ ಮಹತ್ತರ ಬಲ ಎಂಬುದು ಇದ್ದಿದ್ದರೆ ಅದು ಸುಭಾಷರು ತುಂಬಿ ಕಳಿಸಿದ ದೇಶಭಕ್ತಿಯ ಕಿಚ್ಚು ಅಷ್ಟೇ! ನೇತಾಜಿಯ ಈ ದುಡುಕಿನಿಂದಾಗಿ ನಲವತ್ತು ಸಾವಿರ ಸೈನಿಕರು ಪ್ರಾಣಕಳೆದುಕೊಂಡರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನೇತಾಜಿಯ ಐ.ಎನ್. ಎ ಗೆದ್ದಿದ್ದಲ್ಲ. ಅವನ್ನು ಗೆದ್ದಿದ್ದು ಜಪಾನ್ ದೇಶದ ಸೈನ್ಯ. ನೇತಾಜಿಯ ನಾಯಕತ್ವದ ಗುಣ ಮತ್ತು ಚಾರ್ಮ್ ಗೆ ಮನಸೋತು ಜಪಾನ್ ಸರ್ಕಾರ ಭಾರತಕ್ಕೆ ನೀಡಿದ ಉಡುಗೊರೆಗಳು ಅವು!

ಇದಕ್ಕಿಂತ ಮುಂಚೆ ಕಾಂಗ್ರೆಸ್ ಪಾಳಯದಲ್ಲಿ ನೇತಾಜಿ ಮತ್ತು ಗಾಂಧೀಜಿಯ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಕಾಂಗ್ರೆಸ್‍ನ ಚುನಾವಣೆಯಲ್ಲಿ ನೇತಾಜಿಯ ವಿರುದ್ಧ ಗಾಂಧೀಜಿ ಪಟ್ಟಾಭಿ ಸೀತಾರಾಮಯ್ಯನವರನ್ನು ನಿಲ್ಲಿಸಿದ್ದರು. ನೇತಾಜಿ ವಿರುದ್ಧ ಪಟ್ಟಾಭಿಯವರು ಸೋತಾಗ "ಇದು ನನ್ನ ಸೋಲು" ಎಂದಿದ್ದರು ಗಾಂಧಿಜಿ. ಸ್ವಾತಂತ್ರ್ಯ ಹೋರಾಟದ ವಿಧಾನದ ಬಗ್ಗೆ ಅಭಿಪ್ರಾಯಗಳಲ್ಲಿ ಭಿನ್ನತೆಗಳು ಇದ್ದುವಷ್ಟೆ! ತಮ್ಮ ತತ್ವಗಳಿಗೆ ವಿರುದ್ಧವಾದ ನಿರ್ಣಯಗಳು ಮಂಡಿಸಲ್ಪಡತೊಡಗಿದ್ದರಿಂದ ಗಾಂಧಿಜಿ ಸಕ್ರಿಯತೆಯಿಂದ ಹಿಂದೆ ಸರಿಯತೊಡಗಿದರು. ತಾವು ನಂಬಿದ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲು ಗಾಂಧಿಜಿ ಸಿದ್ಧರಿರಲಿಲ್ಲ. ಇದು ಕಾಂಗ್ರೆಸ್‍ನಲ್ಲಿ ಅನೇಕ ಅಲ್ಲೊಲ್ಲ ಕಲ್ಲೊಲ್ಲಗಳಿಗೆ ಕಾರಣವಾಯಿತು. ಪರಿಣಾಮವಾಗಿ ನೇತಾಜಿ ಕಾಂಗ್ರೆಸ್ ನಿಂದ ಹೊರಬರಬೇಕಾಯಿತು. ನೇತಾಜಿ ತತ್ವಗಳನ್ನು ನಂಬಿದ್ದ ಕೆಲವರು ಹೊರಬಂದು ನೇತಾಜಿಯ ನೇತೃತ್ವದಲ್ಲಿ ಫ಼ಾರ್ವರ್ಡ್ ಬ್ಲಾಕ್ ಸ್ಥಾಪಿಸಿಕೊಂಡರು. ಗಾಂಧಿಜಿ ನೇತಾಜಿಯ ತತ್ವಗಳಿಗೆ ಒಪ್ಪಿಗೆ ನೀಡಿರಲಿಲ್ಲವೇ ಹೊರತು ನೇತಾಜಿಯನ್ನು ವಿರೋಧಿಸಿರಲಿಲ್ಲ ಹಾಗೂ ನೇತಾಜಿಯ ಮೇಲೆ ದ್ವೇಷವನ್ನು ಸಾಧಿಸಿ ಕಾಂಗ್ರೆಸ್ ನಿಂದ ಹೊರ ಹೋಗುವಂತೆ ಒತ್ತಾಯಿಸಿರಲಿಲ್ಲ. ಎಲ್ಲರಿಗೂ ತಮ್ಮತಮ್ಮದೇ ವಿಚಾರಗಳನ್ನು ಹೊಂದುವ ಹಕ್ಕಿದೆ ಎಂದು ಗಾಂಧೀಜಿ ನಂಬಿದ್ದರು. ಹಾಗೆಯೆ ತಮ್ಮ ತತ್ವಗಳಿಗೆ ಪ್ರತಿನಿಧಿಯಾಗಿ ಪಟ್ಟಾಭಿಯವರನ್ನು ನಿಲ್ಲಿಸಿದ್ದರೆ ಹೊರತು ನೇತಾಜಿಯ ಮೇಲಿನ ಹಗೆಯಿಂದಲ್ಲ.

ಬಿಸಿರಕ್ತದ ನೇತಾಜಿ ಮತ್ತು ಅವರ ಸಮರ್ಥಕರಿಗೆ ಅಹಿಂಸೆ ಸತ್ಯದಂತಹ ಅಸ್ತ್ರಗಳಲ್ಲಿ ನಂಬಿಕೆ ಇರಲಿಲ್ಲ. ಅತ್ಯಂತ ವೇಗವಾಗಿ ಸ್ವಾತಂತ್ರ ಗಳಿಸುವ ’ಶಾರ್ಟ್‍ಕಟ್’ ಅವರಿಗೆ ಬೇಕಾಗಿತ್ತು. ಕೊನೆಗೆ ಗೆದ್ದಿದ್ದು ಗಾಂಧಿಜಿ ನಡೆದ ದಾರಿಯೇ! ಸತ್ಯ ಅಹಿಂಸೆಯಲ್ಲದೇ ಬೇರೆ ಯಾವ ಅಸ್ತ್ರಗಳೂ ಬ್ರಿಟಿಷರ ಬುಡ ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಇದು ಕಣ್ಣೆದುರಿಗೇ ಕಾಣುವ ಐತಿಹಾಸಿಕ ಸತ್ಯ. ಇದಲ್ಲದೇ ಗಾಂಧೀಜಿ ಯಾರ ಮೇಲೂ ವೈಯಕ್ತಿಕ ಅಭಿಪ್ರಾಯಗಳನ್ನು ಹೇರುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯಲ್ಲೆ ತಮ್ಮ ಸ್ವತಂತ್ರ ಚಿಂತನೆಯಲ್ಲೇ ನಡೆಯಬೇಕು ಎಂದು ಹೇಳುತ್ತಿದ್ದರು. ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಗಾಂಧಿಜಿ ನಡುವೆ ಕೈಗಾರಿಕಾ ನೀತಿಯ ಬಗ್ಗೆ ಚರ್ಚೆಗಳು ನಡೆದಿದ್ದವು. ವಿಶ್ವೇಶ್ವರಯ್ಯ ಬೃಹತ್ ಕೈಗಾರಿಕೆಗಳ ವಕಾಲತ್ತು ಮಾಡಿದರೆ ಗಾಂಧಿಜಿ ಗುಡಿಕೈಗಾರಿಕೆಗಳಿಗೆ ಮಹತ್ವ ಸಿಗಬೇಕು ಎಂದು ವಾದಿಸುತ್ತಿದ್ದರು. ಆದರೇನಂತೆ ವಿಶ್ವೇಶ್ವರಯ್ಯ ತಮ್ಮಿಚ್ಚೆಯಂತೆ ಕೈಗಾರಿಕೆಗಳನ್ನು ಸ್ಥಾಪಿಸಿದರು. ಅದಕ್ಕೆ ಗಾಂಧೀಜಿ ವಿರೋಧಿಸಲಿಲ್ಲ. ಅವರ ತತ್ವಗಳಿಗೆ ಅನುಗುಣವಾಗಿ ಅವರವರು ನಡೆದುಕೊಂಡರು. ಹಾಗಂತ ಸರ್.ಎಂ.ವಿ ಹಾಗೂ ಗಾಂಧಿಜಿಗೆ ದ್ವೇಷವಿತ್ತು ಎನ್ನಲಾಗುತ್ತದೆಯೆ? ನೇತಾಜಿ ವಿಷಯದಲ್ಲೂ ನಡೆದಿದ್ದೂ ಹಾಗೆಯೇ! ಆದರೆ ಗಾಂಧಿಜಿಯನ್ನು ನಿಂದಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಆರೆಸ್ಸೆಸ್ಸಿಗರು ಹೆಣೆದ ಕಥೆ ಗಾಂಧಿಜಿ ಸುಭಾಷ್ ಚಂದ್ರ ಭೊಸ್ ರನ್ನು ತುಳಿದ ಕಥೆ! ಬಾಪೂ ಹಾಗೂ ನೇತಾಜಿಯವರ ನಡುವಿನ ವಾದ-ವಿವಾದಗಳನ್ನು ತಿಳಿಯಲು ಅವರೀರ್ವರೂ ಪರಸ್ಪರ ಬರೆದ ಪತ್ರಗಳನ್ನು ಓದಬೇಕು.

ಇನ್ನೊಂದು ವಿಷಯ! ಗಾಂಧಿಜಿಗೆ ನೆಹರೂರನ್ನು ಪ್ರಧಾನಿಯನ್ನಾಗಿ ಮಾಡಲು ಯಾವ ಕಾರಣಗಳೂ ಇರಲಿಲ್ಲ. ಅವರಿಗೆ ಅಂತಹ ಸ್ವಾರ್ಥ ಸಾಧನೆಯ ಆಕಾಂಕ್ಷೆ ಇದ್ದಿದ್ದರೆ ತಮ್ಮ ಮಕ್ಕಳನ್ನೇ ರಾಜಕೀಯದಲ್ಲಿ ಸ್ಥಾಪಿಸಬಹುದಿತ್ತು. ಗಾಂಧೀಜಿ ಮತಯಾಚಿಸಿದ್ದರೆ ಅವರ ಮಕ್ಕಳಿಗೆ ಧಾರಾಳವಾಗಿ ಓಟುಗಳು ಬೀಳುತಿದ್ದವು. ಭಾರತದ ಚುಕ್ಕಾಣಿ ಸುಲಭವಾಗಿ ಗಾಂಧಿಜಿಯ ಪುತ್ರರ ಕೈವಶವಾಗಬಹುದಿತ್ತು. ಇದಕ್ಕೆ ಗಾಂಧಿಜಿ ಎಂದಿಗೂ ಒಪ್ಪಿಗೆ ಕೊಡಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗುವುದು ನಿಶ್ಚಯವಾಗುತ್ತಲೇ ಗಾಂಧಿಜಿ ತಮ್ಮ ಕಾಂಗ್ರೆಸ್ ಸದಸ್ಯತ್ವಕ್ಕೆ "ಇನ್ನು ನನ್ನ ಕೆಲಸ ಮುಗಿಯಿತು" ಎಂದು ಹೇಳಿ ರಾಜೀನಾಮೆ ನೀಡಿದ್ದರು. ತದನಂತರದ ಯಾವುದೇ ನಿರ್ಣಯಗಳಲ್ಲಿ ಗಾಂಧಿಜಿಯ ಹಸ್ತಕ್ಷೇಪ ಇರಲಿಲ್ಲ.

ಕೊಸರಿಗೆ ಒಂದು ಘಟನೆ. ಮೂರನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧೀಜಿ ನಿರಾಕರಿಸಿದರು.

ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ "ಅಲ್ಲಿ ಭಾಗವಹಿಸುತ್ತಿರುವವರೆಲ್ಲಾ ಪೊಲಿಟಿಷಿಯನ್ಸ್. " ಎಂದರು

"ನೀವು ಪೊಲಿಟಿಷಿಯನ್ ಅಲ್ಲವೆ ?"

" ಅಲ್ಲ! ನಾನು freesom fighter"

" ಹಾಗಾದರೆ ಪೊಲಿಟಿಷಿಯನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?"

"they are prostitutes!"

ಹಾಗೆಯೇ ನನ್ನ ಕಾರ್ಯವೈಖರಿಯನ್ನೂ ವಿವರಿಸಿಬಿಡುತ್ತೇನೆ. ಪ್ರತಿ ಲೇಖನಕ್ಕೂ ಅನೇಕ ಪುಸ್ತಕಗಳು, ಪತ್ರಗಳು ಹಾಗೂ ದಾಖಲೆಗಳು ನನಗೆ ಆಕರಗಳು. ಇವುಗಳಲ್ಲಿ ಗಾಂಧಿಜಿ ವಿರುದ್ಧ ಬರೆದ ಪುಸ್ತಕಗಳೂ ಇವೆ. ಗಾಂಧಿಜಿಯ ವಿರೋಧದಿಂದಲೇ ನನ್ನ ಕೆಲಸ ಆರಂಭಿಸುತ್ತೇನೆ. ಅವರ ವಿರುದ್ಧದ ಆರೋಪಗಳನ್ನು ಪಟ್ಟಿ ಮಾಡಿಕೊಂಡು ಪುಸ್ತಕ, ಪತ್ರ ದಾಖಲೆಗಳನ್ನು ತಡಕಾಡುತೇನೆ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನೂ ಸೇರಿದಂತೆ ಅನೇಕ ಹಿರಿಯರನ್ನು ಗಾಂಧಿಜಿಯ ಬಗ್ಗೆ ಪ್ರಶ್ನಿಸುತ್ತೇನೆ. ಇದರಲ್ಲಿ ಬಹುತೇಕ ಗಾಂಧಿಜಿಯ ವಿರುದ್ಧ ಇರುವ ಪ್ರಶ್ನೆಗಳೇ! (ಈ ಕಾರಣದಿಂದ ನನ್ನನ್ನು ಆರೆಸ್ಸೆಸ್ಸಿಗ ಎಂದು ತಪ್ಪು ತಿಳಿದುಕೊಂಡವರೂ ಇದ್ದಾರೆ!) ಪ್ರತಿ ಪ್ರಶ್ನೆಗೂ ಸಮರ್ಪಕ ಉತ್ತರ ದೊರಕಿಸಿಕೊಂಡು ಇಲ್ಲಿ ಬರೆಯುತ್ತೇನೆ. ಯಾವುದೊ ಒಂದು ಪುಸ್ತಕ ಓದಿ ನಾನು ಈ ಅಭಿಪ್ರಾಯಗಳಿಗೆ ಬಂದಿಲ್ಲ.

Rating
No votes yet

Comments